The number of remains found in Banglegudde is a mystery: Samples sent in gunny bags!
x
ಸಾಂದರ್ಭಿಕ ಚಿತ್ರ

ಧರ್ಮಸ್ಥಳ ಪ್ರಕರಣ | ಬಂಗ್ಲೆಗುಡ್ಡದಲ್ಲಿ ಮೂಳೆಗಳು ಪತ್ತೆ; ಗೋಣಿಚೀಲಗಳಲ್ಲಿ ರವಾನೆ!

ವಯಸ್ಸು, ಲಿಂಗ ಮತ್ತು ಡಿಎನ್‌ಎ ಪತ್ತೆ ಹಚ್ಚುವುದು ವಿಧಿವಿಜ್ಞಾನ ಇಲಾಖೆಯ ಮೊದಲ ಕೆಲಸ. ಆ ಬಳಿಕ ಮೂಳೆಗಳ ವ್ಯತ್ಯಾಸ ಗಮನಿಸಿ ಸಾವಿನ ಕಾರಣ ಏನೆಂದು ಮೇಲ್ನೋಟಕ್ಕೆ ನಿರ್ಧಾರ ಮಾಡಲಾಗುವುದು.


Click the Play button to hear this message in audio format

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಬಂಗ್ಲೆಗುಡ್ಡದಿಂದ ಮೂರು ಗೋಣಿ ಚೀಲಗಳು ಮತ್ತು ಇನ್ನೆರಡು ಪ್ಲಾಸ್ಟಿಕ್ ಪ್ಯಾಕೆಟ್‌ಗಳಲ್ಲಿ ಮೂಳೆಗಳು ಹಾಗೂ ಮಣ್ಣಿನ ಮಾದರಿಗಳನ್ನು ಎಸ್‌ಐಟಿ ಅಧಿಕಾರಿಗಳು ಬುಧವಾರ ಸಂಗ್ರಹಿಸಿದ್ದಾರೆ.

ಸಂಗ್ರಹಣೆ ಮಾಡಿದ ಮಾದರಿಗಳನ್ನು ವಿಧಿವಿಜ್ಞಾನ ಇಲಾಖೆ ಅಧಿಕಾರಿಗಳು ಕೊಂಡೊಯ್ದಿದ್ದಾರೆ. ಈ ಮಾದರಿಗಳನ್ನು ಪ್ರಾಥಮಿಕ ತನಿಖೆಗೆ ಒಳಪಡಿಸಿ ಮತ್ತೆ ಬೇರೆ ಪ್ರಯೋಗಾಲಯಕ್ಕೆ ಕಳಿಸಲಾಗುತ್ತದೆ. ಅದಕ್ಕೂ ಮೊದಲು ಲೇಬಲ್ ಮಾಡುವ ಕೆಲಸ ನಡೆಯಲಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

"ಈ ಅವಶೇಷಗಳ ಬಗ್ಗೆ ತಿಳಿಯಲು ಇನ್ನೂ ಒಂದು ತಿಂಗಳು ಬೇಕು. ವಯಸ್ಸು, ಲಿಂಗ ಮತ್ತು ಡಿಎನ್‌ಎ ಪತ್ತೆ ಹಚ್ಚುವುದು ವಿಧಿವಿಜ್ಞಾನ ಇಲಾಖೆಯ ಮೊದಲ ಕೆಲಸ. ಆ ಬಳಿಕ ಮೂಳೆಗಳ ವ್ಯತ್ಯಾಸ ಗಮನಿಸಿ ಸಾವಿನ ಕಾರಣ ಏನೆಂದು ನಿರ್ಧರಿಸಲಾಗುವುದು. ಆದರೆ, ಇಲ್ಲಿ ಬರೀ ಎಲುಬುಗಳು ಇರುವ ಕಾರಣ ಸಾವಿನ ಸಂಖ್ಯೆಯ ಬಗ್ಗೆ ಖಚಿತ ನಿರ್ಧಾರ ಕಷ್ಟ." ಎಂದು ವಿಧಿವಿಜ್ಞಾನ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಯಲ್ಲಿ ಗುರುವಾರದ ಶೋಧದ ಬಗ್ಗೆ ಚರ್ಚಿಸಲಾಗಿದ್ದು, ವಿಠಲಗೌಡನನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಮಾಟ ಮಂತ್ರದ ಬಗ್ಗೆ ಕೂಡ ಎಸ್‌ಐಟಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದು, ವಿಠಲ ಗೌಡರಿಂದ ಧರ್ಮಸ್ಥಳ, ಉಜಿರೆ, ಬೆಳ್ತಂಗಡಿಯ ಹಳೆಯ ಮಂತ್ರವಾದಿಗಳು, ಜೋತಿಷ್ಯರ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಳ್ತಂಗಡಿ ಪೊಲೀಸ್ ಮೂಲಗಳ ಪ್ರಕಾರ, ವಾಮಾಚಾರ ನಿರತ ವ್ಯಕ್ತಿಗಳು, ಅವರ ಸಹಚರರು, ಮತ್ತು ಅವರ ಕಾರಣ ಮೃತಪಟ್ಟಿರುವ ವ್ಯಕ್ತಿ ಅಥವಾ ಕುಟುಂಬದ ಬಗ್ಗೆ ಮಾಹಿತಿ ಇದ್ದಲ್ಲಿ ಕೊಡುವಂತೆ ಎಸ್‌ಐಟಿ ತಿಳಿಸಿದೆ. ನೇತ್ರಾವತಿ ನದಿ ಸಮೀಪದ ಬಂಗ್ಲೆಗುಡ್ಡವು ಸುಮಾರು 12 ಎಕರೆ ವಿಶಾಲವಾಗಿದ್ದು, ಇಲ್ಲಿ ಒಂಬತ್ತಕ್ಕೂ ಹೆಚ್ಚು ಸ್ಥಳಗಳಿಂದ ಅವಶೇಷಗಳನ್ನು ಸಂಗ್ರಹ ಮಾಡಲಾಗಿದೆ.

ಬುಧವಾರ ತನಿಖೆಯಲ್ಲಿ ಎಸ್‌ಐಟಿ ಅಧಿಕಾರಿಗಳಾದ ಜೀತೆಂದ್ರ ಕುಮಾರ್‌ ದಯಾಮ, ಸೈಮನ್ ಹಾಗೂ ಇತರರು ಭಾಗವಹಿಸಿದ್ದರು.

Read More
Next Story