U.S.Consulate | ಬೆಂಗಳೂರಿನಲ್ಲಿ ಅಮೆರಿಕ ದೂತಾವಾಸ ಕಚೇರಿ ಸ್ಥಾಪನೆ ʼಖ್ಯಾತಿಗಾಗಿ ಕಿತ್ತಾಟʼ
x
ತೇಜಸ್ವಿ ಸೂರ್ಯ, ಪ್ರಿಯಾಂಕ್‌ ಖರ್ಗೆ

U.S.Consulate | ಬೆಂಗಳೂರಿನಲ್ಲಿ ಅಮೆರಿಕ ದೂತಾವಾಸ ಕಚೇರಿ ಸ್ಥಾಪನೆ ʼಖ್ಯಾತಿಗಾಗಿ ಕಿತ್ತಾಟʼ

U.S.Consulate ಐಟಿ ಕ್ಷೇತ್ರಕ್ಕೆ ಶೇ 40 ರಷ್ಟು ಕೊಡುಗೆ ನೀಡುತ್ತಿದ್ದರೂ ಬೆಂಗಳೂರಿನಲ್ಲಿ ಈವರೆಗೂ ಅಮೆರಿಕ ದೂತಾವಾಸ ಕಚೇರಿ ಆರಂಭವಾಗಿರಲಿಲ್ಲ.


ಬೆಂಗಳೂರಿನಲ್ಲಿ ಶುಕ್ರವಾರ (ಜ.17) ಅಮೆರಿಕಾದ ದೂತಾವಾಸ ಕಚೇರಿ ವಿದ್ಯುಕ್ತವಾಗಿ ಆರಂಭವಾಗಲಿದೆ. ಅಮೆರಿಕ ಪ್ರವಾಸ ಕೈಗೊಳ್ಳುವವರು ಇನ್ನು ಮುಂದೆ ವೀಸಾ ಪಡೆಯಲು ಚೆನ್ನೈ, ಹೈದರಾಬಾದ್, ಮುಂಬೈ ನಗರಗಳಿಗೆ ಅಲೆಯುವ ಕಿರಿಕಿರಿಯೂ ತಪ್ಪಲಿದೆ.

ಅಮೆರಿಕದ ದೂತಾವಾಸ ಕಚೇರಿ ಆರಂಭವಾಗಿ ವೀಸಾ ಸಿಗುವ ಖುಷಿ ಒಂದೆಡೆಯಾದರೆ, ಬೆಂಗಳೂರಿಗೆ ಅಮೆರಿಕದ ದೂತಾವಾಸ ಕಚೇರಿ ತಂದ ಹೆಗ್ಗಳಿಕೆಯ ಲಾಭ ಪಡೆಯಲು ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಹಗ್ಗಜಗ್ಗಾಟ ನಡೆದಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವರ ಪ್ರಾಮಾಣಿಕ ಪ್ರಯತ್ನ ಇಲ್ಲದಿದ್ದರೆ ಬೆಂಗಳೂರಿನಲ್ಲಿ ಅಮೆರಿಕದ ದೂತಾವಾಸ ಕಚೇರಿ ಸ್ಥಾಪನೆ ಸಾಧ್ಯವಾಗುತ್ತಿರಲಿಲ್ಲ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಕಾಂಗ್ರೆಸ್ ಕಿಡಿಕಾರಿದೆ.

ದೂತಾವಾಸ ಕಚೇರಿ ಎಲ್ಲಿ?

ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿರುವ ಜೆ ಡಬ್ಲ್ಯೂ ಮ್ಯಾರಿಯಟ್ ಹೋಟೆಲ್‌ನಲ್ಲಿ ಸದ್ಯ ಅಮೆರಿಕದ ದೂತಾವಾಸ ಕಚೇರಿ ಕಾರ್ಯಾರಂಭ ಮಾಡಲಿದೆ.

ಅಮೆರಿಕ ರಾಯಭಾರಿ ಎರಿಕ್ ಗರ್ಸಿಟಿ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾಯಂ ಕಚೇರಿಯನ್ನು ವೈಟ್‌ಫೀಲ್ಡ್‌ನಲ್ಲಿ ಆರಂಭಿಸುವಂತೆ ಈಗಾಗಲೇ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ರಾಯಭಾರಿ ಕಚೇರಿ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಐಟಿ ಕಂಪೆನಿಗಳು, ಸ್ಟಾರ್ಟ್‌ ಅಪ್‌ ಕಂಪೆನಿಗಳು ವೈಟ್‌ಫೀಲ್ಡ್‌ ಪ್ರದೇಶದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ದೂತಾವಾಸ ಕಚೇರಿ ಆರಂಭಿಸುವಂತೆ ಮನವಿ ಮಾಡಿದ್ದಾರೆ. ದೂತಾವಾಸ ಕಚೇರಿಗೆ ಶಾಶ್ವತ ಕಟ್ಟಡ ನಿರ್ಮಾಣವಾಗುವರೆಗೆ ಖಾಸಗಿ ಹೋಟೆಲ್‌ನಲ್ಲೇ ಇರಲಿದೆ.

6 ತಿಂಗಳಲ್ಲಿ ವೀಸಾ ಸೇವೆ ಆರಂಭ

ಬೆಂಗಳೂರಿನಲ್ಲಿ ಅಮೆರಿಕ ದೂತಾವಾಸ ಕಚೇರಿ ಆರಂಭವಾಗಿ ಆರು ತಿಂಗಳ ಬಳಿಕ ವೀಸಾ ವಿತರಣೆಗೆ ಚಾಲನೆ ಸಿಗಲಿದೆ. ಪ್ರಸ್ತುತ, ದೇಶದ ಮಹಾನಗರಗಳಾದ ಚೆನ್ನೈ, ಮುಂಬೈ, ಹೈದರಾಬಾದ್‌, ನವದೆಹಲಿ ಹಾಗೂ ಕೊಲ್ಕತ್ತಾದಲ್ಲಿವೆ. ಐಟಿ ಕ್ಷೇತ್ರಕ್ಕೆ ಶೇ 40 ರಷ್ಟು ಕೊಡುಗೆ ನೀಡುತ್ತಿದ್ದರೂ ಬೆಂಗಳೂರಿನಲ್ಲಿ ಈವರೆಗೆ ಅಮೆರಿಕ ದೂತಾವಾಸ ಕಚೇರಿ ಆರಂಭವಾಗಿರಲಿಲ್ಲ.

ಮೈಸೂರು ಪಾಕ್ ತಿನ್ನಿಸಿ ಅಭಿನಂದನೆ

ಬೆಂಗಳೂರಿನಲ್ಲಿ ಅಮೆರಿಕ ದೂತಾವಾಸ ಕಚೇರಿ ಆರಂಭಿಸಲು ನೆರವಾದ ವಿದೇಶಾಂಗ ಸಚಿವ ಜೈ ಶಂಕರ್ ಅವರಿಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಮೈಸೂರು ಪಾಕ್ ತಿನ್ನಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ರಾಜ್ಯದ ಬಹುದಿನಗಳ ಬೇಡಿಕೆಯಾಗಿದ್ದ ಅಮೆರಿಕ ದೂತಾವಾಸ ಕಚೇರಿ ಸ್ಥಾಪನೆಯಲ್ಲಿ ವಿದೇಶಾಂಗ ಸಚಿವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ಪ್ರಯತ್ನದಿಂದಲೇ ದೂತಾವಾಸ ಕಚೇರಿಗೆ ಬೆಂಗಳೂರಿಗೆ ಬರುವಂತಾಯಿತು ಎಂದು ಹೇಳಿದ್ದಾರೆ. ತೇಜಸ್ವಿ ಸೂರ್ಯ ಹೇಳಿಕೆ ಅಡಳಿತ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು 2019 ರಲ್ಲಿ ಅಮೆರಿಕ ದೂತಾವಾಸ ಕಚೇರಿ ಆರಂಭಿಸಲು ಕ್ರಮ ಕೈಗೊಳ್ಳುವಂತೆ ವಿದೇಶಾಂಗ ಸಚಿವರಿಗೆ ಮನವಿ ಮಾಡಿದ್ದರು.

ವ್ಯಕ್ತಿಗತ ಆದ್ಯತೆ ಮೇಲೆ ಕಚೇರಿ ತೆರೆಯಲ್ಲ

ಬೆಂಗಳೂರಿನಲ್ಲಿ ಅಮೆರಿಕ ದೂತಾವಾಸ ಕಚೇರಿ ಸ್ಥಾಪನೆಯು ಪ್ರಧಾನಿ ಹಾಗೂ ವಿದೇಶಾಂಗ ಸಚಿವರಿಂದಲೇ ಆಗಿದೆ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರಗಳ ಅವಧಿಯಲ್ಲಿ ನಗರದ ಆರ್ಥಿಕ ಪ್ರಾಮುಖ್ಯತೆಯ ಆಧಾರದ ಮೇಲೆ ದೂತಾವಾಸ ಕಚೇರಿಗಳನ್ನು ತೆರೆಯಲಾಗುತ್ತದೆಯೇ ವಿನಃ ಬಿಜೆಪಿ ಸಂಸದರು, ವಿದೇಶಾಂಗ ಸಚಿವರ ಇಚ್ಛೆ ಅಥವಾ ವೈಯಕ್ತಿಕ ಆದ್ಯತೆಗಳ ಮೇಲೆ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.

ಅಮೆರಿಕ ಹಾಗೂ ಭಾರತ ಪರಸ್ಪರ ಲಾಭದಾಯಕ ಹೂಡಿಕೆ ಮತ್ತು ವ್ಯಾಪಾರದಿಂದಾಗಿ ಅಭಿವೃದ್ಧಿ ಹೊಂದುತ್ತಿರುವ ಪರಿಸರ ವ್ಯವಸ್ಥೆ ಹೊಂದಿವೆ. ರಾಯಭಾರ ಕಚೇರಿಗಳಿಗೆ ಬೆಂಗಳೂರು ಯಾವಾಗಲೂ ಪ್ರಾಶಸ್ತ್ಯ ಸ್ಥಳವಾಗಿದೆ. ಬೆಂಗಳೂರಿನಲ್ಲಿ ದೂತಾವಾಸ ಕಚೇರಿ ಆರಂಭದ ವಿಚಾರದಲ್ಲಿ ಬಿಜೆಪಿ ನಾಯಕರು, ಸಂಸದರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಅಮೆರಿಕ ದೂತಾವಾಸ ಕಚೇರಿ ಆರಂಭವಾಗಲು ಕಾರಣವೇನು, ಗುಜರಾತ್‌ಗೆ ದೂತಾವಾಸ ಕಚೇರಿ ಕೊಂಡೊಯ್ಯಲು ಜೈಶಂಕರ್ ಅವರ ಮೇಲೆ ಒತ್ತಡ ನಿಮ್ಮ ಪರಮೋಚ್ಛ ನಾಯಕನ (ನರೇಂದ್ರ ಮೋದಿ) ಕುರಿತು ತಿಳಿದುಕೊಳ್ಳಿ ಎಂದು ಬಿಜೆಪಿ ಸಂಸದರಿಗೆ ಟಾಂಗ್ ನೀಡಿದ್ದಾರೆ.

ಅಮೆರಿಕ ರಾಯಭಾರಿ ಭೇಟಿಯಾಗಿದ್ದ ಸಚಿವ

ಇನ್ನು ಸರ್ಕಾರದ ಸಚಿವ ಎಂ.ಪಿ. ಪಾಟೀಲ್ ಅವರು ಕೂಡ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಅಮೆರಿಕದ ದೂತಾವಾಸ ಕಚೇರಿ ತೆರೆಯುವಂತೆ 2024 ನವೆಂಬರ್ ತಿಂಗಲ್ಲಿ ಅಮೆರಿಕ ರಾಯಭಾರಿಯನ್ನು ಭೇಟಿಯಾಗಿ ಮನವಿ ಮಾಡಿದ್ದರು. ಚೆನ್ನೈನಲ್ಲಿರುವ ಅಮೆರಿಕ ದೂತಾವಾಸ ಕಚೇರಿಯ ಜನರಲ್ ಕ್ರಿಸ್ಟೋಫರ್ ಡಬ್ಲ್ಯೂ ಹಾಡ್ಜಸ್ ರೊಂದಿಗೆ ಮಾತುಕತೆ ನಡೆಸಿದ್ದರು.

ರಾಜ್ಯದಲ್ಲಿ ತಲೆ ಎತ್ತಿರುವ ಜ್ಞಾನ, ಆರೋಗ್ಯ ಹಾಗೂ ನಾವಿನ್ಯತೆ ಕೇಂದ್ರ (ಕ್ವಿನ್ ಸಿಟಿ, ಸ್ವಿಫ್ಟ್ ಸಿಟಿ, ಕೆಎಚ್ಐಆರ್ )ಗಳ ಕುರಿತು ವಿವರಿಸಿ, ಮನವರಿಕೆ ಮಾಡಿಕೊಟ್ಟಿದ್ದರು.

Read More
Next Story