
ಸಾಂದರ್ಭಿಕ ಚಿತ್ರ
ಉಡುಪಿ| ಮೀನುಗಾರಿಕೆಗೆ ತೆರಳಿದ್ದ ಮೂವರು ಬಾಲಕರು ಸಮುದ್ರಪಾಲು
ವಾಲಿಬಾಲ್ ಆಡಿ ಮುಗಿಸಿ, ಗಾಳ ಹಾಕುವ ಸಲುವಾಗಿ ಕಡಲ ತೀರಕ್ಕೆ ಹೋಗಿದ್ದ ನಾಲ್ಕು ಮಕ್ಕಳ ಪೈಕಿ ನೀರಿನ ಆಳದ ಅಂದಾಜು ಸಿಗದೆ ಮೂವರು ಮಕ್ಕಳು ಮುಳುಗಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಹೊಸಹಿತ್ಲು ಕಡಲ ತೀರದಲ್ಲಿ ಮಂಗಳವಾರ ಸಂಜೆ ಮೀನು ಹಿಡಿಯಲು ಹೋಗಿದ್ದ ಮೂವರು ಬಾಲಕರು ಸಮುದ್ರ ಪಾಲಾಗಿರುವ ಘಟನೆ ನಡೆದಿದೆ.
ಆಶಿಶ್ ದೇವಾಡಿಗ (15), ಸೂರಜ್ ಪೂಜಾರಿ (16) ಮತ್ತು ಸಂಕೇತ ದೇವಾಡಿಗ (18) ಮೃತರು. ಕೂಲಿ ಕಾರ್ಮಿಕರ ಮಕ್ಕಳಾದ ಇವರು, ಕಡಲ ತೀರದಲ್ಲಿ ವಾಲಿಬಾಲ್ ಆಡಿದ ಬಳಿಕ ಗಾಳ ಹಾಕಿ ಮೀನು ಹಿಡಿಯಲು ಹೋಗಿದ್ದರು.
ಆಳದ ಅಂದಾಜು ಸಿಗದೇ ನೀರಿಗಿಳಿದ ನಾಲ್ವರು ಬಾಲಕರ ಪೈಕಿ ಮೂವರು ಮುಳುಗಿದ್ದಾರೆ. ನಾಲ್ಕನೇ ಬಾಲಕ ಈಜಿ ದಡ ಸೇರಿ, ಸ್ಥಳೀಯ ಮೀನುಗಾರರಿಗೆ ವಿಷಯ ತಿಳಿಸಿದ್ದಾನೆ. ಮೀನುಗಾರರು ತಕ್ಷಣವೇ ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸಿದರೂ, ಅಷ್ಟರಲ್ಲಾಗಲೇ ಮೂವರು ಬಾಲಕರು ಮೃತಪಟ್ಟಿದ್ದರು.
ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು ಆಸ್ಪತ್ರೆಗೆ ಭೇಟಿ ನೀಡಿ, ಮಕ್ಕಳ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.
ದುರಂತದ ಹಿನ್ನೆಲೆಯಲ್ಲಿ ಕಡಲ ತೀರಗಳಿಗೆ ಭೇಟಿ ನೀಡುವ ಪ್ರವಾಸಿಗರು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ. ಹವಾಮಾನ ವೈಪರೀತ್ಯ ಹಾಗೂ ನೀರಿನ ಅಂದಾಜು ಸಿಗದಿರುವ ಕಾರಣ ಸ್ಥಳೀಯರೇ ನೀರುಪಾಲಾಗಿರುವಾಗ ಹೊರಗಿನಿಂದ ಬರುವವರು ಕಡಲಿಗೆ ಇಳಿಯುವಾಗ ಜಾಗರೂಕರಾಗಿರಬೇಕು ಎಂದು ಎಚ್ಚರಿಕೆ ನೀಡಲಾಗಿದೆ.