Dengue Fever| ದಕ್ಷಿಣ ಕನ್ನಡದಲ್ಲಿ ಡೆಂಗ್ಯೂ ಏರಿಕೆ: ಸಾರ್ವಜನಿಕರು ಮುಂಜಾಗ್ರತೆ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಮನವಿ
x

ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಲವಾಗಿದೆ. 

Dengue Fever| ದಕ್ಷಿಣ ಕನ್ನಡದಲ್ಲಿ ಡೆಂಗ್ಯೂ ಏರಿಕೆ: ಸಾರ್ವಜನಿಕರು ಮುಂಜಾಗ್ರತೆ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಮನವಿ

ಡೆಂಗ್ಯೂ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಮೂಲಕ ಸಮುದಾಯದ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಆರ್‌. ತಿಮ್ಮಯ್ಯ ಹೇಳಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಇತ್ತೀಚೆಗೆ ಏರಿಕೆ ಕಂಡಿದ್ದು, ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್‌.ಆರ್‌. ತಿಮ್ಮಯ್ಯ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಈ ವರ್ಷ ಜನವರಿಯಿಂದ ಮೇ ತಿಂಗಳವರೆಗೆ 43 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 534 ಪ್ರಕರಣಗಳು ದೃಢಪಟ್ಟಿದ್ದವು. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ನೀರು ಸಂಗ್ರಹವಾಗುತ್ತಿದ್ದು, ಡೆಂಗ್ಯೂ ಪ್ರಕರಣಗಳು ಹೆಚ್ಚಾಗಲು ಆರಂಭಿಸಿವೆ. ಡೆಂಗ್ಯೂ ನಿರ್ಲಕ್ಷ್ಯ ವಹಿಸಿದರೆ ಪ್ರಾಣಾಪಾಯ ತರಬಲ್ಲ ಜ್ವರವಾಗಿದ್ದು, ಸಾರ್ವಜನಿಕರು ಇದರ ನಿಯಂತ್ರಣದ ಬಗ್ಗೆ ಎಚ್ಚರ ವಹಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.

ಸೊಳ್ಳೆ ನಿಯಂತ್ರಣಕ್ಕೆ 'ಡ್ರೈ ಡೇ' ಆಚರಣೆ

ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸುವ ಸಲುವಾಗಿ ಜಿಲ್ಲೆಯಲ್ಲಿ ಪ್ರತಿ ಶುಕ್ರವಾರ 'ಡ್ರೈ ಡೇ' ಆಚರಿಸಲಾಗುತ್ತಿದೆ. ಈ ದಿನ ಸಾರ್ವಜನಿಕರು ತಮ್ಮ ಮನೆಯಲ್ಲಿರುವ ನೀರು ಶೇಖರಣಾ ತೊಟ್ಟಿಗಳು, ಬ್ಯಾರಲ್‌ಗಳು, ಡ್ರಮ್‌ಗಳಲ್ಲಿನ ನೀರನ್ನು ಖಾಲಿ ಮಾಡಿ, ತಿಕ್ಕಿ ತೊಳೆದು, ಸ್ವಚ್ಛಗೊಳಿಸಿ ಪುನಃ ನೀರು ತುಂಬಿಸಬೇಕು. ಅಲ್ಲದೆ, ಎಲ್ಲಾ ನೀರಿನ ಶೇಖರಣೆಗಳನ್ನು ಮುಚ್ಚಿಡುವ ಮೂಲಕ ಸೊಳ್ಳೆ ಉತ್ಪತ್ತಿಗೆ ಅವಕಾಶ ನೀಡದಂತೆ ಸಹಕರಿಸಬೇಕು ಎಂದು ಡಾ. ತಿಮ್ಮಯ್ಯ ತಿಳಿಸಿದ್ದಾರೆ.

ರಬ್ಬರ್‌ ಮತ್ತು ಅಡಕೆ ಬೆಳೆಗಾರರಿಗೆ ವಿಶೇಷ ಎಚ್ಚರಿಕೆ

ರಬ್ಬರ್‌ ತೋಟ ಹೆಚ್ಚಿರುವ ಪ್ರದೇಶಗಳಲ್ಲಿ ಡೆಂಗ್ಯೂ ಸೋಂಕಿನ ಪ್ರಮಾಣ ಹೆಚ್ಚಳವಾಗುವ ಅಪಾಯವಿದೆ ಎಂದು ಡಾ. ತಿಮ್ಮಯ್ಯ ಎಚ್ಚರಿಸಿದ್ದಾರೆ. ರಬ್ಬರ್‌ ಬೆಳೆಗಾರರು ರಬ್ಬರ್‌ ಸಂಗ್ರಹಿಸುವ ಚಿಪ್ಪನ್ನು ಮಗುಚಿ ಹಾಕಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಅದೇ ರೀತಿ ಅಡಕೆ ಬೆಳೆಗಾರರು ಕೂಡ ತಮ್ಮ ತೋಟದ ವ್ಯಾಪ್ತಿಯಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಡೆಂಗ್ಯೂ ಲಕ್ಷಣಗಳು ಮತ್ತು ವೈದ್ಯಕೀಯ ಸಲಹೆ

ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು, ವಾಕರಿಕೆ, ವಾಂತಿ ಡೆಂಗ್ಯೂ ಜ್ವರದ ಮುಖ್ಯ ಲಕ್ಷಣಗಳಾಗಿವೆ. ಯಾವುದೇ ಜ್ವರ ಬಂದರೂ ಸ್ವಯಂ ಚಿಕಿತ್ಸೆ ಅಥವಾ ಮನೆಮದ್ದು ಮಾಡಬಾರದು. ಕೂಡಲೇ ವೈದ್ಯರು ಅಥವಾ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕು ಎಂದು ಡಾ. ತಿಮ್ಮಯ್ಯ ಸಲಹೆ ನೀಡಿದರು.

ಡೆಂಗ್ಯೂ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಮೂಲಕ ಸಮುದಾಯದ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

Read More
Next Story