
ಚಾಮುಂಡಿ ಬೆಟ್ಟದ ಶಿವಾರ್ಚಕ ವಿ. ರಾಜು ಹಠಾತ್ ನಿಧನರಾಗಿದ್ದಾರೆ.
ಚಾಮುಂಡಿ ಬೆಟ್ಟದ ಶಿವಾರ್ಚಕ ವಿ. ರಾಜು ನಿಧನ: ದೇವಿಯ ದರ್ಶನಕ್ಕೆ ತಾತ್ಕಾಲಿಕ ನಿರ್ಬಂಧ
ವಿ. ರಾಜು ಹಠಾತ್ ನಿಧನದಿಂದಾಗಿ ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ದೇವಿಯ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ.ಮಧ್ಯಾಹ್ನ ಅಂತ್ಯಸಂಸ್ಕಾರ ಮುಗಿದ ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಎರಡನೇ ದಿನದಂದೇ ಚಾಮುಂಡಿ ಬೆಟ್ಟದಲ್ಲಿ ದುಃಖದ ನಡೆದಿದೆ. ಚಾಮುಂಡೇಶ್ವರಿ ದೇವಾಲಯದ ಶಿವಾರ್ಚಕರಾದ ವಿ. ರಾಜು ಅವರು ಮಂಗಳವಾರ ನಿಧನರಾಗಿದ್ದಾರೆ.
ಅರ್ಚಕರ ಅನಿರೀಕ್ಷಿತ ನಿಧನದ ಹಿನ್ನೆಲೆಯಲ್ಲಿ, ನವರಾತ್ರಿ ಸಂಭ್ರಮದಲ್ಲಿದ್ದ ಚಾಮುಂಡಿ ಬೆಟ್ಟದಲ್ಲಿ ದೇವಿ ದರ್ಶನವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ನವರಾತ್ರಿಯ ಎರಡನೇ ದಿನವಾದ ಇಂದು ತಾಯಿ ಚಾಮುಂಡೇಶ್ವರಿಯನ್ನು 'ಬ್ರಹ್ಮಚಾರಿಣಿ' ಅವತಾರದಲ್ಲಿ ವಿಶೇಷವಾಗಿ ಅಲಂಕರಿಸಲಾಗಿತ್ತು. ದೇವಿ ದರ್ಶನಕ್ಕಾಗಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದುಬರುತ್ತಿತ್ತು. ಆದರೆ, ಅರ್ಚಕರ ನಿಧನದ ಕಾರಣ ದಿಢೀರ್ ದರ್ಶನವನ್ನು ನಿರ್ಬಂಧಿಸಿದ್ದರಿಂದ ಸಾವಿರಾರು ಭಕ್ತರಿಗೆ ನಿರಾಸೆಯಾಯಿತು. ಅರ್ಚಕರ ಅಂತ್ಯಸಂಸ್ಕಾರದ ವಿಧಿವಿಧಾನಗಳು ಪೂರ್ಣಗೊಂಡ ನಂತರ, ದೇವಾಲಯದಲ್ಲಿ ಶುದ್ಧೀಕರಣ ಕಾರ್ಯಗಳನ್ನು ನಡೆಸಿ, ಮಧ್ಯಾಹ್ನದ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸೋಮವಾರವಷ್ಟೇ (ಸೆ. 22) ಅಂತರರಾಷ್ಟ್ರೀಯ 'ಬುಕರ್' ಪ್ರಶಸ್ತಿ ಪುರಸ್ಕೃತೆ, ಸಾಹಿತಿ ಬಾನು ಮುಷ್ತಾಕ್ ಅವರು ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದ್ದರು. ಇದರ ಬೆನ್ನಲ್ಲೇ ಈ ಘಟನೆ ನಡೆದಿದೆ.
ಇದೇ ವೇಳೆ, ಮೈಸೂರು ಅರಮನೆಯಲ್ಲಿ ದಸರಾ ಅಂಗವಾಗಿ ಎರಡನೇ ದಿನದ ಖಾಸಗಿ ದರ್ಬಾರ್ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದವು. ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸುಗಳಿಗೆ ಸಾಂಪ್ರದಾಯಿಕ ಪೂಜೆಗಳನ್ನು ಸಲ್ಲಿಸಲಾಯಿತು. ನಂತರ, ಅರಮನೆ ಆವರಣದಲ್ಲಿರುವ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.