Tiger Death Puzzle | ಅಂಬ್ಲಿಗೊಳ್ಳ ಹುಲಿ ಹಂತಕರಾರು? ತಿಂಗಳು ಕಳೆದರೂ ಪ್ರಗತಿ ಕಾಣದ ಇಲಾಖೆ ತನಿಖೆ!
x

Tiger Death Puzzle | ಅಂಬ್ಲಿಗೊಳ್ಳ ಹುಲಿ ಹಂತಕರಾರು? ತಿಂಗಳು ಕಳೆದರೂ ಪ್ರಗತಿ ಕಾಣದ ಇಲಾಖೆ ತನಿಖೆ!

ಇದೀಗ ಹುಲಿ ಸತ್ತು ತಿಂಗಳಾಯಿತು. ಹುಲಿ ಸಾವಿನ ಕಾರಣ ಮಾತ್ರ ಇನ್ನೂ ನಿಗೂಢವಾಗೇ ಇದೆ. ಹುಲಿ ಸತ್ತಿದ್ದು ಯಾಕೆ, ಹೇಗೆ, ಜಲಾಶಯದ ಹಿನ್ನೀರಿನ ನಟ್ಟನಡುವೆ ಅದು ಶವವಾಗಿ ತೇಲುತ್ತಿದ್ದುದು ಹೇಗೆ? ಎಂಬ ಪ್ರಶ್ನೆಗಳಿಗೆ ಇಂದಿಗೂ ಉತ್ತರ ಸಿಕ್ಕಿಲ್ಲ.


ಸುಮಾರು ಒಂದು ತಿಂಗಳ ಹಿಂದೆ ಶಿವಮೊಗ್ಗದ ಸಾಗರ ಅರಣ್ಯ ವಲಯ ವ್ಯಾಪ್ತಿಯ ಅಂಬ್ಲಿಗೊಳ್ಳದಲ್ಲಿ ಸಂಭವಿಸಿದ್ದ ಹುಲಿ ಸಾವು ಪ್ರಕರಣ ರಾಜ್ಯಾದ್ಯಂತ ಭಾರೀ ಸುದ್ದಿಯಾಗಿತ್ತು. ಜಲಾಶಯದ ಹಿನ್ನೀರಿನಲ್ಲಿ ತೇಲುತ್ತಿದ್ದ ಹುಲಿಯ ಶವವನ್ನು ಅರಣ್ಯ ಇಲಾಖೆ ಅಧಿಕಾರಿಗಳು ತರಾತುರಿಯಲ್ಲಿ ಮಹಜರು ನಡೆಸಿ ಸುಟ್ಟು ಹಾಕಿದ ಹಿನ್ನೆಲೆಯಲ್ಲಿ ವನ್ಯಜೀವಿ ಪ್ರೇಮಿಗಳು ಮತ್ತು ಸ್ಥಳೀಯರಿಂದ ತನಿಖೆಯ ಕೂಗೆದ್ದಿತ್ತು.

ಇದೀಗ ಹುಲಿ ಸತ್ತು ತಿಂಗಳಾಯಿತು. ಹುಲಿ ಸಾವಿನ ಕಾರಣ ಮಾತ್ರ ಇನ್ನೂ ನಿಗೂಢವಾಗೇ ಇದೆ. ಹುಲಿ ಸತ್ತಿದ್ದು ಯಾಕೆ, ಹೇಗೆ, ಜಲಾಶಯದ ಹಿನ್ನೀರಿನ ನಟ್ಟನಡುವೆ ಅದು ಶವವಾಗಿ ತೇಲುತ್ತಿದ್ದುದು ಹೇಗೆ? ಎಂಬ ಪ್ರಶ್ನೆಗಳಿಗೆ ಇಂದಿಗೂ ಉತ್ತರ ಸಿಕ್ಕಿಲ್ಲ.

ಹುಲಿ ಮೃತ ದೇಹ ಪತ್ತೆಯಾದ ಮಾರನೇ ದಿನವೇ, ಅಂದರೆ ಕಳೆದ ಫೆಬ್ರವರಿ 18ರಂದೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ತಮ್ಮ ಇಲಾಖೆಯ ಉನ್ನತಾಧಿಕಾರಿಗಳಿಗೆ ಸೂಚನೆ ನೀಡಿ, ಹುಲಿ ಸಾವಿನ ಕುರಿತು ತನಿಖೆ ನಡೆಸಿ ಹತ್ತು ದಿನಗಳಲ್ಲಿ ವರದಿ ಸಲ್ಲಿಸುವಂತೆ ಆದೇಶಿಸಿದ್ದರು.

ಅಲ್ಲದೆ, ಹುಲಿಯ ದೇಹದಲ್ಲಿ ಗುಂಡೇಟಿನ ಗುರುತುಗಳಿವೆ ಎಂದು ಮಾಧ್ಯಮ ವರದಿಗಳು ಹೇಳಿವೆ ಎಂಬುದನ್ನೂ ಉಲ್ಲೇಖಿಸಿದ್ದ ಸಚಿವರು, ಸಾವಿನ ಅಸಲೀ ಕಾರಣವೇನು ಎಂಬುದನ್ನು ಪತ್ತೆ ಮಾಡುವಂತೆಯೂ ತಾಕೀತು ಮಾಡಿದ್ದರು. ಅದೇ ಹೊತ್ತಿಗೆ, ಹುಲಿ ಸಾವಿಗೆ ಗುಂಡೇಟೇ ಕಾರಣ ಎಂದು ಶಂಕಿಸಿದ್ದ ಸ್ಥಳೀಯರು, ಇಲಾಖೆಯ ಅಧಿಕಾರಿಗಳೊಂದಿಗೆ ಸಖ್ಯ ಹೊಂದಿರುವ ಕಳ್ಳಬೇಟೆ ತಂಡವೇ ಹುಲಿ ಸಾವಿಗೆ ಕಾರಣ. ಹಾಗಾಗಿಯೇ ಇಲಾಖೆಯ ಸ್ಥಳೀಯ ಅಧಿಕಾರಿಗಳು ನಿಜವಾದ ಹಂತಕರನ್ನು ರಕ್ಷಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಗಂಭೀರ ಆರೋಪವನ್ನೂ ಮಾಡಿದ್ದರು.

ತಿಂಗಳು ಕಳೆದರೂ ತನಿಖೆ ಪ್ರಗತಿ ಇಲ್ಲ!

ಇದೀಗ ಹುಲಿ ಸಾವು ಸಂಭವಿಸಿ ಒಂದು ತಿಂಗಳು ಕಳೆದರೂ ಪ್ರಕರಣದ ತನಿಖೆ ಯಾವ ಪ್ರಗತಿಯನ್ನೂ ಕಂಡಿಲ್ಲ. ಜೊತೆಗೆ ಹುಲಿ ಶವದ ಮರಣೋತ್ತರ ಪರೀಕ್ಷೆ ಮತ್ತು ಶವ ಸಂಸ್ಕಾರದ ವಿಷಯದಲ್ಲಿ ಕೂಡ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್‌ಟಿಸಿಎ) ಮಾರ್ಗಸೂಚಿ ಪಾಲಿಸಿಲ್ಲ. ಮಾರ್ಗಸೂಚಿಯ ಪ್ರಕಾರ ತಪಾಸಣೆ, ಪರೀಕ್ಷೆ ಮತ್ತು ಸಂಸ್ಕಾರ ನಡೆಸದೇ ತರಾತುರಿಯಲ್ಲಿ ವನ್ಯಜೀವಿ ವೈದ್ಯರೊಬ್ಬರ ಸಮ್ಮುಖದಲ್ಲಿ ಸ್ವತಃ ಅರಣ್ಯ ಸಂರಕ್ಷಣಾಧಿಕಾರಿಗಳೇ ನಿಂತು ಕಾಟಾಚಾರದ ತಪಾಸಣೆ ನಡೆಸಿ ಶವವನ್ನು ಸುಟ್ಟು ಹಾಕಿದ್ದಾರೆ ಎಂದು ವನ್ಯಜೀವಿ ಸಂರಕ್ಷಕರು ಹಾಗೂ ಪರಿಸರವಾದಿಗಳು ಆರೋಪಿಸಿದ್ದರು.

ಅಂಬ್ಲಿಗೊಳ್ಳ ಹುಲಿ ಸಾವು ಪ್ರಕರಣದ ತನಿಖೆಗೆ ಆದೇಶಿಸಿ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಹೊರಡಿಸಿದ್ದ ಆದೇಶ

“ಹುಲಿ ದೇಹದಲ್ಲಿ ಎರಡು ಗುಂಡೇಟಿನ ಗುರುತುಗಳು ಪತ್ತೆಯಾಗಿದ್ದವು. ಗುಂಡೇಟಿನ ಗುರುತು ಕಂಡ ಬಳಿಕವೂ ಅಧಿಕಾರಿಗಳು ಹುಲಿಯ ಶವವನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸದೆ ಸುಟ್ಟು ಹಾಕಿದ್ದಾರೆ. ಅಧಿಕಾರಿಗಳು ಎನ್‌ಟಿಸಿಎ ಗೈಡ್‌ಲೈನ್ಸ್‌ ಗಾಳಿಗೆ ತೂರಿ ಹುಲಿಯ ಶವ ಸುಟ್ಟುಹಾಕಿರುವುದರ ಹಿಂದೆ ತಮ್ಮ ಸಂಪರ್ಕದಲ್ಲೇ ಇರುವ ಕಳ್ಳಬೇಟೆಗಾರರನ್ನು ಉಳಿಸುವ ಹುನ್ನಾರ ಕೆಲಸ ಮಾಡಿದೆ” ಎನ್ನುತ್ತಾರೆ ಹೆಸರು ಹೇಳಲು ಬಯಸದ ಸಾಗರದ ಹಿರಿಯ ಪರಿಸರ ಹೋರಾಟಗಾರರು.

ಪ್ರಕರಣದ ಕುರಿತು ಇಲಾಖೆಯ ಉನ್ನತಾಧಿಕಾರಿಗಳ ಗಮನ ಸೆಳೆದಿರುವ ಅವರು, ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿ, "ಈ ಹುಲಿ ಸ್ಥಳೀಯವಾಗಿ ಹಲವು ವರ್ಷಗಳಿಂದ ಚಲನವಲನ ಹೊಂದಿತ್ತು. ಹಲವು ಹಳ್ಳಿಗರು ಕಾಡಿನಲ್ಲಿ ಆ ಹುಲಿಯನ್ನು ಕಂಡಿದ್ದರು. ಆದರೆ, ಆ ಭಾಗದ ಕಾಡಿನಲ್ಲಿ ಕಾಡುಪ್ರಾಣಿಗಳ ಬೇಟೆ ನಡೆಸುವ ಒಂದು ಕಳ್ಳಬೇಟೆ ತಂಡದ ಗುಂಡಿಗೆ ಬಲಿಯಾಗಿರಬಹುದು ಎಂಬ ಶಂಕೆ ಸ್ಥಳೀಯರಲ್ಲಿದೆ. ಆದರೆ, ಆ ಬೇಟೆಗಾರರ ತಂಡ ಸ್ಥಳೀಯ ಇಲಾಖಾ ಸಿಬ್ಬಂದಿಯೊಂದಿಗೆ ಸಖ್ಯ ಹೊಂದಿರುವ ದೂರುಗಳಿವೆ. ಆ ಹಿನ್ನೆಲೆಯಲ್ಲೇ ಹುಲಿ ಶವವನ್ನು ತರಾತುರಿಯಲ್ಲಿ ಸುಟ್ಟುಹಾಕಲಾಗಿದೆ. ಗುಂಡಿನ ಗುರುತು ಪತ್ತೆಯಾದ ಬಳಿಕವೂ ಆ ಬಗ್ಗೆ ಹೆಚ್ಚಿನ ತನಿಖೆ ನಡೆಸದೆ ಅದೊಂದು ಕಾದಾಟದಲ್ಲಿ ಗಾಯಗೊಂಡು ಆಗಿರುವ ಸಾವು ಎಂಬಂತೆ ಬಿಂಬಿಸುವ ಪ್ರಯತ್ನ ಇಲಾಖೆಯಿಂದಲೇ ನಡೆದಿದೆ. ಆದರೆ, ಇಲಾಖೆಯ ಉನ್ನತಾಧಿಕಾರಿಗಳು ಈ ಬಗ್ಗೆ ಸೂಕ್ತ ತನಿಖೆ ನಡೆಸದೇ ಹೋದರೆ ನಿಜವಾದ ಹಂತಕರು ತಪ್ಪಿಸಿಕೊಳ್ಳಲಿದ್ದಾರೆ. ಆ ಹಿನ್ನೆಲೆಯಲ್ಲಿ ನಾವು ಅರಣ್ಯ ಸಚಿವರು ಮತ್ತು ಇಲಾಖೆಯ ಉನ್ನತಾಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಿ ಉನ್ನತ ಮಟ್ಟದ ಅಧಿಕಾರಿಗಳಿಂದಲೇ ತನಿಖೆ ನಡೆಸುವಂತೆ ಒತ್ತಾಯಿಸುತ್ತೇವೆ" ಎನ್ನುತ್ತಾರೆ.

“ಹುಲಿ ಸಾವಿನ ಕುರಿತು ತನಿಖೆ ನಡೆಸಿ ಹತ್ತು ದಿನಗಳಲ್ಲೇ ಕಡತ ಸಹಿತ ವರದಿ ಸಲ್ಲಿಸಿ ಎಂದು ಅರಣ್ಯ ಸಚಿವರು ಆದೇಶಿಸಿದ್ದರೂ ಒಂದು ತಿಂಗಳ ಬಳಿಕವೂ ಇಲಾಖೆ ತನಿಖಾ ವರದಿಯನ್ನು ಸಲ್ಲಿಸಿಲ್ಲ. ತನಿಖೆಯೇ ನಡೆಯದೆ ವರದಿ ಸಲ್ಲಿಸುವುದು ಹೇಗೆ? ಕಾಟಾಚಾರಕ್ಕೆ ತಪಾಸಣೆ ನಡೆಸಿ ಶವ ಸುಟ್ಟುಹಾಕಿ ಕೈ ತೊಳೆದುಕೊಂಡಿರುವ ಇಲಾಖೆ, ಹುಲಿ ಸಾವಿನ ನಿಜವಾದ ಕಾರಣ, ಆ ನಂತರದ ತನಿಖೆಯ ಕುರಿತು ಯಾವ ಮಾಹಿತಿಯನ್ನು ಹೇಗೆ ನೀಡುತ್ತದೆ? ಹಾಗಾಗಿಯೇ ತನಿಖೆ ಅರಣ್ಯ ಸಚಿವರು ಆದೇಶಿಸಿದ ದಿನ ಎಲ್ಲಿ ನಿಂತಿತ್ತೋ ಅಲ್ಲೇ ಈಗಲೂ ನಿಂತಿದೆ” ಎನ್ನುತ್ತವೆ ಅರಣ್ಯ ಇಲಾಖೆಯ ಮೂಲಗಳು.

ತನಿಖೆಗೆ ತಂಡ ರಚನೆ: ಡಿಸಿಎಫ್‌

ಈ ನಡುವೆ, ಪ್ರಕರಣದ ಕುರಿತು ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ ಸಾಗರ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್‌ ಕುಮಾರ್‌, "ಪ್ರಕರಣದ ತನಿಖೆ ನಡೆಯುತ್ತಿದೆ. ಈಗಾಗಲೇ ಎಸಿಎಫ್(ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ) ನೇತೃತ್ವದಲ್ಲಿ ಪ್ರತ್ಯೇಕ ತನಿಖಾ ತಂಡ ರಚಿಸಲಾಗಿದೆ. ಈ ವಾರಾಂತ್ಯದ ಹೊತ್ತಿಗೆ ತನಿಖೆಯ ವರದಿ ಕೈಸೇರುವ ನಿರೀಕ್ಷೆ ಇದೆ. ಆ ಬಳಿಕವಷ್ಟೇ ಹೆಚ್ಚಿನ ಮಾಹಿತಿ ತಿಳಿದುಬರಲಿದೆ" ಎಂದು ಹೇಳಿದರು.

ಸ್ಥಳೀಯರಿಗೆ ಬೆದರಿಕೆ ಯತ್ನ

ಒಂದು ಕಡೆ ಡಿಸಿಎಫ್‌ ಅವರು ತನಿಖೆಗೆ ತಂಡ ರಚಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಹೇಳುತ್ತಿರುವಾಗಲೇ, ಸ್ಥಳೀಯರಿಂದ ಇಲಾಖೆಯ ವಿರುದ್ಧ ಮತ್ತೊಂದು ಕೂಗು ಎದ್ದಿದೆ.

“ಹುಲಿ ಸಾವಿನ ಹಿಂದಿನ ಅಸಲೀ ಕಳ್ಳಬೇಟೆಗಾರರನ್ನು ರಕ್ಷಿಸುವ ಉದ್ದೇಶದಿಂದ ಇಲಾಖೆಯ ಸ್ಥಳೀಯ ಸಿಬ್ಬಂದಿ ತನಿಖೆಯ ದಿಕ್ಕು ತಪ್ಪಿಸುವ ಯತ್ನ ನಡೆಸಿದ್ದಾರೆ. ಹುಲಿ ದೇಹ ಪತ್ತೆಯಾದ ತಾಣದಲ್ಲಿ ಹಿಂದಿನ ದಿನ ಚಾಲನೆಯಲ್ಲಿದ್ದ ಮೊಬೈಲ್ಗಳ ಟವರ್ ಲೊಕೇಶನ್ ಪತ್ತೆ ಮಾಡಿ ಮಾಹಿತಿ ಪಡೆದರೂ ಬೇಟೆಗಾರರನ್ನು ಪತ್ತೆ ಮಾಡಿ ಹೆಡಮುರಿಕಟ್ಟುವ ಅವಕಾಶವಿದ್ದಾಗಲೂ ಅಧಿಕಾರಿಗಳು ಆ ಬಗ್ಗೆ ಗಮನ ಹರಿಸದೆ, ಸ್ಥಳೀಯ ಅಮಾಯಕರ ಮೇಲೆ ಪ್ರಹಾರ ನಡೆಸುತ್ತಿದ್ದಾರೆ. ದಿನ ನಿತ್ಯ ಜಲಾಶಯದ ಆಚೀಚೆ ದಡದ ಹಳ್ಳಿಗಳ ಮನೆಮನೆಗೆ ಹೋಗಿ ಇಲಾಖೆ ಸಿಬ್ಬಂದಿಗಳು ಬೆದರಿಸುತ್ತಿದ್ದಾರೆ” ಎಂದು ಸ್ಥಳೀಯರು ಇಲಾಖೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಅಂತಹ ಆರೋಪಗಳಿಗೆ ಪೂರಕವಾಗಿ ಇಲಾಖೆಯ ಸ್ಥಳೀಯ ಅಧಿಕಾರಿಗಳು ಘಟನೆ ನಡೆದು ಒಂದು ತಿಂಗಳಾದರೂ ಶವ ಪರೀಕ್ಷೆ, ತಪಾಸಣೆ ಮತ್ತು ಶವ ಸಂಸ್ಕಾರದ ಕುರಿತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಎಲ್ಲಾ ಮಾಹಿತಿಯನ್ನು ಜನರಿಂದ ಮತ್ತು ಮಾಧ್ಯಮಗಳಿಂದ ಮುಚ್ಚಿಡಲಾಗುತ್ತಿದೆ. ಜೊತೆಗೆ ಆ ಭಾಗದಲ್ಲಿ ಹುಲಿಯ ಸಂಚಾರವೇ ಇರಲಿಲ್ಲ ಎಂಬ ಹಸೀಸುಳ್ಳನ್ನು ತೇಲಿಬಿಡಲಾಗುತ್ತಿದೆ. ಇಲಾಖೆಯ ಇಂತಹ ನಿಗೂಢ ನಡೆಗಳು ಹುಲಿರಾಯನ ಸಾವಿನ ಪ್ರಕರಣವನ್ನು ಇನ್ನಷ್ಟು ಕಗ್ಗಂಟು ಮಾಡುತ್ತಿವೆ.

Read More
Next Story