
ಡಿ.ಕೆ.ಶಿವಕುಮಾರ್ ಬಿಜೆಪಿ ಸೇರುವ ಬಗ್ಗೆ ಚರ್ಚೆಯಿಲ್ಲ: ಬಸವರಾಜ ಬೊಮ್ಮಾಯಿ
ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಸೇರುವ ಕುರಿತು ಕಾಂಗ್ರೆಸ್‌ನಲ್ಲೇ ಬೇರೆ ಬೇರೆ ವ್ಯಾಖ್ಯಾನ ನಡೆಯತ್ತಿರುವುದು ಅವರ ಪಕ್ಷದ ವಿಚಾರ. ಅದು ಆ ಪಕ್ಷದ ಅಪನಂಬಿಕೆ ಮತ್ತು ಗೊಂದಲದ ಸಂಕೇತ ಎಂದು ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಸೇರುವ ಕುರಿತು ಬಿಜೆಪಿಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ರಾಜಕಾರಣದಲ್ಲಿ ಕೆಲ ಬೆಳವಣಿಗೆಗಳು ಕ್ಷೀಪ್ರವಾಗಿಯೇ ಆಗಲಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾ ಶಿವರಾತ್ರಿ ನಿಮಿತ್ತ ಇಶಾ ಫೌಂಡೇಷನ್ ಸದ್ಗುರು ಜಗ್ಗಿ ವಾಸುದೇವ ಏರ್ಪಡಿಸಿದ್ದ ಶಿವರಾತ್ರಿ ಜಾಗರಣೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಅಮಿತ್ ಶಾ ಅವರೊಂದಿಗೆ ವೇದಿಕೆ ಹಂಚಿಕೊಂಡ ಕುರಿತ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸದ್ಗುರು ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಭಾಗವಹಿಸಿದ್ದರು. ಈಗ ಅಮಿತ್ ಶಾ ಅವರು ಭಾಗಿಯಾಗಿದ್ದಾರೆ. ನಾವೂ ಕೂಡ ಸಾಕಷ್ಟು ಸಲ ಭಾಗಿಯಾಗಿದ್ದೆವು. ಹಾಗಂತ ಇದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಕಾಂಗ್ರೆಸ್ ನಲ್ಲಿ ಬೇರೆ ಬೇರೆ ವ್ಯಾಖ್ಯಾನ ನಡೆಯತ್ತಿರುವುದು ಅವರ ಪಕ್ಷದ ವಿಚಾರ. ಅದು ಆ ಪಕ್ಷದ ಅಪನಂಬಿಕೆ ಮತ್ತು ಗೊಂದಲದ ಸಂಕೇತವಾಗಿದೆ. ಆದರೆ, ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಸೇರುವ ಕುರಿತಾದ ಯಾವುದೇ ಚರ್ಚೆಗಳು ನಮ್ಮಲ್ಲಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರನ್ನು ತೇಲಿಬಿಡುತ್ತೀದ್ದೀರಿ, ಆದರೆ, ನಾವು ಎಲ್ಲರೂ ಒಟ್ಟಾಗಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುವುದು ಶತಸಿದ್ಧ. ಎಲ್ಲರನ್ನೂ ಒಳಗೊಂಡಂತಹ ಸಂಘಟನೆ ಮಾಡುವ ಉದ್ದೇಶ ಬಿಜೆಪಿಯಲ್ಲಿದೆ ಎಂದು ಹೇಳಿದ್ದಾರೆ.
ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾಕುಂಭಮೇಳ ಹಾಗೂ ಶಿವರಾತ್ರಿ ಜಾಗರಣೆಯಲ್ಲಿ ಪಾಲ್ಗೊಂಡಿದ್ದಲ್ಲದೇ ಬಿಜೆಪಿ ನಾಯಕರ ಕುರಿತು ಮೃದು ಧೋರಣೆ ತಳೆದಿರುವ ಹಿನ್ನೆಲೆಯಲ್ಲಿ ಪಕ್ಷಾಂತರ ಮಾಡುವ ಸಾಧ್ಯತೆಗಳ ಕುರಿತು ಮಾತುಗಳು ಕೇಳಿ ಬರುತ್ತಿದ್ದವು.