ರಾಜ್ಯದಲ್ಲಿ ಒಂದೇ ದಿನ 15 ಮಸೂದೆಗಳಿಗೆ ಅಧಿಸೂಚನೆ ಪ್ರಕಟಿಸಿದ ರಾಜ್ಯ ಸರ್ಕಾರ
x

ರಾಜ್ಯದಲ್ಲಿ ಒಂದೇ ದಿನ 15 ಮಸೂದೆಗಳಿಗೆ ಅಧಿಸೂಚನೆ ಪ್ರಕಟಿಸಿದ ರಾಜ್ಯ ಸರ್ಕಾರ

ರಾಜ್ಯದ ಆಡಳಿತ ಮತ್ತು ಅಭಿವೃದ್ಧಿ ದೃಷ್ಟಿಯಿಂದ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಿದ ಹಲವು ಮಸೂದೆಗಳಿಗೆ ತ್ವರಿತ ಅನುಮೋದನೆ ಪಡೆದು, ಅಂಗೀಕರಿಸಲಾಗಿದೆ.


ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ರಾಜ್ಯ ಸರ್ಕಾರ ಒಟ್ಟು 39 ಮಸೂದೆಗಳನ್ನು ಅಂಗೀಕರಿಸಿದೆ. ಅವುಗಳಲ್ಲಿ 15 ಮಸೂದೆಗಳಿಗೆ ಸಂಬಂಧಿಸಿದಂತೆ ಸೆ.12 ರಂದು ಒಂದೇ ದಿನ ಅಧಿಸೂಚನೆ ಹೊರಡಿಸಿ, ರಾಜ್ಯ ಪತ್ರದಲ್ಲಿ ಪ್ರಕಟಿಸುವ ಮೂಲಕ ಹೊಸ ದಾಖಲೆ ಬರೆದಿದೆ.

ರಾಜ್ಯದ ಆಡಳಿತ ಮತ್ತು ಅಭಿವೃದ್ಧಿ ದೃಷ್ಟಿಯಿಂದ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಿದ ಹಲವು ಮಸೂದೆಗಳಿಗೆ ತ್ವರಿತ ಅನುಮೋದನೆ ಪಡೆದು, ಅಂಗೀಕರಿಸಲಾಗಿದೆ. ಒಟ್ಟು 39 ಮಸೂದೆಗಳಲ್ಲಿ ಎರಡು ಮಸೂದೆಗಳನ್ನು ಜಂಟಿ ಆಯ್ಕೆ ಸಮಿತಿಯ ಪರಿಶೀಲನೆಗೆ ಒಪ್ಪಿಸಿದೆ. ಕೊಡಗಿಗೆ ಸಂಬಂಧಿಸಿದಂತೆ ತಯಾರಿಸಿದ್ದ "ಜಮಾಪಣೆ ಭೂಮಿ ಪಹಣಿ ವಿಧೆಯಕ" ಹಾಗೂ ಚಿನ್ನಸ್ವಾಮಿ ಕಾಲ್ತುಳಿದ ದುರಂತದ ಹಿನ್ನೆಲೆಯಲ್ಲಿ ಜಾರಿಗೆ ತರಲು ಉದ್ದೇಶಿಸಿದ್ದ '2025ನೇ ಸಾಲಿನ ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮ ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿ ನಿರ್ವಹಣೆ) ವಿಧೇಯಕ'ವನ್ನು ಸದನ ಆಯ್ಕೆ ಸಮಿತಿಯ ಪರಿಶೀಲನೆಗೆ ವಹಿಸಲಾಗಿದೆ.

ಎರಡೂ ಮಸೂದೆಗಳು ಹೇಳುವುದೇನು?

ಕೊಡಗು ಜಿಲ್ಲೆಯ ಜಮ್ಮಾ ಬಾಣೆ ಭೂಮಿಗೆ ಸಂಬಂಧಿಸಿದ ವಿಧೇಯಕವನ್ನು ಸಚಿವರಾದ ಹೆಚ್.ಕೆ. ಪಾಟೀಲ್ ವಿಧಾನಸಭೆಯಲ್ಲಿ ಮಂಡಿಸಿದ್ದರು. 1964ರ ಕರ್ನಾಟಕ ಕಂದಾಯ ಕಾನೂನಿನ ಅಂಶಗಳು ಕೊಡಗು ಜನರಿಗೆ ಸಮಸ್ಯೆ ಉಂಟು ಮಾಡಿರುವುದರಿಂದ ಈ ತಿದ್ದುಪಡಿ ಅಗತ್ಯ. ಈ ವಿಧೇಯಕದ ಸಮಗ್ರ ಅಧ್ಯಯನಕ್ಕಾಗಿ ಮತ್ತು ತಿದ್ದುಪಡಿ ಪ್ರಕ್ರಿಯೆಗಾಗಿ ವಿಧಾನಸಭೆ ಆಯ್ಕೆ ಸಮಿತಿ ರಚನೆಗೆ ಒಪ್ಪಿಗೆ ನೀಡಲಾಗಿತ್ತು.

ಅದೇ ರೀತಿ ಚಿನ್ನಸ್ವಾಮಿ ಕಾಲ್ತುಳಿತ ದುರಂತದ ಬಳಿಕ ರಾಜ್ಯ ಸರ್ಕಾರವು ರಾಜಕೀಯ ಸಭೆ, ದೊಡ್ಡ ಸಮಾರಂಭಗಳಲ್ಲಿ ಜನಸಂದಣಿ ನಿಯಂತ್ರಿಸುವ ಸಲುವಾಗಿ '2025ನೇ ಸಾಲಿನ ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮಗಳು ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿಯ ನಿರ್ವಹಣೆ) ವಿಧೇಯಕ'ವನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿತ್ತು.

ಆದರೆ, ವಿಧೇಯಕವು ಗೊಂದಲಗಳಿಂದ ಕೂಡಿದ್ದರಿಂದ ಸ್ಪಷ್ಟನೆ ಬೇಕಿದೆ ಎಂಬ ಪ್ರತಿಪಕ್ಷಗಳ ಒತ್ತಾಯದ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ಸದನ ಸಮಿತಿಗೆ ಒಪ್ಪಿಸಲು ಸ್ಪೀಕರ್‌ ಸಮ್ಮತಿಸಿದ್ದರು.

ಧಾರ್ಮಿಕ, ಕೌಟುಂಬಿಕ ಹಾಗೂ ಶೈಕ್ಷಣಿಕ, ಸರ್ಕಾರಿ ಸಮಾರಂಭಗಳಿಗೆ ಈ ಕಾಯ್ದೆಯಿಂದ ವಿನಾಯ್ತಿ ನೀಡಲಾಗಿದೆ. ಇದನ್ನು ಹೊರತುಪಡಿಸಿ ರಾಜಕೀಯ ಸಭೆ, ಪ್ರತಿಭಟನೆಗಳು ಹಾಗೂ ದೊಡ್ಡ ಸಮಾರಂಭಗಳು ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ ಎಂದು ಗೃಹ ಸಚಿವರು ಹೇಳಿದ್ದರು. ದೊಡ್ಡ ಸಭೆಗಳಲ್ಲಿ ಜೀವಹಾನಿಯಾದರೆ ಸಮಾರಂಭ, ಸಭೆಯ ಆಯೋಜಕರಿಗೆ ಜೀವಾವಧಿ ಸೇರಿದಂತೆ ಜೈಲು ಶಿಕ್ಷೆ, ಜುಲ್ಮಾನೆ ವಿಧಿಸಲು ಕಾಯ್ದೆಯಲ್ಲಿ ಅವಕಾಶ ಒದಗಿಸಲಾಗಿದೆ.

ಇನ್ನು 37 ಮಸೂದೆಗಳ ಪೈಕಿ 32 ಮಸೂದೆಗಳಿಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋತ್‌ ಅವರು ಅಂಕಿತ ಹಾಕಿರುವ ಹಿನ್ನೆಲೆಯಲ್ಲಿ ಅಧಿಸೂಚನೆ ಹೊರಡಿಸಿ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.

ಅದರಂತೆ ಸೆ.2 ರಂದು 2025ರ ಕರ್ನಾಟಕ ಸರಕು ಹಾಗೂ ಸೇವಾ ತೆರಿಗೆ ತಿದ್ದುಪಡಿ ಮಸೂದೆ, ಕರ್ನಾಟಕ ವಿಯೋಗ ಮಸೂದೆಯನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿತ್ತು. ಸೆ.9 ರಂದು ಸರ್ಕಾರದ ಕಾನೂನುಗಳಿಗೆ ತಿದ್ದುಪಡಿ ತರುವ ಮೂರು ಮಸೂದೆಗಳನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಸಲ್ಲಿಸಲಾಗಿದೆ.

ಒಂದು ಮಸೂದೆ ರಾಜ್ಯಪಾಲರ ಬಳಿ ಬಾಕಿ ಇದ್ದು, ಇನ್ನೊಂದು ಒಂದು ಮಸೂದೆಯನ್ನು ಶೀಘ್ರದಲ್ಲಿಯೇ ರಾಜ್ಯಪಾಲರಿಗೆ ಸಲ್ಲಿಸಲು ಸಿದ್ಧತೆ ನಡೆದಿದೆ. ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣೆ ತಿದ್ದುಪಡಿ ಮಸೂದೆ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ಮಸೂದೆ ಸೇರಿ ೯ ಮಸೂದೆಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿತ್ತು.

ಸೆ.10 ರಂದು ಕರ್ನಾಟಕ ಅಗ್ನಿ ಶಾಮಕ ತಿದ್ದುಪಡಿ ಮಸೂದೆ ಸೇರಿ ಐದು ಮಸೂದೆಗಳನ್ನು ಪ್ರಕಟ ಮಾಡಲಾಗಿತ್ತು.

ಒಂದೇ ದಿನ 15 ಮಸೂದೆಗಳಿಗೆ ಅಧಿಸೂಚನೆ

ಸೆ.12 ರಂದು ಒಂದೇ ದಿನದಲ್ಲಿ 15 ಮಸೂದೆಗಳನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿ ದಾಖಲೆ ಬರೆಯಲಾಗಿದೆ. ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಮಸೂದೆ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆ, ಕರ್ನಾಟಕ ಪ್ಲಾಟ್‌ಫಾರಂ ಆಧರಿತ ಗಿಗ್‌ ಕಾರ್ಮಿಕರ ಮಸೂದೆ, ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕ ಸೇರಿ ಒಟ್ಟು 15ಮಸೂದೆಗಳನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.

Read More
Next Story