ಗೆಲುವಿನ ಅಂತರ ಕುಸಿಯುವ ಸಾಧ್ಯತೆ: ಬಿಜೆಪಿ ಅವಲೋಕನ ಸಭೆಯಲ್ಲಿ ಬಹಿರಂಗ
x
ಬಿಜೆಪಿ

ಗೆಲುವಿನ ಅಂತರ ಕುಸಿಯುವ ಸಾಧ್ಯತೆ: ಬಿಜೆಪಿ ಅವಲೋಕನ ಸಭೆಯಲ್ಲಿ ಬಹಿರಂಗ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಶನಿವಾರ ನಡೆದ ಅವಲೋಕನ ಸಭೆಯಲ್ಲಿ ಎಲ್ಲ 28 ಲೋಕಸಭಾ ಕ್ಷೇತ್ರಗಳ ಚುನಾವಣೆ ಕುರಿತ ವರದಿಗಳನ್ನು ಉಸ್ತುವಾರಿಗಳು ಸಲ್ಲಿಸಿದರು. ಹಲವು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳೂ ಸಭೆಯಲ್ಲಿದ್ದರು.


Click the Play button to hear this message in audio format

ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಇತ್ತೀಚೆಗೆ ನಡೆದ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯ ಬಿಜೆಪಿ ಚುನಾವಣಾ ಅವಲೋಕನ ಸಭೆ ನಡೆಸಿದ್ದು, ಸಭೆಯಲ್ಲಿ ಪಕ್ಷ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದ್ದರೂ ಕಳೆದ ಚುನಾವಣೆಗೆ ಹೋಲಿಸಿದರೆ ಗೆಲುವಿನ ಅಂತರ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಬಹುದು ಎಂದು ಉಸ್ತುವಾರಿಗಳು ವರದಿ ನೀಡಿದ್ದಾರೆ.

ರಾಜ್ಯದ ಹಲವು ಲೋಕಸಭಾ ಕ್ಷೇತ್ರಗಳಲ್ಲಿ 2019ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಪಕ್ಷದ ಅಭ್ಯರ್ಥಿಗಳ ಗೆಲುವಿನ ಅಂತರದಲ್ಲಿ ಗಣನೀಯವಾಗಿ ಕುಸಿಯುವ ಸಾಧ್ಯತೆ ಹೆಚ್ಚಿದೆ ಎಂಬ ವರದಿಯನ್ನು ಪಕ್ಷದ ಚುನಾವಣಾ ಉಸ್ತುವಾರಿಗಳು ನೀಡಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಶನಿವಾರ ಬೆಂಗಳೂರಿನಲ್ಲಿ ನಡೆದ ಅವಲೋಕನ ಸಭೆಯಲ್ಲಿ ಎಲ್ಲ 28 ಲೋಕಸಭಾ ಕ್ಷೇತ್ರಗಳ ಚುನಾವಣೆ ಕುರಿತ ವರದಿಗಳನ್ನು ಉಸ್ತುವಾರಿಗಳು ಸಲ್ಲಿಸಿದರು. ಹಲವು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳೂ ಈ ಅವಲೋಕನ ಸಭೆಯಲ್ಲಿದ್ದರು.

ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕಾಂಗ್ರೆಸ್ ಹೆಚ್ಚು ಮತ ಗಳಿಸಲಿದೆ. ಬಿಜೆಪಿಗೆ ಎಲ್ಲ ಕ್ಷೇತ್ರಗಳಲ್ಲೂ ಗೆಲುವಿನ ಅವಕಾಶವಿದೆ. ಆದರೆ, ಗೆಲುವಿನ ಅಂತರ ಕಡಿಮೆ ಆಗುವ ಸಾಧ್ಯತೆ ಇದೆ ಎಂಬ ಮಾಹಿತಿ ಬಿಜೆಪಿ ಚುನಾವಣಾ ಉಸ್ತುವಾರಿಗಳ ವರದಿ ಹೇಳಿದೆ.

ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್, 'ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಎಲ್ಲ ಸ್ಥಾನಗಳಲ್ಲೂ ಗೆಲ್ಲುವ ವಿಶ್ವಾಸವಿದೆ. ಆದರೆ, ಕೆಲವೆಡೆ ಗೆಲುವಿನ ಅಂತರ ಕಡಿಮೆ ಆಗಬಹುದು' ಎಂದರು.

ಜೆಡಿಎಸ್‌ ಜೊತೆಗಿನ ಹೊಂದಾಣಿಕೆ ಉತ್ತಮವಾಗಿತ್ತು

ಬಿಜೆಪಿ-ಜೆಡಿಎಸ್ ಮಧ್ಯೆ ಹೊಂದಾಣಿಕೆ ಉತ್ತಮವಾಗಿತ್ತು. ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಕಾರ್ಯಕರ್ತರು ಸಂಪೂರ್ಣ ಸಹಕಾರ ನೀಡಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಜೆಡಿಎಸ್‌ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿಗಳಿಗೆ ಅದೇ ರೀತಿ ಸಹಕರಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಸುನೀಲ್‌ ಕುಮಾರ್ ಉತ್ತರಿಸಿದರು.

ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವು ಚುನಾವಣೆಯಲ್ಲಿ ಆಡಳಿತ ಯಂತ್ರವನ್ನು ದೊಡ್ಡ ಪ್ರಮಾಣದಲ್ಲಿ ದುರ್ಬಳಕೆ ಮಾಡಿಕೊಂಡಿದೆ. ಬಿಜೆಪಿ, ಜೆಡಿಎಸ್ ಕಾರ್ಯಕರ್ತರನ್ನು ಬೆದರಿಸುವ, ಮೊಕದ್ದಮೆ ದಾಖಲಿಸಿ ದೌರ್ಜನ್ಯ ಎಸಗುವ ಕೆಲಸ ಮಾಡಿದೆ. ಆದರೂ, ಬಿಜೆಪಿ-ಜೆಡಿಎಸ್ ಮೈತ್ರಿಕೂಟವು ಚುನಾವಣೆಯಲ್ಲಿ ದೊಡ್ಡ ಪ್ರಮಾಣದ ಯಶಸ್ಸು ಪಡೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

79 ಸಭೆ ಮತ್ತು 39 ರೋಡ್ ಶೋ

ರಾಜ್ಯದಲ್ಲಿ ಬಿಜೆಪಿಯು ಚುನಾವಣಾ ಪ್ರಚಾರವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ರಾಷ್ಟ್ರೀಯ ಮಟ್ಟದ 14 ನಾಯಕರು 79 ಸಭೆ ಮತ್ತು 39 ರೋಡ್ ಶೋ ನಡೆಸಿದ್ದರು. ರಾಜ್ಯದ 30 ಪ್ರಮುಖ ನಾಯಕರು 557 ಸಭೆ ಮತ್ತು 139 ರೋಡ್ ಶೋ ನಡೆಸಿದ್ದರು ಎಂದು ವಿವರ ನೀಡಿದರು.

Read More
Next Story