ಬೆಂಗಳೂರಿನಲ್ಲಿ ಹಾಲು- ಬ್ರೆಡ್ ಇಲ್ಲ: ಮುಷ್ಕರ ಆರಂಭಿಸಿದ ಬೇಕರಿ, ಕಾಂಡಿಮೆಂಟ್ಸ್ ವರ್ತಕರು
x

ಸಾಂದರ್ಭಿಕ ಚಿತ್ರ

ಬೆಂಗಳೂರಿನಲ್ಲಿ ಹಾಲು- ಬ್ರೆಡ್ ಇಲ್ಲ: ಮುಷ್ಕರ ಆರಂಭಿಸಿದ ಬೇಕರಿ, ಕಾಂಡಿಮೆಂಟ್ಸ್ ವರ್ತಕರು

ಇಂದಿನಿಂದ ಹಾಲು, ಹಾಲಿನ ಉತ್ಪನ್ನ ಮಾರಾಟ ಬಂದ್ ಮಾಡಿ ಮುಷ್ಕರ ನಡೆಸುತ್ತಿರುವ ವರ್ತಕರು, ಜುಲೈ 25ರಂದು ಅಂಗಡಿ ಬಂದ್ ಮಾಡಿ, ಕುಟುಂಬ ಸಮೇತರಾಗಿ ಫ್ರೀಡಂ ಪಾರ್ಕ್​​ನಲ್ಲಿ ಬೃಹತ್ ಹೋರಾಟ ನಡೆಸಲಿದ್ದಾರೆ.


ಡಿಜಿಟಲ್ ಪಾವತಿ( ಯುಪಿಐ) ಮೂಲಕ ವಹಿವಾಟು ನಡೆಸುತ್ತಿರುವ ವರ್ತಕರಿಗೆ ವಾಣಿಜ್ಯ ತೆರಿಗೆ ಇಲಾಖೆ ಜಿಎಸ್ ಟಿ ನೋಟಿಸ್ ನೀಡಿರುವುದನ್ನು ವಿರೋಧಿಸಿ ಬೇಕರಿ ಹಾಗೂ ಕಾಂಡಿಮೆಂಟ್ಸ್ ವ್ಯಾಪಾರಿಗಳು ಇಂದಿನಿಂದ ಮೂರು ದಿನಗಳ ಮುಷ್ಕರ ಆರಂಭಿಸಿದ್ದಾರೆ.

ಬೆಂಗಳೂರಿನಲ್ಲಿ ಹಾಲು, ಹಾಲಿನ ಉತ್ಪನ್ನ ಮಾರಾಟ ಬಂದ್ ಮಾಡಿ ಮುಷ್ಕರ ನಡೆಸುತ್ತಿರುವ ವರ್ತಕರು, ನಾಳೆ( ಜುಲೈ 25) ಅಂಗಡಿ ಬಂದ್ ಮಾಡಿ, ಕುಟುಂಬ ಸಮೇತರಾಗಿ ಫ್ರೀಡಂ ಪಾರ್ಕ್​​ನಲ್ಲಿ ಬೃಹತ್ ಹೋರಾಟ ನಡೆಸಲಿದ್ದಾರೆ.

ಇಂದು ಹಾಲು ಹಾಗೂ ಹಾಲಿನ ಉತ್ಪನ್ನ ಮಾರಾಟ ನಿಲ್ಲಿಸಿದ್ದಾರೆ. ನಾಳೆ( ಜುಲೈ 24) ಸಿಗರೇಟ್ ಮತ್ತು ಗುಟ್ಕಾ ಮಾರಾಟ ಸ್ಥಗಿತಗೊಳಿಸಲಾಗುತ್ತದೆ. ಜುಲೈ 25 ರಂದು ಎಲ್ಲಾ ಬೇಕರಿ, ಕಾಂಡಿಮೆಂಟ್ಸ್ ಮತ್ತು ಸಣ್ಣ ಅಂಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ.

ವಾಣಿಜ್ಯ ತೆರಿಗೆ ಇಲಾಖೆಯು ಯುಪಿಐ ವಹಿವಾಟುಗಳನ್ನು ಆಧರಿಸಿ ಲಕ್ಷಾಂತರ ರೂಪಾಯಿಗಳ ತೆರಿಗೆ ಪಾವತಿಸುವಂತೆ ನೋಟಿಸ್ ನೀಡುತ್ತಿದೆ. ಇದು ಸಣ್ಣ ವ್ಯಾಪಾರಿಗಳಿಗೆ ಅನ್ಯಾಯವಾಗಿದೆ ಎಂದು ವ್ಯಾಪಾರಿಗಳು ಅಸಮಾಧಾನ ಹೊರಹಾಕಿದ್ದಾರೆ.

ಸಣ್ಣಪುಟ್ಟ ವ್ಯಾಪಾರಿಗಳಿಗೆ ವಾಣಿಜ್ಯ ಪಾವತಿಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಕಳೆದ ನಾಲ್ಕು ವರ್ಷಗಳ ತೆರಿಗೆ ಪಾವತಿ ಮಾಡಬೇಕೆಂದು ಲಕ್ಷ, ಕೋಟಿ ರೂಪಾಯಿ ಲೆಕ್ಕದಲ್ಲಿ ಕಳೆದ ಹದಿನೈದು ದಿನಗಳಿಂದ ಒಂದೇ ಬಾರಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡುತ್ತಿದೆ. ಈಗ ನೀಡಿರುವ ನೋಟಿಸ್ 2021-22 ರಲ್ಲೇ ನೀಡಿದ್ದರೆ, ಇಷ್ಟು ಗೊಂದಲ ಆಗುತ್ತಿರಲಿಲ್ಲ. ವಾಣಿಜ್ಯ ತೆರಿಗೆ ಇಲಾಖೆಗೆ ಶೇಕಡಾ 90 ರಷ್ಟು ವ್ಯಾಪಾರಿಗಳು ತೆರಿಗೆ ಪಾವತಿ ಮಾಡುತ್ತಿದ್ದಾರೆ. ವ್ಯಾಪಾರಿಗಳು ತೆರಿಗೆ ಪಾವತಿ ಮಾಡಲು ಸರಿಯಾದ ಸಲಹೆ ಸೂಚನೆ ನೀಡಬೇಕಾಗಿತ್ತು. ಅಧಿಕಾರಿಗಳು ಈಗ ಹೊರಡಿಸಿರುವ ಮಾಧ್ಯಮ ಪ್ರಕಟಣೆಯನ್ನು ಈ ಹಿಂದೆಯೇ ಹೊರಡಿಸಿದ್ದರೆ, ಅಂಗಡಿ ಮಾಲೀಕರು ತೆರಿಗೆ ಪಾವತಿ ಮಾಡಲು ಉತ್ತಮ ಮಾರ್ಗ ಅನುಸರಿಸಬಹುದಾಗಿತ್ತು ಎಂದು ವ್ಯಾಪಾರಿಗಳು ಹೇಳಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆಯ ಸ್ಪಷ್ಟನೆ

ಈ ಬಗ್ಗೆ ಸ್ಪಷ್ಟನೆ ನೀಡಿರುವ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಚಂದ್ರಶೇಖರ್ ನಾಯ್ಕ್, ಒಟ್ಟು ವಹಿವಾಟನ್ನು ಗಮನಿಸಿ ನೋಟಿಸ್ ಕೊಡಲಾಗಿದೆ. ದಾಖಲೆ ಸಮೇತ ಸ್ಪಷ್ಟನೆ ನೀಡಿದರೆ ತೆರಿಗೆ ಕಟ್ಟುವ ಪ್ರಮೆಯವೇ ಬರುವುದಿಲ್ಲ ಎಂದು ತಿಳಿಸಿದ್ದರು.

ಇದೀಗ ವರ್ತಕರ ಮುಷ್ಕರದಿಂದಾಗಿ ಬೆಂಗಳೂರಿನಲ್ಲಿ ಹಾಲು, ಬ್ರೆಡ್ ಸೇರಿದಂತೆ ಹಲವು ದಿನನಿತ್ಯದ ವಸ್ತುಗಳ ಲಭ್ಯತೆಯ ಮೇಲೆ ಪರಿಣಾಮ ಬೀರಿದೆ. ಈಗಾಗಲೇ ಕೆಲವು ಅಂಗಡಿಗಳಲ್ಲಿ ಯುಪಿಐ ಇಲ್ಲ, ನಗದು ಮಾತ್ರ ಎಂಬ ಫಲಕಗಳನ್ನು ಕೂಡ ಹಾಕುತ್ತಿದ್ದಾರೆ.

Read More
Next Story