ಸುದ್ದಿವಾಹಿನಿಗೆ ಸಂಕಷ್ಟ | ನಟಿ ರಮ್ಯಾ ಮಾನನಷ್ಟ ಮೊಕದ್ದಮೆ ರದ್ದುಪಡಿಸಲು ಸುಪ್ರೀಂ ನಕಾರ
x
ನಟಿ ರಮ್ಯಾ

ಸುದ್ದಿವಾಹಿನಿಗೆ ಸಂಕಷ್ಟ | ನಟಿ ರಮ್ಯಾ ಮಾನನಷ್ಟ ಮೊಕದ್ದಮೆ ರದ್ದುಪಡಿಸಲು ಸುಪ್ರೀಂ ನಕಾರ

ಬೆಟ್ಟಿಂಗ್‌ ಮತ್ತು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ದೂರುದಾರರ ಹೆಸರನ್ನು ಪದೇಪದೆ ಉಲ್ಲೇಖಿಸಲಾಗಿದೆ ಮತ್ತು ಸುದ್ದಿ ಪ್ರಸಾರ ಮಾಡುವಾಗ ಅವರ ಪೋಟೊಗಳು ಮತ್ತು ವಿಡಿಯೊಗಳನ್ನು ತೋರಿಸಲಾಗಿದೆ.


ಕ್ರಿಕೆಟ್ ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್‌ನಲ್ಲಿ ನಟಿ ರಮ್ಯಾ ಅವರು ಭಾಗಿಯಾಗಿದ್ದಾರೆ ಎಂದು ಏಷಿಯಾನೆಟ್ ಚಾನೆಲ್ ಭಿತ್ತರಿಸಿದ್ದ ಸುದ್ದಿಗೆ ಸಂಬಂಧಿಸಿದಂತೆ ನಟಿ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ರದ್ದುಪಡಿಸುವಂತೆ ಕೋರಿ ಏಷಿಯಾನೆಟ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ. ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ. ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠವು, ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು.

"ಬೆಟ್ಟಿಂಗ್‌ ಮತ್ತು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ದೂರುದಾರರ ಹೆಸರನ್ನು ಪದೇಪದೆ ಉಲ್ಲೇಖಿಸಲಾಗಿದೆ ಮತ್ತು ಸುದ್ದಿ ಪ್ರಸಾರ ಮಾಡುವಾಗ ಅವರ ಪೋಟೊಗಳು ಮತ್ತು ವಿಡಿಯೊಗಳನ್ನು ತೋರಿಸಲಾಗಿದೆ. ನಾವು ಇದನ್ನು ಹೇಗೆ ರದ್ದುಗೊಳಿಸಬಹುದು?" ಎಂದು ನ್ಯಾಯಾಪೀಠ ಪ್ರಶ್ನೆ ಮಾಡಿದೆ.

ಪ್ರಕರಣವನ್ನು ರದ್ದುಪಡಿಸುವಂತೆ ಸುದ್ದಿವಾಹಿನಿಯು ಈ ಹಿಂದೆ ರಾಜ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆದರೆ, ಅರ್ಜಿಯ ವಿಚಾರಣೆ ನಡೆಯುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದ ಹೈಕೋರ್ಟ್, ಸುದ್ದಿವಾಹಿನಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು. ಇದಾದ ನಂತರ ಸುದ್ದಿವಾಹಿನಿಯು ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಿತ್ತು.

2013 ಮೇ 31ರಂದು ಸುದ್ದಿವಾಹಿನಿಯಲ್ಲಿ ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಕನ್ನಡ ಚಿತ್ರರಂಗದ ನಟಿಯರು ಭಾಗಿಯಾಗಿದ್ದಾರೆ ಎಂದು ಸುದ್ದಿ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿ ರಮ್ಯಾ ಏಷ್ಯಾನೆಟ್ ನ್ಯೂಸ್ ಮತ್ತು ಇತರರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಸುದ್ದಿ ಪ್ರಸಾರ ಮಾಡುವಾಗ ನನ್ನ ಹೆಸರನ್ನು ಪದೇಪದೆ ಹೇಳಲಾಗಿದ್ದು, ನನ್ನ ಫೋಟೋಗಳು ಮತ್ತು ವೀಡಿಯೊಗಳನ್ನು ತೋರಿಸಲಾಗಿದೆ ಎಂದು ಅವರು ಆರೋಪಿಸಿದ್ದರು.

ತಮ್ಮ ವ್ಯಕ್ತಿತ್ವಕ್ಕೆ ಕುಂದುಂಟಾಗುವಂತೆ ಹಾಗೂ ಸಿನಿಮಾ ರಂಗದಲ್ಲಿ ನನ್ನ ಹೆಸರು ಹಾಳಾಗುವ ರೀತಿಯಲ್ಲಿ ಆಧಾರರಹಿತವಾಗಿ ಸುದ್ದಿ ಬಿತ್ತರ ಮಾಡಲಾಗಿದೆ ಎಂದು ರಮ್ಯಾ ಅವರು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದ್ದರು.

2016ರಲ್ಲಿ ಸುದ್ದಿವಾಹಿನಿಯ ಮುಖ್ಯಸ್ಥರಿಗೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸಮನ್ಸ್ ನೀಡಿತ್ತು.

Read More
Next Story