
Waqf (Amendment) Bill | ರಾಷ್ಟ್ರಮಟ್ಟದಲ್ಲಿ ವಕ್ಫ್ ವಿವಾದಕ್ಕೆ ನಾಂದಿ ಹಾಡಿತೇ ಕರ್ನಾಟಕ ; ಏನಿದು ವಿವಾದ; ಸಂಘರ್ಷ?
2012ರಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಸಿದ್ದಪಡಿಸಿದ್ದ ವಕ್ಫ್ ಭ್ರಷ್ಟಾಚಾರ ಸಂಬಂಧ ವರದಿ ಹಾಗೂ ಕಳೆದ ವರ್ಷ ವಕ್ಫ್ ಭೂಮಿ ಮರುವಶ ಸಂಬಂಧ ವಿಜಯಪುರ ಜಿಲ್ಲೆಯ ರೈತರಿಗೆ ನೀಡಿರುವ ನೊಟೀಸ್‌ಗಳು ವಕ್ಫ್ ಕಾಯಿದೆಗೆ ತಿದ್ದುಪಡಿ ತರಲೇಬೇಕೆಂಬ ಒತ್ತಾಯಕ್ಕೆ ಕಾರಣವಾಗಿದ್ದವು
ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಹಾಗೂ ರಾಜ್ಯಸಭೆ ಅಂಗೀಕರಿಸಿದೆ. ಆದರೆ, ರಾಷ್ಟ್ರವ್ಯಾಪಿ ಚರ್ಚೆಯಾಗುತ್ತಿರುವ ಈ ಮಸೂದೆಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ.
2012ರಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಸಿದ್ದಪಡಿಸಿದ್ದ ವಕ್ಫ್ ಭ್ರಷ್ಟಾಚಾರ ಸಂಬಂಧ ವರದಿ ಹಾಗೂ ಕಳೆದ ವರ್ಷ ವಕ್ಫ್ ಭೂಮಿ ಮರುವಶ ಸಂಬಂಧ ವಿಜಯಪುರ ಜಿಲ್ಲೆಯ ರೈತರಿಗೆ ನೀಡಿರುವ ನೊಟೀಸ್‌ಗಳು ವಕ್ಫ್ ಕಾಯಿದೆಗೆ ತಿದ್ದುಪಡಿ ತರಲೇಬೇಕೆಂಬ ಒತ್ತಾಯಕ್ಕೆ ಕಾರಣವಾಗಿದ್ದವು. ರಾಷ್ಟ್ರಾದ್ಯಂತ ಆ ಚರ್ಚೆ ನಡೆಯುತ್ತಿದ್ದರೂ, ಕರ್ನಾಟಕದ ಎರಡು ಪ್ರಕರಣಗಳು ಚರ್ಚೆ ಮತ್ತಷ್ಟು ಬಲಗೊಳ್ಳಲು ಕಾರಣವಾಗಿವೆ.
ಹಾಗಾಗಿಯೇ ಅನ್ವರ್ ಮಣಿಪ್ಪಾಡಿ ವರದಿಯನ್ನು ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಸ್ತಾಪಿಸಿದ್ದರು. ರಾಜ್ಯ ಬಿಜೆಪಿಯೂ ಕರ್ನಾಟಕದಲ್ಲಿ ವಕ್ಫ್ ನೀತಿ ವಿರುದ್ದ ಹಲವು ಪ್ರತಿಭಟನೆಗಳನ್ನು ಮಾಡಿದ್ದು ಮಾತ್ರವಲ್ಲದೆ ವಿಜಯಪುರ ಸೇರಿದಂತೆ ಹಲವೆಡೆ ರೈತರಿಗೆ ನೊಟೀಸ್ ನೀಡಿದ ಕ್ರಮವನ್ನು ಖಂಡಿಸಿದ್ದು, ಅದು ರಾಷ್ಟ್ರ ಮಟ್ಟದ ಚರ್ಚೆಗೂ ಕಾರಣವಾಗಿದ್ದನ್ನು ಸ್ಮರಿಸಿಕೊಂಡಿದೆ.
ಕರ್ನಟಕದ ಪಾತ್ರ
ಭೂಮಿ ಮರುವಶ ಸಂಬಂಧ ರಾಜ್ಯದ ವಿಜಯಪುರ ಜಿಲ್ಲೆಯಲ್ಲಿ ರೈತರಿಗೆ ವಕ್ಫ್ ಮಂಡಳಿ ನೋಟಿಸ್ ನೀಡಿದ ನಂತರ ಆರಂಭವಾದ ವಕ್ಫ್ ವಿವಾದ ಶರವೇಗದಲ್ಲಿ ರಾಷ್ಟ್ರವ್ಯಾಪಿ ಹಬ್ಬುವ ಮೂಲಕ ತೀವ್ರ ಸಂಚಲನ ಸೃಷ್ಟಿಸಿತು. ಈಗ ಕೇಂದ್ರ ಸರ್ಕಾರ ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಸಂಸತ್ತಿನ ಉಭಯ ಅಧಿವೇಶನದಲ್ಲಿ ಮಂಡಿಸಿ ಒಪ್ಪಿಗೆ ಪಡೆದಿದ್ದು, ರಾಷ್ಟ್ರಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಕಳೆದ ವರ್ಷ ಕರ್ನಾಟಕದಲ್ಲಿ ವಕ್ಫ್ ಭೂ ವಶ ಸಂಬಂದ ನೋಟಿಸ್ ಸಂಬಂದ ಚರ್ಚೆಗೆ ಕರ್ನಾಟಕವೇ ಕಾರಣವಾಗಿತ್ತು. ಈ ವಿವಾದಕ್ಕೆ ಕರ್ನಾಟಕವೇ ಬುನಾದಿ ಹಾಕಿದ ಪರಿಣಾಮ ಬಿಜೆಪಿ ರಾಷ್ಟ್ರೀಯ ನಾಯಕರು ಕೂಡ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಈಗ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮಸೂದೆ ಮಂಡಿಸಿ ಒಪ್ಪಿಗೆ ಪಡೆದಿರುವ ಕಾರಣ ಪ್ರತಿಪಕ್ಷ ಕಾಂಗ್ರೆಸ್ ಬಿಜೆಪಿ ವಿರುದ್ಧ ಮಾತಿನ ದಾಳಿ ನಡೆಸಲು ಆರಂಭಿಸಿದೆ. ಬಿಜೆಪಿಯೂ ಕಾಂಗ್ರೆಸ್ ವಿರುದ್ಧ ಮತ ತುಷ್ಟೀಕರಣದ ಆರೋಪ ಹೊರಿಸಿದೆ.
ಹಿನ್ನೆಲೆ
ರೈತರು, ಮಠ-ಮಂದಿರಗಳು, ಸ್ಮಶಾನ ಸೇರಿದಂತೆ ಸರ್ಕಾರಿ ಆಸ್ತಿಗಳಿಗೆ ವಕ್ಫ್ ಆಸ್ತಿ ನೋಟಿಸ್ ನೀಡಿದ ಬಳಿಕ ವಕ್ಫ್ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿ ಕೂಡ ರಾಜ್ಯದತ್ತ ಮುಖ ಮಾಡಿ, ರೈತರ ಅಹವಾಲು ಆಲಿಸಿತ್ತು. ರೈತರ ಭೂಮಿ ವಶಪಡಿಸಿಕೊಳ್ಳುವ ವಕ್ಫ್ ಮಂಡಳಿ ಹಾಗೂ ರಾಜ್ಯ ಸರ್ಕಾರದ ಕಾನೂನು ಕ್ರಮಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೇ ವಕ್ಫ್ ತಿದ್ದುಪಡಿ ಮಸೂದೆಯ ಶಿಫಾರಸುಗಳಿಗೆ ಕರ್ನಾಟಕ ವಕ್ಫ್ ವಿವಾದ ಕಾರಣವಾಯಿತು.
ವಕ್ಫ್ ಆಸ್ತಿ ನೋಟಿಸ್ ವಿಚಾರ ವಿವಾದದ ಸ್ವರೂಪ ಪಡೆದ ಬಳಿಕ ಹಾವೇರಿ ಜಿಲ್ಲೆಯ ಗ್ರಾಮದಲ್ಲಿ ಕಲ್ಲುತೂರಾಟಕ್ಕೂ ಆಸ್ಪದ ನೀಡಿತು. ವಿಜಯಪುರದಲ್ಲಿ ರೈತರು ಹಾಗೂ ಬಿಜೆಪಿ ಶಾಸಕರಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಧರಣಿ ಸಹ ನಡೆಸಲಾಯಿತು. ರೈತರು ಧರಣಿ ಸ್ಥಳಕ್ಕೆ ಖುದ್ದು ಜೆಪಿಸಿ ಅಧ್ಯಕ್ಷರಾದ ಜಗದಾಂಬಿಕಾ ಪಾಲ್ ಅವರು ಆಗಮಿಸಿ, ತಿದ್ದುಪಡಿ ಮಸೂದೆಯಲ್ಲಿ ಕಾಯ್ದೆಯ ಕೆಲ ಅಂಶಗಳ ಪರಿಷ್ಕರಣೆಗೆ ಶಿಫಾರಸು ಮಾಡುವ ಭರವಸೆ ನೀಡಿದ್ದರು.
ಇನ್ನು ರಾಷ್ಟ್ರಮಟ್ಟದ ಹೋರಾಟಕ್ಕೆ ಕಾರಣವಾದ, ರಾಜ್ಯದಲ್ಲಿ ಐದು ದಶಕಗಳಿಂದ ಬೂದಿ ಮುಚ್ಚಿದ ಕೆಂಡಂದಂತಿರುವ ವಕ್ಫ್ ವಿವಾದ ಕುರಿತ ವರದಿ ಇಲ್ಲಿದೆ.
ಏನಿದು ವಕ್ಫ್ ಆಸ್ತಿ?
ಧಾರ್ಮಿಕ ಹಾಗೂ ಸಾಮಾಜಿಕ ಸೇವೆಯ ಉದ್ದೇಶಕ್ಕಾಗಿ ವಕ್ಫ್ ಮಂಡಳಿಗೆ ದಾನ ನೀಡಿದ ಭೂಮಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಲಾಗಿದೆ. ಒಮ್ಮೆ ವಕ್ಫ್ ಮಂಡಳಿಗೆ ನೀಡಿದ ಯಾವುದೇ ಸ್ವತ್ತು, ಶಾಶ್ವತವಾಗಿ ವಕ್ಫ್ ಆಸ್ತಿಯಾಗಲಿದೆ ಎಂದು ಕಾಯ್ದೆ ಹೇಳುತ್ತದೆ.
ಮಸೀದಿ, ದರ್ಗಾ, ಖಬರಸ್ತಾನ, ಈದ್ಗಾ ಮೈದಾನ ನಿರ್ವಹಣೆ ನೋಡಿಕೊಳ್ಳುವವರಿಗೆ ಜೀವನಾಧಾರಕ್ಕಾಗಿ ಸ್ವಲ್ಪ ಭೂಮಿಯನ್ನು ನೀಡಲಾಗುತ್ತಿತ್ತು. ಆತ ನಿವೃತ್ತಿ ಹೊಂದಿದ ನಂತರ ಆ ಭೂಮಿ ವಾಪಸ್ ಪಡೆದು, ಹೊಸದಾಗಿ ನೇಮಕಗೊಂಡವರಿಗೆ ನೀಡಲಾಗುತ್ತಿತ್ತು.
ಕರ್ನಾಟಕ ಸರ್ಕಾರ 1974ರಿಂದ 1979ರವರೆಗೆ ಜಾರಿಗೆ ತಂದ ಭೂಸುಧಾರಣಾ ನೀತಿಗಳಿಂದಾಗಿ ಜಮೀನ್ದಾರಿ, ಇನಾಮದಾರಿ ಮತ್ತು ಗೇಣಿದಾರ ಪದ್ಧತಿ ರದ್ದಾಯಿತು,
ಉಳುವವರೇ ಭೂಮಿಯ ಒಡೆಯರಾದರು. ಜಮೀನ್ದಾರರು, ಭೂಮಾಲೀಕರು, ಮಠಗಳು ಹಾಗೂ ವಕ್ಸ್ ಮಂಡಳಿಯಿಂದ ಉಳುವವರಿಗೆ ಭೂಮಾಲೀಕತ್ವ ಕೊಡಿಸಲಾಯಿತು. ಅಂಕಿ ಅಂಶಗಳ ಪ್ರಕಾರ ಉಳುವವನೇ ಭೂ ಒಡೆಯ ಜಾನೂನು ಜಾರಿಯಾಗುವವರೆಗೆ ರಾಜ್ಯದಲ್ಲಿ ವಕ್ಸ್ ಮಂಡಳಿ ಸ್ವಾಧೀನದಲ್ಲಿ ಒಟ್ಟು 1.70 ಲಕ್ಷ ಎಕರೆ ಜಮೀನು ಇತ್ತು. ಉಳುವವರಿಗೆ ಭೂಮಾಲೀಕತ್ವ ನೀಡಿದ ಬಳಿಕ ಆ ಜಮೀನು 79,000 ಎಕರೆಗೆ ಕುಸಿಯಿತು. ಆದರೆ, ಜನರಿಗೆ ವರ್ಗಾವಣೆಯಾದ ಆಸ್ತ ದಾಖಲೆಗಳಲ್ಲಿ ಇಂದಿಗೂ ವಕ್ಫ್ ಆಸ್ತಿ ಎಂದು ಬರುತ್ತಿರುವುದು ವಿವಾದದ ಕೇಂದ್ರ ಬಿಂದುವಾಯಿತು.
ರಾಜ್ಯ ಸರ್ಕಾರದಿಂದ ಅಧಿಸೂಚನೆ
ವಕ್ಫ್ ಮಂಡಳಿಯ ಭೂಮಿ ಮರುವಶಪಡಿಸಿಕೊಳ್ಳಲು ರಾಜ್ಯ ಸರ್ಕಾರ 1974ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಅಧಿಸೂಚನೆ ಪ್ರಕಟಿಸಲು ವಕ್ಫ್ ಮಂಡಳಿಯೇ ಸರ್ಕಾರದ ಮೇಲೆ ಒತ್ತಡ ಹೇರಿತ್ತು ಎಂಬ ಆರೋಪಗಳೂ ಕೇಳಿಬಂದಿದ್ದವು.
ಜಮೀನು ಮರುವಶಕ್ಕೆ ಪಡೆಯುವುದನ್ನು ವಕ್ಸ್ ಸಮರ್ಥಿಸಿಕೊಂಡಿತ್ತು. ಸುಪ್ರೀಂಕೋರ್ಟ್ 26 ವರ್ಷಗಳ ಹಿಂದೆ ವಕ್ಫ್ ಮಂಡಳಿಗೆ ಪೂರಕವಾದ ಆದೇಶವನ್ನೇ ನೆಪವಾಗಿಸಿಕೊಂಡು ಜಮೀನು ಮರುವಶಕ್ಕೆ ನಿರ್ಧರಿಸಿತ್ತು. 'ಸಯ್ಯದ್ ಅಲಿ ಮತ್ತು ಇತರರು ವರ್ಸಸ್ ಆಂಧ್ರಪ್ರದೇಶ ವಕ್ಫ್ ಮಂಡಳಿ' ಪ್ರಕರಣದಲ್ಲಿ ಸುಪ್ರೀಂಕೋರ್ಟ್ 1998ರ ಜ.28ರಂದು ಒಮ್ಮೆ ವಕ್ಫ್ ಎಂದು ಜಮೀನು ದಾಖಲೆಯಲ್ಲಿ ಉಲ್ಲೇಖವಾದರೆ ಅದು ಕಾಯಂ ಆಗಿ ವಕ್ಫ್ ಆಸ್ತಿ ಆಗಿರಲಿದೆ. ಇನಾಮದಾರಿ ಮತ್ತು ಗೇಣಿದಾರ ಪದ್ಧತಿ, ಭೂಸುಧಾರಣಾ ಕಾಯ್ದೆಗಳ ಅನ್ವಯ ಅನ್ಯರ ಹೆಸರಿಗೆ ವಕ್ಫ್ ಜಮೀನು ವರ್ಗಾವಣೆಯಾಗಿದ್ದಲ್ಲಿ, ಅದು ಕೂಡ ಅನೂರ್ಜಿತ. ಅಂತಹ ಜಮೀನುಗಳನ್ನು ವಕ್ಫ್ ಮಂಡಳಿ ಮರುವಶಕ್ಕೆ ಪಡೆಯಬಹುದು ಎಂದು ತೀರ್ಪು ನೀಡಿತ್ತು.
ಕರ್ನಾಟಕದಲ್ಲಿ ಸುಪ್ರೀಂಕೋರ್ಟಿನ ಈ ತೀರ್ಪಿನ ಅನುಷ್ಠಾನಕ್ಕೆ ಹಲವು ಬಾರಿ ಪ್ರಯತ್ನ ನಡೆದರೂ ಸಾಧ್ಯವಾಗಿರಲಿಲ್ಲ. 2000 ನೇ ಸಾಲಿನ ನಂತರದಿಂದ ವಕ್ಫ್‌ಮಂಡಳಿ, ಕಾನೂನು ಇಲಾಖೆ ಹಾಗೂ ಅಲ್ಪಸಂಖ್ಯಾತರ ಆಯೋಗಗಳು ತೀರ್ಪು ಜಾರಿಗೆ ಮುಂದಾದವು. ಈ ಪ್ರಕ್ರಿಯೆಯ ಭಾಗವಾಗಿ ಹಲವು ರೈತರು, ಮಠ ಮಂದಿರಗಳ ಜಮೀನು ದಾಖಲೆಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ.
ಕೋಲಾಹಲಕ್ಕೆ ಕಾರಣವಾದ ವಕ್ಫ್ ಆಸ್ತಿ ನೋಟಿಸ್
ವಿಜಯಪುರ ಜಿಲ್ಲೆಯಲ್ಲಿ ರೈತರ ಜಮೀನು ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ಉಲ್ಲೇಖವಾದ ಬಳಿಕ ರಾಜ್ಯದಲ್ಲಿ ಮತ್ತೆ ವಕ್ಫ್ ಆಸ್ತಿ ವಿವಾದ ಮತ್ತೆ ಮುನ್ನೆಲೆಗೆ ಬಂದಿತು. ರೈತರಿಗೆ ವಕ್ಫ್ ಆಸ್ತಿ ನೋಟಿಸ್ ನೀಡಿದ ಬಳಿಕ ಸಾರ್ವಜನಿಕರು ಹಾಗೂ ಪ್ರತಿಪಕ್ಷಗಳಿಂದ ಪ್ರತಿರೋಧವೂ ವ್ಯಕ್ತವಾಯಿತು. ಜಮೀನುಗಳ ಮಾಲೀಕತ್ವ ತಲೆಮಾರುಗಳಿಂದ ವರ್ಗಾವಣೆಯಾದರೂ ವಕ್ಫ್ ಆಸ್ತಿ ಎಂದು ಉಲ್ಲೇಖವಾಗಿರುವುದನ್ನು ಬಿಜೆಪಿ ಪ್ರಬಲವಾಗಿ ವಿರೋಧಿಸಿತು. ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟವೂ ನಡೆಯಿತು.
ಸದ್ಯ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವಾದ ಕುರಿತು ಸಂತಸ ಹಂಚಿಕೊಂಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು, ವಕ್ಫ್ ಬೋರ್ಡ್ ನಿರಂಕುಶ ನಡೆಗಳಿಗೆ ತಿದ್ದುಪಡಿ ಮಸೂದೆ ಕಡಿವಾಣ ಹಾಕಲಿದೆ. ವಕ್ಫ್ ಕಾಯ್ದೆಯ ತಿದ್ದುಪಡಿಗೆ ಗೆ ಜಂಟಿ ಸಂಸತ್ ಸಮಿತಿ ರಚಿಸಿ ತಿದ್ದುಪಡಿಗೆ ಸೂಚಿಸಿದ ಕೇಂದ್ರ ಸರ್ಕಾರಕ್ಕೂ, ಜೆಪಿಸಿ ಅಧ್ಯಕ್ಷರಿಗೂ, ಸದಸ್ಯರಿಗೂ ಅನಂತ ಧನ್ಯವಾದಗಳು ಎಂದು ಹೇಳಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಹಾಕಿರುವ ಅವರು, ತಿದ್ದುಪಡಿ ಮಸೂದೆಯಿಂದ ರೈತರು, ಮಠಗಳು, ದೇವಸ್ಥಾನಗಳು, ಸರ್ಕಾರಿ ಭೂಮಿ ಹಾಗೂ ಜನ ಸಾಮಾನ್ಯರ ಭೂಮಿಯನ್ನು ವಕ್ಫ್ ಎಂದು ಘೋಷಿಸಲು ಸಾಧ್ಯವಿಲ್ಲ. ಜಿಲ್ಲಾಡಳಿತ ಮತ್ತು ನ್ಯಾಯಾಲಯಗಳಷ್ಟೇ ಇದನ್ನು ತೀರ್ಮಾನಿಸಬಹುದು. ನಮ್ಮ ಸಾಮೂಹಿಕ ಹೋರಾಟಕ್ಕೆ ಜಯ ಸಂದಿರುವುದು ಸಾಕಷ್ಟು ಸಂತಸ ತಂದಿದೆ ಎಂದು ಹೇಳಿದ್ದಾರೆ.
ವಿಜಯಪುರದಲ್ಲಿ ನಮ್ಮ ತಂಡದಿಂದ ಮೊಳಗಿದ ಹೋರಾಟ ರಾಷ್ಟ್ರವ್ಯಾಪಿ ಹರಡಿತು.ಈ ಹೋರಾಟದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗವಹಿಸಿ ಬೆಂಬಲ, ಪ್ರೋತ್ಸಾಹ ನೀಡಿದ ಎಲ್ಲ ನಾಯಕರು, ಮಠಾಧೀಶರು, ಜನಸಾಮಾನ್ಯರು, ವಿಜಯಪುರದಲ್ಲಿ ಧರಣಿ ಮಾಡುತ್ತಿರುವಾಗ ದೂರ-ದೂರುಗಳಿಂದ ರೊಟ್ಟಿ ಊಟ ಕೊಟ್ಟ ಅನ್ನದಾತರಿಗೂ ಧನ್ಯವಾದ ಅರ್ಪಿಸಲಾಗುವುದು ಎಂದಿದ್ದಾರೆ.
ವಕ್ಫ್ ಆಸ್ತಿ ನೋಟಿಸ್ ವಬಿರುದ್ಧ ಹೋರಾಟ ತೀವ್ರಗೊಂಡ ಬಳಿಕ ರಾಜ್ಯ ಸರ್ಕಾರ ನೋಟಿಸ್‌ಗಳನ್ನು ಹಿಂಪಡೆದು, ಪಹಣಿಗಳಲ್ಲಿ ವಕ್ಫ್ ಆಸ್ತಿ ಉಲ್ಲೇಖವನ್ನು ಬದಲಿಸಿತು.
ಅನ್ವರ್ ಮಣಿಪ್ಪಾಡಿ ವರದಿ
2012 ರಲ್ಲಿ ಅಂದಿನ ಸಿ.ಎಂ. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಅತಿಕ್ರಮಣವಾಗಿರುವ ವಕ್ಫ್ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಿತ್ತು. ಅದಕ್ಕೂ ಮುನ್ನ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ನೇತೃತ್ವದಲ್ಲಿ ವಕ್ಫ್ ಆಸ್ತಿಗಳ ಸ್ಥಿತಿಗತಿಗಳ ವರದಿ ನೀಡಲು ಸಮಿತಿ ರಚಿಸಲಾಯಿತು. ಅದರಂತೆ ಸಮಿತಿ 2012ರ ಫೆ. 24ರಂದು ವರದಿ ಸಲ್ಲಿಸಿತ್ತು. ಆದರೆ ಸರ್ಕಾರ ಆ ವರದಿಯನ್ನು ಅಧಿವೇಶನದಲ್ಲಿ ಮಂಡಿಸಿರಲಿಲ್ಲ.
2013ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ 2016ರ ಮಾರ್ಚ್ 3 ರಂದು ವರದಿಯ ಶಿಫಾರಸುಗಳನ್ನು ತಿರಸ್ಕರಿಸಿ ಅಧಿಸೂಚನೆ ಹೊರಡಿಸಿತ್ತು. 2020ರಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅನ್ವರ್ ಮಾಣಿಪ್ಪಾಡಿ ವರದಿಯ ಶಿಫಾರಸುಗಳ ಜಾರಿಗೆ ಮುಂದಾಯಿತು. ಸೆ. 23ರಂದು ವಿಧಾನಸಭೆ ಹಾಗೂ 25ರಂದು ವಿಧಾನ ಪರಿಷತ್ತಿನಲ್ಲಿ ವರದಿ ಮಂಡಿಸಲಾಯಿತು. ಆದರೆ, ವರದಿಯ ಬಗ್ಗೆ ಎರಡೂ ಸದನಗಳಲ್ಲಿ ಚರ್ಚೆ ನಡೆಯಲಿಲ್ಲ. ಸರ್ವೇ ಕಾರ್ಯ ಕೈಗೊಳ್ಳಲಾಯಿತು.
ಬಿಜೆಪಿ ಸರ್ಕಾರದಿಂದ ನೊಟೀಸ್
2021-22 ರಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವಧಿಯಲ್ಲೂ ವಕ್ಫ್ ಆಸ್ತಿ ಸಂಬಂಧ ರೈತರಿಗೆ ನೋಟಿಸ್ ನೀಡಲಾಗಿತ್ತು. 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನೋಟಿಸ್ ಜಾರಿಗೆ ಮುಂದಾಯಿತು. ವಿರೋಧ ವ್ಯಕ್ತವಾದಾಗ ಬಿಜೆಪಿ ಅವಧಿಯಲ್ಲಿ ನೀಡಿದ್ದ ನೋಟಿಸನ್ನು ಕಾಂಗ್ರೆಸ್ ಬಹಿರಂಗಪಡಿಸಿತ್ತು
ಕರ್ನಾಟಕದಲ್ಲಿ 30 ಸಾವಿರ ಎಕರೆ ಬಾಡಿಗೆಗೆ
ಸಂಸತ್ತಿನ ಉಭಯ ಸದನಗಳಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವಾಗಿದ್ದು, ಮಸೂದೆ ಮೇಲೆ ಚರ್ಚೆ ಆರಂಭವಾಗಿದೆ. ಕರ್ನಾಟಕದಲ್ಲಿ 30 ಸಾವಿರ ಎಕರೆ ವಕ್ಫ್ ಆಸ್ತಿಯನ್ನು ವಿದೇಶದ ಸಂಸ್ಥೆಗಳಿಗೆ ಬಾಡಿಗೆ ನೀಡಿರುವುದು ಅನ್ವರ್ ಮಾಣಿಪ್ಪಾಣಿ ವರದಿಯಿಂದ ತಿಳಿದು ಬಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ 1500 ಎಕರೆ ವಕ್ಫ್ ಆಸ್ತಿ ಎಂದು ಘೋಷಿಸಿ ವಿವಾದ ಸೃಷ್ಟಿಸಲಾಗಿದೆ. ಹೊನವಾಡ ಗ್ರಾಮದಲ್ಲಿನ ಈ ಭೂ ವಿವಾದಕ್ಕೆ ಕಾನೂನು ಮತ್ತು ಆಡಳಿತಾತ್ಮಕ ಸಂಘರ್ಷಕ್ಕೆ ಕಾರಣವಾಗಿದೆ.
ಚಿಕ್ಕಮಗಳೂರಿನ ದತ್ತ ಪೀಠದ ಮೇಲೂ ವಕ್ಫ್ ಮಂಡಳಿ ಹಕ್ಕು ಸ್ಥಾಪನೆ ಮಾಡಿದೆ. ಬೇರೆ ಬೇರೆ ಸಮುದಾಯದ ಭೂಮಿಯನ್ನು ಅತಿಕ್ರಮಿಸಿಕೊಂಡಿದೆ ಎಂದು ಶಾ ಆರೋಪಿಸಿದ್ದಾರೆ.
ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಐತಿಹಾಸಿಕ ಮಸೂದೆಗೆ ಅಂಗೀಕಾರ ಲಭಿಸಿದೆ. ಕಾಂಗ್ರೆಸ್ ಪಕ್ಷ ವಕ್ಫ್ ಕಾಯಿದೆಗೆ ತಿದ್ದುಪಡಿಯನ್ನು ರಾಜ್ಯ, ದೇಶದಲ್ಲಿ ವಿರೋಧಿಸುತ್ತಿರುವುದು ಒಂದು ದುರಂತ. ಕರ್ನಾಟಕದಲ್ಲಿ ಸಾವಿರಾರು ಕೋಟಿ ಮೌಲ್ಯದ ಜಮೀನುಗಳನ್ನು ವಕ್ಫ್ ಬೋರ್ಡ್ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡರು, ರಾಜಕಾರಣಿಗಳು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.