ಚಿತ್ರ ಶುರುವಾಗಿದೆ, ಯಾವಾಗ ಮುಗಿಯುವುದೋ ಗೊತ್ತಿಲ್ಲ…
x

ಚಿತ್ರ ಶುರುವಾಗಿದೆ, ಯಾವಾಗ ಮುಗಿಯುವುದೋ ಗೊತ್ತಿಲ್ಲ…

ಕನ್ನಡದಲ್ಲಿ ಮುಂದುವರಿದ ಭಾಗಗಳ ಟ್ರೆಂಡ್ ಹೆಚ್ಚಾಗುತ್ತಿದೆ. ಒಂದು ಭಾಗದಲ್ಲಿ ಹೇಳಬೇಕಾದ ಕಥೆಯನ್ನು ಎರಡು ಭಾಗಗಳಿಗೆ ಹಿಗ್ಗಿಸಲಾಗುತ್ತಿದೆ. ಒಂದು ಕಡೆ ಮೊದಲ ಭಾಗದಲ್ಲಿ ಕಥೆ ಮುಂದೆ ಸಾಗುವುದೇ ಇಲ್ಲ, ಇನ್ನೊಂದೆಡೆ ಎರಡನೆಯ ಭಾಗ ಬಿಡುಗಡೆಯಾಗುವುದೂ ಇಲ್ಲ. ಒಟ್ಟಾರೆ ಅರ್ಧಂಬರ್ಧ ಚಿತ್ರ ನೋಡಿ ಪ್ರೇಕ್ಷಕರಿಗೆ ಭ್ರಮನಿರಸನವಾಗಿದೆ


Click the Play button to hear this message in audio format

ಗರ್ಭಿಣಿಯರ ಸರಣಿ ಕೊಲೆಗಳಿಗೆ ಅವನೇ ಕಾರಣ ಎಂದು ಪೊಲೀಸರು ಬೆನ್ನಟ್ಟಿ ಹಿಡಿಯುತ್ತಾರೆ. ಆದರೆ, ಅವನನ್ನು ಮೀರಿದ ಇನ್ನೊಬ್ಬ ಕೊಲೆಗಾರನಿದ್ದಾನೆ. ಅವನ್ಯಾರು? ಮುಂದಿನ ಭಾಗದಲ್ಲಿ ನೋಡಿ… ಇಷ್ಟಕ್ಕೂ ಆ ಶಂಖ ಎಲ್ಲಿ ಹೋಯಿತು? ಅವರಿಬ್ಬರ ಜೊತೆಗೆ ಮುತ್ತ ಎಲ್ಲಿಗೆ ಹೋದ? ಉತ್ತರ ಮುಂದಿನ ಭಾಗದಲ್ಲಿ…

ವಿಜಯನಗರ ಸಾಮ್ರಾಜ್ಯಕ್ಕೂ, ನಾಯಕನ ಎದೆಯ ಮೇಲಿರುವ ಹಚ್ಚೆಗೂ ಏನು ಸಂಬಂಧ? ‘ಹಚ್ಚೆ 2’ ನೋಡಿ… ಜಾಸ್ಮಿನ್ ಮಾಯವಾಗಿದ್ದೆಲ್ಲಿ? ಡಿಸೋಜ ಯಾಕೆ ಆಸ್ಟಿನ್ ಮತ್ತು ಜಾಸ್ಮಿನ್ ಮದುವೆಯಾಗಲು ಬಿಡುವುದಿಲ್ಲ? ಉತ್ತರಕ್ಕಾಗಿ ಮುಂದಿನ ಭಾಗ ಬರುವವರೆಗೂ ಕಾಯಬೇಕು…

ಕನ್ನಡ ಚಿತ್ರರಂಗದಲ್ಲಿ ಕೆಲವು ವರ್ಷಗಳಿಂದೀಚೆಗೆ ಒಂದು ವಿಚಿತ್ರ ಟ್ರೆಂಡ್ ಶುರುವಾಗಿದೆ. ಬಿಡುಗಡೆಯಾಗುತ್ತಿರುವ ಕೆಲವು ಚಿತ್ರಗಳಿಗೆ ಅಂತ್ಯವೇ ಇರುವುದಿಲ್ಲ. ಚಿತ್ರವೇನೋ ಶುರುವಾಗಿದೆ, ಆದರೆ ಅದು ಯಾವಾಗ ಮುಗಿಯುವುದೋ ಗೊತ್ತಿಲ್ಲ. ಏಕೆಂದರೆ, ಕಥೆ ಆ ಚಿತ್ರದಲ್ಲಿ ಅಂತ್ಯವಾಗುವುದಿಲ್ಲ. ಕಥೆಯನ್ನು ಅರ್ಧಕ್ಕೆ ನಿಲ್ಲಿಸಿ, ಇನ್ನೊಂದು ಭಾಗಕ್ಕೆ ಮುಂದುವರಿಸಲಾಗುತ್ತಿದೆ. ಕಳೆದೊಂದು ತಿಂಗಳಲ್ಲಿ ‘ಹಚ್ಚೆ’, ‘ಎಲ್ಟೂ ಮುತ್ತಾ’, ‘ಉಸಿರು’ ಮತ್ತು ‘ಆಸ್ಟಿನ್‌ನ ಮಹಾನ್ಮೌನ’ ಸೇರಿದಂತೆ ನಾಲ್ಕು ಚಿತ್ರಗಳು ಅಂತ್ಯವಾಗದೆ, ಇನ್ನೊಂದು ಭಾಗದಲ್ಲಿ ಮುಂದುವರೆಯುವುದಾಗಿ ಘೋಷಿಸಿವೆ.

‘ಬಾಹುಬಲಿ’ ಚಿತ್ರದಿಂದ ಶುರುವಾದ ಟ್ರೆಂಡ್

ಭಾರತೀಯ ಚಿತ್ರರಂಗದಲ್ಲಿ ಇಂಥದ್ದೊಂದು ಟ್ರೆಂಡ್ ಶುರುವಾಗಿದ್ದು ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರದಿಂದ. ‘ಬಾಹುಬಲಿ’ ಚಿತ್ರವನ್ನು ಮೊದಲು ಒಂದೇ ಭಾಗದಲ್ಲಿ ಮಾಡಬೇಕೆಂದು ಉದ್ದೇಶಿಸಲಾಗಿತ್ತು. ಆದರೆ, ಕಥೆ ಮತ್ತು ಕ್ಯಾನ್ವಾಸ್ ಬಹಳ ದೊಡ್ಡದಾಗಿದ್ದರಿಂದ, ಕಥೆಯು ಒಂದು ಚಿತ್ರಕ್ಕೆ ಹೊಂದಿಕೊಳ್ಳಲಿಲ್ಲ. ಚಿತ್ರದಲ್ಲಿನ ಭಾವನೆಗಳಿಗೆ ಧಕ್ಕೆಯಾಗದಂತೆ ಮತ್ತು ಪ್ರೇಕ್ಷಕರು ಆಸಕ್ತಿ ಕಳೆದುಕೊಳ್ಳದಂತೆ ಅದನ್ನು ಹೇಗೆ ನಿರೂಪಿಸಬೇಕು ಎಂಬುದು ರಾಜಮೌಳಿ ಮತ್ತು ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರಿಗೆ ಚೆನ್ನಾಗಿ ತಿಳಿದಿತ್ತು. ಹಾಗಾಗಿ, ಕಥೆಗೆ ಇನ್ನೊಂದಿಷ್ಟು ವಿಷಯಗಳನ್ನು ಸೇರಿಸಿ, ಎರಡು ಚಿತ್ರಗಳನ್ನಾಗಿ ಮಾಡಿ, ಎಲ್ಲೂ ಚಿತ್ರ ಸಡಿಲವಾಗದಂತೆ ನೋಡಿಕೊಂಡರು. ಎರಡೂ ಚಿತ್ರಗಳು ದೊಡ್ಡ ಯಶಸ್ಸು ಕಾಣುವುದರ ಜೊತೆಗೆ, ಭಾರತೀಯ ಚಿತ್ರರಂಗದಲ್ಲಿ ಮುಂದುವರಿದ ಭಾಗಗಳ ಟ್ರೆಂಡ್ ಶುರುವಾಯಿತು.

ಕನ್ನಡದಲ್ಲಿ ‘ಕೆಜಿಎಫ್’ ಹುಟ್ಟುಹಾಕಿದ ಟ್ರೆಂಡ್

ಕನ್ನಡದ ವಿಷಯಕ್ಕೆ ಬಂದರೆ, ಈ ಟ್ರೆಂಡ್ ಯಶ್ ಅಭಿನಯದ ‘ಕೆಜಿಎಫ್’ ಚಿತ್ರದಿಂದ ಪ್ರಾರಂಭವಾಯಿತು. ಈ ಚಿತ್ರ ಸಹ ಒಂದೇ ಭಾಗವಾಗಿ ಶುರುವಾಗಿ, ಬೆಳೆಯುತ್ತಾ ದೊಡ್ಡದಾಯಿತು. ಕೊನೆಗೆ ನಿರ್ದೇಶಕ ಪ್ರಶಾಂತ್ ನೀಲ್ ಕಥೆಯನ್ನು ಇನ್ನಷ್ಟು ವಿಸ್ತರಿಸಿ ಎರಡು ಚಿತ್ರಗಳನ್ನಾಗಿ ಮಾಡಿದರು. ‘ಕೆಜಿಎಫ್’ ಮೊದಲ ಭಾಗ ಗೆದ್ದ ನಂತರ, ಕನ್ನಡದಲ್ಲಿ ಇದೊಂದು ಟ್ರೆಂಡ್ ಆಗಿದೆ. ಹಲವು ನಿರ್ದೇಶಕರು ಮುಂದುವರಿದ ಭಾಗ ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಈ ಪೈಕಿ ಯಶಸ್ವಿಯಾಗದಿದ್ದರೂ, ಹೇಳಿದಂತೆ ಎರಡು ಭಾಗಗಳಲ್ಲಿ ಚಿತ್ರ ಮಾಡಿದ್ದು ‘ಸಪ್ತ ಸಾಗರದಾಚೆ ಎಲ್ಲೋ’ ಮತ್ತು ‘ತೋತಾಪುರಿ’ ಚಿತ್ರತಂಡಗಳು ಮಾತ್ರ. ಆದರೆ, ಈ ಎರಡೂ ಚಿತ್ರಗಳಿಗೆ ಮುಂದುವರಿದ ಭಾಗಗಳ ಅವಶ್ಯಕತೆ ಇರಲಿಲ್ಲ, ಒಂದೇ ಭಾಗದಲ್ಲಿ ಹೇಳಬಹುದಿತ್ತು ಎಂದು ಚಿತ್ರ ನೋಡಿದವರು ಅಭಿಪ್ರಾಯಪಟ್ಟಿದ್ದೂ ಇದೆ.

ಚಿತ್ರಗಳಿಗೆ ಸಮಂಜಸ ಅಂತ್ಯವೇ ಇಲ್ಲ

ಕಳೆದ ಕೆಲವು ವರ್ಷಗಳಲ್ಲಿ ಹಲವು ಚಿತ್ರಗಳು ಈ ಮುಂದುವರಿದ ಭಾಗದ ಹೆಸರಿನಲ್ಲಿ ಬಿಡುಗಡೆಯಾಗಿವೆ. ಚಿತ್ರಗಳು ಪ್ರಾರಂಭವಾಗಿವೆಯಾದರೂ, ಇನ್ನೂ ಮುಗಿದಿಲ್ಲ. ಕಥೆಗಳು ಅರ್ಧಕ್ಕೆ ನಿಂತಿವೆ. ಉಪೇಂದ್ರ ಅಭಿನಯದ ‘ಕಬ್ಜ’, ಶಿವರಾಜಕುಮಾರ್ ಅಭಿನಯದ ‘ಘೋಸ್ಟ್’, ಹೇಮಂತ್ ಹೆಗಡೆ ಅಭಿನಯದ ‘ನಮ್ ನಾಣಿ ಮದ್ವೆ ಪ್ರಸಂಗ’, ರಾಘವೇಂದ್ರ ರಾಜ್‌ಕುಮಾರ್ ಅಭಿನಯದ ‘13’, ವಿನೋದ್ ಪ್ರಭಾಕರ್ ಅಭಿನಯದ ‘ಫೈಟರ್’ ಚಿತ್ರಗಳ ಜೊತೆಗೆ ಇತ್ತೀಚೆಗೆ ಇನ್ನೊಂದಿಷ್ಟು ಚಿತ್ರಗಳು ಸೇರ್ಪಡೆಯಾಗಿವೆ. ಈ ಯಾವ ಚಿತ್ರವೂ ಪೂರ್ಣವಾಗಿಲ್ಲ. ಈ ಚಿತ್ರಗಳಿಗೊಂದು ಸಮಂಜಸ ಅಂತ್ಯವೂ ಇಲ್ಲ, ಚಿತ್ರದಲ್ಲಿರುವ ಪ್ರಶ್ನೆಗಳಿಗೆ ಉತ್ತರಗಳೂ ಸಿಕ್ಕಿಲ್ಲ. ಪ್ರೇಕ್ಷಕರಿಗೆ ಚಿತ್ರ ನೋಡಿದ ಸಂತೃಪ್ತಿಯಾದರೂ ಸಿಗುತ್ತದೆಯೇ ಎಂದರೆ ಅದೂ ಇಲ್ಲ. ಹೋಗಲಿ, ಪ್ರೇಕ್ಷಕರಿಗೆ ಮುಂದುವರಿದ ಭಾಗ ನೋಡುವ ಆಸಕ್ತಿಯಾದರೂ ಇದೆಯೇ ಎಂದರೆ ಅದೂ ಕಾಣುವುದಿಲ್ಲ.

ಸ್ಪಷ್ಟತೆಯ ಕೊರತೆಯೇ ಕಾರಣ

ಸ್ಪಷ್ಟತೆಯ ಕೊರತೆಯೇ ಇದೆಲ್ಲಕ್ಕೂ ಕಾರಣ ಎಂದು ಹೇಳಲಾಗುತ್ತಿದೆ. ‘ಬಾಹುಬಲಿ’ ಆಗಲಿ, ‘ಪುಷ್ಪ’ ಮತ್ತು ‘ಕೆಜಿಎಫ್’ ಚಿತ್ರಗಳಾಗಲಿ, ಒಂದು ಚಿತ್ರದಿಂದ ಎರಡು ಚಿತ್ರಗಳಿಗೆ ವಿಸ್ತರಣೆಯಾದಾಗ, ಆ ಚಿತ್ರಕ್ಕೊಂದು ಅಂತ್ಯವನ್ನು ಹೇಗೆ ನೀಡಬೇಕೆಂಬ ಸ್ಪಷ್ಟತೆ ಆ ಚಿತ್ರತಂಡಗಳಿಗೆ ಇತ್ತು. ಮುಂದುವರಿದ ಭಾಗಗಳಲ್ಲಿ ಹಲವು ಓರೆಕೋರೆಗಳಿದ್ದರೂ, ಅದನ್ನು ನೋಡಿಸಿಕೊಂಡು ಹೋಗಬಹುದೆಂದು ನಿರ್ದೇಶಕರಿಗೆ ತಿಳಿದಿತ್ತು. ಹಾಗಾಗಿ, ಅವರು ಧೈರ್ಯವಾಗಿ ಮುಂದುವರಿದ ಭಾಗಗಳನ್ನು ಮಾಡಿದರು. ಈ ಮೂರೂ ಚಿತ್ರಗಳ ಮೊದಲ ಭಾಗಕ್ಕಿಂತ ಎರಡನೆಯ ಭಾಗಗಳು ದೊಡ್ಡ ಯಶಸ್ಸು ಕಂಡವು. ಆದರೆ, ಇದೇ ಸೂತ್ರವನ್ನು ಬೇರೆ ಚಿತ್ರಗಳಿಗೆ ಅನ್ವಯಿಸಲು ಸಾಧ್ಯವಿಲ್ಲ.

ಮೊದಲ ಭಾಗದ ಯಶಸ್ಸೇ ಮಾನದಂಡ

ಈ ಚಿತ್ರಗಳು ನಿಜಕ್ಕೂ ಮುಂದುವರೆಯುತ್ತವೆಯೇ ಎಂಬುದು ಗೊತ್ತಿಲ್ಲ. ಪ್ರಮುಖವಾಗಿ ಯಾವುದೇ ಚಿತ್ರ ಮುಂದುವರಿದು, ಎರಡನೇ ಭಾಗ ಬರಬೇಕೆಂದರೆ ಮೊದಲ ಭಾಗ ಗೆದ್ದಿರಬೇಕು ಅಥವಾ ಸ್ವಲ್ಪವಾದರೂ ಸದ್ದು ಮಾಡಿರಬೇಕು. ಎರಡನೆಯ ಭಾಗಕ್ಕೆ ಮೊದಲ ಭಾಗದ ಗೆಲುವೇ ಮಾನದಂಡವಾಗುತ್ತದೆ. ಮೊದಲ ಭಾಗ ಗೆದ್ದರಷ್ಟೇ ಎರಡನೆಯ ಭಾಗದ ಮೇಲೆ ಪ್ರೇಕ್ಷಕರಿಗೆ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಾಗುತ್ತದೆ. ಅದು ಹೆಚ್ಚಾದರಷ್ಟೇ ಚಿತ್ರದ ವ್ಯಾಪಾರ ದೊಡ್ಡ ಮಟ್ಟದಲ್ಲಿ ಆಗುತ್ತದೆ. ಆದರೆ, ‘ಘೋಸ್ಟ್’ ಹೊರತುಪಡಿಸಿದರೆ, ಮೇಲೆ ಉಲ್ಲೇಖಿಸಿದ ಯಾವುದೇ ಚಿತ್ರವೂ ಯಶಸ್ಸು ಕಂಡಿಲ್ಲ ಅಥವಾ ಒಳ್ಳೆಯ ಗಳಿಕೆಯನ್ನೂ ಮಾಡಿಲ್ಲ. ಬಾಕ್ಸ್ ಆಫೀಸ್ ಗಳಿಕೆಯ ಜೊತೆಗೆ ಬೇರೆ ಯಾವ ಹಕ್ಕುಗಳಿಂದಲೂ (ಡಬ್ಬಿಂಗ್, ಸ್ಯಾಟಿಲೈಟ್, ಓಟಿಟಿ) ಹಣ ಬಂದಿಲ್ಲ. ಮೊದಲ ಚಿತ್ರದಲ್ಲೇ ನಷ್ಟವಾಗಿರುವಾಗ, ನಿರ್ಮಾಪಕರು ಇನ್ನೊಂದು ಚಿತ್ರಕ್ಕೆ ಹಣ ಹೂಡುತ್ತಾರೆಯೇ? ಹಾಗಾಗಿ, ಆ ಚಿತ್ರಗಳು ಮುಂದುವರೆಯುವುದರ ಬಗ್ಗೆ ಅನುಮಾನಗಳಿವೆ.

ಎರಡನೇ ಭಾಗದ ಅವಶ್ಯಕತೆ ಇದೆಯೇ?

ಹಾಗೆ ನೋಡಿದರೆ, ಈ ಚಿತ್ರಗಳನ್ನು ಎರಡು ಭಾಗಗಳಿಗೆ ಹಿಗ್ಗಿಸುವ ಅವಶ್ಯಕತೆಯೇ ಇರಲಿಲ್ಲ. ಹೇಳಬೇಕಾದದ್ದನ್ನು ಒಂದೇ ಭಾಗದಲ್ಲಿ ಹೇಳಿ ಮುಗಿಸಬಹುದಿತ್ತು. ಆದರೆ, ಮೊದಲ ಭಾಗದಲ್ಲೂ ಕಥೆಯನ್ನು ಪೂರ್ಣಗೊಳಿಸದೆ ಸುಮ್ಮನೆ ಎಳೆದಾಡಲಾಗಿದೆ. ಈ ಪೈಕಿ ಬಹಳಷ್ಟು ಚಿತ್ರಗಳು ಶುರುವಾಗುವುದೇ ಮಧ್ಯಂತರದ ನಂತರ. ಅಲ್ಲಿಯವರೆಗೂ ಪರಿಸರ ಮತ್ತು ಪಾತ್ರಗಳನ್ನು ಪರಿಚಯಿಸುವುದಕ್ಕೇ ಸಮಯ ಮೀಸಲಿಡಲಾಗುತ್ತದೆ. ಹೀಗೆ ಸಾಕಷ್ಟು ಸಮಯ ಹಾಳು ಮಾಡಿ, ಕೊನೆಗೆ ಅವಸರದಲ್ಲಿ ಎಲ್ಲವನ್ನೂ ಮುಂದಿನ ಭಾಗಕ್ಕೆ ಮುಂದೂಡಲಾಗುತ್ತದೆ. ಇದರಿಂದ ಮೊದಲ ಭಾಗದಲ್ಲಿ ಏನಾಗುತ್ತಿದೆ ಎಂದು ಗೊತ್ತಾಗದೆ, ಎರಡನೆಯ ಭಾಗವೂ ಬಿಡುಗಡೆಯಾಗದೆ, ಇವು ಒಂದು ರೀತಿ ಅತಂತ್ರ ಸ್ಥಿತಿಯಲ್ಲಿವೆ. ಇದರಿಂದ ಪ್ರೇಕ್ಷಕರ ತಾಳ್ಮೆ, ಸಮಯ, ಹಣ ವ್ಯರ್ಥವಾಗುವುದರ ಜೊತೆಗೆ, ಚಿತ್ರಗಳ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ. ನಂಬಿಕೆ ಕಳೆದುಕೊಂಡ ಪ್ರೇಕ್ಷಕರು, ನಾಳೆ ಒಳ್ಳೆಯ ಚಿತ್ರಗಳು ಬಂದಿವೆ ಎಂದರೂ ನೋಡುವುದಕ್ಕೆ ಯೋಚಿಸುವಂತಾಗುತ್ತದೆ.

ಇಷ್ಟಕ್ಕೂ ಎರಡನೆಯ ಭಾಗದ ಅವಶ್ಯಕತೆಯಾದರೂ ಏನಿದೆ? ಈ ಕುರಿತು ಮಾತನಾಡುವ ‘ಆಸ್ಟಿನ್‌ನ ಮಹಾನ್ಮೌನ’ ಚಿತ್ರದ ನಾಯಕ-ನಿರ್ದೇಶಕ ವಿನಯ್ ಕುಮಾರ್ ವೈದ್ಯನಾಥನ್, ‘ನನಗೆ ಎರಡು ಭಾಗಗಳಲ್ಲಿ ಕಥೆ ಹೇಳುವ ಉದ್ದೇಶವಿರಲಿಲ್ಲ. ಆದರೆ, ಚಿತ್ರ ಬೆಳೆಯುತ್ತಾ ಹೋದಂತೆ, ಅದರ ಅವಧಿ ಮೂರೂವರೆ ಗಂಟೆಗಳಷ್ಟಾಯಿತು. ಅಷ್ಟು ಹೊತ್ತು ಜನ ಚಿತ್ರ ನೋಡುವುದಿಲ್ಲ. ಕತ್ತರಿಸಿ ವೇಗವಾಗಿ ಹೇಳಿದರೆ, ಅದು ಪ್ರೇಕ್ಷಕರಿಗೆ ಕನೆಕ್ಟ್ ಆಗುವುದಿಲ್ಲ. ಪ್ರೇಕ್ಷಕರಿಗೆ ಕನೆಕ್ಟ್ ಆಗಬೇಕೆಂದರೆ, ಪ್ರತಿಯೊಂದು ಭಾವನೆಯನ್ನು ವಿವರವಾಗಿ ಹೇಳಬೇಕು. ಹಾಗಾಗಿ, ಎರಡು ಭಾಗಗಳನ್ನಾಗಿ ವಿಂಗಡನೆ ಮಾಡಿದೆ’ ಎನ್ನುತ್ತಾರೆ. ಹಾಗಾದರೆ, ‘ಆಸ್ಟಿನ್‌ನ ಮಹಾನ್ಮೌನ’ ಚಿತ್ರದ ಮುಂದುವರಿದ ಭಾಗ ಬರುತ್ತದೆಯೇ? ‘ಖಂಡಿತ ಮಾಡುತ್ತೇನೆ. ಆದರೆ, ಯಾವಾಗ ಎಂದು ಗೊತ್ತಿಲ್ಲ. ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಬರುತ್ತಿವೆ. ಮುಂದಿನ ಪ್ರತಿಕ್ರಿಯೆ ನೋಡಿಕೊಂಡು ನಿರ್ಧಾರ ಮಾಡುತ್ತೇನೆ’ ಎನ್ನುತ್ತಾರೆ ವಿನಯ್.

ಇದು ಬರೀ ಕನ್ನಡದಲ್ಲಿ ಮಾತ್ರವಲ್ಲ, ಬೇರೆ ಭಾಷೆಗಳಲ್ಲೂ ಇಂತಹದ್ದು ನಡೆದಿದೆ. ‘ಸಲಾರ್’, ‘ಕಲ್ಕಿ 2898 ಎಡಿ’, ‘ಬ್ರಹ್ಮಾಸ್ತ್ರ’, ‘ಕಂಗುವಾ’ … ಹೀಗೆ ಕೆಲವು ಚಿತ್ರಗಳು ಒಂದು ಚಿತ್ರವೆಂದು ಶುರುವಾಗಿ ಎರಡು ಚಿತ್ರಗಳಾಗಿವೆ. ಈ ಎಲ್ಲಾ ಚಿತ್ರಗಳ ಒಂದೊಂದು ಭಾಗ ಮಾತ್ರ ಬಿಡುಗಡೆಯಾಗಿದ್ದು, ಇನ್ನೊಂದು ಭಾಗ ಇನ್ನಷ್ಟೇ ಶುರುವಾಗಬೇಕಿದೆ. ಈ ಚಿತ್ರಗಳ ಮುಂದುವರಿದ ಭಾಗಗಳು ಯಾವಾಗ ಬರುತ್ತವೆಯೋ? ಅಥವಾ ನಿಜಕ್ಕೂ ಬರುತ್ತವೆಯೇ? ಈ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

Read More
Next Story