ಸೆಂಟ್ರಲ್ ಜೈಲಿನಲ್ಲಿ ಹೀಗೆ ನಡೆಯುತ್ತಿರೋದು ಇದೇ ಮೊದಲಲ್ಲ: ಸುಮಲತಾ
‘ಯಾರೇ ಜೈಲಿನಲ್ಲಿ ಬಂಧಿಗಳಿದ್ದರೂ ಸ್ವಲ್ಪ ಹಣ ಖರ್ಚು ಮಾಡಿದರೆ ಎಲ್ಲವೂ ಸಿಗುತ್ತದೆ, ಪರಪ್ಪನ ಅಗ್ರಹಾರ ಮಾತ್ರವಲ್ಲ, ಪ್ರತಿ ಜೈಲಿನಲ್ಲಿಯೂ ಇದು ನಡೆಯುತ್ತಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಸ್ವೀಕರಿಸುತ್ತಿರುವ ಚಿತ್ರಗಳು ವೈರಲ್ ಆಗಿದ್ದು, ಜೈಲಲ್ಲಿ ಕೆಲ ಕೈದಿಗಳಿಗೆ ಸಿಗುತ್ತಿರುವ ರಾಜಾತಿಥ್ಯ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಂಸದೆ ಸುಮಲತಾ ಅಂಬರೀಶ್, ಅಮೇರಿಕ ಸೇರಿದಂತೆ ವಿಶ್ವದ ಅನೇಕ ದೇಶಗಳ ಜೈಲುಗಳಲ್ಲಿ ಕೈದಿಗಳು ಫೋನ್ ಬಳಸುತ್ತಾರೆ, ಡ್ರಗ್ಸ್ ಪೂರೈಕೆಯಾಗುತ್ತದೆ ಮತ್ತು ಉಳಿದೆಲ್ಲ ಅವ್ಯವಹಾರಗಳು ನಡೆಯುತ್ತವೆ. ಕೇವಲ ಬೆಂಗಳೂರು ಸೆಂಟ್ರಲ್ ಜೈಲನ್ನು ದೂರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಮಂಗಳವಾರ (ಆ.27) ಸಂಸದೆ, ದರ್ಶನ್ ಆಪ್ತೆ ಸುಮಲತಾ ಅವರ ಹುಟ್ಟುಹಬ್ಬ. ಇಂದು ಅಂಬರೀಶ್ ಸ್ಮಾರಕಕ್ಕೆ ನಮಿಸಿದ ಬಳಿಕ ದರ್ಶನ್ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸುಮಲತಾ, ‘ದರ್ಶನ್ ನಮಗೆ ಆಪ್ತರು. ನಾನು ಮಾತನಾಡಿದರೆ ವಿವಾದ ಆಗುತ್ತದೆ. ಆದರೆ ಎಲ್ಲರಿಗೂ ಗೊತ್ತಿರುವ ವಿಚಾರವೆಂದರೆ, ಜೈಲಲ್ಲಿ ಹೀಗೆ ನಡೆಯುತ್ತಿರುವುದು ಇದು ಮೊದಲಾ? ಈಗ ದರ್ಶನ್ ಪ್ರಕರಣದ ಬಗ್ಗೆ ಪ್ರಶ್ನೆ ಮಾಡುತ್ತಿರುವ ಮಾಧ್ಯಮಗಳು ಈ ಮುಂಚೆ ಏಕೆ ಕೇಳಲಿಲ್ಲ?’ ಎಂದು ಪ್ರಶ್ನೆ ಮಾಡಿದ್ದಾರೆ. ಮುಂದುವರಿದು, ‘ಐಪಿಎಸ್ ಅಧಿಕಾರಿ ರೂಪಾ ಅವರು ಈ ಮೊದಲು ಸಹ ಈ ಬಗ್ಗೆ ಪ್ರಶ್ನೆ ಮಾಡಿದ್ದರು. ಜೈಲಿನಲ್ಲಿ ನಡೆಯುತ್ತಿರುವ ಅವ್ಯಹಾರಗಳನ್ನು ಬಯಲು ಮಾಡಿದ್ದರು. ಆಗ ನೀವು ಸಹ ಪ್ರಶ್ನೆ ಮಾಡಿರಲಿಲ್ಲ ಏಕೆ?’ ಎಂದು ಮಾಧ್ಯಮಗಳನ್ನೇ ಸುಮಲತಾ ಪ್ರಶ್ನೆ ಮಾಡಿದರು.
ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರವಿದು
‘ಯಾರೇ ಜೈಲಿನಲ್ಲಿ ಬಂಧಿಗಳಿದ್ದರೂ ಸ್ವಲ್ಪ ಹಣ ಖರ್ಚು ಮಾಡಿದರೆ ಎಲ್ಲವೂ ಸಿಗುತ್ತದೆ, ಪರಪ್ಪನ ಅಗ್ರಹಾರ ಮಾತ್ರವಲ್ಲ, ಪ್ರತಿ ಜೈಲಿನಲ್ಲಿಯೂ ಇದು ನಡೆಯುತ್ತಿದೆ. ಇದು ಗುಟ್ಟೇನೂ ಅಲ್ಲ. ಅಮೆರಿಕ ಜೈಲಿನಲ್ಲಿ, ಮೊಬೈಲ್ ಫೋನ್, ಸಿಗರೇಟು, ಡ್ರಗ್ಸ್ ಸಹ ಸಿಗುತ್ತೆ’ ಎಂದಿದ್ದಾರೆ. ಮುಂದುವರಿದು ಮಾತನಾಡಿ, ‘ಈಗ ನಡೆದಿರುವುದು ಸರಿಯಲ್ಲ, ಆದರೆ ಇದು ಭ್ರಷ್ಟಾಚಾರ. ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರವಿದು. ಆದರೆ ನೀವು (ಮಾಧ್ಯಮಗಳು) ಒಬ್ಬ ವ್ಯಕ್ತಿಯನ್ನು ಯಾಕೆ ಗುರಿ ಮಾಡಿಕೊಳ್ಳುತ್ತಿದ್ದೀರಿ? ಪ್ರಶ್ನೆ ಮಾಡಬೇಕಿರುವುದು, ಜೈಲಿನ ಅಧಿಕಾರಿಗಳನ್ನು, ಇಲಾಖೆಯನ್ನು, ಜೈಲು ವ್ಯವಸ್ಥೆಯನ್ನು ಸರಿಮಾಡಬೇಕಾದುದು ಸಚಿವಾಲಯ ಜವಾಬ್ದಾರಿ’ ಎಂದು ಸಹ ಸುಮಲತಾ ಹೇಳಿದ್ದಾರೆ.
ಜೈಲಿನಲ್ಲಿ ಕೆಲವು ರೌಡಿಶೀಟರ್ಗಳ ಜೊತೆಗೆ ದರ್ಶನ್ ಒಡನಾಟ ಹೊಂದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಸುಮಲತಾ, ʼಜೈಲಿನಲ್ಲಿ ಒಳ್ಳೆಯವರು ಇರಲು ಸಾಧ್ಯವಾ? ಇರೋರೆಲ್ಲ ಕೆಟ್ಟವರೇ ಅಲ್ಲವ? ಇನ್ಯಾರನ್ನು ಅವರು ಮಾತನಾಡಿಸಬೇಕು? ಹಾಗಿದ್ದರೆ, ನಿಮ್ಮ ಪ್ರಕಾರ ಯಾರನ್ನೂ ಮಾತನಾಡಿಸಬಾರದಾ?’ ಎಂದು ಸುಮಲತಾ ಕೇಳಿದ್ದಾರೆ.