ಪತ್ನಿ ಕಿರುಕುಳದ ಮತ್ತೊಂದು ಪ್ರಕರಣ: ಟೆಕ್ಕಿ ಆತ್ಮಹತ್ಯೆ ಬೆನ್ನಲ್ಲೇ ರೈಲಿಗೆ ತಲೆಕೊಟ್ಟ ಪೊಲೀಸ್!
ಹುಳಿಮಾವು ಪೊಲೀಸ್ ಠಾಣೆಯಲ್ಲಿ ಸಿವಿಲ್ ಹೆಡ್ ಕಾನ್ಸ್‌ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎಚ್.ಎಚ್. ತಿಪ್ಪಣ್ಣ ಎಂಬುವರು ಬೈಯಪ್ಪನಹಳ್ಳಿ ಸಮೀಪದ ಹುಸಗೂರು ರೈಲ್ವೇ ಗೇಟ್ ಸಮೀಪ ಶುಕ್ರವಾರ ರಾತ್ರಿ 10.45ರ ಸುಮಾರಿಗೆ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ಪೊಲೀಸ್ ಹೆಡ್ ಕಾನ್ಸ್‌ಸ್ಟೇಬಲ್ ಒಬ್ಬರು ಪತ್ನಿಯ ಕಿರುಕುಳದಿಂದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಹುಳಿಮಾವು ಪೊಲೀಸ್ ಠಾಣೆಯಲ್ಲಿ ಸಿವಿಲ್ ಹೆಡ್ ಕಾನ್ಸ್‌ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎಚ್.ಎಚ್. ತಿಪ್ಪಣ್ಣ ಎಂಬುವರು ಬೈಯಪ್ಪನಹಳ್ಳಿ ಸಮೀಪದ ಹುಸಗೂರು ರೈಲ್ವೇ ಗೇಟ್ ಸಮೀಪ ಶುಕ್ರವಾರ ರಾತ್ರಿ 10.45ರ ಸುಮಾರಿಗೆ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನ ಹಂದಿಗನೂರು ಗ್ರಾಮದ ಎಚ್.ಎಸ್. ತಿಪ್ಪಣ್ಣ ಅವರು ಬೆಂಗಳೂರಿನ ನಾಗನಾಥಪುರದ ಕೃಷ್ಣಪ್ಪ ಲೇಔಟ್‌ನಲ್ಲಿ ವಾಸವಾಗಿದ್ದರು.
ಪತ್ನಿ ಹಾಗೂ ಆಕೆಯ ಕುಟುಂಬದವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಪ್ಪಣ್ಣ ಡೆತ್‌ನೋಟ್ ಬರೆದಿಟ್ಟಿದ್ದಾರೆ. "2024 ಡಿ.12 ರಂದು ನಮ್ಮ ಮಾವ ಯಮುನಪ್ಪ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ನೀನು ಸತ್ತು ಹೋದರೆ ನನ್ನ ಮಗಳು ಚೆನ್ನಾಗಿರುತ್ತಾಳೆ ಎಂದು ನಿಂದಿಸಿ ಬೆದರಿಕೆ ಹಾಕಿದ್ದಾರೆ" ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಶುಕ್ರವಾರ ರಾತ್ರಿ ಬೈಕಿನಲ್ಲಿ ಬಂದು ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಸಮೀಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ರೈಲ್ವೆ ಪೊಲೀಸರು, ಬೈಯಪ್ಪನಹಳ್ಳಿ ಹಾಗೂ ಹುಳಿಮಾವು ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಗೆ ತಿಪ್ಪಣ್ಣ ಅವರ ತಂದೆ ರತ್ನಪ್ಪ ನೀಡಿದ ದೂರಿನ ಆಧಾರದ ಮೇಲೆ ತಿಪ್ಪಣ್ಣ ಪತ್ನಿ ಹಾಗೂ ಮಾವನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬಿಎನ್ ಎಸ್ 108, 351(3),352 ರಡಿ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ತನಿಖೆ ಮುಂದಾಗಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿ.ವಿ.ರಾಮನ್ ಆಸ್ಪತ್ರೆ ಗೆ ರವಾನಿಸಲಾಗಿದೆ.
ಮಾರತ್ತಹಳ್ಳಿ ಸಮೀಪದ ಮಂಜುನಾಥ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ಟೆಕ್ಕಿ ಅತುಲ್ ಸುಭಾಷ್ ಎಂಬುವರು 24 ಪುಟಗಳ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ನಿ ಹಾಗೂ ಆಕೆಯ ಕುಟುಂಬದವರು ಕಿರುಕುಳ ನೀಡುತ್ತಿದ್ದಾರೆ. ನನಗೆ ನ್ಯಾಯ ಸಿಗುತ್ತಿಲ್ಲ ಎಂದು ದೂರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣ ದೇಶಾದ್ಯಂತ ತೀವ್ರ ಚರ್ಚೆಗೆ ಒಳಗಾಗಿದೆ. ಕೌಟಂಬಿಕ ದೌರ್ಜನ್ಯ ಕಾಯ್ದೆ, ವರದಕ್ಷಿಣೆ ವಿರೋಧಿ ಕಾಯ್ದೆಗಳ ಪರಿಷ್ಕರಣೆಗೆ ಒತ್ತಾಯಗಳು ಕೇಳಿಬರುತ್ತಿರುವಾಗಲೇ ನ್ಯಾಯ ಕೊಡಿಸುವ ಪೊಲೀಸ್ ಸಿಬ್ಬಂದಿಯೇ ಆತ್ಮಹತ್ಯೆಗೆ ಶರಣಾಗಿರುವುದು ಚರ್ಚೆಗೆ ಇನ್ನಷ್ಟು ಇಂಬು ನೀಡಿದೆ.