ಕುಡುಪು ಗುಂಪು ಹತ್ಯೆ ಪ್ರಕರಣ; ಇನ್‌ಸ್ಪೆಕ್ಟರ್ ಸಹಿತ ಮೂವರು ಅಮಾನತು
x

ಅನುಪಮ್ ಅಗರ್ವಾಲ್

ಕುಡುಪು ಗುಂಪು ಹತ್ಯೆ ಪ್ರಕರಣ; ಇನ್‌ಸ್ಪೆಕ್ಟರ್ ಸಹಿತ ಮೂವರು ಅಮಾನತು

ಮಂಗಳೂರು ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್ ಕೆ.ಆರ್., ಹೆಡ್ ಕಾನ್‌ಸ್ಟೇಬಲ್ ಚಂದ್ರ ಪಿ ಹಾಗೂ ಕಾನ್‌ ಸ್ಟೇಬಲ್‌ ಯಲ್ಲಾಲಿಂಗ ಅಮಾನತುಗೊಂಡವರು.


ಮಂಗಳೂರಿನ ಕುಡುಪುವಿನಲ್ಲಿ ಇತ್ತೀಚೆಗೆ ಗುಂಪು ಹಲ್ಲೆಯಿಂದ ಯುವಕ ಮೃತಪಟ್ಟ ಘಟನೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್, ಹೆಡ್ ಕಾನ್‌ಸ್ಟೇಬಲ್ ಹಾಗೂ ಕಾನ್‌ಸ್ಟೇಬಲ್‌ ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್​ವಾಲ್ ತಿಳಿಸಿದ್ದಾರೆ.

ಮಂಗಳೂರು ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್ ಕೆ.ಆರ್., ಹೆಡ್ ಕಾನ್‌ಸ್ಟೇಬಲ್ ಚಂದ್ರ ಪಿ ಹಾಗೂ ಕಾನ್‌ ಸ್ಟೇಬಲ್‌ ಯಲ್ಲಾಲಿಂಗ ಅಮಾನತುಗೊಂಡವರು.

ಕುಡುಪುವಿನಲ್ಲಿ ಇದೇ 27ರಂದು ಭಾನುವಾರ ಕ್ರಿಕೆಟ್ ಪಂದ್ಯಾಟ ನಡೆದಿತ್ತು. ಇದನ್ನು ವೀಕ್ಷಿಸಲು ಬಂದ ಕೇರಳದ ವಯನಾಡು ಜಿಲ್ಲೆಯ ಅಶ್ರಫ್ ಎಂಬಾತನ ಮೇಲೆ ಗುಂಪು ಹಲ್ಲೆ ನಡೆದಿತ್ತು. ಗ್ರಾಮಾಂತರ ಠಾಣೆಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಳ್ಳುವ ಬದಲು ಸಂಶಯಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಮೂಲಕ ಪ್ರಕರಣ ಮುಚ್ಚಿಹಾಕುವ ಯತ್ನ ನಡೆದಿತ್ತು ಎಂದು ಅನೇಕ ಸಂಘಟನೆಗಳು ಆರೋಪಿಸಿದ್ದವು.

ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಮಂಗಳೂರು ಉತ್ತರ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ ಅವರು ಆರೋಪಿಸಿದ್ದರು. ಮಂಗಳೂರು ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟ‌ರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದರು.

ಹಲ್ಲೆ ನಡೆಸಿದ್ದ ಬಗ್ಗೆ ದೀಪಕ್ ಎಂಬುವರು ಪೊಲೀಸರಿಗೆ ಪೋನ್ ಕರೆ ಮಾಡಿ ತಿಳಿಸಿದ್ದರು. ಘಟನೆ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್, ಸಿಬ್ಬಂದಿಗಳಿಗೆ ಮಾಹಿತಿ ಇದ್ದರೂ ಮೇಲಾಧಿಕಾರಿಗಳ ಗಮನಕ್ಕೆ ತಂದಿಲ್ಲ. ಹಾಗಾಗಿ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರನ್ನು ಅಮಾನತು ಮಾಡಲಾಗಿದೆ.

ಮಂಗಳೂರು ಹೊರವಲಯದ ಕುಡುಪು ಎಂಬಲ್ಲಿ ಏಪ್ರಿಲ್ 27ರಂದು ಅಲ್ಲಿನ ಗ್ರೌಂಡ್ ಬಳಿ ಸಣ್ಣ ಮಟ್ಟದ ಒಂದು ಕ್ರಿಕೆಟ್​​ ಟೂರ್ನಮೆಂಟ್ ನಡೆಯುತ್ತಿತ್ತು. ಅಲ್ಲಿಗೆ ವಲಸೆ ಕಾರ್ಮಿಕನೊಬ್ಬ ಬಂದಿದ್ದ. ಕ್ರಿಕೆಟ್​ ಆಡುತ್ತಿದ್ದವರಿಗೂ ಆತನಿಗೆ ಗಲಾಟೆ ನಡೆದಿತ್ತು. ಅಲ್ಲಿದ್ದ ಗುಂಪು ಆತನಿಗೆ ಹಿಗ್ಗಾಮುಗ್ಗಾ ಥಳಿಸಿತ್ತು. ಏಟು ತಿಂದ ಆತ ಮೃತಪಟ್ಟಿದ್ದ.

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವು ಪ್ರಕರಣ ದಾಖಲಾಗಿತ್ತು. ಎರಡು ದಿನ ಆದ್ರೂ ಆತನ ಗುರುತು ಪತ್ತೆಯಾಗಿರಲಿಲ್ಲ. ಮರಣೋತ್ತರ ಪರೀಕ್ಷೆಯಾದ ಮೇಲೆ ಅದು ಕೊಲೆ ಎಂಬುದು ಬಹಿರಂಗಗೊಂಡಿತ್ತು. ಏಪ್ರಿಲ್ 29ಸುದ್ದಿಗೋಷ್ಠಿ ನಡೆಸಿದ ಪೊಲೀಸರು ಈ ಕೊಲೆ ಮಾಡಿದ 15 ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಹೇಳಿದ್ದರು.

Read More
Next Story