
ಸುರಂಗ ರಸ್ತೆಗೆ ಸರ್ಕಾರ ಸಿದ್ದಪಡಿಸಿರುವ ನಕ್ಷೆ
ಸುರಂಗ ರಸ್ತೆಯಿಂದ ಬೆಂಗಳೂರಿಗೆ ಆಪತ್ತು, 2ನೇ ಹಂತದ ನಗರಾಭಿವೃದ್ಧಿಗೆ ಸರ್ಕಾರ ಕ್ರಮವಹಿಸಲಿ
ರಸ್ತೆಗೆ 300ರಿಂದ 400 ರೂ. ಟೋಲ್ ಕೊಡಬೇಕಾಗುತ್ತದೆ. ಹಣ ಕಟ್ಟಿಸಿಕೊಳ್ಳದೇ ರಸ್ತೆ ನೀಡುವುದಾದರೆ ಮಾಡಿ. ಸುರಂಗದ ಬದಲು ಭೂಮಿಯ ಮೇಲೆ ರಸ್ತೆ ಮಾಡುವುದು ಸೂಕ್ತ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ನಗರದ ಟ್ರಾಫಿಕ್ ನಿಯಂತ್ರಿಸಲು ರಾಜ್ಯ ಸರ್ಕಾರ ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ವರೆಗೆ ಅವಳಿ ಸುರಂಗ ರಸ್ತೆ ನಿರ್ಮಿಸುವುದರಿಂದ ಬೆಂಗಳೂರಿಗೆ ಆಪತ್ತು ಎದುರಾಗಲಿದೆ ಎಂಬ ವರದಿಗಳಿದ್ದರೂ ಡಿಸಿಎಂ ಡಿ.ಕೆ. ಶಿವಕುಮಾರ್ ಕಾಮಗಾರಿ ಆರಂಭಿಸುತ್ತೇವೆ ಎಂದು ಹೇಳಿಕೆ ನೀಡಿರುವುದು ಅಕ್ಷಮ್ಯ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.
ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುರಂಗ ಯೋಜನೆ ವಿರುದ್ಧ ಈಗಾಗಲೇ ಹಲವು ಸಂಸ್ಥೆಗಳು ಹಾಗೂ ಪರಿಸರವಾದಿಗಳು ಧ್ವನಿ ಎತ್ತಿದ್ದಾರೆ. ಅದೇನು ಜನೋಪಯೋಗಿ ಯೋಜನೆಯಲ್ಲ. ರಸ್ತೆಗೆ 300ರಿಂದ 400 ರೂ. ಟೋಲ್ ಕೊಡಬೇಕಾಗುತ್ತದೆ. ಹಣ ಕಟ್ಟಿಸಿಕೊಳ್ಳದೇ ರಸ್ತೆ ನೀಡುವುದಾದರೆ ಮಾಡಿ. ಸುರಂಗದ ಬದಲು ಭೂಮಿಯ ಮೇಲೆ ರಸ್ತೆ ಮಾಡುವುದು ಸೂಕ್ತವಿದ್ದು, ಈ ಕುರಿತು ಸರ್ಕಾರ ಗಮನಿಸಲಿ ಎಂದು ಒತ್ತಾಯಿಸಿದರು.
ಬೆಂಗಳೂರು ಬೆಳೆಸುವುದನ್ನು ನಿಲ್ಲಿಸಿ ಎರಡನೇ ಹಂತದ ನಗರಗಳಾದ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರವನ್ನು ಬೆಳೆಸಲು ಸರ್ಕಾರ ಯೋಜನೆ ರೂಪಿಸಬೇಕು. ಆ ಪ್ರದೇಶಗಳಲ್ಲಿ ಜನರು ನಿಲ್ಲುವಂತೆ ಕೈಗಾರಿಕೆಗಳನ್ನು ಸ್ಥಾಪಿಸಿ. ತಲಾದಾಯದದಲ್ಲಿ ಕಲಬುರಗಿಯ ಸ್ಥಿತಿ ಏನಾಗಿದೆ? ತಲಾದಾಯದಲ್ಲಿ ಅತ್ಯಂತ ಹಿಂದುಳಿದಿದೆ. ಉತ್ತರ ಕರ್ನಾಟಕದಲ್ಲಿಯೂ ಕೈಗಾರಿಕೆಗಳನ್ನು ಸ್ಥಾಪಿಸುವಂತೆ ಸಚಿವ ಎಂ.ಬಿ. ಪಾಟೀಲರಿಗೆ ಮನವಿ ಮಾಡಿದರು.
ಆದಾಯದ ಬಗ್ಗೆ ಸಂಘದ ಕಚೇರಿಗೆ ಹೋಗಿ ಪ್ರಶ್ನಿಸಲಿ
ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ದೇಣಿಗೆ ಎಲ್ಲಿಂದ ಬರುತ್ತದೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದನ್ನು ಇಲಾಖೆ ಪ್ರಶ್ನಿಸಲಿ. ಇಡಿ, ಆದಾಯ ತೆರಿಗೆ ಇಲಾಖೆಯವರು ಕೇಳಲಿ, ಎಲ್ಲೋ ಕುಳಿತು ಕೇಳುವವರಿಗೆ ಅವರು ಉತ್ತರ ಕೊಡುತ್ತ ಕೂರುತ್ತಾರಾ ? ಅವರು ಆರ್‌ಎಸ್‌ಎಸ್ ಕಚೇರಿಗೆ ಹೋಗಿ ಪ್ರಶ್ನಿಸುವುದು ಒಳ್ಳೆಯದು. ಸಂಘ ನೋಂದಣಿ ಆಗಬೇಕೆಂದು ಕಾನೂನಿನಲ್ಲಿ ಇಲ್ಲ. ತಮ್ಮ ಇಲಾಖೆ ಕೆಲಸ ಮಾಡಲಾರದೇ ಜನರನ್ನು ದಾರಿ ತಪ್ಪಿಸಲು ಈ ರೀತಿ ಅನ್ಯ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ 50 ವರ್ಷ ರಾಜ್ಯ ಆಳಿಲ್ಲ
ಕಾಂಗ್ರೆಸ್‌ನವರು 63 ವರ್ಷ ಈ ರಾಜ್ಯವನ್ನು ಆಳಿದ್ದಾರೆ. ಬೆಂಗಳೂರು ನಿರ್ಮಾತೃ ಕೆಂಪೇಗೌಡರು 4 ಸ್ತೂಪಗಳನ್ನು ನಿರ್ಮಿಸಿ ಅಲ್ಲಿನವರೆಗೆ ಬೆಂಗಳೂರನ್ನು ವಿಸ್ತರಿಸಲು ಯೋಜಿಸಿದ್ದರು. ಅದಕ್ಕಿಂತ ಹೆಚ್ಚಾದರೆ ನಗರಕ್ಕೆ ಆಪತ್ತಿದೆ ಎಂಬ ಆಶಯ ಅವರಲ್ಲಿತ್ತು. ಈಗ ದೇವನಹಳ್ಳಿ, ಆನೇಕಲ್, ಹೊಸಕೋಟೆ ಬೆಂಗಳೂರೇ ಆಗಿವೆ. ಸ್ವಲ್ಪ ದಿನ ಹೋದರೆ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಎಲ್ಲೆಡೆ ಮಾಲಿನ್ಯ, ಸಂಚಾರ ದಟ್ಟಣೆ ಉಂಟಾಗುತ್ತದೆ. ಆದ್ದರಿಂದ ನಾವು ಇಂದೇ ಯೋಚಿಸಬೇಕಿದೆ ಎಂದು ಸಲಹೆ ನೀಡಿದರು.
ಸಂಸದರದ್ದು ದುಡ್ಡು ತರುವ ಕೆಲಸವಲ್ಲ
ಸಂಸದರದ್ದು ದುಡ್ಡು ತರುವ ಕೆಲಸವಲ್ಲ. ಅವರೇನು ಏಜೆಂಟರೇ? ರಿಯಲ್ ಎಸ್ಟೇಟ್ ಮಾಡುತ್ತಾರಾ? ರಾಜ್ಯ ಸರ್ಕಾರದ ಎಲ್ಲಾ ಸಚಿವರು ಮೊದಲು ರಾಜೀನಾಮೆ ನೀಡಿದರೆ ನಂತರ ಸಂಸದರು ಕೇಂದ್ರದಿಂದ ಹಣ ತರುತ್ತಾರೆ. ಗಾಳಿಯಲ್ಲಿ ಗುಂಡು ಹೊಡೆಯುತ್ತ ಕುಳಿತ ನಿಮ್ಮನ್ನು ಈ ರಾಜ್ಯದ ಜನರು ಇನ್ನೂ ಎರಡೂವರೆ ವರ್ಷ ಹೇಗೆ ಸಹಿಸಿಕೊಳ್ಳಬೇಕು ಎಂದು ಪ್ರಶ್ನಿಸಿದರು.
ಗುಜರಾತ್ ಸರ್ಕಾರದಿಂದ ಪಾಠ ಕಲಿಯಿರಿ
ಕಾಂಗ್ರೆಸ್ ನಾಯಕರು ಹಲವು ತಿಂಗಳುಗಳಿಂದ ಏನೇ ಪ್ರಶ್ನೆ ಮಾಡಿದರೂ ಸಂಪುಟ ಪುನಾರಚನೆ ವಿಷಯ ತರುತ್ತಾರೆ. ಗುಜರಾತ್ ಸರ್ಕಾರವನ್ನು ನೋಡಿ ಕಲಿಯಿರಿ. ಬೆಳಿಗ್ಗೆ ರಾಜೀನಾಮೆ ಕೊಟ್ಟರು. ಮರುದಿನ ಹೊಸ ಸರ್ಕಾರವೇ ಬಂತು ಎಂದರು.

