ನಿರ್ಮಾಪಕ ಉಮಾಪತಿಗೆ ಬೆದರಿಕೆ: ದರ್ಶನ್ ಅಭಿಮಾನಿ ಬಂಧನ
x

ನಿರ್ಮಾಪಕ ಉಮಾಪತಿಗೆ ಬೆದರಿಕೆ: ದರ್ಶನ್ ಅಭಿಮಾನಿ ಬಂಧನ


ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಿರ್ಮಾಪಕ ಉಮಾಪತಿ ಗೌಡರಿಗೆ ಬೆದರಿಕೆ ಹಾಕಿದ್ದ ಹಾಗೂ ದರ್ಶನ್ ಅಭಿಮಾನಿಗಳಿಗೆ ಪ್ರಚೋದಿಸುತ್ತಿದ್ದ ಆರೋಪದಲ್ಲಿ ಚೇತನ್ ಎಂಬವನನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಚೇತನ್ ಕೂಡ ದರ್ಶನ್ ಅಭಿಮಾನಿಯಾಗಿದ್ದು , ಆತನ ವಿರುದ್ಧ ಐಪಿಸಿ ಸೆಕ್ಷನ್ 504, 506 ಅಡಿ ಎಫ್ಐಆರ್ ದಾಖಲಿಸಿಕೊಂಡು, ಪೊಲೀಸರು ಬಂಧಿಸಿದ್ದಾರೆ.

ನಟ ದರ್ಶನ್ ಬಗ್ಗೆ ಉಮಾಪತಿ ಗೌಡ ಅವರು ಮಾಧ್ಯಮಗಳಲ್ಲಿ ಮಾತಾಡಿದ್ದರು. ಈ ಬಗ್ಗೆ ನಟ ದರ್ಶನ್ ಅಭಿಮಾನಿಯಾಗಿರುವ ಚೇತನ್ ಕೋಪಗೊಂಡು, ಉಮಾಪತಿ ಗೌಡರಿಗೆ ಬೆದರಿಕೆ ಹಾಕಿದ್ದ. ಅಷ್ಟೇ ಅಲ್ಲದೆ ಉಮಾಪತಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿ, ದರ್ಶನ್ ಅವರ ಇತರೆ ಅಭಿಮಾನಿಗಳಿಗೆ ಪ್ರಚೋದಿಸುತ್ತಿದ್ದನು. ಈ ಬಗ್ಗೆ ನಿರ್ಮಾಪಕ ಉಮಾಪತಿ ಗೌಡ ದೂರು ನೀಡಿದ್ದು ಸದ್ಯ ಬಸವೇಶ್ವರ ನಗರ ಪೊಲೀಸರು ಚೇತನ್‌ನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.

ದರ್ಶನ್ ಮಹಿಳಾ ಅಭಿಮಾನಿ ವಿರುದ್ಧ ಮಂಡ್ಯದಲ್ಲಿ ದೂರು:

ನಟ ದರ್ಶನ್ ಬಂಧನವಾಗುತ್ತಿದ್ದಂತೆ ಮಂಡ್ಯದ ಅಭಿಮಾನಿ ಮಂಗಳಾ ಎನ್ನುವವರು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಮನಬಂದಂತೆ ಎಲ್ಲರಿಗೂ ಬೈದಿದ್ದಾರೆ. ಇತ್ತೀಚಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಮಾತನಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ದರ್ಶನ್ ಅಭಿಮಾನಿಯ ಹುಚ್ಚಾಟದ ವಿರುದ್ಧ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರು ಗರಂ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕು ಘಟಕದ ಅಧ್ಯಕ್ಷ ಜಾನಿಕೀರಾಮ್ ದರ್ಶನ್ ಅಭಿಮಾನಿ ಮಂಗಳ ವಿರುದ್ಧ ದೂರು ನೀಡಿದ್ದಾರೆ.

ʻʻದರ್ಶನ್ ವಿರುದ್ಧ ಕೊಲೆ ಅಪರಾಧ ಬರುವಂತೆ ಕುಮಾರಸ್ವಾಮಿ ಮಾಡಿದ್ದಾನೆ. ದುಡ್ಡು ಕೊಟ್ಟು ದರ್ಶನ್ ವಿರುದ್ಧ ಧಿಕ್ಕಾರ ಕೂಗಿಸುತ್ತೀಯಾ? ಸುಮಲತಾ ಮಂಡ್ಯದಲ್ಲಿ ನಿನಗೆ ಸ್ಪರ್ಧಿಸಲು ಅವಕಾಶ ಕೊಟ್ಟಿರುವುದಕ್ಕೆ ಡಿ ಬಾಸ್ ವಿರುದ್ಧ ಸ್ಕೆಚ್ ಹಾಕ್ತೀಯಾ?ʼʼ ಎಂದು ಅವಾಚ್ಯ ಶಬ್ಧಗಳಲ್ಲಿ ಹೆಚ್.ಡಿ.ಕುಮಾರಸ್ವಾಮಿಯನ್ನು ಮಹಿಳೆ ನಿಂದಿಸಿದ್ದಾಳೆ.

ಈ ವಿಡಿಯೋ ಭಾರೀ ವೈರಲ್‌ ಆಗಿದ್ದು, ಮಹಿಳೆ ವಿರುದ್ಧ ಜೆಡಿಎಸ್ ಕಾರ್ಯಕರ್ತರು ದೂರು ನೀಡಿ ಎಫ್ಐಆರ್ ದಾಖಲಿಸಿ ಬಂಧಿಸುವಂತೆ ಆಗ್ರಹಿಸಿದ್ದಾರೆ.

ದರ್ಶನ್ ಖೈದಿ ನಂಬರ್ ಅನ್ನು ಗಾಡಿ ಮೇಲೆ ಹಾಕಿಸಿಕೊಂಡ ಅಭಿಮಾನಿ

ಮೈಸೂರಿನಲ್ಲಿ ದರ್ಶನ್ ಅಭಿಮಾನಿ ರಾಜೇಶ್ ಎಂಬುವವರು ತಮ್ಮ ಗಾಡಿ ಮೇಲೆ ದರ್ಶನ್ ಖೈದಿ ನಂಬರ್ ಹಾಕಿಸಿಕೊಂಡಿದ್ದಾರೆ. ಜೈಲಿನಲ್ಲಿ ನಟ ದರ್ಶನ್ ಗೆ ಕೊಟ್ಟಿರುವ ಖೈದಿ ನಂಬರ್ 6106 ಅನ್ನು ಗಾಡಿ ಮೇಲೆ ಹಾಕಿಸಿಕೊಂಡಿದ್ದಾರೆ. ಇದೇ ಲಕ್ಕಿ ನಂಬರ್ ಎಂದು ಗಾಡಿ ಮೇಲೆ ಬರೆಸಿದ್ದಾರೆ.

ಟಿ.ನರಸೀಪುರ ತಾಲೂಕಿನ ಕರುಹಟ್ಟಿ ಗ್ರಾಮದ ರಾಜೇಶ್, ನಟ ದರ್ಶನ್ ಅಪ್ಪಟ ಅಭಿಮಾನಿ. ಗಾಡಿ ಮೇಲೆ ಖೈದಿ 6106 ಹಾಗೂ ಬೇಡಿ ಚಿತ್ರ ಹಾಕಿಸಿಕೊಂಡಿದ್ದಾರೆ. ಗಾಡಿಗೆ ಈಗಾಗಲೇ ಬೇರೆ ನಂಬರ್ ಇದೆ. ಚೇಂಜ್ ಮಾಡಲು ಆಗದ ಕಾರಣ 6106 ನಂಬರ್ ಎಂದು ಮುಂದೆ ಬರೆಸಿದ್ದಾರೆ. ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲಿಗೆ ಹೋದ ಬಳಿಕ ಅಭಿಮಾನಿಗಳು ಹೊಸ ಟ್ರೆಂಡ್ ಶುರು ಮಾಡಿದ್ದಾರೆ.

Read More
Next Story