ST Welfare Dept Scam |  ಈ ವಸತಿ ಶಾಲೆಗಳಲ್ಲಿ ಇಲ್ಲ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಕಲ್ಯಾಣ!
x

ST Welfare Dept Scam | ಈ ವಸತಿ ಶಾಲೆಗಳಲ್ಲಿ ಇಲ್ಲ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಕಲ್ಯಾಣ!

ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಎಲ್ಲಾ ಅಂಶಗಳನ್ನು ಪ್ರಸ್ತಾಪಿಸಲಾಯಿತು. ಸಿದ್ದರಾಮಯ್ಯ ಅವರು ಆಶ್ರಮ ಶಾಲೆಯ ಮಕ್ಕಳು, ಬಡವರು, ದಲಿತ ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯಕ್ಕೆ ಗರಂ ಆಗಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.


ಈ ಶಾಲೆಗಳ ಪರಿಸ್ಥಿತಿ ತೀರಾ ಶೋಚನೀಯವಾಗಿದೆ! ಕೆಲವು ಆಶ್ರಮ ಶಾಲೆಗಳಲ್ಲಿ ರಾತ್ರಿ ವೇಳೆ ಮಕ್ಕಳು ಇರುವುದಿಲ್ಲ! ಹಾಸ್ಟೆಲ್‌ಗಳಲ್ಲಿ ಶುಚಿತ್ವ ಇಲ್ಲ! ಹಾಸಿಗೆ, ಬೆಡ್‌ಶೀಟ್‌ ಮತ್ತಿತರ ವಸ್ತುಗಳನ್ನು ಅನಗತ್ಯವಾಗಿ ಖರೀದಿಸಿ ಗುಡ್ಡೆಹಾಕಲಾಗುತ್ತಿದೆ! ಶೈಕ್ಷಣಿಕ ಪ್ರಗತಿಯೂ ಇಲ್ಲ!

ಹೌದು! ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವಸತಿಶಾಲೆಗಳು, ಹಾಸ್ಟೆಲ್‌ಗಳ ದುರವಸ್ಥೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ಬಂದಿದೆ.

ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಎಲ್ಲಾ ಅಂಶಗಳನ್ನು ಪ್ರಸ್ತಾಪಿಸಲಾಯಿತು. ಸಿದ್ದರಾಮಯ್ಯ ಅವರು ಆಶ್ರಮ ಶಾಲೆಯ ಮಕ್ಕಳು, ಬಡವರು, ದಲಿತ ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯಕ್ಕೆ ಗರಂ ಆಗಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

“ದಲಿತ, ಬುಡಕಟ್ಟು, ಬಡವರ ಮಕ್ಕಳ ಶಿಕ್ಷಣಕ್ಕೆ, ಹಾಸ್ಟೆಲ್ ಗಳಿಗೆ ಇಷ್ಟೆಲ್ಲಾ ಹಣ, ಸವಲತ್ತು ಕೊಡುತ್ತಿದ್ದರೂ ಮಕ್ಕಳ ಶೈಕ್ಷಣಿಕ ಮಟ್ಟ ಏಕೆ ಏರಿಕೆ ಆಗುತ್ತಿಲ್ಲ? ಈ ಬಗ್ಗೆ ನಿರಂತರ ನಿಗಾ ಏಕೆ ವಹಿಸುತ್ತಿಲ್ಲ? ಫಲಿತಾಂಶದಲ್ಲಿ ಏರಿಕೆ ಏಕೆ ಆಗುತ್ತಿಲ್ಲ ಎಂದು ಸಿಎಂ ಅಧಿಕಾರಿಗಳನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. “ನೀವು ಬಡವರು, ದಲಿತರು, ಆದಿವಾಸಿ, ಬುಡಕಟ್ಟು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲು ಆಗದಿದ್ದರೆ ನೀವು ಸೇವೆಯಲ್ಲಿರಲು ಅಯೋಗ್ಯರು (unfit)" ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು

ಇಲಾಖೆಗೆ ಸಚಿವರೇ ಇಲ್ಲ!

ಮಹರ್ಷಿ ವಾಲ್ಮೀಕಿ ನಿಗಮದ ಬಹುಕೋಟಿ ಹಣ ವರ್ಗಾವಣೆ ಸಂಬಂಧ ನಿಗಮದ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಬಳಿಕ ಇಲಾಖೆ ಸಚಿವ ಬಿ. ನಾಗೇಂದ್ರ ಅವರು ಅನಿವಾರ್ಯವಾಗಿ ರಾಜೀನಾಮೆ ನೀಡಿದ್ದರು. ಬಳಿಕ ಇಲಾಖೆಯ ಉಸ್ತುವಾರಿಯನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಹಿಸಿಕೊಂಡಿದ್ದಾರೆ. ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾಕಷ್ಟು ಲೋಪದೋಷಗಳನ್ನು ಪತ್ತೆ ಮಾಡಿ ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಸೂಚಿಸಿದ್ದಾರೆ.

ಕೆಲವು ಆದಿವಾಸಿ ಬುಡಕಟ್ಟು ವಸತಿ ಶಾಲೆಗಳಲ್ಲಿ ರಾತ್ರಿ ವೇಳೆ ಮಕ್ಕಳು ಇರುವುದಿಲ್ಲ. ಮಕ್ಕಳು ರಾತ್ರಿ ಊಟವಾದ ನಂತರ ಮನೆಗೆ ಕರೆದುಕೊಂಡು ಹೋಗುತ್ತಾರೆ. ಚಿಕ್ಕ ಮಕ್ಕಳು ಎಂದು ಮನೆಗೆ ಕರೆದುಕೊಂಡು ಹೋಗುತ್ತಾರೆ. ಎಲ್ಲ ಸೌಲಭ್ಯ ಇದ್ದೂ, ಯಾಕೆ ಮನೆಗೆ ಕರೆದುಕೊಂಡು ಹೋಗುತ್ತಾರೆ. ಈ ಕುರಿತು ಪರಾಮರ್ಶೆ ನಡೆಸಲು ಸೂಚಿಸಿದರು. ಆದಿವಾಸಿ ಬುಡಕಟ್ಟು ವಸತಿ ಶಾಲೆಗಳ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸೂಚಿಸಿದರು. ಇದಕ್ಕಾಗಿ ಶಿಕ್ಷಕರ ನೇಮಕಕ್ಕೆ ಕ್ರಮ ವಹಿಸಲು ಆರ್ಥಿಕ ಇಲಾಖೆಗೆ ಸೂಚಿಸಿದರು. ಈ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ಮಕ್ಕಳು ಇತರ ವಿದ್ಯಾರ್ಥಿಗಳೊಂದಿಗೆ ಸಮರ್ಥವಾಗಿ ಸ್ಪರ್ಧಿಸುವಂತಾಗಬೇಕು ಎಂದು ಸೂಚಿಸಿದರು. ಸ್ಮಾರ್ಟ್‌ ಕ್ಲಾಸ್‌ಗಳ ವ್ಯವಸ್ಥೆ ಸದ್ಬಳಕೆ ಮಾಡುವಂತೆ ಸೂಚಿಸಿದರು.

ಅನುದಾನ ಲಭ್ಯವಿದೆ ಎಂಬ ಕಾರಣಕ್ಕೆ ಬೇಡಿಕೆ ಇಲ್ಲದೆ ಇದ್ದರೂ, ಹಾಸಿಗೆ, ಬೆಡ್‌ಶೀಟ್‌ ಮತ್ತಿತರ ವಸ್ತುಗಳನ್ನು ಅನಗತ್ಯವಾಗಿ ಖರೀದಿಸುವುದನ್ನು ಸಹಿಸಲಾಗದು. ಅನಗತ್ಯವಾಗಿ 4 ಜಿ ವಿನಾಯಿತಿ ಪಡೆಯುವ ಬದಲು ನೇರವಾಗಿ ಟೆಂಡರ್‌ ಕರೆದು ಖರೀದಿ, ಸೇವೆಗಳನ್ನು ಪಡೆಯಬೇಕೆಂದು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.

ಇಲಾಖೆಯ ಒಟ್ಟಾರೆ ಆಯವ್ಯಯದಲ್ಲಿ ಬಿಡುಗಡೆಯಾದ ಮೊತ್ತ 1884.01 ಕೋಟಿ ರೂ. ನಲ್ಲಿ 1879.35 ಕೋಟಿ ವೆಚ್ಚವಾಗಿದ್ದು, 99.75 % ಸಾಧನೆಯಾಗಿದೆ ̤ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಡಿ 389 ವಿದ್ಯಾರ್ಥಿ ನಿಲಯಗಳು, ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗಳು ಇದ್ದು, ಅಲ್ಲಿ 39,541 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಒದಗಿಸಿದ್ದು, 194.71 ಕೋಟಿ ರೂ. ಒದಗಿಸಲಾಗಿದೆ . ಆದರೆ, ಎಸ್.ಎಸ್.ಎಲ್.ಸಿ. ಯಲ್ಲಿ ಶೇ. 77 ರಷ್ಟು ಫಲಿತಾಂಶ ಬಂದಿದ್ದು, ಫಲಿತಾಂಶ ಉತ್ತಮ ಪಡಿಸಬೇಕೆಂದು ಸೂಚನೆ ನೀಡಲಾಯಿತು.

2,90,546 ವಿದ್ಯಾರ್ಥಿಗಳಿಗೆ 50.47 ಕೋಟಿ ರೂ. ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಪಾವತಿ ಮಾಡಲಾಗಿದೆ. 2,48,887 ವಿದ್ಯಾರ್ಥಿಗಳಿಗೆ 302.64 ಕೋಟಿ ರೂ. ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಪಾವತಿ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಈ ಸಂದರ್ಭದಲ್ಲಿ ತಿಳಿಸಿದರು. ಹಾಸ್ಟೆಲ್‌ಗಳಿಗೆ ಸಂಜೆ ವೇಳೆಗೆ ಭೇಟಿ ನೀಡಿ, ಶುಚಿ ಕಿಟ್‌ಗಳು, ಆಹಾರ ಪದಾರ್ಥ ವಿತರಣೆ ಸಮರ್ಪಕವಾಗಿ ಆಗುತ್ತಿದೆಯೇ ಎಂದು ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು

ಸಭೆಯಲ್ಲಿ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಮುಖ್ಯಮಂತ್ರಿ ಪ್ರಗತಿ ಪರಿಶೀಲನಾ ಸಭೆಯ ಇತರ ಮುಖ್ಯಾಂಶಗಳು

• ಇಲಾಖೆಯ ಒಟ್ಟಾರೆ ಆಯವ್ಯಯದಲ್ಲಿ ಬಿಡುಗಡೆಯಾದ ಮೊತ್ತ 1884.01 ಕೋಟಿ ರೂ. ನಲ್ಲಿ 1879.35 ಕೋಟಿ ವೆಚ್ಚವಾಗಿದ್ದು, 99.75 % ಸಾಧನೆಯಾಗಿದೆ.

* ವಸತಿ ಶಾಲೆಗಳು ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು. ಕೇವಲ ಬುದ್ಧಿವಂತರನ್ನು ಇನ್ನಷ್ಟು ಬುದ್ಧಿವಂತರಾಗಿಸುವುದು ಮಾತ್ರವಲ್ಲ; ಕಲಿಕೆಯಲ್ಲಿ ಹಿಂದುಳಿದವರನ್ನೂ ಬುದ್ಧಿವಂತರಾಗಿಸಬೇಕು.

• 1994-95 ರಲ್ಲಿ ಹಣಕಾಸು ಸಚಿವನಾಗಿದ್ದಾಗ, ದಲಿತ ಸಂಘರ್ಷ ಸಮಿತಿಯವರು ಸಾರಾಯಿ ಬೇಡ; ವಸತಿ ಶಾಲೆಗಳು ಬೇಕು ಎಂಬ ಬೇಡಿಕೆಯಿಟ್ಟಿದ್ದರು. ಅವಕಾಶ ವಂಚಿತರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಸ್ಥಾಪಿಸಲಾಗಿದೆ.

• ಪರಿಶಿಷ್ಟ ಪಂಗಡದ ವಸತಿ ಶಾಲೆಗಳಲ್ಲಿ 108 ಸ್ವಂತ ಕಟ್ಟಡ ಹೊಂದಿದ್ದು, 30 ಬಾಡಿಗೆ ಕಟ್ಟಡಗಳಲ್ಲಿ ಹಾಗೂ 6 ಬಾಡಿಗೆ ರಹಿತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳೊಂದಿಗೆ ಖುದ್ದಾಗಿ ಅನುಸರಣೆ ಮಾಡಬೇಕು.

• 22 ಪ್ರಕರಣಗಳಲ್ಲಿ ಸಿಂಧುತ್ವ ಪ್ರಮಾಣ ಪತ್ರ ಹಲವು ವರ್ಷಗಳಿಂದ ಇತ್ಯರ್ಥಕ್ಕೆ ಬಾಕಿ ಇದ್ದು, ಇವುಗಳಲ್ಲಿ ಎಲ್ಲ ಪ್ರಕರಣಗಳನ್ನು ಸಿ.ಆರ್.ಇ. ಸೆಲ್‌ಗೆ ಕಳುಹಿಸದಂತೆ, ಗೊಂದಲವಿದ್ದಲ್ಲಿ ಮಾತ್ರ ಕಳುಹಿಸುವಂತೆ ಸುತ್ತೋಲೆ ಹೊರಡಿಸಲು ಸೂಚಿಸಿದರು.

• ಮೈಸೂರಿನ ಬುಡಕಟ್ಟು ಸಂಶೋಧನಾ ಸಂಸ್ಥೆಗೆ ಹಿರಿಯ ಕೆ.ಎ.ಎಸ್. ಅಧಿಕಾರಿಯನ್ನು ನಿರ್ದೇಶಕರಾಗಿ ನೇಮಕ ಮಾಡುವುದು ಸೂಕ್ತ ಎಂದು ಅಪರ ಮುಖ್ಯ ಕಾರ್ಯದರ್ಶಿಗಳು ಅಭಿಪ್ರಾಯಪಟ್ಟರು. ಹಿರಿಯ ಕೆ.ಎ.ಎಸ್. ಅಧಿಕಾರಿಯನ್ನು ನಿರ್ದೇಶಕರನ್ನಾಗಿ ನೇಮಕ ಮಾಡಿ, ಮಾನವಶಾಸ್ತ್ರಜ್ಞರನ್ನು ಅವರ ಅಧೀನದಲ್ಲಿ ನೇಮಕಗೊಳಿಸುವ ಬಗ್ಗೆ ಪರಿಶೀಲನೆ ನಡೆಸಿ, ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ಕೇರಳ ಮಾದರಿಯಲ್ಲಿ ಆಡಳಿತ ಮತ್ತು ಸಂಶೋಧನಾ ವಿಭಾಗಗಳನ್ನು ಪ್ರತ್ಯೇಕವಾಗಿ ರಚಿಸುವ ಬಗ್ಗೆ ಅಥವಾ ಒಡಿಶಾ ರಾಜ್ಯದ ಮಾದರಿ ಏನು ಎಂದು ಮಾಹಿತಿ ತರಿಸಿ, ಪರಿಶೀಲಿಸುವಂತೆ ಸೂಚಿಸಿದರು.

• ಆಶ್ರಮ ಶಾಲೆಗಳಲ್ಲಿ ಆಯಾ ಸಮುದಾಯದವರನ್ನೇ ಕೇರ್‌ ಟೇಕರ್‌ ಆಗಿ ನೇಮಕ ಮಾಡಿದರೆ, ಈ ಶಾಲೆಗಳು ಸಮುದಾಯಗಳಿಗೆ ಹತ್ತಿರವಾಗುವ ಸಾಧ್ಯತೆ ಇದೆ ಎಂದು ಬುಡಕಟ್ಟು ಸಂಶೋಧನಾ ಸಂಸ್ಥೆಯ ಸಂಶೋಧನಾ ಅಧಿಕಾರಿ, ಸ್ವತಃ ಇರುಳಿಗ ಬುಡಕಟ್ಟು ಸಮುದಾಯದವರಾದ ಡಾ. ಕೆ.ವಿ. ಕೃಷ್ಣಮೂರ್ತಿ ಅವರು ವಿವರಿಸಿದರು.

• ಬುಡಕಟ್ಟು ಸಮುದಾಯಗಳಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ತಲುಪಿಸುವಂತೆ ಸೂಚಿಸಿದರು.

Read More
Next Story