ಇಂದಿನಿಂದ ಹಾಸನಾಂಬ ದರ್ಶನ ಆರಂಭ : ನಾಳೆ ಸಾರ್ವಜನಿಕರಿಗೆ ಅವಕಾಶ
x

ಅಶ್ವೀಜ ಮಾಸದ ಮೊದಲ ಗುರುವಾರ ಹಾಸನಾಂಬ ದರ್ಶನ ಆರಂಭ

ಇಂದಿನಿಂದ ಹಾಸನಾಂಬ ದರ್ಶನ ಆರಂಭ : ನಾಳೆ ಸಾರ್ವಜನಿಕರಿಗೆ ಅವಕಾಶ

ಇಂದು ಅಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12 ಗಂಟೆ ನಂತರ ಅರಸು ವಂಶಸ್ಥರು ಬನ್ನಿ ವೃಕ್ಷ ಕಡಿದ ಬಳಿಕ ಶಾಸ್ತ್ರೋಕ್ತವಾಗಿ ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಾಗುತ್ತದೆ.


Click the Play button to hear this message in audio format

ಹಾಸನದ ಪ್ರಸಿದ್ಧ ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲನ್ನು ಇಂದು (ಅ.9) ತೆರೆಯಲಾಗುತ್ತಿದೆ. ಆದರೆ, ಸಾರ್ವಜನಿಕರಿಗೆ ನಾಳೆಯಿಂದ ದರ್ಶನ ಅವಕಾಶ ನೀಡಲಾಗಿದೆ.

ಈ ಬಾರಿ ಹಾಸನಾಂಬ ಜಾತ್ರಾ ಮಹೋತ್ಸವವು ಧಾರ್ಮಿಕ ಆಚರಣೆಗಳಷ್ಟೇ ಅಲ್ಲ, ಸಾಂಸ್ಕೃತಿಕ ಉತ್ಸವಗಳಿಗೂ ವೇದಿಕೆಯಾಗಿದೆ.

ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಕೃಷಿ ಮೇಳ, ಶ್ವಾನ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನರಂಜನೆಗೆ ಸಿದ್ಧವಾಗಿವೆ. ಸ್ಥಳೀಯ ಕಲಾವಿದರ ಪ್ರದರ್ಶನಗಳು ಜಾತ್ರೆಯ ಸೊಬಗು ಹೆಚ್ಚಿಸಲಿವೆ.

ಇಂದು ಅಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12 ಗಂಟೆ ನಂತರ ಅರಸು ವಂಶಸ್ಥರು ಬನ್ನಿ ವೃಕ್ಷ ಕಡಿದ ಬಳಿಕ ಶಾಸ್ತ್ರೋಕ್ತವಾಗಿ ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಿದ್ದಾರೆ.

ಮೊದಲ ದಿನ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಬಾಗಿಲು ತೆರೆದ ನಂತರ ಗರ್ಭಗುಡಿ ಸ್ವಚ್ಛತಾ ಮಾಡಲಾಗುವುದು. ಮಾರನೇ ಬೆಳಿಗ್ಗೆ 5 ಗಂಟೆಯಿಂದ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ನಾಳೆಯಿಂದ ಸಾರ್ವಜನಿಕರಿಗೆ ಅವಕಾಶ

ಜಾತ್ರಾ ಮಹೋತ್ಸವದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಭಕ್ತರಿಗೆ ಸುಗಮ ದರ್ಶನ ದೊರಕುವಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇವಾಲಯದ ಬಾಗಿಲು ಅಕ್ಟೋಬರ್ 23ರಂದು ಮುಚ್ಚಲಾಗುವುದು. ಮೊದಲ ಮತ್ತು ಕೊನೆಯ ದಿನ ಸಾರ್ವಜನಿಕರಿಗೆ ದರ್ಶನದ ಅವಕಾಶ ಇರುವುದಿಲ್ಲ. ಅಕ್ಟೋಬರ್ 10ರಿಂದ 22ರವರೆಗೆ ಭಕ್ತರು ದೇವಿಯ ದರ್ಶನ ಪಡೆಯಬಹುದು.

ಗೋಲ್ಡ್ ಪಾಸ್ ವ್ಯವಸ್ಥೆ

ಈ ಬಾರಿ ವಿಐಪಿ ಹಾಗೂ ವಿವಿಐಪಿ ಪಾಸ್ ವ್ಯವಸ್ಥೆಯನ್ನು ರದ್ದುಪಡಿಸಿ, ಹೊಸದಾಗಿ ಗೋಲ್ಡ್ ಪಾಸ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಒಂದು ಪಾಸ್ ಮೂಲಕ ಒಬ್ಬರಿಗೆ ಮಾತ್ರ ಬೆಳಿಗ್ಗೆ 7ರಿಂದ 10ರ ಒಳಗೆ ದರ್ಶನ ಅವಕಾಶ ಕಲ್ಪಿಸಲಾಗಿದೆ. ಗಣ್ಯರಿಗೆ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಸಮಯ ನೀಡಲಾಗಿದೆ.

ದರ್ಶನದ ವೇಳಾಪಟ್ಟಿ, ಟಿಕೆಟ್ ಬುಕ್ಕಿಂಗ್ ಹಾಗೂ ಸಂಬಂಧಿತ ಮಾಹಿತಿಯನ್ನು ವಾಟ್ಸ್‌ಆ್ಯಪ್‌ ಚಾಟ್‌ ಸೇವೆಯ ಮೂಲಕ ಪಡೆಯುವ ವ್ಯವಸ್ಥೆ ಮಾಡಲಾಗಿದೆ.

ಹಾಸನಾಂಬ ಜಾತ್ರೆ ಪ್ರವಾಸಿಗರಿಗೂ ಹಬ್ಬ

ಜಾತ್ರಾ ಅವಧಿಯಲ್ಲಿ ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಕೃಷಿ ಮೇಳ, ಶ್ವಾನ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜೊತೆಗೆ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಜಿಲ್ಲೆಯ ವಿವಿಧ ಆಕರ್ಷಕ ಸ್ಥಳಗಳಿಗೆ ಭೇಟಿ ನೀಡುವ 12 ಪ್ರವಾಸ ಪ್ಯಾಕೇಜ್‌ಗಳು ಸಿದ್ಧಗೊಂಡಿವೆ. ಈ ಬಾರಿ ಹೆಲಿ ಟೂರಿಸಂ ಕೂಡಾ ವಿಶೇಷ ಆಕರ್ಷಣೆಯಾಗಿದೆ.

ನೂರಾರು ಪೊಲೀಸರ ನೇಮಕ, ಕ್ಯಾಮೆರಾ ಕಣ್ಗಾವಲು

ಸಾವಿರಾರು ಭಕ್ತರು ಆಗಮಿಸುವ ಹಿನ್ನಲೆಯಲ್ಲಿ ಹಾಸನ ನಗರದಲ್ಲಿ ವ್ಯಾಪಕ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ದೇವಾಲಯ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ 2,000 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದ್ದು, 280ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಟ್ರಾಫಿಕ್ ನಿಯಂತ್ರಣಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಹೊಸ ವ್ಯವಸ್ಥೆಗಳು

ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಸುಮಾರು 120 ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದ್ದು, ಅವುಗಳ ನಿರ್ವಹಣೆಗೆ ಓರ್ವ ಸಿಬ್ಬಂದಿ ನಿಯೋಜಿಸಲಾಗಿದೆ. ಆರೋಗ್ಯ ಇಲಾಖೆ, ಅಗ್ನಿಶಾಮಕದಳ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.

ಸಾಂಪ್ರದಾಯಿಕ ಉಡುಗೆ ಕಡ್ಡಾಯ

ಹಾಸನಾಂಬ ದೇವಾಲಯಕ್ಕೆ ಬರುವವರು ಕಡ್ಡಾಯವಾಗಿ ಸಾಂಪ್ರದಾಯಿಕ ಉಡುಗೆಯಲ್ಲಿ ಬರಬೇಕು. ಅಲ್ಲದೆ, ಸಚಿವರು ಮತ್ತು ವಿಐಪಿಗಳು ತಮ್ಮ ವಾಹನಗಳನ್ನು ಐಬಿಯಲ್ಲಿ ನಿಲ್ಲಿಸಿ, ಜಿಲ್ಲಾಡಳಿತದ ವಾಹನದಲ್ಲಿ ದೇವಾಲಯಕ್ಕೆ ತೆರಳಬೇಕು. ದೇವಸ್ಥಾನದ ಸುತ್ತಲೂ ಪಾದರಕ್ಷೆಗಳನ್ನು ಬಿಡುವಂತಿಲ್ಲ ಈಗಾಗಲೇ ಹಾಸನ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Read More
Next Story