Tipu Sultan Laid the Foundation for KRS Dam: Minister Mahadevas Statement Sparks Controversy
x

ಮೈಸೂರು ಅರಸ ಟಿಪ್ಪು ಸುಲ್ತಾನ್‌ ಹಾಗೂ ಸಚಿವ ಹೆಚ್‌.ಸಿ. ಮಹದೇವಪ್ಪ

ಕೆಆರ್​ಎಸ್​​ಗೆ ಅಡಿಗಲ್ಲು ಹಾಕಿದ್ದು ಟಿಪ್ಪು: ಸಚಿವ ಮಹದೇವಪ್ಪ ಹೇಳಿಕೆಯಿಂದ ತೀವ್ರ ವಿವಾದ

"ಕನ್ನಂಬಾಡಿ ಕಟ್ಟೆ ನಿರ್ಮಾಣಕ್ಕೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ದರು. ಆದರೆ, ಈ ಸತ್ಯವನ್ನು ಹೇಳಲು ಯಾರಿಗೂ ಧೈರ್ಯವಿಲ್ಲ. ಇದರ ಕುರುಹು ಕೆಆರ್​ಎಸ್​​ನ ಹೆಬ್ಬಾಗಿಲಿನಲ್ಲಿ ಈಗಲೂ ಇದೆ," ಎಂದು ಸಚಿವ ಮಹದೇವಪ್ಪ ಪ್ರತಿಪಾದಿಸಿದರು.


ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕೃಷ್ಣರಾಜಸಾಗರ (ಕೆಆರ್​​ಎಸ್​) ಜಲಾಶಯಕ್ಕೆ ಮೊದಲು ಅಡಿಗಲ್ಲು ಹಾಕಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ಅಲ್ಲ, ಬದಲಿಗೆ ಟಿಪ್ಪು ಸುಲ್ತಾನ್ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ನೀಡಿದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುಣ್ಯತಿಥಿಯಂದೇ ಈ ಹೇಳಿಕೆ ಹೊರಬಿದ್ದಿರುವುದು ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಈ ಹೇಳಿಕೆಗೆ ಮೈಸೂರು ರಾಜವಂಶಸ್ಥರು ಹಾಗೂ ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಸಚಿವ ಮಹದೇವಪ್ಪ ಹೇಳಿದ್ದೇನು?

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎಚ್.ಸಿ. ಮಹದೇವಪ್ಪ, "ಕನ್ನಂಬಾಡಿ ಕಟ್ಟೆ ನಿರ್ಮಾಣಕ್ಕೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ದರು. ಆದರೆ, ಈ ಸತ್ಯವನ್ನು ಹೇಳಲು ಯಾರಿಗೂ ಧೈರ್ಯವಿಲ್ಲ. ಇದರ ಕುರುಹು ಕೆಆರ್​ಎಸ್​​ನ ಹೆಬ್ಬಾಗಿಲಿನಲ್ಲಿ ಈಗಲೂ ಇದೆ," ಎಂದು ಪ್ರತಿಪಾದಿಸಿದರು.

ಟಿಪ್ಪು ಸುಲ್ತಾನ್ ನನ್ನು "ದೊಡ್ಡ ಸ್ವಾತಂತ್ರ್ಯ ಸೇನಾನಿ" ಎಂದು ಬಣ್ಣಿಸಿದ ಅವರು, ಟಿಪ್ಪು ದೇವದಾಸಿ ಪದ್ಧತಿಯನ್ನು ರದ್ದುಗೊಳಿಸಿದ್ದರು, ಶೋಷಿತರಿಗೆ ಭೂಮಿಯನ್ನು ನೀಡಿದ್ದರು ಮತ್ತು ರಾಜ್ಯಕ್ಕೆ ರೇಷ್ಮೆ ಕೃಷಿಯನ್ನು ಪರಿಚಯಿಸಿದ್ದರು ಎಂದು ಹೇಳಿದರು. ಈ ಮೂಲಕ ಮೈಸೂರು ಅರಸರ ಸಾಧನೆಗಳನ್ನು ಕಡೆಗಣಿಸಿದ್ದಾರೆ ಎಂಬ ಆರೋಪವೂ ಕೇಳಿಬಂತು.

ರಾಜವಂಶಸ್ಥರು ಮತ್ತು ಬಿಜೆಪಿ ಆಕ್ಷೇಪ

ಸಚಿವ ಮಹದೇವಪ್ಪ ಅವರ ಹೇಳಿಕೆಯನ್ನು ಮೈಸೂರು ಸಂಸದ ಮತ್ತು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು "ಹಾಸ್ಯಾಸ್ಪದ" ಎಂದು ಬಣ್ಣಿಸಿದ್ದಾರೆ. ಈ ಹೇಳಿಕೆಗೆ ಯಾವುದೇ ಐತಿಹಾಸಿಕ ಸಾಕ್ಷ್ಯಾಧಾರಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಸಚಿವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. "ಮತಾಂಧ ಟಿಪ್ಪು ಸುಲ್ತಾನ್ 1799ರಲ್ಲಿ ಸಾವನ್ನಪ್ಪಿದ. ಕೆಆರ್​ಎಸ್​​ ಜಲಾಶಯದ ಕಾಮಗಾರಿ ಆರಂಭವಾಗಿದ್ದು 1911ರಲ್ಲಿ. 112 ವರ್ಷಗಳ ನಂತರ ನಡೆದ ಕಾಮಗಾರಿಗೆ ಟಿಪ್ಪು ಹೇಗೆ ಅಡಿಗಲ್ಲು ಹಾಕಲು ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ. ಇದು "ಗೋಕುಲಾಷ್ಟಮಿಗೂ ಇಮಾಮ್ ಸಾಬಿಗೂ ಏನು ಸಂಬಂಧ" ಎಂದು ಕೇಳಿದಂತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ಈ ನಿಲುವು, ಕೆಆರ್​ಎಸ್​​​ ಜಲಾಶಯಕ್ಕೆ "ಟಿಪ್ಪು ಸುಲ್ತಾನ್ ಜಲಾಶಯ" (ಟಿಎಸ್ ಜಲಾಶಯ) ಎಂದು ಮರುನಾಮಕರಣ ಮಾಡುವ ಹುನ್ನಾರವಿರಬಹುದು ಎಂದು ಬಿಜೆಪಿ ಅನುಮಾನ ವ್ಯಕ್ತಪಡಿಸಿದೆ.

ಐತಿಹಾಸಿಕ ಹಿನ್ನೆಲೆ

ಕೆಆರ್​ಎಸ್​​ ಜಲಾಶಯವನ್ನು "ಕನ್ನಂಬಾಡಿ ಕಟ್ಟೆ" ಎಂದೇ ಕರೆಯಲಾಗುತ್ತದೆ. ಇದರ ನಿರ್ಮಾಣದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರಿಗೆ ಸಲ್ಲುತ್ತದೆ. ಜಲಾಶಯ ನಿರ್ಮಾಣಕ್ಕೆ ಹಣದ ಕೊರತೆ ಉಂಟಾದಾಗ, ರಾಜಮಾತೆ ಕೆಂಪನಂಜಮ್ಮಣ್ಣಿ ಅವರು ತಮ್ಮ ಆಭರಣಗಳನ್ನು ಮಾರಿ ಹಣ ಒದಗಿಸಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಈ ಕಾರಣಕ್ಕಾಗಿಯೇ ಜಲಾಶಯಕ್ಕೆ "ಕೃಷ್ಣರಾಜಸಾಗರ" ಎಂದು ಹೆಸರಿಡಲಾಗಿದೆ.

Read More
Next Story