ಖತರ್‌ನಾಕ್ ಕಳ್ಳ | ಪ್ರಳಯಾಂತಕನ ಗರ್ಲ್‌ಫ್ರೆಂಡ್ ಸ್ಟೋರಿ ಕೇಳಿ ಬೇಸ್ತುಬಿದ್ದ ಪೊಲೀಸರು!
ಮನೆಗಳ್ಳತನ ಮಾಡುತ್ತಿದ್ದ ಕಳ್ಳನೊಬ್ಬನನ್ನು ಬಂಧಿಸಿದ ಬೆಂಗಳೂರು ಪೊಲೀಸರು, ಆತನ ಗರ್ಲ್‌ಫ್ರೆಂಡ್‌ಗಳಿಗೆ ಮಾಡಿದ ಕರ್ಚುವೆಚ್ಚದ ವಿವರ ಕೇಳಿ ಬೆಚ್ಚಿಬಿದ್ದ ಅಪರೂಪದ ಪ್ರಕರಣ ಇದು!
ಹೊತ್ತಿನ ಊಟಕ್ಕಾಗಿಯೋ, ಕುಡಿತ, ಜೂಜು ಮತ್ತಿತರ ಸಣ್ಣಪುಟ್ಟ ಚಟಕ್ಕಾಗಿಯೋ ಮನೆಗಳ್ಳತನ ಮಾಡುವ ಕಳ್ಳರನ್ನು ಕಂಡಿದ್ದ ಪೊಲೀಸರು, ಆತನನ್ನೂ ಹಾಗೇ ಮಾಮೂಲಿ ಕಳ್ಳ ಎಂದುಕೊಂಡೇ ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಆತನ ಸಂಪಾದನೆ, ʼಹೂಡಿಕೆʼ, ದುಬಾರಿ ಉಡುಗೊರೆಗಳ ಮಾಹಿತಿ ಕೇಳಿ ಪೊಲೀಸರು ಬೇಸ್ತುಬಿದ್ದಿದ್ದಾರೆ.
ಹೌದು, ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿದ್ದ ಆರೋಪಿ ಪಂಚಾಕ್ಷರಿ ಸ್ವಾಮಿ(37)ಯೇ ಪೊಲೀಸರನ್ನೇ ಬೇಸ್ತುಬೀಳಿಸಿದ ಹೈಟೆಕ್ ಕಳ್ಳ. ಸಾವಿರ, ಲಕ್ಷದ ಲೆಕ್ಕದ ಕಳ್ಳನಿರಬಹುದಾದ ಎಂದುಕೊಂಡಿದ್ದ ಪೊಲೀಸರೇ ಬೆಚ್ಚಿಬೀಳುವಂತೆ ಆತ ತನ್ನ ಗರ್ಲ್ಫ್ರೆಂಡಿಗೆ ತನ್ನ ʼಘನಂಧಾರಿ ವೃತ್ತಿʼಯಿಂದಲೇ ಮೂರು ಕೋಟಿ ರೂ. ಮೌಲ್ಯದ ಐಷಾರಾಮಿ ಬಂಗಲೆ ಕಟ್ಟಿಕೊಟ್ಟಿದ್ದಾನೆ. ಅಷ್ಟೇ ಅಲ್ಲದೆ; ಚಿತ್ರರಂಗದ ಪ್ರಖ್ಯಾತ ನಟಿಯೊಂದಿಗೂ ನಂಟು ಹೊಂದಿದ್ದ ಈ ಮಹಾನುಭಾವ, ಆಕೆಗೆ 22 ಲಕ್ಷ ರೂ. ಮೊತ್ತದ ಭಾರೀ ಗಿಫ್ಟ್ ಕೊಟ್ಟಿದ್ದಾನೆ! ಕಳ್ಳತನದಿಂದಲೇ ಸಂಪಾದಿಸಿದ ಹಣದಲ್ಲೇ ಈ ಮಹಾ ಸಾಧನೆಗಳನ್ನು ಮಾಡಿರುವ ಆತನ ʼವೃತ್ತಿಪರತೆʼ ಕೇಳಿದರೆ ಪೊಲೀಸರಷ್ಟೇ ಅಲ್ಲದೆ, ಯಾರಾದರೂ ಬೆಚ್ಚಿಬೀಳದೇ ಇರಲಾರರು.
ಸ್ವಂತ ಮನೆ ಹರಾಜಿಗೆ, ಗೆಳತಿಗೆ ಬಂಗಲೆ!
ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮಗನಾಗಿದ್ದ ಪಂಚಾಕ್ಷರಿ ಸ್ವಾಮಿ, ತನ್ನ ಅಪ್ರಾಪ್ತ ವಯಸ್ಸಿನಿಂದಲೇ ಕಳ್ಳತನದ ಚಟಕ್ಕೆ ಬಿದ್ದಿದ್ದ. ಅದರೊಂದಿಗೆ ಮದುವೆ ಬಳಿಕವೂ ಕಳ್ಳತನ ಮುಂದುವರಿಸಿದ್ದ ಆತ, ಮಗುವಿದ್ದರೂ ಹುಡುಗಿಯರ ಶೋಕಿ ಕೂಡ ಅತಿಯಾಗೇ ಇತ್ತು. ಕೇವಲ 400 ಚದರಡಿ ಮನೆಯಲ್ಲಿದ್ದ ಆತನ ಮನೆ ಕೂಡ ತಾಯಿಯ ಹೆಸರಿನಲ್ಲಿದೆ. ಆ ಮನೆಯ ಮೇಲೂ ಸಾಲ ಇದ್ದು, ಸಾಲ ಕಟ್ಟದ ಹಿನ್ನೆಲೆಯಲ್ಲಿ ಬ್ಯಾಂಕ್ ಮನೆಯನ್ನು ಹರಾಜಿಗಿಟ್ಟಿದೆ!
ಆದರೆ, ಸ್ವಂತ ಮನೆಯ ಸಾಲ ತೀರಿಸಿ ನೆತ್ತಿ ಮೇಲಿನ ಸೂರು ಉಳಿಸಿಕೊಳ್ಳುವ ಬಗ್ಗೆ ಯೋಚನೆ ಮಾಡದ ಪಂಚಾಕ್ಷರಿ, 2016ರಲ್ಲಿ ಕೊಲ್ಕತ್ತಾದ ತನ್ನ ಗರ್ಲ್ಫ್ರೆಂಡಿಗಾಗಿ ಅಲ್ಲಿ ಬರೋಬ್ಬರಿ ಮೂರು ಕೋಟಿ ರೂಪಾಯಿ ಕರ್ಚು ಮಾಡಿ ಭಾರೀ ಬಂಗಲೆಯನ್ನೇ ಕಟ್ಟಿಸಿಕೊಟ್ಟಿದ್ದಾನೆ! ಅದೂ ತನ್ನ ಕಳ್ಳತನದ ಹಣದಿಂದಲೇ ಆ ಬಂಗಲೆ ಕಟ್ಟಿಸಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಖ್ಯಾತ ನಟಿಯೊಂದಿಗೆ ಸಖ್ಯ, ದುಬಾರಿ ಉಡುಗೊರೆ
ಖತರ್ನಾಕ್ ಕಳ್ಳನ ಈ ರೊಮ್ಯಾಂಟಿಕ್ ಲೈಫ್‌ಸ್ಟೈಲ್‌ಗೆ ಕೊಲ್ಕತ್ತಾ ಕನೆಕ್ಷನ್ ಮಾತ್ರವಲ್ಲ, ಸಿನೆಮಾ ಜಗತ್ತಿನ ನಂಟೂ ಇದೆ!
ಪ್ರಖ್ಯಾತ ನಟಿಯೊಬ್ಬರೊಂದಿಗೆ ಸಖ್ಯ ಹೊಂದಿದ್ದ ಆತ, ತನ್ನ ಗೆಳತಿಯಾಗಿದ್ದ ಆಕೆಗಾಗಿ ಕೋಟಿ ಕೋಟಿ ಕರ್ಚು ಮಾಡಿರುವುದಾಗಿಯೂ ತನಿಖೆಯ ವೇಳೆ ಬಾಯಿಬಿಟ್ಟಿದ್ದಾನೆ. 2015ರಲ್ಲಿ ಆ ಜನಪ್ರಿಯ ನಟಿಯ ಹುಟ್ಟಿದಹಬ್ಬದ ದಿನ ತಾನು 22 ಲಕ್ಷ ರೂ. ಕರ್ಚು ಮಾಡಿ ದುಬಾರಿ ಅಕ್ವೇರಿಯಂ ಗಿಫ್ಟ್ ಕೊಟ್ಟಿದ್ದಾಗಿಯೂ ಮಾಹಿತಿ ನೀಡಿದ್ದಾನೆ.
22 ವರ್ಷಗಳ ಘನಂಧಾರಿ ವೃತ್ತಿಜೀವನ!
2003ರಲ್ಲಿ ತನ್ನ ಅಪ್ರಾಪ್ತ ವಯಸ್ಸಿನಲ್ಲೇ ಕಳ್ಳತನ ವೃತ್ತಿ ಆರಂಭಿಸಿದ ಪಂಚಾಕ್ಷರಿ ಸ್ವಾಮಿ, ಅಂದಿನಿಂದ ಆ ವೃತ್ತಿಯನ್ನೇ ನಂಬಿ ಜೀವನ ನಡೆಸುತ್ತಿರುವುದು ಮಾತ್ರವಲ್ಲ, ತನ್ನ ಹಲವು ಗರ್ಲ್ಫ್ರೆಂಡ್ಗಳಿಗೆ ದುಬಾರಿ ಮನೆ, ಉಡುಗೊರೆಗಳನ್ನೂ ನೀಡಿದ್ದಾನೆ.
ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಮನೆಗಳ್ಳತನ ಮಾಡುತ್ತಿದ್ದ ಈ ಪಂಚಾಕ್ಷರಿ ಸ್ವಾಮಿಗೆ, 2016ರಲ್ಲಿ ಗುಜರಾತ್ ಪೊಲೀಸರು ಖೆಡ್ಡಾ ತೋಡಿದ್ದರು. ಆಗ ಬಂಧಿತನಾದ ಆತ ಅಲ್ಲಿನ ಸಬರಮತಿ ಜೈಲಿನಲ್ಲಿ ಆರು ವರ್ಷ ಕಳೆದು ಬಿಡುಗಡೆಯಾಗಿದ್ದ. ಬಳಿಕ ಮತ್ತೆ ಬೆಂಗಳೂರಿಗೆ ಬಂದು ಕಳ್ಳತನ ಆರಂಭಿಸಿದ್ದ. ಇದೀಗ ಕಳೆದ ಜನವರಿ 9ರಂದು ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರ ಕಳ್ಳತನ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ. ಆತನ ಮೇಲೆ ಸುಮಾರು 180 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಿದ್ದು, ಕದ್ದ ಚಿನ್ನ ಕರಗಿಸಲು ಫೈರ್ ಗನ್, ಮೂಸ್ ಮತ್ತಿತರ ಸಾಧನಗಳನ್ನು ಬಳಸಿ ಆಭರಣಗಳನ್ನು ಕರಗಿಸಿ ಚಿನ್ನದ ಗಟ್ಟಿ ಮಾಡಿ ಮಾರುತ್ತಿದ್ದ ಎಂಬ ಸಂಗತಿ ತನಿಖೆಯಲ್ಲಿ ತಿಳಿದುಬಂದಿದೆ. ಕರಾಟೆ ಬ್ಲ್ಯಾಕ್ಬೆಲ್ಟ್ ಆದ ಆತ ಕಳ್ಳತನ ಎಸಗಿದ ಬಳಿಕ ರಸ್ತೆಯಲ್ಲೇ ಬಟ್ಟೆ ಬದಲಾಯಿಸಿ ಪರಾರಿಯಾಗುತ್ತಿದ್ದ ಚಾಲಾಕಿಯಾಗಿದ್ದಾನೆ.