ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಭಟ್ಕಳದ ಮೂವರಿಗೆ 10 ವರ್ಷ ಜೈಲು ಶಿಕ್ಷೆ
ಭಟ್ಕಳದ ಡಾ. ಸೈಯದ್ ಇಸ್ಮಾಯಿಲ್ ಅಫಾಕ್, ಅಬ್ದುಲ್ ಸಬೂರ್ ಮತ್ತು ಸದ್ದಾಂ ಹುಸೇನ್‌ಗೆ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯ ಅಫಾಕ್‌ಗೆ 1.55 ಲಕ್ಷ ರೂಪಾಯಿ ಮತ್ತು ಸಬೂರ್ ಮತ್ತು ಹುಸೇನ್‌ಗೆ ತಲಾ 95,000 ರೂಪಾಯಿ ದಂಡ ವಿಧಿಸಿದೆ.
ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಜನವರಿ 26, 2015ರಂದು ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾರತ ಭೇಟಿ ಕೈಗೊಳ್ಳಲಿದ್ದ ಸಂದರ್ಭದಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಭಟ್ಕಳ ಮೂಲದ ಐವರು ಉಗ್ರರಿಗೆ ಎನ್‌ಐಎ ಪ್ರಕರಣಗಳ ವಿಶೇಷ ನ್ಯಾಯಾಲಯ10 ವರ್ಷಗಳ ಸರಳ ಜೈಲು ಶಿಕ್ಷೆಯನ್ನು ಮಂಗಳವಾರ ಘೋಷಿಸಿದೆ.
ಭಟ್ಕಳದ ಡಾ. ಸೈಯದ್ ಇಸ್ಮಾಯಿಲ್ ಅಫಾಕ್, ಅಬ್ದುಲ್ ಸಬೂರ್ ಮತ್ತು ಸದ್ದಾಂ ಹುಸೇನ್‌ಗೆ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯ ಅಫಾಕ್‌ಗೆ 1.55 ಲಕ್ಷ ರೂಪಾಯಿ ಮತ್ತು ಸಬೂರ್ ಮತ್ತು ಹುಸೇನ್‌ಗೆ ತಲಾ 95,000 ರೂಪಾಯಿ ದಂಡ ವಿಧಿಸಿದೆ. ಮೂವರಿಗೆ ಐಪಿಸಿ, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ.
ಈ ಆದೇಶ ನೀಡಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿಎಂ ಗಂಗಾಧರ, ಸೆಕ್ಷನ್ 428 CrPC ಅಡಿಯಲ್ಲಿ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಜೈಲು ಶಿಕ್ಷೆಗೆ ಪರಿವರ್ತಿಸಬೇಕು, ತಲೆಮರೆಸಿಕೊಂಡಿರುವ ಇತರ ಆರೋಪಿಗಳ ವಿರುದ್ಧದ ವಿಚಾರಣೆ ಮುಗಿಯುವವರೆಗೂ ದಾಖಲೆಗಳನ್ನು ಸಂರಕ್ಷಿಸಬೇಕು ಎಂದು ಆದೇಶ ನೀಡಿದರು.
ಏನಿದು ಪ್ರಕರಣ?
2015ರಲ್ಲಿ ಗಣರಾಜ್ಯೋತ್ಸವ ಸಮಾರಂಭದ ಅತಿಥಿಯಾಗಿ ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಆರೋಪ ಮೂವರ ಮೇಲಿತ್ತು. ಉಗ್ರರು ಪಾಕಿಸ್ತಾನದಿಂದ ಬಂದ ಸೂಚನೆಯಂತೆ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎಂಬುದು ತನಿಖೆಯಲ್ಲಿ ಕಂಡು ಬಂದಿದೆ.
ಸ್ಪೋಟ ಸಂಚಿನ ಕುರಿತು 2015ರಲ್ಲಿ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಕೇಂದ್ರ ಅಪರಾಧ ವಿಭಾಗದ ಎಸಿಪಿ ತಮ್ಮಯ್ಯ ಎಂಕೆ, ಆಗಿನ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಎಂ ಚಂದ್ರಶೇಖರ್ ಮಾರ್ಗದರ್ಶನದಲ್ಲಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಎಸ್ಪಿಪಿ ಶಂಕರ ಬಿಕ್ಕಣ್ಣನವರ್ ಪ್ರಾಸಿಕ್ಯೂಷನ್ ನೇತೃತ್ವ ವಹಿಸಿದ್ದರು.