ಗ್ಯಾರಂಟಿ ಯೋಜನೆ ಮುಂದಿನ 9 ವರ್ಷ ಮುಂದುವರೆಯಲಿದೆ: ಡಿ.ಕೆ ಶಿವಕುಮಾರ್
ಗ್ಯಾರಂಟಿ ಯೋಜನೆಗಳು ಇನ್ನೂ 9 ವರ್ಷ ಮುಂದುವರಿಯಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಗ್ಯಾರಂಟಿ ಯೋಜನೆ ವಿಚಾರಕ್ಕೆ ಬಂದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ʻನಮ್ಮ ಗ್ಯಾರಂಟಿ ಯೋಜನೆಗಳು ಇನ್ನೂ 9 ವರ್ಷ ಮುಂದುವರಿಯಲಿದೆ. ಗ್ಯಾರಂಟಿ ಯೋಜನೆಗಳನ್ನು ಮುಟ್ಟುವುದಕ್ಕೆ ನಾವು ಬಿಡುವುದಿಲ್ಲʼ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದಲ್ಲಿ ಭಾಗವಹಿಸಿ ಮಾತನಾಡಿದ ಅವರು, ʻಗ್ಯಾರಂಟಿ ಯೋಜನೆಗಳು ನಿರಂತರವಾಗಿ ಮುಂದುವರಿಯಲಿವೆ. ಬಿಜೆಪಿಯವರು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಸುಭದ್ರವಾಗಿದೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದ ಹೆಣ್ಣು ಮಕ್ಕಳ ಸ್ವಾಭಿಮಾನದ ಪ್ರಶ್ನೆ. ಇದಕ್ಕೆ ಕೈ ಹಾಕಿದರೆ ಸುಮ್ಮನೆ ಬಿಡುವುದಿಲ್ಲʼ ಎಂದು ಎಚ್ಚರಿಸಿದರು.
ʻಈ ಬಾರಿ ಕೇಂದ್ರದಲ್ಲಿ ಯಾವುದೇ ಕಾರಣಕ್ಕೂ ಎನ್‌ಡಿಎ ಅಧಿಕಾರಕ್ಕೆ ಬರುವುದಿಲ್ಲ. ಈ ಬಾರಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆ. ನಾನು ಬೇರೆಯವರು ಮಾಡಿದ ಸಮೀಕ್ಷೆಗಳನ್ನು ನಂಬುವುದಿಲ್ಲ. ನಾನು ವೈಯಕ್ತಿಕ ಸಮೀಕ್ಷೆ ಮಾಡಿಸಿದರೆ, ಪ್ರತಿ ಕ್ಷೇತ್ರದಲ್ಲಿ 50 ಸಾವಿರದಿಂದ 1 ಲಕ್ಷ ಜನರ ಅಭಿಪ್ರಾಯ ಸಂಗ್ರಹಿಸಿ, ಸಮೀಕ್ಷೆ ನಡೆಸುತ್ತೇವೆ. ನನ್ನ ರಾಜಕೀಯ ಅನುಭವದ ಹಾಗೂ ನನ್ನ ಜನರನ್ನು ನೋಡಿದರೆ ಫಲಿತಾಂಶ ತಿಳಿಯುತ್ತದೆ. ಈ ಬಾರಿ ಎನ್‌ಡಿಎ ಅಧಿಕಾರಕ್ಕೆ ಬರುವುದಿಲ್ಲʼ ಎಂದು ಹೇಳಿದರು.
ಒಕ್ಕಲಿಗ ನಾಯಕತ್ವಕ್ಕಾಗಿ ಪೈಪೋಟಿ ನಡೆಯುತ್ತಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ʻನಾನು ಒಕ್ಕಲಿಗ ನಾಯಕನಾಗಿ ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲ. ನನಗೆ ಒಕ್ಕಲಿಗ ನಾಯಕನಾಗಲು ಇಷ್ಟವಿಲ್ಲ. ನಾನು ಒಂದು ಸಮುದಾಯದ ನಾಯಕನಲ್ಲ. ನನಗೆ ಜಾತಿ ಎನ್ನುವುದು ಇಲ್ಲ, ನೀತಿ ಇದೆ. ನಾನೊಬ್ಬ ಕಾಂಗ್ರೆಸ್ ನಾಯಕʼ ಎಂದರು.
ʻಬಿಜೆಪಿಯವರು ಅಪರೇಷನ್ ಕಮಲ ಮಾಡಿ ಸರ್ಕಾರ ರಚನೆ ಮಾಡಿದ್ದರು. ಆದರೆ, ಅಧಿಕಾರ ಸಿಕ್ಕಾಗ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆಯೇʼ ಎಂದು ಪ್ರಶ್ನಿಸಿದರು. ʻಮೇಕೆದಾಟು ಹಾಗೂ ಮಹದಾಯಿ ಯೋಜನೆಗಳನ್ನು ಜಾರಿ ಮಾಡಲು ಅವರಿಗೆ ಆಗಲಿಲ್ಲ. ಸೋಲುವ ಭೀತಿಯಿಂದ ಹಾಲಿ ಸಂಸದರಿಗೇ ಸ್ಪರ್ಧಿಸಲು ಟಿಕೆಟ್ ನೀಡಲಿಲ್ಲʼ ಎಂದು ಟೀಕಿಸಿದರು.
ʻಬಿಜೆಪಿ ನಾಯಕರ ಕಿರುಕುಳದಿಂದ ಬೃಹತ್ ಉದ್ಯಮಿಗಳು ದೇಶವನ್ನು ತೊರೆಯುತ್ತಿದ್ದಾರೆ. ಕೇಂದ್ರ ಸರ್ಕಾರ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ವಿರೋಧ ಪಕ್ಷದ ನಾಯಕರ ಮೇಲೆ ಐ.ಟಿ, ಇ.ಡಿ ದಾಳಿಯಿಂದ ದಾಳಿ ಮಾಡಿಸಲಾಗುತ್ತಿದೆ. ಅವರ ಪಕ್ಷದವರು ಹರಿಶ್ಚಂದ್ರ ಮಕ್ಕಳಾ, ಎನ್‌ಡಿಎ ಅಲ್ಲಿರುವವರು ಎಷ್ಟು ಜನ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಪಟ್ಟಿ ಕೊಡಬೇಕಾʼ ಎಂದು ಪ್ರಶ್ನಿಸಿದರು.
ಸಂವಾದದಲ್ಲಿ ಪ್ರೆಸ್ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್ ಹಾಗೂ ಪ್ರಧಾನ ಕಾರ್ಯದರ್ಶಿ ಬಿ.ಪಿ. ಮಲ್ಲಪ್ಪ ಸೇರಿದಂತೆ ಹಲವರು ಇದ್ದರು.