
ಜೆಪಿಸಿ ಅಧ್ಯಕ್ಷರಿಗೆ ಬೆದರಿಕೆ | ಶಿಸ್ತುಕ್ರಮಕ್ಕೆ ಒತ್ತಾಯಿಸಿ ಸ್ಪೀಕರ್‌ಗೆ ತೇಜಸ್ವಿ ಸೂರ್ಯ ಪತ್ರ
ಜೆಪಿಸಿ ಅಧ್ಯಕ್ಷರಿಗೆ ಬೆದರಿಕೆ ಹಾಕುವ ಮೂಲಕ ಸಂಸದೀಯ ಶಿಷ್ಟಾಚಾರ ಉಲ್ಲಂಘಿಸಿದ ವಿರೋಧ ಪಕ್ಷದ ಸದಸ್ಯರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ತೇಜಸ್ವಿ ಸೂರ್ಯ ಸ್ಪೀಕರ್ ಅವರಿಗೆ ಪತ್ರ ಬರೆದಿದ್ದಾರೆ.
ವಕ್ಫ್ ತಿದ್ದುಪಡಿ ಮಸೂದೆಯ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷೆ ಜಗದಾಂಬಿಕಾ ಪಾಲ್ ಅವರು ಸಮಿತಿಯ ಸಭೆ ನಡೆಸುವಾಗ ವಿರೋಧ ಪಕ್ಷದ ಕೆಲ ಸದಸ್ಯರು ಬೆದರಿಕೆ ಹಾಕಿ, ದಾಖಲೆ ಹರಿದರು ಎಂದು ಆರೋಪಿಸಿ ಸಂಸದ ತೇಜಸ್ವಿ ಸೂರ್ಯ ಅವರು ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ.
ಸಂಸದೀಯ ನೀತಿ ಸಂಹಿತೆ ಉಲ್ಲಂಘಿಸಿರುವ ವಿರೋಧ ಪಕ್ಷದ ಸದಸ್ಯರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಸಂಸದೀಯ ಶಿಷ್ಟಾಚಾರ ಪಾಲಿಸುವಂತೆ ವಿರೋಧ ಪಕ್ಷದ ಸದಸ್ಯರಿಗೆ ನಿರ್ದೇಶನ ನೀಡಬೇಕು ಎಂದು ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ.
ಕರ್ನಾಟಕದಲ್ಲಿ ನಡೆದಿರುವ ವಕ್ಫ್ ಭೂ ಹಗರಣದ ಕುರಿತು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರ ಅಭಿಪ್ರಾಯ ಕೇಳಲು ಅ.14 ರಂದು ಜಂಟಿ ಸಂಸದೀಯ ಸಮಿತಿ ಸಭೆ ನಡೆಸುತ್ತಿತ್ತು. ಆಗ ವಿರೋಧ ಪಕ್ಷಗಳ ಸದಸ್ಯರು ಅಸಂಸದೀಯ ವರ್ತನೆ ತೋರಿದರು ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
ಅನ್ವರ್ ಮಾಣಿಪ್ಪಾಡಿ ಅವರು 2012 ರಲ್ಲಿ ಸಲ್ಲಿಸಿದ್ದ ವರದಿ ಕುರಿತಂತೆ ಚರ್ಚೆ ನಡೆಯುತ್ತಿತ್ತು. ಕರ್ನಾಟಕದಲ್ಲಿ ಸುಮಾರು 2,000 ಎಕರೆ ವಕ್ಫ್ ಭೂಮಿ ಅತಿಕ್ರಮಣ ಅಥವಾ ಮಾರಾಟ ಮಾಡಿರುವ ಬಗ್ಗೆ ವರದಿ ಹೇಳಿತ್ತು. ವಕ್ಫ್ ಜಾಗವನ್ನು ಖಾಸಗಿ ಸಂಸ್ಥೆಗಳು, ಕಾಂಗ್ರೆಸ್ಸಿನ ಕೆಲ ನಾಯಕರು ಕೂಡ ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಚರ್ಚಿಸುವಾಗ ವಿರೋಧ ಪಕ್ಷದ ಸದಸ್ಯರು ಸಭೆಗೆ ಅಡ್ಡಿಪಡಿಸಿದರು. ಅಧ್ಯಕ್ಷರಿಗೆ ಬೆದರಿಕೆ ಹಾಕಿದರು. ಸಮಿತಿ ಎದುರಲ್ಲೇ ದಾಖಲೆಗಳನ್ನು ಹರಿದು ಹಾಕಿದರು ಎಂದು ತೇಜಸ್ವಿ ಸೂರ್ಯ ಅವರು ಸ್ಪೀಕರ್‌ಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.
ಅ.14 ರಂದು ನಡೆದ ಜಂಟಿ ಸಂಸದೀಯ ಸಮಿತಿ ಸಭೆಯು ನಿಯಮ ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿಲ್ಲ. ವಿರೋಧ ಪಕ್ಷದ ಸದಸ್ಯರ ವಿರುದ್ಧ ವೈಯಕ್ತಿಕ ಆರೋಪಗಳಿಗೆ ಅವಕಾಶ ಮಾಡಿಕೊಟ್ಟಿತು ಎಂದು ಆರೋಪಿಸಿ ವಿರೋಧ ಪಕ್ಷಗಳ ಸದಸ್ಯರು ಸಭೆ ಬಹಿಷ್ಕರಿಸಿ, ಲೋಕಸಭೆ ಸ್ಪೀಕರ್‌ಗೆ ದೂರು ನೀಡಿದ್ದರು.
2024 ಆಗಸ್ಟ್ ತಿಂಗಳಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಪರಿಶೀಲನೆಗೆ ಜಗದಾಂಬಿಕಾ ಪಾಲ್ ನೇತೃತ್ವದಲ್ಲಿ ಜಂಟಿ ಸಂಸದೀಯ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯಲ್ಲಿ ಕರ್ನಾಟಕದ ತೇಜಸ್ವಿ ಸೂರ್ಯ, ಡಾ.ವೀರೇಂದ್ರ ಹೆಗ್ಗಡೆ, ನಾಸಿರ್ ಹುಸೇನ್ ಸೇರಿ ಒಟ್ಟು 31 ಸದಸ್ಯರನ್ನು ನೇಮಕ ಮಾಡಲಾಗಿತ್ತು.