ಉತ್ತರ ಕರ್ನಾಟಕದಲ್ಲಿ ಭಾರೀ ಮಳೆ| ಸಾವಿರಾರು ಜನರ ಸ್ಥಳಾಂತರ ; ಉಕ್ಕಿ ಹರಿಯುತ್ತಿರುವ ನದಿಗಳು, ಸಂಚಾರ ಅಸ್ತವ್ಯಸ್ತ
x

ಪ್ರವಾಹಕ್ಕೆ ತತ್ತರಿಸಿರುವ ಉತ್ತರ ಕರ್ನಾಟಕದ ಜಿಲ್ಲೆಗಳು 

ಉತ್ತರ ಕರ್ನಾಟಕದಲ್ಲಿ ಭಾರೀ ಮಳೆ| ಸಾವಿರಾರು ಜನರ ಸ್ಥಳಾಂತರ ; ಉಕ್ಕಿ ಹರಿಯುತ್ತಿರುವ ನದಿಗಳು, ಸಂಚಾರ ಅಸ್ತವ್ಯಸ್ತ

ಮಹಾರಾಷ್ಟ್ರದ ಜಲಾಶಯಗಳಿಂದ ಭಾರೀ ಪ್ರಮಾಣದ ನೀರು ಹೊರಬಿಡುತ್ತಿರುವ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ನದಿಗಳು ಉಕ್ಕಿ ಹರಿಯುತ್ತಿದ್ದು, ಸೇತುವೆಗಳು ಮುಳುಗಿವೆ.


Click the Play button to hear this message in audio format

ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಮಹಾರಾಷ್ಟ್ರದ ಜಲಾಶಯಗಳಿಂದ ಭಾರೀ ಪ್ರಮಾಣದ ನೀರು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹೆಚ್ಚಿನ ಭಾಗಗಳು ತತ್ತರಿಸಿವೆ. ನದಿಗಳು ಉಕ್ಕಿ ಹರಿಯುತ್ತಿದ್ದು, ಸೇತುವೆಗಳು ಮುಳುಗಿವೆ. ಹಲವೆಡೆ ಸಂಪರ್ಕ ಕಡಿತಗೊಂಡಿದ್ದು, ಸಾವಿರಾರು ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.

ಮಹಾರಾಷ್ಟ್ರದ ಸಿನಾ, ವೀರ್ ಮತ್ತು ಉಜನಿ ಜಲಾಶಯಗಳಿಂದ ನೀರು ಹೊರಬಿಡುತ್ತಿದ್ದು, ಭೀಮಾ ನದಿಯು ಉಕ್ಕಿ ಹರಿಯುತ್ತಿದೆ. ಜೇವರ್ಗಿ ಬಳಿಯ ರಾಷ್ಟ್ರೀಯ ಹೆದ್ದಾರಿ 50 ರ ಅಂಚಿನ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ. ಇದು ಕಲ್ಯಾಣ ಕರ್ನಾಟಕ ಮತ್ತು ರಾಜ್ಯದ ಉಳಿದ ಭಾಗಗಳ ನಡುವಿನ ಸಂಪರ್ಕಕ್ಕೆ ಅಡ್ಡಿಯಾಗಿದೆ.

ರಸ್ತೆ ಸಂಪರ್ಕ ಕಡಿತ

ಕಟ್ಟಿಸಂಗವಿಯಲ್ಲಿ ನದಿ ನೀರು ಹೆದ್ದಾರಿ ಸೇತುವೆಯ ಮಟ್ಟ ತಲುಪಿದ್ದು, ಸಂಪೂರ್ಣ ಮುಳುಗಡೆ ಭೀತಿ ಆವರಿಸಿದೆ. ಅಧಿಕಾರಿಗಳು ಈ ಸೇತುವೆ ಮೇಲೆ ಸಂಚಾರ ನಿರ್ಬಂಧಿಸಿದ್ದಾರೆ. ಶನಿವಾರ ರಾತ್ರಿ ಸೇತುವೆಯ ಎರಡೂ ಬದಿಗಳಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರು ವಾಹನಗಳನ್ನು ಬಿಟ್ಟು ಕಾಲ್ನಡಿಗೆಯಲ್ಲಿ ದಾಟಲು ಪ್ರಯತ್ನಿಸಿದರು.

ಕಲಬುರಗಿ ಜಿಲ್ಲೆಯಲ್ಲಿ ಕಾಗಿನಾ ನದಿ ಮತ್ತು ನಾಗಾವಿ ಹೊಳೆಯ ಪ್ರವಾಹದಿಂದಾಗಿ ಮುದಬುಲ್ ಗ್ರಾಮವು ಚಿತ್ತಾಪುರ ತಾಲ್ಲೂಕು ಕೇಂದ್ರದಿಂದ ಸಂಪರ್ಕ ಕಡಿದುಕೊಂಡಿದೆ. ದಂಡೋತಿ ಸೇತುವೆಯೂ ನೀರಿನಲ್ಲಿ ಮುಳುಗಿ ಸಂಚಾರ ಸ್ಥಗಿತಗೊಂಡಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನಮ್ ತಿಳಿಸಿದ್ದಾರೆ.

ಸೇಡಂ ತಾಲೂಕಿನ ಶತಪಟನಳ್ಳಿ ಗ್ರಾಮದಲ್ಲಿ ಕಾಗಿನಾ ಸೇತುವೆ ಮುಳುಗಿದ್ದು, ಸೇಡಂ–ಚಿಂಚೋಳಿ ಮತ್ತು ಚಿತ್ತಾಪುರ–ಕಲ್ಗಿ ತಾಲ್ಲೂಕುಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ಆಳಂದದಲ್ಲಿಯೂ ಪ್ರವಾಹ ಹಾನಿ ಸಂಭವಿಸಿದೆ.

ಪ್ರವಾಹ ಭೀತಿ

ಕಾಗಿನಾ ನದಿಯಿಂದ ಬಂದ ಪ್ರವಾಹದ ನೀರು ಚಿಂಚೋಳಿ ತಾಲ್ಲೂಕಿನ ಜತ್ತೂರು ಗ್ರಾಮದಲ್ಲಿ 90 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದೆ. ಈ ಭಾಗದಲ್ಲಿ 200 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಭೀಮಾ ನದಿಗೆ 3.5 ಲಕ್ಷ ಕ್ಯೂಸೆಕ್‌ ಒಳಹರಿವು ಬರುತ್ತಿದ್ದು, ಅಫ್ಜಲ್‌ಪುರ ತಾಲ್ಲೂಕಿನ ಸೊನ್ನ ಭೀಮಾ ಬ್ಯಾರೇಜ್‌ನಿಂದ ಎಲ್ಲಾ ಗೇಟ್‌ಗಳನ್ನು ತೆರೆಯಲಾಗಿದೆ. 85 ಹಳ್ಳಿಗಳ ಮೇಲೆ ಪ್ರವಾಹದ ಭೀತಿ ಉಂಟಾಗಿದೆ.

ಭಾನುವಾರ ಸಂಜೆಯ ಹೊತ್ತಿಗೆ ಕಲಬುರಗಿ ಜಿಲ್ಲೆಯಾದ್ಯಂತ 6,664 ಪ್ರವಾಹ ಪೀಡಿತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 41 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ತರನ್ನಮ್ ಮಾಹಿತಿ ನೀಡಿದ್ದಾರೆ.

ಬೀದರ್‌ನಲ್ಲೂ ನಿರಂತರ ಮಳೆ : ಮೂರು ಸಾವು

ಬೀದರ್ ಜಿಲ್ಲೆಯಲ್ಲಿ, ನಿರಂತರ ಮಳೆ ಮತ್ತು ಮಹಾರಾಷ್ಟ್ರದ ಧನೇಗಾಂವ್ ಜಲಾಶಯದಿಂದ ಭಾರೀ ನೀರು ಹೊರಬಿಡುತ್ತಿರುವುದರಿಂದ ಕಮಲನಗರ, ಔರಾದ್, ಭಾಲ್ಕಿ, ಹುಲ್ಸೂರ್ ಮತ್ತು ಬೀದರ್ ತಾಲ್ಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಾಗೂ ಪ್ರವಾಹಕ್ಕೆ ಮೂವರು ಮೃತಪಟ್ಟಿದ್ದು, 38 ಪ್ರಾಣಿಗಳು ಅಸು ನೀಗಿವೆ. 100 ಮನೆಗಳಿಗೆ ನೀರು ನುಗ್ಗಿದ ಪ್ರಕರಣಗಳು ವರದಿಯಾಗಿವೆ. 420 ಶಾಲಾ ಕೊಠಡಿಗಳು, 57 ಸಣ್ಣ ನೀರಾವರಿ ಟ್ಯಾಂಕ್‌ಗಳು, 24 ಆರೋಗ್ಯ ಕೇಂದ್ರಗಳು ಹಾನಿಗೊಳಲಾಗಿವೆ. 246 ಕಂಬಗಳು, 36 ಟ್ರಾನ್ಸ್‌ಫಾರ್ಮರ್‌ಗಳು ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮಾಹಿತಿ ನೀಡಿದ್ದಾರೆ.

ಭಾಲ್ಕಿ ತಾಲ್ಲೂಕಿನಲ್ಲಿ, ಇಂಚೂರ್ ಸೇತುವೆ ನೀರಿನಿಂದ ಮುಳುಗಿ ಮಹಾರಾಷ್ಟ್ರಕ್ಕೆ ಹೋಗುವ ಮಾರ್ಗಗಳು ಕಡಿತಗೊಂಡಿವೆ. ಘಟಬೋರಲ್ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ಹಾಸ್ಟೆಲ್‌ನಲ್ಲಿ 12 ಮನೆಗಳು ಮತ್ತು ಬೆಳಕೇರಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಎಂಟು ಮನೆಗಳು ಜಲಾವೃತಗೊಂಡಿವೆ. ಸಂತ್ರಸ್ಥರಿಗಾಗಿ ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ. ಒಟ್ಟು 266 ಜನರು ಆಶ್ರಯ ಪಡೆದಿದ್ದಾರೆ.

ಯಾದಗಿರಿ, ರಾಯಚೂರಿನಲ್ಲಿ ಹಾನಿ

ಯಾದಗಿರಿಯಲ್ಲಿ ಭಾರೀ ಮಳೆಯ ಹಿನ್ನೆಲೆ ಭಾನುವಾರ ಸಂಜೆ ಹೊತ್ತಿಗೆ ಜಿಲ್ಲೆಯಾದ್ಯಂತ 1,160 ಪ್ರವಾಹ ಪೀಡಿತರನ್ನು ಸ್ಥಳಾಂತರಿಸಲಾಗಿದೆ. ಐದು ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಜೊತೆಗೆ 104 ಮನೆಗಳು ಹಾನಿಗೊಳಗಾಗಿವೆ. ಇಪ್ಪತ್ತೆರಡು ಸಣ್ಣ ಜಾನುವಾರುಗಳು ಮೃತಪಟ್ಟಿವೆ ಎಂದು ಉಪ ವಿಭಾಗಾಧಿಕಾರಿ ಹರ್ಷಲ್ ಭೋಯರ್ ಮಾಹಿತಿ ನೀಡಿದ್ದಾರೆ.

ಮಸ್ಕಿಯಲ್ಲಿ ಭೀಮಾ ನದಿ ನೀರು ಕೃಷ್ಣಾ ನದಿಯೊಂದಿಗೆ ವಿಲೀನಗೊಂಡು ಅದರ ಹರಿವು ಹೆಚ್ಚಾಯಿತು. ಇದರಿಂದಾಗಿ 15 ಮನೆಗಳು ಕುಸಿದವು. ಮುನ್ನೆಚ್ಚರಿಕೆ ಕ್ರಮವಾಗಿ ಆಂಧ್ರಪ್ರದೇಶದ ಅಧಿಕಾರಿಗಳು ಜುರಾಲಾ ಜಲಾಶಯದ ಗೇಟ್‌ಗಳನ್ನು ತೆರೆದರು.

ಐತಿಹಾಸಿಕ ಕೆರೆಗೂ ಹಾನಿ

ಬಸವಕಲ್ಯಾಣದಲ್ಲಿ 40 ವರ್ಷಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಈ ಹಿನ್ನೆಲೆ ಐತಿಹಾಸಿಕ ತ್ರಿಪುರಂತ್ ಸರೋವರದ ಗೋಡೆ ಕುಸಿಯುವುದನ್ನು ತಡೆಯಲು ಅಧಿಕಾರಿಗಳು ನೀರನ್ನು ಹೊರಬಿಟ್ಟರು. ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಗನ್ನಾಥ ರೆಡ್ಡಿ ಅವರು, ಸರೋವರಕ್ಕೆ ಹಾನಿಯಾಗದಂತೆ ಕಣ್ಗಾವಲು ವಹಿಸಲಾಗಿದೆ ಎಂದು ತಿಳಿಸಿದರು.

Read More
Next Story