Covid scam | ಹಣ ತಿಂದವರನ್ನು ಬಿಡುವ ಮಾತೇ ಇಲ್ಲ; ಡಿಸಿಎಂ ಖಡಕ್‌ ಎಚ್ಚರಿಕೆ
x

Covid scam | ಹಣ ತಿಂದವರನ್ನು ಬಿಡುವ ಮಾತೇ ಇಲ್ಲ; ಡಿಸಿಎಂ ಖಡಕ್‌ ಎಚ್ಚರಿಕೆ

ಕೋವಿಡ್ ಅವಧಿಯ ಅವ್ಯವಹಾರಗಳಿಗೆ ಕಾನೂನು ಚೌಕಟ್ಟಿನಲ್ಲೇ ಕ್ರಮ ಜರುಗಿಸಲು ಸಂಪುಟ ಉಪ ಸಮಿತಿ ಅಧಿಕಾರಿಗಳಿಗೆ ಸೂಚಿಸಿದೆ. ಅವ್ಯವಹಾರದಲ್ಲಿ ಭಾಗಿಯಾದವರ ವಿರುದ್ಧ ವಿಚಾರಣೆ ನಡೆಸಿ, ಕ್ರಿಮಿನಲ್‌ ಪ್ರಕರಣ ದಾಖಲಿಸುವ ಬಗ್ಗೆಯೂ ಚರ್ಚಿಸಲಾಗಿದೆ.


ಬಳ್ಳಾರಿ ಬಾಣಂತಿಯರ ಸಾವು, ಮುಡಾ, ವಕ್ಫ್‌ ಹಾಗೂ ವಾಲ್ಮೀಕಿ ಹಗರಣಗಳನ್ನೇ ಸರ್ಕಾರದ ವಿರುದ್ಧ ಅಸ್ತ್ರವನ್ನಾಗಿ ಬಳಸುತ್ತಿರುವ ಬಿಜೆಪಿಗೆ ತಿರುಗೇಟು ನೀಡಲು ಕೋವಿಡ್‌ ಹಗರಣವನ್ನು ಪ್ರಬಲ ಅಸ್ತ್ರವನ್ನಾಗಿ ಬಳಸಲು ಕಾಂಗ್ರೆಸ್‌ ಯೋಜಿಸಿದೆ. ಕೋವಿಡ್‌ ಹಗರಣ ಸಂಬಂಧ ನಿವೃತ್ತ ನ್ಯಾಯಮೂರ್ತಿ ಮೈಕಲ್‌ ಕುನ್ಹಾ ಮಧ್ಯಂತರ ವರದಿ ಕುರಿತಂತೆ ಶನಿವಾರ ಸಂಪುಟ ಉಪ ಸಮಿತಿಯಲ್ಲಿ ಚರ್ಚಿಸಿದ್ದು, ಪ್ರತಿ ಪಕ್ಷಗಳ ಏಟಿಗೆ ಎದಿರೇಟು ನೀಡಲು ನಿರ್ಧರಿಸಿದೆ.

ಕೋವಿಡ್ ಅವಧಿಯ ಅವ್ಯವಹಾರಗಳಿಗೆ ಕಾನೂನು ಚೌಕಟ್ಟಿನಲ್ಲೇ ಕ್ರಮ ಜರುಗಿಸಲು ಸಂಪುಟ ಉಪ ಸಮಿತಿ ಅಧಿಕಾರಿಗಳಿಗೆ ಸೂಚಿಸಿದೆ. ಅವ್ಯವಹಾರದಲ್ಲಿ ಭಾಗಿಯಾದವರ ವಿರುದ್ಧ ವಿಚಾರಣೆ ನಡೆಸಿ, ಕ್ರಿಮಿನಲ್‌ ಪ್ರಕರಣ ದಾಖಲಿಸುವ ಬಗ್ಗೆಯೂ ಚರ್ಚಿಸಲಾಗಿದೆ.ಹೀಗಾಗಿ ಅಧಿಕಾರಿ ವರ್ಗದಲ್ಲಿ ಕೋವಿಡ್‌ ಹಗರಣದ ಭೀತಿ ಶುರುವಾಗಿದೆ.

ಆಕ್ಸಿಜನ್‌ ದುರಂತ ಮರು ತನಿಖೆ

ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣಕ್ಕೆ ಹಿಂದಿನ ಬಿಜೆಪಿ ಸರ್ಕಾರ ಕ್ಲೀನ್‌ಚಿಟ್‌ ನೀಡಿದೆ. ಆದರೆ,ಈ ವರದಿಯನ್ನು ಕಾಂಗ್ರೆಸ್‌ ರಾಜ್ಯ ಸರ್ಕಾರ ತಿರಸ್ಕರಿಸಿದ್ದು, ಮರು ತನಿಖೆಗೆ ಆದೇಶಿಸುವ ಕುರಿತಂತೆಯೂ ಚರ್ಚಿಸಲಾಗಿದೆ. ಆಕ್ಸಿಜನ್‌ ದುರಂತದಲ್ಲಿ ಒಟ್ಟು 36 ಜನ ಮಂದಿ ಮೃತಪಟ್ಟಿದ್ದಾರೆ. ಆದರೆ, ಅಂದಿನ ಆರೋಗ್ಯ ಸಚಿವರು ಕೇವಲ ಮೂರು ಮಂದಿ ಮಾತ್ರ ಮೃತಪಟ್ಟಿರುವುದಾಗಿಒ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ನಾನು 36 ಕುಟುಂಬಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದೇವೆ. ಹಾಗಾಗಿ ಪ್ರಕರಣದ ಮರು ತನಿಖೆ ಕುರಿತಂತೆ ಬೆಳಗಾವಿಯಲ್ಲಿ ಸಭೆ ನಡೆಸಿ ವಿಚಾರಣೆ ಪ್ರಕ್ರಿಯೆ ಆರಂಭಿಸುವ ಕುರಿತು ಪರಿಶೀಲಿಸಲಾಗುವುದು. ತಪ್ಪಿತಸ್ಥ ಅಧಿಕಾರಿಗಳ ವಿಚಾರಣೆಯಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ಅವ್ಯವಹಾರ

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 84 ಲಕ್ಷ ಆರ್ ಟಿಪಿಸಿಆರ್ ಪರೀಕ್ಷೆ ಮಾಡಲಾಗಿದೆ. ಇದಕ್ಕಾಗಿ 502 ಕೋಟಿ ರೂಪಾಯಿ ಬಿಲ್ ಮಾಡಿದ್ದು, ಕೇವಲ 400 ಕೋಟಿ ಪಾವತಿಸಲಾಗಿದೆ.

ಕಿದ್ವಾಯಿ ಸಂಸ್ಥೆಯೊಂದರಲ್ಲೇ 24 ಲಕ್ಷ ಪರೀಕ್ಷೆ ಮಾಡಲಾಗಿದೆ. ತಾಂತ್ರಿಕವಾಗಿ ಸಾಮರ್ಥ್ಯವಿಲ್ಲದ, ಐಸಿಎಂಆರ್ ಅನುಮತಿ ಪಡೆಯದೇ ಪರೀಕ್ಷೆ ನಡೆಸಲಾಗಿದೆ. ಇದಕ್ಕಾಗಿ 146 ಕೋಟಿ ಖರ್ಚು ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತಂತೆಯೂ ವರದಿ ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.

ನಿವೃತ್ತ ಅಧಿಕಾರಿಗಳ ಸಮಿತಿ ಮಾರ್ಗದರ್ಶನ

ತನಿಖಾ ವರದಿ ಪರಿಶೀಲನೆಗೆ ಮಾರ್ಗದರ್ಶನ ನೀಡಲು ನಿವೃತ್ತ ಅಧಿಕಾರಿಗಳ ಸಮಿತಿ ರಚಿಸಲಾಗುವುದು. ಈ ಪ್ರಕರಣದಲ್ಲಿ ನಾವು ಯಾರಿಗೂ ಅನಗತ್ಯ ತೊಂದರೆ ಕೊಡುವುದಿಲ್ಲ.

ವರದಿಯ ಪ್ರಮುಖ ಅಂಶಗಳನ್ನು ಮಾಧ್ಯಮಗಳ ಮುಂದೆ ಪ್ರಸ್ತಾಪ ಮಾಡಿದ್ದೇನೆ. ವರದಿಯಲ್ಲಿ ಮೇಲಿಂದ ಕೆಳಗಿನವರೆಗೂ ಅಕ್ರಮದಲ್ಲಿ ಭಾಗಿಯಾಗಿರುವ ಆಯುಕ್ತರು, ಅಧಿಕಾರಿಗಳು, ರಾಜಕಾರಣಿಗಳು, ಖಾಸಗಿ ಆಸ್ಪತ್ರೆಗಳು, ಪ್ರಯೋಗಾಲಯಗಳ ವಿರುದ್ಧ ಸೆಕ್ಷನ್ 71 ಹಾಗೂ ಸೆಕ್ಷನ್ 11ರ ಅಡಿ ಸಾರ್ವಜನಿಕ ಸೇವೆ ಅವಧಿಯಲ್ಲಿ ಭ್ರಷ್ಟಾಚಾರ ತಡೆಯುವ ಕಾಯ್ದೆ ಅನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ಕುನ್ಹಾ ಅವರ ವರದಿ ಆಧಾರದ ಮೇಲೆ ಎಸ್ಐಟಿ ರಚನೆ ಪ್ರಕ್ರಿಯೆ ನಡೆಯುತ್ತಿದ್ದು, ಎಲ್ಲವೂ ಅಂತಿಮವಾದ ಬಳಿಕ ಮಾಹಿತಿ ನೀಡುತ್ತೇವೆ. ಈ ವಿಚಾರವಾಗಿ ನಾವು ಬಿಜೆಪಿಯವರಿಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ. ಸಮಿತಿ ಶಿಫಾರಸು ಪರಿಶೀಲಿಸುತ್ತಿದ್ದು, ಅಧಿಕಾರಿಗಳಿಗೆ ವಿಚಾರಣೆಯ ನಡೆಸುವ ಸಂಪೂರ್ಣ ಅಧಿಕಾರ ನೀಡಿದ್ದೇವೆ. ಬಿಜೆಪಿ ಸರ್ಕಾರ ಹೆಣದ ಮೇಲೆ ಹಣ ಮಾಡಿದೆ. ಜನ ಇದನ್ನು ನೋಡಿ ರೋಸಿ ಹೋಗಿದ್ದಾರೆ. ಕೋವಿಡ್ ಹಣ ತಿಂದವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಪಿಪಿಇ ಕಿಟ್ ಹಾಗೂ ಯಂತ್ರೋಪಕರಣ ಖರೀದಿ ಅವ್ಯವಹಾರಕ್ಕೆ ಸಂಬಂಧಿಸಿ ಅಧಿಕಾರಿಗಳಿಂದ ವಸೂಲಿ ಮಾಡಿರುವ ಕುರಿತು ಪ್ರತಿಕ್ರಿಯಿಸಿ, ಅಧಿಕಾರಿಗಳು ಪ್ರಕ್ರಿಯೆ ನಡೆಸುತ್ತಿದ್ದಾರೆ. ಕೆಲವರಿಗೆ ನೋಟೀಸ್ ನೀಡಿದ್ದಾರೆ. ಈ ಪ್ರಕ್ರಿಯೆ ಮೇಲ್ವಿಚಾರಣೆ ನಾವು ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಒಪ್ಪಂದ ಸೂತ್ರದ ಬಗ್ಗೆ ಚರ್ಚೆ ಮಾಡುವುದು ಬೇಡ

ಸಿಎಂ ವಿಚಾರವಾಗಿ ಒಪ್ಪಂದ ಆಗಿರುವುದು ನಿಜ ಎಂಬ ಮುನಿಯಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಒಪ್ಪಂದದ ವಿಚಾರವಾಗಿ ಯಾರೊಬ್ಬರು ಚರ್ಚೆ ಮಾಡಬಾರದು. ನಾವು ಮತ್ತು ಅವರು ರಾಜಕೀಯವಾಗಿ ಕೆಲವು ಸಹಾಯಕರಲ್ಲಿ ಕೆಲಸ ಮಾಡುತ್ತಿದ್ದೇವೆ. ನಾನು ಯಾವುದೇ ಸೂತ್ರವೂ ಇಲ್ಲ. ಮುಖ್ಯಮಂತ್ರಿಗಳಿಗೆ ಕೆಲವು ಜವಾಬ್ದಾರಿ ವಹಿಸಿದ್ದು, ನನಗೆ ಕೆಲವು ಜವಾಬ್ದಾರಿ ವಹಿಸಿದ್ದಾರೆ. ನಾವು ನಮ್ಮ ಕೆಲಸ ಮಾಡುತ್ತಿದ್ದು, ಈ ಒಪ್ಪಂದ ಸೂತ್ರದ ಬಗ್ಗೆ ಯಾರೂ ಮಾತನಾಡುವ ಅವಶ್ಯಕತೆ ಹಾಗೂ ಸಂದರ್ಭವಿಲ್ಲ. ಸಿಎಂ ಹೇಳಿದ್ದೆ ಅಂತಿಮ ಎಂದು ನಾನು ಹೇಳಿದ್ದೇನೆ” ಎಂದು ತಿಳಿಸಿದ್ದಾರೆ.

Read More
Next Story