
Gold Scam | ನಕಲಿ ಚಿನ್ನ ಮಾರಾಟ ಮಾಡುತ್ತಿದ್ದ ಮೂವರ ಬಂಧನ
ಸಿಕ್ಕಿರುವ ನಿಧಿಯನ್ನು ಯಾರಿಗೂ ಗೊತ್ತಾಗದಂತೆ ಮಾರಾಟ ಮಾಡುತ್ತಿದ್ದೇವೆ ಎಂದು ಚಿನ್ನದ ವ್ಯಾಪಾರಿಗಳನ್ನು ನಂಬಿಸುತ್ತಿದ್ದ ಆರೋಪಿಗಳು, ಆರಂಭದಲ್ಲಿ 10 ಗ್ರಾಂ ವರೆಗೆ ಅಸಲಿ ಚಿನ್ನದ ಗಟ್ಟಿಯನ್ನೂ ಕೊಡುತ್ತಿದ್ದರು.
ಎಂತೆಂತಹ ಖದೀಮರು ಇರುತ್ತಾರೆ ನೋಡಿ, ಮಣ್ಣಿನ ಇಟ್ಟಿಗೆಗೆ ಚಿನ್ನದ ಪಾಲಿಶ್ ಮಾಡಿ ಅಸಲಿ ಚಿನ್ನವೆಂದು ಚಿನ್ನದ ವ್ಯಾಪಾರಿಗಳಿಗೇ ಯಾಮಾರಿಸಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬಿಹಾರ ಮೂಲದ ಮೂವರು ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ರಬಿಕುಲ್ ಇಸ್ಲಾಂ, ಇದ್ದಿಶ್ ಅಲಿ ಹಾಗೂ ಅನ್ವರ್ ಹುಸೇನ್ ಬಂಧಿತ ಆರೋಪಿಗಳಾಗಿದ್ದಾರೆ.
ರಾಜರು ಆಳ್ವಿಕೆ ಮಾಡಿದ ಪ್ರದೇಶದಲ್ಲಿ ಮನೆ ಕಟ್ಟಲು ಪಾಯ ಅಗೆಯುವಾಗ ಚಿನ್ನದ ನಿಧಿ ಸಿಕ್ಕಿದೆ ಎಂದು ವಂಚಕರು ಆರಂಭದಲ್ಲಿ ಕತೆ ಕಟ್ಟುತ್ತಿದ್ದರು. ಸಿಕ್ಕಿರುವ ಆ ಚಿನ್ನವನ್ನು ಮಾರುಕಟ್ಟೆ ಬೆಲೆಗಿಂತ ಅರ್ಧ ಬೆಲೆಯಲ್ಲಿ ಮಾಡುತ್ತೇವೆ ಎಂದು ಚಿನ್ನದ ವ್ಯಾಪಾರಿಗಳನ್ನು ನಂಬಿಸುತ್ತಿದ್ದರು.
ಸಿಕ್ಕಿರುವ ನಿಧಿಯನ್ನು ಯಾರಿಗೂ ಗೊತ್ತಾಗದಂತೆ ಮಾರಾಟ ಮಾಡುತ್ತಿದ್ದೇವೆ ಎಂದು ಚಿನ್ನದ ವ್ಯಾಪಾರಿಗಳನ್ನು ನಂಬಿಸುತ್ತಿದ್ದ ಖದೀಮರು, ಆರಂಭದಲ್ಲಿ 10 ಗ್ರಾಂ ವರೆಗೆ ಅಸಲಿ ಚಿನ್ನದ ಗಟ್ಟಿಯನ್ನೂ ಕೊಡುತ್ತಿದ್ದರು. ಹಾಗೆ ಗಟ್ಟಿ ಚಿನ್ನವನ್ನು ಪಡೆದುಕೊಳ್ಳುತ್ತಿದ್ದ ವ್ಯಾಪಾರಿಗಳು ಇವರನ್ನು ನಂಬುತ್ತಿದ್ದರು. ಹೀಗಾಗಿ ನಕಲಿ ಚಿನ್ನ ಮಾರಾಟ ಮಾಡುವುದು ವಂಚಕರಿಗೆ ಸಾಧ್ಯವಾಗುತ್ತಿತ್ತು.
ಚಿನ್ನದ ವ್ಯಾಪಾರಿಗಳೊಂದಿಗೆ ವ್ಯವಹಾರ ಕುದುರಿದ ಬಳಿಕ ಚಿನ್ನ ತೆಗೆದುಕೊಳ್ಳಲು ತಾವು ತಿಳಿಸುವ ಜಾಗಕ್ಕೆ ಬರುವಂತೆ ಹೇಳುತ್ತಿದ್ದ ಆರೋಪಿಗಳು, ನಂತರ ಪದೆಪದೇ ಲೊಕೇಷನ್ ಬದಲಿಸುತ್ತಿದ್ದರು. ಕೊನೆಗೆ, ನಿರ್ಜನ ಪ್ರದೇಶದಲ್ಲಿ ವ್ಯಾಪಾರಿಗಳನ್ನು ಕರೆಸಿಕೊಂಡು ತುರ್ತಾಗಿ ಹಣವನ್ನು ಪಡೆದು ಅವರ ಕೈಗೆ ನಕಲಿ ಚಿನ್ನವನ್ನು ಇಟ್ಟು ಪರಾರಿ ಆಗುತ್ತಿದ್ದರು.
ಈ ಕುರಿತು ಮೊದಲು ದಾಖಲಾಗಿದ್ದ ದೂರಿನ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾಗ, ಹಿಂದೆ ಮಾಡಿದಂತೆಯೇ ಮತ್ತೊಬ್ಬ ಚಿನ್ನದ ವ್ಯಾಪಾರಿಗೆ ವಂಚಿಸುವಾಗ ವಂಚಕರು ಸಿಕ್ಕಿಬಿದ್ದಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಕೋರಮಂಗಲದಲ್ಲಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ 970 ಗ್ರಾಂ ನಕಲಿ ಚಿನ್ನ, ಒಂದು ವಾಹನ, ಮೂರು ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.