ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಹ್ವಾನಿಸದಿದ್ದರೂ ಸಾವಿರಕ್ಕೂ ಅರ್ಜಿಗಳ ಸಲ್ಲಿಕೆ!
x

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಹ್ವಾನಿಸದಿದ್ದರೂ ಸಾವಿರಕ್ಕೂ ಅರ್ಜಿಗಳ ಸಲ್ಲಿಕೆ!

ಸಚಿವ ಶಿವರಾಜ್‌ ತಂಗಡಗಿ ಕಳೆದ ವರ್ಷವೇ ಅರ್ಜಿ ಆಹ್ವಾನಿಸುವುದಿಲ್ಲ ಎಂದು ಪ್ರಕಟಿಸಿದ್ದರು. ಹೀಗಾಗಿ ಈ ಬಾರಿ ಅರ್ಜಿಗಳನ್ನು ಆಹ್ವಾನಿಸಿಲ್ಲ. ಆದರೂ ಇಲಾಖೆಗೆ ಅರ್ಜಿಗಳು ಸಲ್ಲಿಕೆಯಾಗಿವೆ.


ಈ ಬಾರಿಯ 70ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಾಗಿ (Rajyotsava Award) ಅರ್ಜಿ ಕರೆಯುವ ಪ್ರಕ್ರಿಯೆಯನ್ನು ಕೈಬಿಟ್ಟು, ತೆರೆಮರೆಯಲ್ಲಿ ಸಮಾಜ ಸೇವೆ ಸಲ್ಲಿಸುತ್ತಿರುವ ಅರ್ಹ ಸಾಧಕರನ್ನು ಗುರುತಿಸಲು ಸರ್ಕಾರ ತೀರ್ಮಾನಿಸಿದೆ. ಆದರೂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಪ್ರಶಸ್ತಿಗಾಗಿ ತೆರೆಮರೆಯಲ್ಲಿ ತೀವ್ರ ಲಾಬಿ ನಡೆಯುತ್ತಿದೆ.

ಈ ವರ್ಷ ಅರ್ಜಿಗಳನ್ನು ಆಹ್ವಾನಿಸುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ಕಳೆದ ವರ್ಷವೇ ಸ್ಪಷ್ಟಪಡಿಸಿದ್ದರು. ಆದರೂ, ಇಲಾಖೆಗೆ ಅರ್ಜಿಗಳ ಮಹಾಪೂರವೇ ಹರಿದುಬಂದಿದೆ. "ಅರ್ಜಿ ಸಲ್ಲಿಸದಿದ್ದರೂ, ಪ್ರಭಾವಿ ವ್ಯಕ್ತಿಗಳು ಹಾಗೂ ಪರಿಚಯಸ್ಥರ ಮೂಲಕ ಒತ್ತಡ ಹೇರುವ ಪ್ರಯತ್ನಗಳು ನಡೆಯುತ್ತಿವೆ" ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

70ನೇ ರಾಜ್ಯೋತ್ಸವಕ್ಕೆ 70 ಸಾಧಕರು

ಈ ಬಾರಿಯ 70ನೇ ರಾಜ್ಯೋತ್ಸವದ ಪ್ರಯುಕ್ತ, 70 ಅರ್ಹ ಸಾಧಕರಿಗೆ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದೆ. ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು, 25 ಗ್ರಾಂ ತೂಕದ ಚಿನ್ನದ ಪದಕ, ಪ್ರಶಸ್ತಿ ಪತ್ರ, ಶಾಲು ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.

ಅಂತಿಮ ಆಯ್ಕೆ ಹೇಗೆ?

ಸಲ್ಲಿಕೆಯಾಗಿರುವ ಅರ್ಜಿಗಳನ್ನು ಕೂಡ ಸಲಹಾ ಸಮಿತಿಯ ಮುಂದೆ ಇಡಲಾಗುವುದು, ಆದರೆ ಅವುಗಳನ್ನು ಪರಿಗಣಿಸಬೇಕೇ ಅಥವಾ ಬೇಡವೇ ಎಂಬುದು ಸಮಿತಿಯ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಸಚಿವ ಶಿವರಾಜ್ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ 47 ಸದಸ್ಯರ ಸಲಹಾ ಸಮಿತಿಯನ್ನು ರಚಿಸಲಾಗಿದೆ. ಸಾಹಿತ್ಯ, ಕೃಷಿ, ಸಮಾಜಸೇವೆ, ಕ್ರೀಡೆ, ಚಲನಚಿತ್ರ ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರು ಈ ಸಮಿತಿಯಲ್ಲಿದ್ದಾರೆ. ಪ್ರಸ್ತುತ, ಕನ್ನಡ ಭವನದಲ್ಲಿ ಉಪಸಮಿತಿಗಳ ಸಭೆಗಳು ನಡೆಯುತ್ತಿದ್ದು, ಪ್ರತಿ ಕ್ಷೇತ್ರದಿಂದ 1:3 ಅನುಪಾತದಲ್ಲಿ ಸಂಭಾವ್ಯರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ.

ಅಕ್ಟೋಬರ್ ಅಂತ್ಯಕ್ಕೆ ಪಟ್ಟಿ ಪ್ರಕಟ

ದೀಪಾವಳಿ ಹಬ್ಬದ ನಂತರ, ಅಕ್ಟೋಬರ್ 24ರಂದು ಸಚಿವ ಶಿವರಾಜ್ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಅಂತಿಮ ಸಲಹಾ ಸಮಿತಿ ಸಭೆ ನಡೆಯಲಿದೆ. ನಂತರ, ಅಕ್ಟೋಬರ್ 25ರಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯುವ ಉನ್ನತ ಮಟ್ಟದ ಸಭೆಯಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ. ನವೆಂಬರ್ 1ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿರುವುದರಿಂದ, ಅಕ್ಟೋಬರ್ ಅಂತ್ಯದೊಳಗೆ ಅಂತಿಮ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ.

Read More
Next Story