
ಬನ್ನೇರುಘಟ್ಟ ಉದ್ಯಾನದಲ್ಲಿ ಮೂರು ಹುಲಿ ಮರಿಗಳು ಸಾವು
ಜು.7ರಂದು ಹಿಮಾ ದಾಸ್ ಹೆಸರಿನ ಹೆಣ್ಣು ಹುಲಿಯು ಮೂರು ಮರಿಗಳಿಗೆ ಜನ್ಮ ನೀಡಿತ್ತು. ಮರಿ ಹಾಕಿದ ಮೇಲೆ ತಾಯಿ ಹುಲಿ ಅವುಗಳನ್ನು ಸರಿಯಾಗಿ ನೋಡಿಕೊಳ್ಳದ ಕಾರಣ ಮೂರು ಮರಿಗಳು ಗಾಯಗೊಂಡಿದ್ದವು.
ಮಲೆ ಮಹದೇಶ್ವರ ಅರಣ್ಯ ವ್ಯಾಪ್ತಿಯಲ್ಲಿ ಐದು ಹುಲಿಗಳ ಸಾವಿನ ದುರಂತ ಮಾಸುವ ಮುನ್ನವೇ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮೂರು ಹುಲಿ ಮರಿಗಳು ಮೃತಪಟ್ಟಿರುವ ಘಟನೆ ಜು.8 ಮತ್ತು 9 ರಂದು ನಡೆದಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಜು.7 ರಂದು ಹಿಮಾ ದಾಸ್ ಹೆಸರಿನ ಹೆಣ್ಣು ಹುಲಿಯು ಮೂರು ಮರಿಗಳಿಗೆ ಜನ್ಮ ನೀಡಿತ್ತು. ಮರಿ ಹಾಕಿದ ಮೇಲೆ ತಾಯಿ ಹುಲಿ ಅವುಗಳನ್ನು ಸರಿಯಾಗಿ ನೋಡಿಕೊಳ್ಳದ ಕಾರಣ ಮೂರು ಮರಿಗಳು ಗಾಯಗೊಂಡಿದ್ದವು. ಅವುಗಳನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ ಬದುಕುಳಿಯಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮರಿ ಹಾಕಿದ ಮೇಲೆ ತಾಯಿ ಹುಲಿ ಅವುಗಳನ್ನು ಕಚ್ಚಿಕೊಂಡು ಬೇರೆಡೆ ಸಾಗಿಸುವ ವೇಳೆ ಗಾಯಗಳಾಗಿತ್ತು. ತಕ್ಷಣವೇ ಉದ್ಯಾನವನದ ಸಿಬ್ಬಂದಿ ಮರಿಗಳನ್ನು ತಾಯಿಯಿಂದ ಬೇರ್ಪಡಿಸಿ ಆಸ್ಪತ್ರೆಗೆ ಸ್ಥಳಾಂತರಿಸಿದರು. ಜುಲೈ 8 ರಂದು ಒಂದು ಗಂಡು ಮರಿ ಮೃತಪಟ್ಟರೆ, ಜುಲೈ 9 ರಂದು ಮತ್ತೊಂದು ಗಂಡು ಮತ್ತು ಒಂದು ಹೆಣ್ಣು ಹುಲಿ ಮರಿಗಳು ಮೃತಪಟ್ಟಿವೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.
"ಪಶುವೈದ್ಯಕೀಯ ತಂಡವು ಹುಲಿ ಮರಿಗಳ ಮರಣೋತ್ತರ ಪರೀಕ್ಷೆ ನಡೆಸಿದೆ.ಒಂದು ಗಂಡು ಮರಿಯು ಕುತ್ತಿಗೆಗೆ ಗಾಯದಿಂದಾಗಿ ಮೃತಪಟ್ಟರೆ, ಮತ್ತೊಂದು ಗಂಡು ಮರಿಯ ಮೆದುಳಿನ ಗಾಯವಾಗಿತ್ತು. ತಾಯಿ ಹುಲಿಯು ಮರಿಯ ತಲೆಯನ್ನು ಕಚ್ಚಿದ ಪರಿಣಾಮ ಉಂಟಾದ ಮೆನಿಂಜಿಯಲ್ ಹೆಮಟೋಮಾ ಸೋಂಕಿನಿಂದ ಮೃತಪಟ್ಟಿದೆ. ಇನ್ನೊಂದು ಹೆಣ್ಣು ಮರಿಯು ತಾಯಿ ಹುಲಿಯ ತುಳಿತದಿಂದ ಮೃತಪಟ್ಟಿದೆ " ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಾಣಿ ಪಾಲಕರು ಮತ್ತು ವೈದ್ಯರು ತಾಯಿ ಹುಲಿ ಮತ್ತು ಮರಿಗಳಿಗೆ ಚಿಕಿತ್ಸೆ ನೀಡುವಲ್ಲಿ ಹೆಚ್ಚಿನ ಕಾಳಜಿ ವಹಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
"ತಾಯಿ ಹುಲಿಯು ಮರಿಗಳನ್ನು ನೋಡಿಕೊಳ್ಳುವುದು ಸಹಜ. ಆದರೆ, ತಾಯಿ ಹುಲಿ ಕಾಳಜಿಯ ಕೊರತೆಯಿಂದಾಗಿ ಅನೇಕ ಬಾರಿ ಮರಿಗಳನ್ನು ನಾವೇ ತಾಯಿಯಿಂದ ಬೇರ್ಪಡಿಸಿ ಮೃಗಾಲಯದ ಆಸ್ಪತ್ರೆಯಲ್ಲಿ ಸಾಕುತ್ತೇವೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಜೂನ್ 26 ರಂದು ಮಲೆ ಮಹದೇಶ್ವರ ಬೆಟ್ಟಗಳ ಹೂಗ್ಯಾಂ ಪ್ರದೇಶದಲ್ಲಿ ಒಂದು ತಾಯಿ ಹುಲಿ ಹಾಗೂ ಅದರ ನಾಲ್ಕು ಮರಿಗಳು ಮೃತಪಟ್ಟಿದ್ದ ಘಟನೆ ಪ್ರಾಣಿಪ್ರಿಯರನ್ನು ಬೆಚ್ಚಿ ಬೀಳಿಸಿತ್ತು. ಪ್ರಾಥಮಿಕ ತನಿಖೆಯಲ್ಲಿ ಹುಲಿಗಳ ಸಾವಿಗೆ ವಿಷಪ್ರಾಶನವೇ ಕಾರಣ ಎಂಬುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಮೂವರುನ್ನು ಬಂಧಿಸಲಾಗಿತ್ತು.