ಯಾದಗಿರಿ ಜಿಲ್ಲೆಯಲ್ಲಿ ಮೂವರ ದುರ್ಮರಣ, ಆರು ಜನರ ಸ್ಥಿತಿ ಗಂಭೀರ
x

ಕಲುಷಿತ ನೀರು ಕುಡಿದು ಮೃತಪಟ್ಟ ಮಹಿಳೆಯರು.

ಯಾದಗಿರಿ ಜಿಲ್ಲೆಯಲ್ಲಿ ಮೂವರ ದುರ್ಮರಣ, ಆರು ಜನರ ಸ್ಥಿತಿ ಗಂಭೀರ

ತಿಪ್ಪನಟಗಿ ಗ್ರಾಮಕ್ಕೆ ಸುರಪುರ ತಾಲೂಕು ಆರೋಗ್ಯ ಅಧಿಕಾರಿ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಕಲುಷಿತ ನೀರು ಸೇವಿಸಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ಮೂವರು ಮೃತಪಟ್ಟಿದ್ದು, ಆರು ಜನರ ಸ್ಥಿತಿ ಗಂಭೀರವಾಗಿದೆ. ಈ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ದೇವಿಕೆಮ್ಮ ಹೊಟ್ಟಿ (48), ವೆಂಕಮ್ಮ (60), ಮತ್ತು ರಾಮಣ್ಣ ಪೂಜಾರಿ (50) ಮೃತ ದುರ್ದೈವಿಗಳು. ಸುಮಾರು ಹತ್ತು ದಿನಗಳ ಹಿಂದೆ ತಿಪ್ಪನಟಗಿ ಗ್ರಾಮದ ಜನರು ಕಲುಷಿತ ನೀರು ಸೇವಿಸಿ ವಾಂತಿ-ಭೇದಿಯಿಂದ ಬಳಲಲಾರಂಭಿಸಿದ್ದರು. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಆದರೆ, ಸೋಮವಾರ (ಜುಲೈ 7) ಚಿಕಿತ್ಸೆ ಫಲಕಾರಿಯಾಗದೆ ಈ ಮೂವರು ಸಾವನ್ನಪ್ಪಿದ್ದಾರೆ.

ಸದ್ಯ ಆರು ಜನರ ಸ್ಥಿತಿ ಚಿಂತಾಜನಕವಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಸುಮಾರು 20 ಜನ ಅಸ್ವಸ್ಥ ಸ್ಥಿತಿಯಲ್ಲಿ ಮುಂದುವರಿದಿದ್ದಾರೆ. ಹಲವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರೂ, ಇನ್ನೂ ಗ್ರಾಮದಲ್ಲಿ ಅಸ್ವಸ್ಥರ ಸಂಖ್ಯೆ ಅಧಿಕವಾಗಿದೆ.

ಘಟನೆ ಕುರಿತು ಮಾಹಿತಿ ಪಡೆದ ಸುರಪುರ ತಾಲೂಕು ಆರೋಗ್ಯ ಅಧಿಕಾರಿ ರಾಜಾ ವೆಂಕಟಪ್ಪ ನಾಯಕ ಅವರು ತಿಪ್ಪನಟಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವಾಂತಿ-ಭೇದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವರದಿ ನೀಡುವಂತೆ ಜಿಲ್ಲಾ ಆರೋಗ್ಯ ಅಧಿಕಾರಿ ಮಹೇಶ ಬಿರಾದಾರ ಅವರು ಸೂಚನೆ ನೀಡಿದ್ದಾರೆ. ಈ ಘಟನೆ ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Read More
Next Story