
ಅಂಬ್ಲಿಗೊಳ್ಳ ಹುಲಿ ಸಾವಿನ ಪ್ರಕರಣ
Tiger Death Mystery | ಎರಡು ಗುಂಡೇಟಿನ ಗುರುತು, ಆಂತರಿಕ ರಕ್ತಸ್ರಾವ ಮಾಹಿತಿ ಮುಚ್ಚಿಟ್ಟ ಇಲಾಖೆ!
The Federal Exclusive: ಗುಂಡೇಟಿನ ಗುರುತು, ಇಂಟರ್ನಲ್ ಬ್ಲೀಡಿಂಗ್ ಎಲ್ಲವನ್ನೂ ಕಣ್ಣಾರೆ ಕಂಡು, ದಾಖಲಿಸಿಕೊಂಡಿರುವ ಅಧಿಕಾರಿಗಳೇ ಈಗ ಎರಡು ಹುಲಿಗಳ ಕಾದಾಟ, ಸಹಜ ಸಾವು ಎಂಬಂತಹ ಹೇಳಿಕೆಗಳನ್ನು ನೀಡುತ್ತಿರುವುದು ಗಂಭೀರ ಅನುಮಾನಗಳಿಗೆ ಕಾರಣವಾಗಿದೆ.
ಅಂಬ್ಲಿಗೊಳ್ಳ ಹುಲಿ ಸಾವು ಪ್ರಕರಣವನ್ನು ಸಹಜ ಸಾವು ಎಂದು ಬಿಂಬಿಸಲು ಅರಣ್ಯ ಇಲಾಖೆ ಪ್ರಯತ್ನ ನಡೆಸುತ್ತಿದೆ ಎಂಬ ಆರೋಪಗಳ ನಡುವೆಯೇ, ಪ್ರಕರಣದಲ್ಲಿ ಹೊಸ ಬೆಳವಣಿಗೆಯಾಗಿದ್ದು ಒಂಭತ್ತು ವರ್ಷದ ಹುಲಿಯ ದೇಹದಲ್ಲಿ ಎರಡು ಗುಂಡೇಟಿನ ಗುರುತುಗಳಿದ್ದವು ಎಂಬ ಸಂಗತಿ ಸಾಕ್ಷ್ಯಸಹಿತ ಬೆಳಕಿಗೆ ಬಂದಿದೆ.
ಕಳೆದ ಫೆ.17ರಂದು ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಶಿಕಾರಿಪುರ ತಾಲೂಕು ಗಡಿಯಲ್ಲಿರುವ ಅಂಬ್ಲಿಗೊಳ್ಳ ಕಿರು ಜಲಾಶಯದ ಹಿನ್ನೀರಿನಲ್ಲಿ ಒಂಭತ್ತು ವರ್ಷದ ಹುಲಿಯ ಮೃತ ದೇಹ ತೇಲುತ್ತಿರುವುದು ಕಂಡುಬಂದಿತ್ತು. ದಡದ ಬದಲಿಗೆ ನಟ್ಟನಡು ನೀರಿನಲ್ಲಿ ಹುಲಿಯ ದೇಹ ತೇಲುತ್ತಿರುವುದು ಮೇಲ್ನೋಟಕ್ಕೆ ಇದು ಸಹಜ ಸಾವಲ್ಲ ಎಂಬ ಅನುಮಾನಗಳಿಗೆ ಕಾರಣವಾಗಿತ್ತು.
ಅದರೊಂದಿಗೆ ಹುಲಿಯ ಮರಣೋತ್ತರ ಪರೀಕ್ಷೆಯ ವೇಳೆ ಅದರ ದೇಹದಲ್ಲಿ ಎರಡು ಗುಂಡಿನ ಗುರುತುಗಳು ಪತ್ತೆಯಾಗಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾಗಿಯೂ ವರದಿಯಾಗಿತ್ತು. ಆ ಹಿನ್ನೆಲೆಯಲ್ಲಿಯೇ ಹುಲಿಯ ಮೃತ ದೇಹ ಪತ್ತೆಯಾದ ಮಾರನೇ ದಿನವೇ ಹುಲಿ ಸಾವಿನ ಕುರಿತು ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪತ್ರ ಬರೆದಿದ್ದರು. ಆ ತಮ್ಮ ಆದೇಶದಲ್ಲಿ ಗುಂಡೇಟಿನ ಗುರುತಿನ ಕುರಿತ ವರದಿಗಳ ಬಗ್ಗೆಯೂ ಸಚಿವರು ಪ್ರಸ್ತಾಪಿಸಿದ್ದರು.
ಆದರೆ, ಅರಣ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳು ಆ ಭಾಗದಲ್ಲಿ ಹುಲಿಗಳ ಸಂಚಾರವೇ ಇರಲಿಲ್ಲ, ಗುಂಡೇಟಿನ ಗುರುತು ಇರಲಿಲ್ಲ, ಹುಲಿ ಸಾವಿಗೆ ಎರಡು ಹುಲಿಗಳ ಕಾದಾಟ ಕಾರಣವಿರಬಹುದು,.. ಮುಂತಾದ ಪರಸ್ಪರ ಒಂದಕ್ಕೊಂದು ತಾಳೆಯಾಗದ ವಿರೋಧಾಭಾಸದ ಹೇಳಿಕೆಗಳನ್ನು ನೀಡಿ ಮಾಧ್ಯಮಗಳನ್ನು ಮಾತ್ರವಲ್ಲದೆ, ಸಚಿವರು ಆದೇಶಿಸಿದ್ದ ತನಿಖೆಯ ದಿಕ್ಕನ್ನೂ ತಪ್ಪಿಸುವ ಯತ್ನ ನಡೆಸಿದ್ದರು.
ಆದರೆ, ಇದೀಗ ಪ್ರಕರಣದ ಬೆನ್ನು ಹತ್ತಿರುವ ʼದ ಫೆಡರಲ್ ಕರ್ನಾಟಕʼಕ್ಕೆ ಸಿಕ್ಕಿರುವ ಎಕ್ಸ್‌ಕ್ಲ್ಯೂಸಿವ್ ಫೋಟೋ ಮತ್ತು ಪ್ರತ್ಯಕ್ಷದರ್ಶಿಗಳ ಮಾಹಿತಿ, ಇಲಾಖೆ ನಿಜವಾಗಿಯೂ ಹುಲಿ ಸಾವಿನ ಪ್ರಕರಣದಲ್ಲಿ ಹಸಿ ಸುಳ್ಳುಗಳನ್ನು ಹೇಳಿ ತಮ್ಮ ಹೊಣೆಗಾರಿಕೆಯಿಂದ ಪಾರಾಗುವ ಮತ್ತು ಅದೇ ಹೊತ್ತಿಗೆ ಕಳ್ಳಬೇಟೆಗಾರರನ್ನು ರಕ್ಷಿಸುವ ಪ್ರಯತ್ನ ನಡೆಸಿರುವುದು ಬಹಿರಂಗಪಡಿಸಿವೆ.
ಮರಣೋತ್ತರ ಪರೀಕ್ಷೆ ವೇಳೆ ಹಾಜರಿದ್ದ ತಜ್ಞರಿಗೇ ಆಘಾತ
ಹುಲಿ ಕಳೇಬರದ ಮರಣೋತ್ತರ ಪರೀಕ್ಷೆಯ ವೇಳೆ ಹಾಜರಿದ್ದ ವನ್ಯಜೀವಿ ತಜ್ಞರೇ ಇದೀಗ ಅರಣ್ಯ ಇಲಾಖೆಯ ಧೋರಣೆಯನ್ನು ಖಂಡಿಸಿದ್ದು, “ಇಲಾಖೆ ಘಟನೆ ನಡೆದು ಒಂದು ತಿಂಗಳಾದರೂ ಸಾವಿಗೆ ನಿಖರ ಕಾರಣವೇನು? ಎಂಬುದನ್ನು ತನಿಖೆ ನಡೆಸಿ ಬಹಿರಂಗಪಡಿಸಿಲ್ಲ. ಹುಲಿಯ ದೇಹದಲ್ಲಿ ಎರಡು ಗುಂಡೇಟಿನ ಗುರುತು ಇರುವುದನ್ನು ಅಂದು ಮರಣೋತ್ತರ ಪರೀಕ್ಷೆಯ ವೇಳೆ ಉನ್ನತಾಧಿಕಾರಿಗಳ ಸಮ್ಮುಖದಲ್ಲೇ ಖಾತರಿಪಡಿಸಿಕೊಳ್ಳಲಾಗಿತ್ತು. ಗುಂಡೇಟಿನ ಜಾಗದಲ್ಲಿ ರಕ್ತ ಸೋರುತ್ತಿತ್ತು. ಅಲ್ಲದೆ, ಹುಲಿಯ ದೇಹದಲ್ಲಿ ಆಂತರಿಕ ರಕ್ತಸ್ರಾವ(ಇಂಟರ್ನಲ್ ಬ್ಲೀಡಿಂಗ್) ಕೂಡ ಆಗಿರುವುದನ್ನು ದಾಖಲಿಸಿಕೊಳ್ಳಲಾಗಿತ್ತು. ಹುಲಿ ಕಳ್ಳಬೇಟೆಗಾರರ ಗುಂಡಿಗೇ ಬಲಿಯಾಗಿದೆ ಎಂಬುದು ಮೇಲ್ನೋಟಕ್ಕೇ ಕಂಡುಬಂದಿದ್ದರೂ, ಅದಕ್ಕೆ ಬೇಕಾದ ಸಾಕ್ಷ್ಯಗಳು ಕಣ್ಣಿಗೆ ರಾಚುವಂತೆ ಇದ್ದರೂ ಇಲಾಖೆಗೆ ಈವರೆಗೆ ಬೇಟೆಗಾರರ ಪತ್ತೆ ಮಾಡಲಾಗಿಲ್ಲ ಎಂಬುದು ಆಘಾತಕಾರಿ” ಎಂದು ಹೇಳಿದ್ದಾರೆ.
ಹುಲಿ ಕಳೇಬರದ ಮರಣೋತ್ತರ ಪರೀಕ್ಷೆಯ ವೇಳೆ ಸ್ವಯಂಸೇವಾ ಸಂಸ್ಥೆಯ ಪ್ರತಿನಿಧಿಯಾಗಿ ಹಾಜರಿದ್ದ ವನ್ಯಜೀವಿ ಸಂರಕ್ಷಕ ನಾಗರಾಜ್ ಬೆಳ್ಳೂರು ಅವರು ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, “ಘಟನೆ ನಡೆದು ಒಂದು ತಿಂಗಳಾದರೂ ಆ ಬಗ್ಗೆ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬರುತ್ತಿಲ್ಲ. ಜೊತೆಗೆ, ಗುಂಡೇಟಿನ ಗುರುತು, ಇಂಟರ್ನಲ್ ಬ್ಲೀಡಿಂಗ್ ಎಲ್ಲವನ್ನೂ ಕಣ್ಣಾರೆ ಕಂಡು, ದಾಖಲಿಸಿಕೊಂಡಿರುವ ಅಧಿಕಾರಿಗಳೇ ಈಗ ಎರಡು ಹುಲಿಗಳ ಕಾದಾಟ, ಸಹಜ ಸಾವು ಎಂಬಂತಹ ಹೇಳಿಕೆಗಳನ್ನು ನೀಡುತ್ತಿರುವುದು ಗಂಭೀರ ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೆ, ಮರಣೋತ್ತರ ಪರೀಕ್ಷೆಯ ವೇಳೆ ಅಧಿಕೃತ ಪ್ರತಿನಿಧಿಗಳಾಗಿ ಹಾಜರಿದ್ದ ನಮಗೂ ವರದಿಯ ಪ್ರತಿಯನ್ನಾಗಲೀ, ವಿಡಿಯೋ ಮತ್ತು ಮತ್ತಿರರ ದಾಖಲೆಗಳನ್ನಾಗಲೀ ನೀಡಿಲ್ಲ. ಇಲಾಖೆಯ ಈ ನಡವಳಿಕೆಗಳೇ ಅನುಮಾನ ಹುಟ್ಟಿಸುತ್ತಿವೆ” ಎಂದು ಹೇಳಿದರು.
ಮೃತ ಹುಲಿ ದೇಹದಲ್ಲಿ ಇದ್ದ ಗುಂಡೇಟಿನ ಗುರುತು
ಪ್ರತ್ಯೇಕ ಎನ್ಟಿಸಿಎ ತನಿಖೆಗೆ ಆಗ್ರಹ
ವನ್ಯಜೀವಿ ತಜ್ಞರ ಈ ಹೇಳಿಕೆಗೆ ಸಹಮತ ವ್ಯಕ್ತಪಡಿಸಿರುವ ಯುನೈಟೆಡ್ ಕನ್ಸರ್ವೇಷನ್ ಮೂವ್ಮೆಂಟ್ ವನ್ಯಜೀವಿ ಸಂರಕ್ಷಣೆ ಸಂಘಟನೆಯ ಮುಖ್ಯಸ್ಥ ಹಾಗೂ ಹಿರಿಯ ಪತ್ರಕರ್ತ ಜೋಸೆಫ್ ಹೂವರ್, “ಇದೊಂದು ಗಂಭೀರ ಪ್ರಕರಣ. ಆದರೆ, ಅರಣ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳು ಪ್ರಕರಣವನ್ನು ಹಳ್ಳ ಹಿಡಿಸುವ ಪ್ರಯತ್ನದಲ್ಲಿದ್ದಾರೆ. ಗುಂಡೇಟಿನ ಗುರುತುಗಳು ಇರುವಾಗ, ಇಂಟರ್ನಲ್ ಬ್ಲೀಡಿಂಗ್ ಆಗಿರುವಾಗ ಕೂಡ ಹುಲಿಗಳ ಕಾದಾಟ, ಸಹಜ ಸಾವು ಎಂಬಂತಹ ಕಥೆ ಕಟ್ಟುತ್ತಿರುವುದು ಗಂಭೀರ ಅನುಮಾನಗಳಿಗೆ ಕಾರಣವಾಗಿದೆ. ಆ ಹಿನ್ನೆಲೆಯಲ್ಲಿ ನೇರವಾಗಿ ಎನ್‌ಟಿಸಿಎ ಈ ಪ್ರಕರಣದಲ್ಲಿ ಪ್ರತ್ಯೇಕ ತಂಡ ರಚಿಸಿ ತನಿಖೆ ಕೈಗೆತ್ತಿಕೊಳ್ಳಬೇಕಿದೆ. ಆ ಮೂಲಕ ಹುಲಿ ಸಾವಿಗೆ ನ್ಯಾಯ ಸಿಗಬೇಕಿದೆ” ಎಂದು ಒತ್ತಾಯಿಸಿದರು.
“ಮೊದಲನೆಯದಾಗಿ ಹುಲಿ ಕಳೇಬರ ಕಂಡುಬಂದ ಬಳಿಕ ಅರಣ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳು ಪ್ರತಿ ಹಂತದಲ್ಲೂ ತಪ್ಪು ಎಸಗಿದ್ದಾರೆ, ಮಾರ್ಗಸೂಚಿಗಳನ್ನು ಗಾಳಿಗೆ ತೂರಿದ್ದಾರೆ. ಪ್ರೋಟೋಕಾಲ್ ಪಾಲಿಸದೇ ಕಾಟಾಚಾರಕ್ಕೆ ಮೃಗಾಲಯದ ಹಂಗಾಮಿ ವೈದ್ಯರ ಮೂಲಕ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆದರೆ ಅನುಭವಿ ವನ್ಯಜೀವಿ ವೈದ್ಯರು, ಎನ್‌ಟಿಸಿಎಯ ಹಿರಿಯ ತಜ್ಞರ ಸಮ್ಮುಖದಲ್ಲಿ ಅದು ನಡೆಯಬೇಕಿತ್ತು. ಒಟ್ಟಾರೆ ಪ್ರತಿ ಹಂತದಲ್ಲೂ ಲೋಪ ಆಗಿದೆ. ಇದೀಗ ಸಚಿವರು ವರದಿ ಕೇಳಿ ತಿಂಗಳು ಕಳೆದರೂ ಇನ್ನೂ ವರದಿ ನೀಡಿಲ್ಲ. ತನಿಖೆ ಆಗಿಲ್ಲ. ಹಾಗಾಗಿ ಎನ್‌ಟಿಸಿಎ ನಿಂದಲೇ ಉನ್ನತ ಮಟ್ಟದ ತನಿಖೆಯಾಗಬೇಕಿದೆ. ಆ ಮೂಲಕ ತಪ್ಪಿತಸ್ಥ ಅಧಿಕಾರಿಗಳು ಮತ್ತು ಹುಲಿ ಸಾವಿಗೆ ಕಾರಣವಾದವರಿಗೆ ಶಿಕ್ಷೆಯಾಗಬೇಕಿದೆ” ಎಂದು ಹೂವರ್ ʼದ ಫೆಡರಲ್ ಕರ್ನಾಟಕʼಕ್ಕೆ ಹೇಳಿದರು.
ಸಮಗ್ರ ಮಾಹಿತಿ ಕೇಳಿದ ಎನ್‌ಟಿಸಿಎ
ಈ ನಡುವೆ, ಇಲಾಖೆಯ ಮೂಲಗಳ ಪ್ರಕಾರ ಹುಲಿ ಮರಣೋತ್ತರ ಪರೀಕ್ಷೆಯ ವೇಳೆ ಸಂಗ್ರಹಿಸಿ ಕಳಿಸಿಕೊಟ್ಟಿದ್ದ ಮಾದರಿ ಮತ್ತು ವರದಿಯನ್ನು ಎನ್ಟಿಸಿಎ ತಿರಸ್ಕರಿಸಿದೆ ಎನ್ನಲಾಗಿದೆ.
ಹುಲಿ ಸಾವಿನ ಕುರಿತು ಇಲಾಖೆಯ ಹೇಳಿಕೆಗಳನ್ನು ಆಕ್ಷೇಪಿಸಿದ್ದ ವನ್ಯಜೀವಿ ಪ್ರೇಮಿಗಳು ಹುಲಿ ಶೆಡ್ಯೂಲ್ ಒಂದರ ಪ್ರಾಣಿಯಾಗಿರುವುದರಿಂದ ಮತ್ತು ಹುಲಿ ಮರಣೋತ್ತರ ಪರೀಕ್ಷೆ, ಮೃತದೇಹ ವಿಲೇವಾರಿ, ಮಹಜರು ಸೇರಿದಂತೆ ಪ್ರತಿಯೊಂದಕ್ಕೂ ನಿರ್ದಿಷ್ಟ ಮಾನದಂಡ, ಮಾರ್ಗಸೂಚಿ ಇವೆ, ಆ ಪ್ರಕಾರವೇ ಎಲ್ಲವೂ ನಡೆಯಬೇಕಿತ್ತು. ಆದರೆ, ಅಂಬ್ಲಿಗೊಳ್ಳ ಹುಲಿ ಸಾವು ಪ್ರಕರಣದಲ್ಲಿ ಇಲಾಖೆ ಪ್ರತಿ ಹಂತದಲ್ಲೂ ಮಾರ್ಗಸೂಚಿಗಳನ್ನು ಗಾಳಿಗೆ ತೂರಿದೆ. ಆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್‌ಟಿಸಿಎ) ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದ್ದರು.
ಆ ಹಿನ್ನೆಲೆಯಲ್ಲಿ ಇಲಾಖೆ, ಹುಲಿ ಶವ ಪರೀಕ್ಷೆಯ ವೇಳೆ ಸಂಗ್ರಹಿಸಿದ್ದ ಮಾದರಿಗಳನ್ನು ಎನ್ಟಿಸಿಎಗೆ ಕಳಿಸಿ ವರದಿ ಕೇಳಿತ್ತು. ಆದರೆ, ಇಲಾಖೆಯ ಮೂಲಗಳ ಪ್ರಕಾರ, ಎನ್ಟಿಸಿಎ ತನಗೆ ಕಳಿಸಿರುವ ಮಾದರಿಗಳು ಎನ್ಟಿಸಿಎ ಮಾರ್ಗಸೂಚಿಯ ಪ್ರಕಾರ ಇಲ್ಲ. ಹುಲಿ ಪತ್ತೆಯಾದ ಪ್ರದೇಶ, ಮಹಜರು ನಡೆದ ಸ್ಥಳ, ಮಹಜರು ಪ್ರಕ್ರಿಯೆ, ಮಹಜರು ನಡೆಸಿದವರು ಯಾರು ಮತ್ತು ಅವರ ಅರ್ಹತೆ, ಅನುಭವವೇನು? ಅಗತ್ಯ ಜಿಪಿಎಸ್ ಮಾರ್ಕಿಂಗ್, ಫೋಟೋಗಳು, ಪಶು ವೈದ್ಯಾಧಿಕಾರಿಯ ವರದಿ, ಮರಣೋತ್ತರ ಪರೀಕ್ಷಾ ವರದಿ, ದೇಹ ಭಾಗಗಳ ವಿವರ ಕಲರ್ ಫೋಟೋ, ಯಾವುದಾದರೂ ಭಾಗ ಮಿಸ್ಸಿಂಗ್ ಆಗಿದ್ದರೆ ಅದರ ವಿವರ, ಫೋರೆನ್ಸಿಕ್ ವರದಿ, ಹೀಗೆ ಹಲವು ನಿರ್ಣಾಯಕ ಅಗತ್ಯ ಮಾಹಿತಿಗಳನ್ನು ಇಲಾಖೆ ಕಳಿಸಿಲ್ಲ ಎಂಬ ಕಾರಣ ನೀಡಿ ವರದಿ ನೀಡಲು ನಿರಾಕರಿಸಿದ್ದು, ಹೊಸದಾಗಿ ಅಗತ್ಯ ಮಾಹಿತಿ ಕಳಿಸಿಕೊಡುವಂತೆ ಪತ್ರ ಇಲಾಖೆಗೆ ಮರು ಪತ್ರ ಬರೆದಿದೆ ಎನ್ನಲಾಗಿದೆ.