ಸಿರಿಗೆರೆ ಮಠದ ಗದ್ದುಗೆ ವಿವಾದ | ರೆಸಾರ್ಟ್‌ ಸಭೆ ನಡೆಸಿದವರಿಗೆ ಖಾಸಗಿ ಭೇಟಿಗೆ ಅವಕಾಶವಿಲ್ಲ: ಸಿರಿಗೆರೆ ಶ್ರೀ
x

ಸಿರಿಗೆರೆ ಮಠದ ಗದ್ದುಗೆ ವಿವಾದ | ರೆಸಾರ್ಟ್‌ ಸಭೆ ನಡೆಸಿದವರಿಗೆ ಖಾಸಗಿ ಭೇಟಿಗೆ ಅವಕಾಶವಿಲ್ಲ: ಸಿರಿಗೆರೆ ಶ್ರೀ


ಸಿರಿಗೆರೆ ಮಠದ ಬಗ್ಗೆ ಚರ್ಚೆ ಮಾಡಲು ರೆಸಾರ್ಟ್‌ನಲ್ಲಿ ಸಭೆ ನಡೆಸಿದವರಿಗೆ ಇನ್ನು ಮುಂದೆ ಖಾಸಗಿಯಾಗಿ ಭೇಟಿಗೆ ಅವಕಾಶ ಕೊಡುವುದಿಲ್ಲ ಎಂದು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ ನಗರದ ರೆಸಾರ್ಟ್‌ವೊಂದರಲ್ಲಿ ಸಿರಿಗೆರೆ ಮಠದ ಶ್ರೀಗಳ ಬದಲಾವಣೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಭಾನುವಾರ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಸಭೆ ನಡೆದಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡಲು ಸೋಮವಾರ ಶ್ರೀಗಳು ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ಭಕ್ತರೊಂದಿಗೆ ಸಭೆ ನಡೆಸಿ ತಮ್ಮ ವಿರೋಧಿ ಗುಂಪಿಗೆ ಖಡಕ್‌ ಸಂದೇಶ ರವಾನಿಸಿದ್ದಾರೆ.

ʻʻಮಠದ ಬಗ್ಗೆ ರೆಸಾರ್ಟ್‌ನಲ್ಲಿ ಸಭೆ ಕರೆಯುತ್ತಾರಾ?, ಶಾಮನೂರು ಅವರ ಸಭಾಂಗಣ ಇಲ್ಲವೇ?, ನಿನ್ನೆ ಸಭೆ ನಡೆಸಿದವರಿಗೆ ಇನ್ನು ಮುಂದೆ ಖಾಸಗಿಯಾಗಿ ಭೇಟಿಗೆ ಅವಕಾಶವಿಲ್ಲ. ಇದೇ ತಿಂಗಳು 18ರಂದು ಬೆಂಗಳೂರಲ್ಲಿ ಭೇಟಿ ಆಗಲು ಅವಕಾಶ ನೀಡಲ್ಲ. ಸಿರಿಗೆರೆಯಲ್ಲಿ ಮಠ ಇದೆ, ಮಠಕ್ಕೆ ಬನ್ನಿ. ಇದೇ ವೇದಿಕೆಯಲ್ಲಿ ಜನರ ಮಧ್ಯೆಯೆ ಮಾತಾನಾಡಲಿʼʼ ಎಂದು ಶ್ರೀಗಳು ಸಭೆಯಲ್ಲಿ ಸಿಡಿಮಿಡಿಗೊಂಡರು.

ʻʻಉತ್ತರಾಧಿಕಾರಿ ಆಯ್ಕೆಗೆ ಸಮಿತಿ ಮಾಡದಂತೆ ಕೇಸ್ ಹಾಕಿದ್ದೀರಿ. ಆದರೆ ಸಭೆಯಲ್ಲಿ ಉತ್ತರಾಧಿಕಾರಿ ಆಯ್ಕೆ ಬಗ್ಗೆ ಆಗ್ರಹಿಸಿದವರು ಅವರೇ. ನಾವೇನು ಜನರ ಮತ ಪಡೆದು ಗುರುಗಳಾಗಿಲ್ಲ, ಜನರ ಭಕ್ತಿ ಭಾವದಿಂದ ನಾವು ಗುರುಗಳಾಗಿದ್ದೇವೆ. ಅಧಿಕಾರ ಕಳೆದುಕೊಂಡರೆ ನೀವು ಮಾಜಿ ಆಗುತ್ತೀರಿ, ನಾವು ಆಗಲ್ಲʼʼ ಎಂದು ಶಾಮನೂರು ಶಿವಶಂಕರಪ್ಪ ಅವರಿಗೆ ಶ್ರೀಗಳು ತಿರುಗೇಟು​ ನೀಡಿದ್ದಾರೆ.

ರೆಸಾರ್ಟ್ ರಾಜಕೀಯ ಕೀಳು ಅಭಿರುಚಿ

ʻʻಇನ್ಮುಂದೆ ಶಾಮನೂರು, ಬಿ.ಸಿ. ಪಾಟೀಲ್, ಅಣಬೇರು ರಾಜಣ್ಣ ಅವರಿಗೆ ಖಾಸಗಿ ಭೇಟಿಗೆ ನಾವು ಅವಕಾಶ ಕೊಡಲ್ಲ. ನಾವು ಕರೆಯುವುದೂ ಇಲ್ಲ. ತಾಕತ್ತಿದ್ದರೆ ಇಲ್ಲಿಗೆ ಬರಲಿ. ಇವರು ಯಾರೂ ನಮ್ಮ ಪಟ್ಟಾಭಿಷೇಕಕ್ಕೆ ಬಿಡಿಗಾಸು ಕೊಟ್ಟಿಲ್ಲ. ಎಲುಬಿಲ್ಲದ ನಾಲಿಗೆ ಹೀಗೆ ಮಾತಾಡಿದರೆ ಏನರ್ಥ. ನಮ್ಮ ಮೇಲೆ ದೂರುಗಳಿದ್ದರೆ ಸಮಾಜದ ಅಧ್ಯಕ್ಷರಿಗೆ ದೂರು ಸಲ್ಲಿಸಿ. ಬಿ.ಸಿ ಪಾಟೀಲ್ ಮಂತ್ರಿ ಆಗೋಕೆ ಮುಂಚೆ ಇಲ್ಲಿಗೆ ಬಂದಿದ್ದರು. ಗುರುಗಳ ಆಶೀರ್ವಾದದಿಂದ ಮಂತ್ರಿ ಆಗಿದ್ದೇನೆ ಎಂದಿದ್ದರು. ಆದರೆ ಈಗ ಏಕೆ ಹೀಗೆ ಹೇಳಿದ್ದಾರೆʼʼ ಎಂದು ಬಿಸಿ ಪಾಟೀಲ್‌ ವಿರುದ್ಧವೂ ಶ್ರೀಗಳು ಸಿಟ್ಟು ಹೊರಹಾಕಿದರು.

ʻʻಮಠದಲ್ಲಿ ರೌಡಿ, ಗುಂಡಾಗಳನ್ನು ಸಾಕಿದ್ದೇವೆ ಎಂದು ಹೇಳಿದ್ದಾರೆ. ಹಾಗಿದ್ದಲ್ಲಿ ಚಿತ್ರದುರ್ಗ, ದಾವಣಗೆರೆ ಎಸ್ಪಿ ಅವರನ್ನು ಕರೆದುಕೊಂಡು ಬನ್ನಿ. ಬಂಧಿಸಿ ಕರೆದೊಯ್ಯಲು ನಮ್ಮ ಅನುಮತಿ ಇದೆ. ರೆಸಾರ್ಟನಲ್ಲಿ ಕುಳಿತು ಸಭೆ ಮಾಡಿದರೆ ಕುಡುಕರು ಪಾದಯಾತ್ರೆಗೆ ಬರುತ್ತಾರೆ. ಮಠದ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ. ಸಿರಿಗೆರೆ ಮಠ ಪವಿತ್ರವಾದದ್ದು. ನಾವು ಹಾಲು ‌ಕುಡಿದುಕೊಂಡು ಇದ್ದೇವೆ, ಆಲ್ಕೊಹಾಲ್‌ ಅಲ್ಲʼʼ ಎಂದು ಸಿರಿಗೆರೆ ಶ್ರೀಗಳು ಕಿಡಿಕಾರಿದ್ದಾರೆ.

Read More
Next Story