Corona update|  ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಏರಿಕೆ: ಮತ್ತೆ ಮೂವರಿಗೆ ಸೋಂಕು ದೃಢ
x
ಕೋವಿಡ್‌

Corona update| ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಏರಿಕೆ: ಮತ್ತೆ ಮೂವರಿಗೆ ಸೋಂಕು ದೃಢ

ರಾಜ್ಯದಲ್ಲಿ ಇದುವರೆಗೂ 47 ಕೊರೊನಾ ಸಕ್ರಿಯ ಪ್ರಕರಣಗಳು ದಾಖಲಾಗಿದೆ. 46 ಮಂದಿ ಹೋಮ್ ಐಸೋಲೇಶನಲ್ಲಿದ್ದು ಒಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದ್ದು, ಇದೀಗ ಹೊಸದಾಗಿ ಮೂವರಿಗೆ ಸೋಂಕು ದೃಢಪಟ್ಟಿದೆ. ಡಿ.ಜೆ.ಹಳ್ಳಿ, ಸಿ.ವಿ.ರಾಮನ್ ನಗರ ಹಾಗೂ ಜೈ ಭುವನೇಶ್ವರಿ ನಗರದಲ್ಲಿ ತಲಾ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದ್ದು, ಇಬ್ಬರು ಮಹಿಳೆಯರು ಹಾಗೂ ಪುರುಷರೊಬ್ಬರಿಗೆ ಪಾಸಿಟಿವ್ ವರದಿಯಾಗಿದೆ.

ಈ ಮೂವರಿಗೂ ಯಾವುದೇ ರೀತಿಯ ಪ್ರಯಾಣದ ಇತಿಹಾಸ ಇಲ್ಲದೇ ಕೋವಿಡ್ ಕಾಣಿಸಿಕೊಂಡಿದ್ದು, ಸದ್ಯ ಅವರನ್ನು ಹೋಂ ಐಸೋಲೇಷನ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದಲ್ಲಿ ಇದುವರೆಗೂ ಒಟ್ಟು 47 ಕೊರೊನಾ ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 46 ಮಂದಿ ಹೋಮ್ ಐಸೋಲೇಶನ್‌ನಲ್ಲಿದ್ದು, ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಇಲಾಖೆಯು ಕಳೆದ 24 ಗಂಟೆಗಳಲ್ಲಿ 104 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದು, ಒಂಬತ್ತು ಹೊಸ ಪ್ರಕರಣಗಳು ದಾಖಲಾಗಿವೆ.

ವೃದ್ಧರೊಬ್ಬರ ಸಾವು

ಮೇ 17ರಂದು ಬೆಂಗಳೂರಿನ ವೈಟ್‌ಫೀಲ್ಡ್‌ನ 84 ವರ್ಷದ ವೃದ್ಧರೊಬ್ಬರು ಕೊರೊನಾಗೆ ಬಲಿಯಾಗಿದ್ದರು. ಮೇ 13ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರು, ಕೊರೊನಾ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದರು.

ಸಾರ್ವಜನಿಕ ಸಾರಿಗೆಯಲ್ಲಿ ಮಾಸ್ಕ್‌ ಕಡ್ಡಾಯಕ್ಕೆ ತಜ್ಞರ ಸಲಹೆ

ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿತ್ಯ ಲಕ್ಷಾಂತರ ಜನರು ಓಡಾಡುವ ಮೆಟ್ರೋ ಹಾಗೂ ಎಸಿ ಬಸ್​​ಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ. ಮೆಟ್ರೋ ಹಾಗೂ ಎಸಿ ಬಸ್‌ಗಳಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಲು ಪ್ರಯಾಣಿಕರು ಕೂಡ ಆಗ್ರಹಿಸಿದ್ದಾರೆ.

ವಿಶೇಷವಾಗಿ ಎಸಿ ಬಸ್‌ಗಳಲ್ಲಿ ವೈರಸ್ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಮಾಸ್ಕ್ ಕಡ್ಡಾಯ ಮಾಡುವಂತೆ ಸಲಹೆ ನೀಡಲಾಗಿದೆ. ಸರ್ಕಾರದ ಆದೇಶದ ಮೇರೆಗೆ ಮಾಸ್ಕ್ ಕಡ್ಡಾಯದ ಬಗ್ಗೆ ನಿರ್ಧಾರ ಮಾಡುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿ.ಎಂ.ಆರ್.ಸಿ.ಎಲ್.) ಅಧಿಕಾರಿಗಳು ತಿಳಿಸಿದ್ದಾರೆ.

Read More
Next Story