
ಲೋಕಸಭಾ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ
ಮಹದೇವಪುರದಲ್ಲಿ ಮತ ಕಳುವಾಗಿಲ್ಲ ; ರಾಹುಲ್ ಗಾಂಧಿ ಆರೋಪಕ್ಕೆ ಅರವಿಂದ ಲಿಂಬಾವಳಿ ತಿರುಗೇಟು
ಮಹದೇವಪುರ ಕ್ಷೇತ್ರವು ಐಟಿ-ಬಿಟಿ ಕಂಪನಿಗಳ ಕೇಂದ್ರವಾಗಿದ್ದು, ಉದ್ಯೋಗಾವಕಾಶಗಳು ಹೆಚ್ಚಾಗಿವೆ. ಈ ಕಾರಣದಿಂದಾಗಿ ಇಲ್ಲಿಗೆ ಹೊರ ರಾಜ್ಯ ಮತ್ತು ಬೇರೆ ಪ್ರದೇಶಗಳಿಂದ ವಲಸೆ ಬರುವವರ ಸಂಖ್ಯೆ ಅಧಿಕವಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ 'ಮತ ಕಳ್ಳತನ' ನಡೆದಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಗಳನ್ನು ಮಾಜಿ ಸಚಿವ ಹಾಗೂ ಶಾಸಕ ಅರವಿಂದ ಲಿಂಬಾವಳಿ ಅವರು ಬಲವಾಗಿ ನಿರಾಕರಿಸಿದ್ದಾರೆ. "ಇದು ಮತ ಕಳ್ಳತನವಲ್ಲ, ಬದಲಾಗಿ ಕ್ಷೇತ್ರದ ವಾಸ್ತವತೆಯ ಪ್ರತಿಬಿಂಬ," ಎಂದು ಅವರು ಸ್ಪಷ್ಟಪಡಿಸಿದ್ದಾರೆ.
"ಮಹದೇವಪುರ ಕ್ಷೇತ್ರವು ಐಟಿ-ಬಿಟಿ ಕಂಪನಿಗಳ ಕೇಂದ್ರವಾಗಿದೆ. ಇದು ಬೆಂಗಳೂರಿನ ಪ್ರಮುಖ ಆರ್ಥಿಕ ವಲಯಗಳಲ್ಲಿ ಒಂದಾಗಿದ್ದು, ಉದ್ಯೋಗಾವಕಾಶಗಳು ಹೆಚ್ಚಾಗಿವೆ. ಈ ಕಾರಣದಿಂದಾಗಿ ಇಲ್ಲಿಗೆ ಹೊರ ರಾಜ್ಯ ಮತ್ತು ಬೇರೆ ಪ್ರದೇಶಗಳಿಂದ ವಲಸೆ ಬರುವವರ ಸಂಖ್ಯೆ ಅಧಿಕವಾಗಿದೆ. ಹೊಸ ಉದ್ಯೋಗಾವಕಾಶಗಳನ್ನು ಅರಸಿ ಬರುವ ಸಾವಿರಾರು ಜನರು ಇಲ್ಲಿ ನೆಲೆಸುತ್ತಿದ್ದಾರೆ. ಇದು ಮತದಾರರ ಪಟ್ಟಿಗೆ ಹೊಸ ಹೆಸರುಗಳು ಸೇರ್ಪಡೆಯಾಗಲು ಸಹಜವಾಗಿ ಕಾರಣವಾಗಿದೆಯೇ ಹೊರತು, ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ," ಎಂದು ಅರವಿಂದ ಲಿಂಬಾವಳಿ ಅವರು ಸ್ಪಷ್ಟನೆ ನೀಡಿದ್ದಾರೆ.
"ಇದೇ ಕ್ಷೇತ್ರದಿಂದ ನಮ್ಮ ಸಂಸದರಾದ ಪಿ.ಸಿ. ಮೋಹನ್ ಅವರಿಗೆ ಒಂದು ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ ದೊರೆತಿದೆ. ಇದು ಜನರ ನಿರಂತರ ಬೆಂಬಲಕ್ಕೆ ಸಾಕ್ಷಿ, ಕಳ್ಳತನದ ಫಲವಲ್ಲ," ಎಂದು ಪ್ರತಿಪಾದಿಸಿದ್ದಾರೆ.
ಆರೋಪದ ಹಿನ್ನೆಲೆ ಮತ್ತು ಕಾಂಗ್ರೆಸ್ ಹೋರಾಟ
ಇತ್ತೀಚೆಗೆ ದೆಹಲಿಯಲ್ಲಿ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, "ಬಿಜೆಪಿ ಕರ್ನಾಟಕದಲ್ಲಿ ವ್ಯವಸ್ಥಿತವಾಗಿ ಮತಗಳನ್ನು ಕದ್ದಿದೆ" ಎಂದು ಗಂಭೀರ ಆರೋಪ ಮಾಡಿದ್ದರು. ಈ ಆರೋಪಕ್ಕೆ ಪೂರಕವಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮಹದೇವಪುರ ಕ್ಷೇತ್ರವನ್ನು ಉಲ್ಲೇಖಿಸಿ, ಅಲ್ಲಿ ಅಕ್ರಮ ನಡೆದಿರಬಹುದು ಎಂಬ ಬಗ್ಗೆ ಮಾತನಾಡಿದ್ದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ " ಸಾಕಷ್ಟು ಬಹಳಷ್ಟು ಗೋಲ್ಮಾಲ್" ನಡೆದಿರುವುದನ್ನು ತಾವು ಖುದ್ದಾಗಿ ಪರಿಶೀಲಿಸಿದ್ದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಹೇಳಿದ್ದರು.
ಈ ಆರೋಪಗಳನ್ನೇ ಮುಂದಿಟ್ಟುಕೊಂಡು, ಕಾಂಗ್ರೆಸ್ ಇದೀಗ ಬೃಹತ್ ಹೋರಾಟಕ್ಕೆ ಮುಂದಾಗಿದೆ. ಇದರ ಭಾಗವಾಗಿ, ರಾಹುಲ್ ಗಾಂಧಿ ಅವರು ಆಗಸ್ಟ್ 4ರಂದು ಬೆಂಗಳೂರಿಗೆ ಆಗಮಿಸಿ, ಬೃಹತ್ ಪ್ರತಿಭಟನೆಯನ್ನು ಮುನ್ನಡೆಸಲಿದ್ದಾರೆ. ಅಂದು ಫ್ರೀಡಂ ಪಾರ್ಕ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನಂತರ, ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ, ತಮ್ಮ ಆರೋಪಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸಿ, ಮನವಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರತಿಭಟನೆಯು ಕಾನೂನು ಚೌಕಟ್ಟಿನಲ್ಲೇ, ಹೈಕೋರ್ಟ್ ಆದೇಶದಂತೆ ಮೆರವಣಿಗೆಯಿಲ್ಲದೆ ನಡೆಯಲಿದೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ರಾಜಕೀಯ ವಾಕ್ಸಮರ ತೀವ್ರ
ಒಂದೆಡೆ ಕಾಂಗ್ರೆಸ್, ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಪ್ರಜಾಪ್ರಭುತ್ವವನ್ನು ಹತ್ತಿಕ್ಕಲಾಗಿದೆ ಎಂದು ಆರೋಪಿಸುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ಈ ಆರೋಪಗಳನ್ನು "ನಾಟಕ" ಎಂದು ಜರಿದಿದೆ. "ಚುನಾವಣಾ ಆಯೋಗ ನಮ್ಮ ನಿಯಂತ್ರಣದಲ್ಲಿದ್ದರೆ, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಹೇಗೆ ಬಂತು ಮತ್ತು 9 ಲೋಕಸಭಾ ಸ್ಥಾನಗಳನ್ನು ಹೇಗೆ ಗೆದ್ದಿತು?" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದ್ದಾರೆ.