Waqf Boad Asset Issue | ಕರಾವಳಿ-ಮಲೆನಾಡಿನಲ್ಲೂ ಆತಂಕ ಸೃಷ್ಟಿಸಿದ ವಕ್ಫ್‌ ಬೋರ್ಡ್‌ ನೋಟಿಸ್‌
x

Waqf Boad Asset Issue | ಕರಾವಳಿ-ಮಲೆನಾಡಿನಲ್ಲೂ ಆತಂಕ ಸೃಷ್ಟಿಸಿದ ವಕ್ಫ್‌ ಬೋರ್ಡ್‌ ನೋಟಿಸ್‌

ಒತ್ತುವರಿ ತೆರವು ವಿಚಾರದಲ್ಲಿ ಈಗಾಗಲೇ ಮಲೆನಾಡು ಭಾಗದಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆ ವಿರುದ್ದ ಹೋರಾಟ ತೀವ್ರಗೊಂಡಿದೆ. ರೈತರ ಜಮೀನನ್ನು ವಕ್ಫ್ ಬೋರ್ಡ್‌ ವಶಕ್ಕೆ ಪಡೆಯಲಿದೆ ಎಂಬ ವಿಚಾರ ರೈತರಲ್ಲಿ ಮತ್ತೊಂದು ಹೋರಾಟದ ಕಿಡಿ ಹೊತ್ತಿಸಿದೆ. ಈ ಬಗ್ಗೆ ರೈತಸಂಘಟನೆಗಳಲ್ಲಿ ಚರ್ಚೆಯೂ ಆರಂಭವಾಗಿದೆ.


ವಿಜಯಪುರ ವಕ್ಫ್ ಮಂಡಳಿ ನೋಟೀಸ್ ಪ್ರಕರಣ ಈಗ ಮಲೆನಾಡ-ಕರಾವಳಿ ಭಾಗದ ಅಡಿಕೆ ರೈತರಲ್ಲೂ ಆತಂಕ ಸೃಷ್ಟಿಸುತ್ತಿದೆ. ರೈತರ ಜಮೀನನ್ನು ವಕ್ಫ್ ಬೋರ್ಡ್ ಸ್ವಾಧೀನಕ್ಕೆ ಪಡೆಯಲಿದೆ ಎಂಬ ಸುದ್ದಿ ಮುನ್ನೆಲೆಗೆ ಬರುತ್ತಿದ್ದಂತೆ ಅಡಿಕೆ ಬೆಳೆಗಾರರ ಆತಂಕ ಇನ್ನಷ್ಟು ಹೆಚ್ಚಿದೆ.

ಒತ್ತುವರಿ ತೆರವು ವಿಚಾರದಲ್ಲಿ ಈಗಾಗಲೇ ಮಲೆನಾಡು ಭಾಗದಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆ ವಿರುದ್ದ ಹೋರಾಟ ತೀವ್ರಗೊಂಡಿದೆ. ರೈತರ ಜಮೀನನ್ನು ವಕ್ಫ್ ಬೋರ್ಡ್‌ ವಶಕ್ಕೆ ಪಡೆಯಲಿದೆ ಎಂಬ ವಿಚಾರ ರೈತರಲ್ಲಿ ಮತ್ತೊಂದು ಹೋರಾಟದ ಕಿಡಿ ಹೊತ್ತಿಸಿದೆ. ಈ ಬಗ್ಗೆ ರೈತಸಂಘಟನೆಗಳಲ್ಲಿ ಚರ್ಚೆಯೂ ಆರಂಭವಾಗಿದೆ.

ಬೆಳೆ ಸರ್ವೆಗೆ ಬರುವ ಅಧಿಕಾರಿಗಳು "ನೀವು ನಿಮ್ಮ ಸರ್ವೇ ನಂಬರ್‌ ತೋಟದಿಂದ ಎರಡು ಕಿ.ಮೀ ದೂರದಲ್ಲಿದ್ದೀರಿ, ನಾಲ್ಕು ಕಿ.ಮೀ ಹೊರಗಿದ್ದೀರಿ ಅಂತೆಲ್ಲ ಅಸಂಬದ್ದ GPS ಮಾಹಿತಿ ನೀಡಲಾಗುತ್ತದೆ. ಪಹಣಿಯಲ್ಲಿ ಸರ್ವೇ ಮಾಡಿದ ಬೆಳೆಯೇ ಬದಲಾಗುತ್ತದೆ. ಇಂತಹ ಪಹಣಿ ಅಪಸವ್ಯಗಳ ನಡುವೆ ಈಗ ವಿಜಯಪುರ ವಕ್ಫ್‌ ಬೋರ್ಡ್ ನೋಟಿಸ್ ಸುದ್ದಿ ಮಾತ್ರ ಅಲ್ಲದೆ, ರೈತರ ಜಮೀನಿನ ಪಹಣಿಯಲ್ಲಿ ಮಾಲಿಕತ್ವವೇ ಬದಲಾಗಿದೆ ಎಂಬ ವದಂತಿ ಹರಿದಾಡಿದೆ. ವಕ್ಫ್ ನೋಟೀಸ್ ಪಡೆದ ರೈತರು ತಾಲೂಕು ಕಚೇರಿಗೆ ಹೋಗಿ ಪಹಣಿ ತೆಗೆಸುತ್ತಿದ್ದಾರೆ.

ರೈತರಿಗೆ ನೆಮ್ಮದಿ ಇಲ್ಲ

ಈಗಾಗಲೆ ಅರಣ್ಯ, ಕಂದಾಯ ಇಲಾಖೆಗಳ ವಿರುದ್ದ ಒತ್ತುವರಿ ತೆರವು ಹೋರಾಟ, ಕಸ್ತೂರಿ ರಂಗನ್ ವರದಿ ವಿರೋಧಿಸಿ ಹೋರಾಟ ಮಾಡುತ್ತಿರುವ ಪಶ್ಚಿಮ ಘಟ್ಟದ ರೈತರು ಈಗ ಮತ್ತೊಂದು ಹೋರಾಟಕ್ಕೆ ಸಿದ್ದವಾಗಬೇಕಾಗಿದೆ.

ಅಂಚೆಯಣ್ಣ ಬಂದರೂ ರೈತರಲ್ಲಿ ಭಯ!

ಈ ಹಿಂದೆಲ್ಲ ಅಂಚೆಯವರು ಉಣಗೋಲು ತೆಗೆದು ಒಳ ಬಂದ್ರೆ, ಅದೊಂದು ಸಂಭ್ರಮ. ಯಾರೋ ಉಭಯ ಕುಶಲೋಪರಿ ಪತ್ರ ಬರೆದಿದ್ದಾರೆ. ಯಾರಿರಬಹುದು ಎಂಬ ಕುತೂಹಲವೂ ಇರುತ್ತದೆ. ಪತ್ರ ಇಸ್ಕೊಂಡು, ಅವನಿಗೊಂದು ಕಾಫಿ ಕೊಟ್ಟು, ಹಬ್ಬದ ಸಮಯ ಆದ್ರೆ, ಒಂದು ಸ್ವೀಟು ನ್ಯೂಸ್ ಪೇಪರ್‌ನಲ್ಲಿ ಕಟ್ಟಿ ಕಳಿಸೋದು ಮಲೆನಾಡಿನಲ್ಲಿ ಸಾಮಾನ್ಯ ಸಂಗಿತಿಯಾಗಿತ್ತು.ಆದರೆ, ಈಗ ಅಂಚೆಯಣ್ಣ ಬಂದು ಪತ್ರಗಳ ಕಟ್ಟು ತೆಗೆದರೆ ರೈತರ ಕುಟುಂಬದ ಸದಸ್ಯರ ಮುಖದಲ್ಲಿ ಗಾಬರಿ ಎದ್ದುಕಾಣುತ್ತದೆ. ಅದು ಬ್ಯಾಂಕ್‌ನ ಸಾಲದ ನೋಟೀಸೋ, ಕಂದಾಯ ಇಲಾಖೆ ನೋಟೀಸೋ, ಅರಣ್ಯ ಇಲಾಖೆಯದೋ ಅನ್ನುವ ಆತಂಕ ಕಾಡುತ್ತಿರುತ್ತದೆ. ಜೊತೆಗೆ, ಈಗ ಅದು ವಕ್ಫ್ ಬೋರ್ಡ್ ನೋಟಿಸ್‌ ಎಂದು ತಿಳಿದರೆ ಆತಂಕ, ಚಡಪಡಿಕೆ ಎದುರಾಗಿದೆ.

ಇನ್ನು ಗ್ರಾಮ ಒನ್‌ ಸೇವಾ ಕೇಂದ್ರದಲ್ಲಿ ಪಹಣಿ ತೆಗೆಯುವಾಗಲೂ ಆತಂಕ ಮನೆ ಮಾಡಿರುತ್ತದೆ ಎಂಬುದು ಕರಾವಳಿ ಹಾಗೂ ಮಲೆನಾಡು ಭಾಗದ ರೈತರು ಅಳಲು. ಈಚೆಗೆ ಸೀಗೆ ಹುಣ್ಣಿಮೆ ಆಚರಿಸಿ, ಭೂಮಿಗೆ ಪೂಜೆ ಸಲ್ಲಿಸಿದ ರೈತರಲ್ಲಿ ದೀಪಾವಳಿ ವೇಳೆ ಕೋಲು ಹಚ್ಚಿ "ದೀಪೋಳಿಗೆ" ಅಂತ ಕೂಗುವುದದಕ್ಕೂ ಗಂಟಲಲ್ಲಿ ಸ್ವರವೇ ಇಲ್ಲದಂತಾಗಿದೆ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ, ದೇವರ ಹಿಪ್ಪರಗಿ ಸೇರಿದಂತೆ ಸುತ್ತಲಿನ ರೈತರಿಗೆ ವಕ್ಫ್‌ ಬೋರ್ಡ್ ನಿಂದ ನೋಟಿಸ್‌ ನೀಡಲಾಗಿತ್ತು. ರೈತರು ಈಗಾಗಲೇ ನೋಟಿಸ್‌ ಖಂಡಿಸಿ ಪ್ರತಿಭಟನೆಯ ಹಾದಿ ಕೂಡ ತುಳಿದಿದ್ದಾರೆ. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ವಕ್ಫ್‌ ನೋಟಿಸ್‌ ಕುರಿತು ಧೈರ್ಯ ತುಂಬುವ ಕೆಲಸವನ್ನೂ ಮಾಡಿದ್ದರು.

ಬರಹ: ಅರವಿಂದ ಸಿಗದಾಳ್, ಮೇಲುಕೊಪ್ಪ