Basanagouda Patil Yatnal Expelled | ವಂಶಾಡಳಿತ ರಾಜಕಾರಣ ವಿರೋಧಿಸಿದ್ದಕ್ಕೆ ಉಚ್ಛಾಟನೆ: ಯತ್ನಾಳ್‌
x

Basanagouda Patil Yatnal Expelled | ವಂಶಾಡಳಿತ ರಾಜಕಾರಣ ವಿರೋಧಿಸಿದ್ದಕ್ಕೆ ಉಚ್ಛಾಟನೆ: ಯತ್ನಾಳ್‌

ವಂಶ ಪಾರಂಪರ್ಯ ರಾಜಕಾರಣ, ಭ್ರಷ್ಟಾಚಾರ, ಪಕ್ಷದ ಒಳಗಿನ ಸುಧಾರಣೆಗಳ ಕುರಿತು ಮಾತನಾಡಿದ್ದಕ್ಕಾಗಿ, ಏಕವ್ಯಕ್ತಿ ದಬ್ಬಾಳಿಕೆ ವಿರುದ್ಧ ದನಿಯೆತ್ತಿದ್ದಕ್ಕಾಗಿ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿನಂತಿಸಿದ್ದಕ್ಕಾಗಿ ಪಕ್ಷವು ನನ್ನನ್ನು 6 ವರ್ಷಗಳ ಕಾಲ ಪಕ್ಷದಿಂದ ಹೊರಹಾಕಿದೆ ಎಂದವರು ಹೇಳಿದ್ದಾರೆ.


ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ತಮ್ಮನ್ನು ಆರು ವರ್ಷಗಳ ಕಾಲ ಉಚ್ಛಾಟನೆ ಮಾಡುತ್ತಿದ್ದಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರು, “ನ ದೈನ್ಯಂ, ನ ಪಲಾಯನಂ, ಸತ್ಯಮೇವ ಜಯತೆ” ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಬೇಸರ ಹೊರಹಾಕಿದ್ದಾರೆ.

ವಂಶಪಾರಂಪರ್ಯ ರಾಜಕಾರಣ, ಭ್ರಷ್ಟಾಚಾರ, ಪಕ್ಷದ ಒಳಗಿನ ಸುಧಾರಣೆಗಳ ಕುರಿತು ಮಾತನಾಡಿದ್ದಕ್ಕಾಗಿ, ಏಕವ್ಯಕ್ತಿ ದಬ್ಬಾಳಿಕೆ ವಿರುದ್ಧ ದನಿಯೆತ್ತಿದ್ದಕ್ಕಾಗಿ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿನಂತಿಸಿದ್ದಕ್ಕಾಗಿ ಪಕ್ಷವು ನನ್ನನ್ನು 6 ವರ್ಷಗಳ ಕಾಲ ಪಕ್ಷದಿಂದ ಹೊರಹಾಕಿದೆ.

ಕೆಲ ಸ್ಥಾಪಿತ ಹಿತಾಸಕ್ತಿಗಳು ತಮ್ಮ ಕಾರ್ಯಸೂಚಿಯನ್ನು ಯಶಸ್ವಿಯಾಗಿ ಮುಂದುವರಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸಿವೆ. ನನ್ನನ್ನು ಉಚ್ಛಾಟಿಸುವ ನಿರ್ಧಾರವು ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಹಿಂದುತ್ವದ ನನ್ನ ಹೋರಾಟವನ್ನು ತಡೆಯುವುದಿಲ್ಲ. ನಾನು ಅದೇ ಹುರುಪು ಮತ್ತು ದೃಢತೆಯಿಂದ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇನೆ ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಸತ್ಯವಂತರಿಗಿದು ಕಾಲವಲ್ಲ, ದುಷ್ಟಜನರಿಗೆ ಸುಭಿಕ್ಷಕಾಲ ||

ಉಪಕಾರ ಮಾಡಿದರೆ ಅಪಕರಿಸುವ ಕಾಲ

ಸಕಲವು ತಿಳಿದವಗೆ ದುರ್ಭಿಕ್ಷ ಕಾಲ.

ಧರ್ಮ ಮಾಡುವಗೆ ನಿರ್ಮೂಲವಾಗುವ ಕಾಲ

ಕರ್ಮಿ ಪಾತಕರಿಗೆ ಬಹು ಸೌಖ್ಯಕಾಲ

ಸತ್ಯವಂತರಿಗಿದು ಕಾಲವಲ್ಲ|| ಎಂಬ ಪುರಂದರ ದಾಸರು ಸಂತವಾಣಿಯನ್ನು ಉಲ್ಲೇಖಿಸಿದ್ದಾರೆ.

ಈ ಮಧ್ಯೆ, ಬಿಜೆಪಿ ಪಕ್ಷದಲ್ಲಿರುವ ಯತ್ನಾಳ್‌ ಬೆಂಬಲಿಗರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿರುವುದು ಪಕ್ಷದಲ್ಲಿ ಸಂಚಲನ ಸೃಷ್ಟಿಸಿದೆ.

ವಿಜಯಪುರದ ಬಿಜೆಪಿ ನಗರ ಒಬಿಸಿ ಮೋರ್ಚಾ ಉಪಾಧ್ಯಕ್ಷ ಸ್ಥಾನಕ್ಕೆ ಭೀಮು ಮಾಶ್ಯಾಳ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ನಗರ ಮಂಡಳದ ಅಧ್ಯಕ್ಷ ಹೂಗಾರ್ ಅವರಿಗೆ ವಾಟ್ಸಾಪ್ ಮೂಲಕ ರಾಜಿನಾಮೆ ಪತ್ರ ರವಾನಿಸಿದ್ದಾರೆ.

ಯತ್ನಾಳ್‌ ಬಣದಲ್ಲಿ ಗುರುತಿಸಿಕೊಂಡಿರುವ ಕುಮಾರ್‌ ಬಂಗಾರಪ್ಪ, ಅರವಿಂದ ಲಿಂಬಾವಳಿ, ಬಿ.ಪಿ. ಹರೀಶ್‌, ರಮೇಶ್‌ ಜಾರಕಿಹೊಳಿ, ಪ್ರತಾಪ್‌ ಸಿಂಹ ಸೇರಿದಂತೆ ಹಲವು ನಾಯಕರ ಮುಂದಿನ ರಾಜಕೀಯ ತೀರ್ಮಾನ ಕುತೂಹಲ ಕೆರಳಿಸಿದೆ.

ಯತ್ನಾಳ್‌ ಉಚ್ಛಾಟನೆ ಬೆನ್ನಲ್ಲೇ ಕೆಲ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿರುವುದು ಟೀಕೆಗೆ ಗುರಿಯಾಗಿದೆ.

Read More
Next Story