
ಸಾಂದರ್ಭಿಕ ಚಿತ್ರ
ಪತ್ನಿ ಕಿರುಕುಳಕ್ಕೆ ಬೇಸತ್ತು ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ
ಹಾರೋಹಳ್ಳಿ ತಾಲೂಕಿನ ಅಣ್ಣೆದೊಡ್ಡಿ ಗ್ರಾಮದ ರೇವಂತ್ ಆತ್ಮಹತ್ಯೆ ಮಾಡಿಕೊಂಡವರು. ಅವರು ಬಿಡದಿ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಕೇವಲ ಐದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ 30 ವರ್ಷದ ಯುವಕ ಪತ್ನಿಯ ಕಿರುಕುಳ ತಾಳಲಾರದೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಡದಿ ರೈಲ್ವೆ ನಿಲ್ದಾಣದ ಸಮೀಪ ಸೋಮವಾರ ನಡೆದಿದೆ.
ಹಾರೋಹಳ್ಳಿ ತಾಲೂಕಿನ ಅಣ್ಣೆದೊಡ್ಡಿ ಗ್ರಾಮದ ರೇವಂತ್ ಆತ್ಮಹತ್ಯೆ ಮಾಡಿಕೊಂಡವರು. ಅವರು ಬಿಡದಿ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಸ್ಥಳಕ್ಕೆ ಆಗಮಿಸಿದ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿದಾಗ ಮೃತರ ಮೊಬೈಲ್ ಪತ್ತೆಯಾಗಿದೆ. ಮೊಬೈಲ್ ಪರಿಶೀಲಿಸಿದಾಗ, ರೇವಂತ್ ಆತ್ಮಹತ್ಯೆಗೆ ಕೆಲವೇ ಕ್ಷಣಗಳ ಮೊದಲು ರೆಕಾರ್ಡ್ ಮಾಡಿದ ವಿಡಿಯೋ ಲಭ್ಯವಾಗಿದೆ. ಈ ವಿಡಿಯೋದಲ್ಲಿ, ರೇವಂತ್ ಕಣ್ಣೀರಿನೊಂದಿಗೆ ತಮ್ಮ ನೋವು ತೋಡಿಕೊಂಡಿದ್ದು, ನನ್ನಿಂದ ಬದುಕಲು ಆಗುತ್ತಿಲ್ಲ. ಮದುವೆಯಾಗಿ ಕೇವಲ 5 ತಿಂಗಳಾಗಿದೆ. ಆದರೆ, ನನ್ನ ಪತ್ನಿ ಮಲ್ಲಿಕಾ ನನಗೆ ತುಂಬಾ ಕಿರುಕುಳ ಕೊಡುತ್ತಿದ್ದಾಳೆ. ಆಕೆಯಿಂದ ನನಗೆ ತುಂಬಾ ಟಾರ್ಚರ್ ಆಗಿದೆ. ನನ್ನನ್ನು ಮಾನಸಿಕವಾಗಿ ಕುಗ್ಗಿಸಿದ್ದಾಳೆ. ನನಗೆ ಬದುಕುವ ಆಸಕ್ತಿಯೇ ಇಲ್ಲದಂತಾಗಿದೆ. ನನ್ನ ಈ ಸಾವಿಗೆ ನನ್ನ ಹೆಂಡತಿಯೇ ಕಾರಣ ಎಂದು ಆರೋಪಿಸಿದ್ದಾನೆ.
ಐದು ತಿಂಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ರೇವಂತ್ ಮತ್ತು ಮಲ್ಲಿಕಾ ನಡುವೆ ಮದುವೆಯಾದ ಕೆಲವೇ ದಿನಗಳಲ್ಲಿ ಕೌಟುಂಬಿಕ ಕಲಹಗಳು ಪ್ರಾರಂಭವಾಗಿ, ದಿನೇ ದಿನೇ ಉಲ್ಬಣಗೊಂಡು ರೇವಂತ್ ತೀವ್ರ ಮಾನಸಿಕ ಹಿಂಸೆಗೆ ಒಳಗಾಗಿದ್ದರು ಎನ್ನಲಾಗಿದೆ. ದುಡಿದು ಮನೆ ನಿರ್ವಹಿಸುತ್ತಿದ್ದರೂ ನೆಮ್ಮದಿ ಇಲ್ಲದೆ ರೇವಂತ್ ಈ ದುರಂತ ನಿರ್ಧಾರ ಕೈಗೊಂಡಿದ್ದಾರೆ.
ಮೃತರ ಕುಟುಂಬಸ್ಥರು ಕೂಡ ವಿಡಿಯೋದ ಆಧಾರದ ಮೇಲೆ ರೇವಂತ್ ಪತ್ನಿ ಮಲ್ಲಿಕಾ ವಿರುದ್ಧ ಕಿರುಕುಳದ ಆರೋಪ ಮಾಡಿದ್ದು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಡಿಯೋ ಮತ್ತು ಕುಟುಂಬದವರ ಹೇಳಿಕೆಗಳ ಆಧಾರದ ಮೇಲೆ ಮಲ್ಲಿಕಾ ಅವರನ್ನು ವಿಚಾರಣೆಗೆ ಒಳಪಡಿಸಿ ಹೆಚ್ಚಿನ ತನಿಖೆ ನಡೆಸಲಿದ್ದಾರೆ.
(ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ತಡೆ ಸಹಾಯವಾಣಿಗಳನ್ನು ಸಂಪರ್ಕಿಸಿ:1ಲೈಫ್: 7893078930; ಲೈಫ್‌ಲೈನ್ +91-9163940404 , +91-9088030303; ಸುಮೈತ್ರಿ - 011-23389090 , +91-9315767849 ; ನೇಹಾ ಆತ್ಮಹತ್ಯೆ ತಡೆ ಕೇಂದ್ರ : 044-24640050; ಆಸರಾ ಸಹಾಯವಾಣಿ ಆತ್ಮಹತ್ಯೆ ತಡೆ, ಭಾವನಾತ್ಮಕ ಬೆಂಬಲ ಮತ್ತು ಆಘಾತ ನೆರವು ಕೇಂದ್ರ: 91-9820466726; ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರ: 1800-599-0019; ದಿಶಾ: 0471-2552056; ಮೈತ್ರಿ: 0484-2540530; ಮತ್ತು ಸ್ನೇಹಾ ಆತ್ಮಹತ್ಯೆ ತಡೆ ಸಹಾಯವಾಣಿ: 044-24640050)