ನ್ಯಾಯಾಧೀಶರ ಮೊಬೈಲ್ ಕಸಿದು ಪರಾರಿಯಾದ ಕಳ್ಳ
ಹೈಗ್ರೌಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಕ್ರೆಸೆಂಟ್ ರಸ್ತೆಯಲ್ಲಿ ಡಿ.5 ರಂದು ಸಿವಿಲ್ ನ್ಯಾಯಾಧೀಶರಾದ ಮಹಾಂತೇಶ ಮಠದ ಅವರು ವಾಯುವಿಹಾರ ನಡೆಸುತ್ತಿದ್ದಾಗ ಕಳ್ಳನೊಬ್ಬ ಮೊಬೈಲ್ ಕಸಿದು ಪರಾರಿಯಾಗಿದ್ದಾನೆ.
ಬೆಂಗಳೂರಿನಲ್ಲಿ ದಿನನಿತ್ಯ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಏನೇ ಕ್ರಮ ಕೈಗೊಂಡರೂ ದುಷ್ಕೃತ್ಯಗಳು ತಹಬದಿಗೆ ಬರುತ್ತಿಲ್ಲ. ಕಳ್ಳತನ, ದರೋಡೆ, ಮಾನಭಂಗ, ಕೊನೆ ಇತ್ಯಾದಿ ಘಟನೆಗಳು ನಿತ್ಯ ಒಂದಿಲ್ಲೊಂದು ಕಡೆ ನಡೆಯುತ್ತಲೇ ಇರುತ್ತವೆ.
ಜನಸಂದಣಿ ಪ್ರದೇಶಗಳಾದ ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಪಿಕ್‌ಪಾಕೆಟ್ ಕಳ್ಳರ ಹಾವಳಿಯಂತೂ ಸಾಮಾನ್ಯ. ಹಾಗೆಯೇ ಜನನಿಬಿಡ ಪ್ರದೇಶಗಳಲ್ಲಿ ಸರಗಳ್ಳತನ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಆದರೆ, ಇಲ್ಲೊಂದು ಕಡೆ ವಾಯುವಿಹಾರ ನಡೆಸುತ್ತಿದ್ದ ನ್ಯಾಯಾಧೀಶರ ಬಳಿಯೇ ದ್ವಿಚಕ್ರ ವಾಹನದಲ್ಲಿ ಬಂದ ಕಳ್ಳನೊಬ್ಬ ಮೊಬೈಲ್ ಕಸಿದು ಪರಾರಿಯಾದ ಘಟನೆ ನಡೆದಿದೆ.
ಹೈಗ್ರೌಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಕ್ರೆಸೆಂಟ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಡಿ.5ರಂದು ರಾತ್ರಿ 9.30ರ ಸುಮಾರಿಗೆ ಸಿವಿಲ್ ನ್ಯಾಯಾಧೀಶರಾದ ಮಹಾಂತೇಶ ಮಠದ ಅವರು ಕ್ರೆಸೆಂಟ್ ರಸ್ತೆಯಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮುಂದೆ ಎದುರು ವಾಯುವಿಹಾರ ನಡೆಸುತ್ತಿದ್ದಾಗ ಹಿಂದಿನಿಂದ ದ್ವಿಚಕ್ರ ವಾಹನ ಸವಾರ ₹15 ಸಾವಿರ ಮೌಲ್ಯದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಏಕಾಏಕಿ ಕಳ್ಳನ ಈ ಕೃತ್ಯಕ್ಕೆ ನ್ಯಾಯಾಧೀಶರೇ ಗಾಬರಿಯಾಗಿದ್ದಾರೆ. ಈ ಸಂಬಂಧ ನ್ಯಾಯಾಧೀಶರು ನೀಡಿದ ದೂರಿನ ಮೇರೆಗೆ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.