
ಹಿನ್ನೀರಿನಲ್ಲಿ ಮುಳುಗಿ ಮೂವರು ಯುವತಿಯರು ಸಾವು; ಮಾಗಡಿಯ ವೈ.ಜಿ.ಗುಡ್ಡ ಜಲಾಶಯದಲ್ಲಿ ದುರ್ಘಟನೆ
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೈ.ಜಿ.ಗುಡ್ಡ ಜಲಾಶಯ ಹಿನ್ನೀರಿನಲ್ಲಿ ಮುಳುಗಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಮೂವರು ಯುವತಿಯರು ಪ್ರಾಣ ಕಳೆದುಕೊಂಡಿದ್ದಾರೆ. ಜಲಾಶಯದ ಹಿನ್ನೀರಿನಲ್ಲಿ ಆಟವಾಡಲು ಇಳಿದಾಗ ಈ ದುರ್ಘಟನೆ ಸಂಭವಿಸಿದೆ.
ಜಲಾಶಯದ ಹಿನ್ನೀರಿನಲ್ಲಿ ಆಟವಾಡಲು ನೀರಿಗೆ ಇಳಿದ ಯುವತಿಯರಲ್ಲಿ ಮೂವರು ಈಜು ಬಾರದೇ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೈ.ಜಿ.ಗುಡ್ಡ ಜಲಾಶಯ ವೀಕ್ಷಿಸಲು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಏಳು ಮಂದಿ ಯುವತಿಯರು ತೆರಳಿದ್ದರು. ಜಲಾಶಯದ ಹಿನ್ನೀರಿನಲ್ಲಿ ಆಟವಾಡಲು ಇಳಿದಾಗ ಯುವತಿಯೊಬ್ಬರು ಮುಳುಗಿದ್ದಾರೆ. ಆಕೆಯನ್ನು ರಕ್ಷಿಸಲು ಉಳಿದವರು ಪ್ರಯತ್ನಿಸಿದಾಗ ಇನ್ನಿಬ್ಬರು ಕೂಡ ಮುಳುಗಿ ಮೃತಪಟ್ಟಿದ್ದಾರೆ. ಮೃತರನ್ನು ರಾಘವಿ (18), ಮಧುಮಿತ (20) ಹಾಗೂ ರಮ್ಯಾ(22) ಎಂದು ಗುರುತಿಸಲಾಗಿದೆ.
ಯುವತಿಯರು ನೀರಿನಲ್ಲಿ ಮುಳುಗುತ್ತಿದ್ದ ವೇಳೆ ಯುವಕನೊಬ್ಬ ರಕ್ಷಣೆಗೆ ಧಾವಿಸಿ ನಾಲ್ವರನ್ನು ರಕ್ಷಿಸಿದ್ದಾರೆ. ಈ ಏಳು ಮಂದಿ ಯುವತಿಯರು ಬೆಂಗಳೂರಿನಿಂದ ಮಾಗಡಿಯ ಸಂಬಂಧಿಕರ ಮನೆಗೆ ಬಂದಿದ್ದರು. ಜಲಾಶಯ ವೀಕ್ಷಿಸಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಮೃತದೇಹಗಳನ್ನು ನೀರಿನಿಂದ ಹೊರತೆಗೆದಿದ್ದು, ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಥಳಕ್ಕೆ ಮಾಗಡಿ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದರು. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.