
ಅಂಬಾರಿ ಆನೆ ಅರ್ಜುನನ ಸಮಾಧಿ ಅನಾಥ: ನಟ ದರ್ಶನ್ ಬೇಸರ
ಅರ್ಜುನನ ಸಮಾಧಿಗೆ ಯಾರೂ ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ. ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ದೊರೆಯಲಿ ಎಂದು ದರ್ಶನ್ ಹೇಳಿದ್ದಾರೆ.
ಕಾಡಾನೆ ಹಿಡಿಯುವ ಕಾರ್ಯಾಚರಣೆ ವೇಳೆ ಮೃತಪಟ್ಟ ಅರ್ಜುನ ಆನೆಯ ಸಮಾಧಿ ದಿಕ್ಕುದೆಸೆ ಇಲ್ಲದೆ ಅನಾಥವಾಗಿದೆ ಎಂದು ಬೇಸರ ವ್ಯಕ್ತಪಡಿಸಿರುವ ನಟ ದರ್ಶನ್, ಸಮಾಧಿಗೆ ಒಂದು ವ್ಯವಸ್ಥೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಕಳೆದ ವರ್ಷ ನವೆಂಬರ್ 23ರಂದು ಒಟ್ಟು ಎರಡು ತಂಡಗಳಾಗಿ ಕಾಡಾನೆಗಳ ಕಾರ್ಯಾಚರಣೆ ನಡೆಸಲಾಗುತಿತ್ತು. ಒಂದು ತಂಡ ಮೂಡಿಗೆರೆ ಬಳಿ ಕಾರ್ಯಾಚರಣೆ ನಡೆಸುತಿತ್ತು. ಮತ್ತೊಂದು ತಂಡ ಸಕಲೇಶಪುರದ ಬಳಿ ಕಾರ್ಯಾಚರಣೆ ನಡೆಸುತ್ತಿತ್ತು. ಸಕಲೇಶಪುರೆ ಬಳಿಯ ಕಾರ್ಯಾಚರಣೆಯಲ್ಲಿ ಅರ್ಜುನ, ಭೀಮ, ಧನಂಜಯ ಮತ್ತು ಪ್ರಶಾಂತ್ ಸೇರಿ ಒಟ್ಟೂ 6 ಆನೆಗಳು ಇದ್ದವು. ತಂಡದಲ್ಲಿ ಡಾ. ರಮೇಶ್, ರಂಜನ್ ಹಾಗೂ ಮಾವುತ ಕಾವಾಡಿಗಳಿದ್ದರು. 9 ಆನೆಗಳನ್ನು ಹಿಡಿಯಲು ಟಾರ್ಗೆಟ್ ಇಟ್ಟುಕೊಳ್ಳಲಾಗಿತ್ತು. ಆರು ಆನೆಗಳನ್ನು ಆಗಲೇ ಹಿಡಿಯಲಾಗಿತ್ತು. ಏಳನೇ ಆನೆಯನ್ನು ಟಾರ್ಗೆಟ್ ಮಾಡುವಾಗ ಕಾಡಾನೆ ದಾಳಿಗೆ ಒಳಗಾಗಿ ಅರ್ಜುನ ಮೃತಪಟ್ಟಿದ್ದ. ನಂತರ ಹಾಸನದಲ್ಲಿ ಆನೆಯ ಅಂತ್ಯಕ್ರಿಯೆ ನಡೆಸಲಾಗಿತ್ತು. ಈಗ ದರ್ಶನ್ ಕಡೆಯಿಂದ ವಿಶೇಷ ಮನವಿ ಬಂದಿದೆ.
‘ದಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು ತನ್ನ ಗಜಗಾಂಭೀರ್ಯಕ್ಕೆ ಹೆಸರುವಾಸಿಯಾಗಿದ್ದ ಅರ್ಜುನ ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದು ತಿಳಿದೇ ಇದೆ. ಆತನ ಸಮಾಧಿಗೆ ಯಾರು ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ. ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ದೊರೆಯಲಿ. ಇನ್ನೇನು ಮಳೆಗಾಲ ಶುರುವಾಗುವ ಮುನ್ನ ಇದಕ್ಕೊಂದು ಒಳ್ಳೆಯ ವ್ಯವಸ್ಥೆಯಾಗಲಿ ಎಂಬ ಕೋರಿಕೆ ನಮ್ಮದು’ ಎಂದು ದರ್ಶನ್ ತಮ್ಮ x ಖಾತೆಯಲ್ಲಿ ಬರೆದುಕೊಂಡಿದ್ದಾರೆ.
‘ಚಾಮುಂಡೇಶ್ವರಿ ತಾಯಿಯ ದಸರಾ ವೈಭವದ ಸಾರೋಟುಗಾರ ಅರ್ಜುನನ ಸಮಾಧಿ ಮರೆತೇ ಬಿಟ್ಟರೇ ಹೇಗೆ? ಸಂಬಂಧ ಪಟ್ಟವರು ನಮ್ಮ ಗಜರಾಜ ಅರ್ಜುನನ ಮರೆಯದಿರಲಿ’ ಎಂದು ಕೆಲವರು ಕಮೆಂಟ್ ಹಾಕಿದ್ದಾರೆ.