ಸಸ್ಯಾಹಾರ V/S ಮಾಂಸಾಹಾರದ ನಡುವಿನ ಸಮರಕ್ಕೆ ನಾಂದಿಯಾದ ಕನ್ನಡ ಸಾಹಿತ್ಯ ಸಮ್ಮೇಳನ
ನೂರಾಒಂಬತ್ತು ವರ್ಷದ ಇತಿಹಾಸದ ಕನ್ನಡ ಸಾಹಿತ್ಯ ಪರಿಷತ್ತು ಸಕ್ಕರೆ ನಾಡು ಮಂಡ್ಯದಲ್ಲಿ ನಡೆಸುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಆಹಾರ ಸಂಸ್ಕೃತಿಯ ಕಾರಣಕ್ಕಾಗಿ ಸುದ್ದಿ-ಗುದ್ದಾಟದ ಗೊಂದಲದಲ್ಲಿ ಸಿಕ್ಕಿಕೊಂಡಿದೆ. . ʻಬೇಳೆಯ ಜೊತೆಗೆ ಮೂಳೆಯೂ ಇರಲಿ. ʻಹಪ್ಪಳದ ಜೊತೆಗೆ ಕಬಾಬ್ ಇರಲಿʼ ʻಕೋಸಂಬರಿ ಜೊತೆಗೆ ಮೊಟ್ಟೆಯ ತಿನಿಸಿರಲಿʼ, ʻಮುದ್ದೆಯ ಜೊತೆಗೆ ಬೋಟಿ ಇರಲಿʼ ಎಂಬುದು, ಪ್ರಗತಿಪರ ಸಂಘಟನೆಗಳ ಒತ್ತಾಯ.
ಸಕ್ಕರೆ ನಗರಿ ಮಂಡ್ಯ ನಗರದಲ್ಲಿ ಡಿಸೆಂಬರ್ 20ರಂದು ಆರಂಭಗೊಳ್ಳಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನು ಕೇವಲ ಹತ್ತು ದಿನಗಳಿರುವಾಗಲೇ ವಿವಾದವೊಂದು ಸೃಷ್ಟಿಯಾಗಿದೆ. ದ ಸಸ್ಯಾಹಾರ V/S ಮಾಂಸಾಹಾರ
ಮತ್ತೊಂದು ವಿಷಯವನ್ನು ಸ್ಪಷ್ಟಪಡಿಸುವುದು ಒಳ್ಳೆಯದು. ಇದುವರೆಗೆ ಕನ್ನಡ ಸಾಹಿತ್ಯ ಪರಿಷತ್ತು 86 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದೆ. ಆದರೆ, ಈ ಬಾರಿ ಸಮ್ಮೇಳನ ವಿವಾದಕ್ಕೊಳಗಾಗಿರುವಷ್ಟು ಹಿಂದೆಂದೂ ಆಗಿಲ್ಲ ಎಂಬುದು ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸ ಬಲ್ಲವರ ಅಭಿಪ್ರಾಯ. ಮಂಡ್ಯದಲ್ಲಿ ನಡೆಯುತ್ತಿರುವುದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಹೀಗೆ ವಿವಾದಕ್ಕೊಳಗಾಗಲು ಇರುವ ಮತ್ತೊಂದು ಕಾರಣವೆಂದರೆ, ಇದುರವರೆಗೆ ರಾಜಕೀಯೇತರವಾಗಿ ಉಳಿದು ತನ್ನ ಸ್ವಾಯತ್ತತೆಯನ್ನು ಕಾಪಾಡಿಕೊಂಡು ಬಂದಿದ್ದ ಶತಮಾನದ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚೆಗೆ ರಾಜಕೀಯ ಲೇಪ ಪಡೆದುಕೊಂಡಿರುವುದು ಇದಕ್ಕೆ ಕಾರಣ ಎಂಬುದು ಹಲವಾರು ಸಾಹಿತಿಗಳ, ಲೇಖಕರ ಅಭಿಪ್ರಾಯ.
ಬೇಳೆಯ ಜೊತೆಗೆ ಮೂಳೆಯೂ ಇರಲಿ
ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ-ಸಂಸ್ಕೃತಿಯನ್ನು ಕುರಿತಾದ ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಾಗಿ ಮಳಿಗೆಗಳನ್ನು ಕಾಯ್ದಿರಿಸಿದವರಿಗೆ ಪರಿಷತ್ತು ವಿಧಿಸಿರುವ ಷರತ್ತುಗಳಿ ಸಸ್ಯಹಾರ ಮತ್ತು ಮಾಂಸಾಹಾರಗಳ ನಡುವಿನ ಕದನಕ್ಕೆ ಕಾರಣವಾಗಿದೆ. ಪರಿಷತ್ತು ವಿಧಿಸಿರುವ ಷರತ್ತುಗಳಲ್ಲಿ ಮದ್ಯ, ತಂಬಾಕು ಮತ್ತು ಮಾಂಸಾಹಾರದ ಬಳಕೆಯನ್ನು ನಿಷೇಧಿಸಲಾಗಿದೆ.ಅದರಲ್ಲಿ ತಂಬಾಕು ಮತ್ತು ಮದ್ಯ ನಿಷೇಧದ ಬಗ್ಗೆ ಯಾರಿಗೂ ಅಭ್ಯಂತವಿರುವಂತೆ ಕಾಣುತ್ತಿಲ್ಲ. ಆದರೆ, ಅಭ್ಯಂತರವಿರುವುದು ಮಾಂಸಾಹಾರದ ನಿಷೇಧದ ಬಗ್ಗೆ ಮಾತ್ರ.
ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆಗೆ ಮಾಂಸಾಹಾರವನ್ನೂ ನೀಡಬೇಕು. ʻಬೇಳೆಯ ಜೊತೆಗೆ ಮೂಳೆಯೂ ಇರಲಿ. ʻಹಪ್ಪಳದ ಜೊತೆಗೆ ಕಬಾಬ್ ಇರಲಿʼ ʻಕೋಸಂಬರಿ ಜೊತೆಗೆ ಮೊಟ್ಟೆಯ ತಿನಿಸಿರಲಿʼ, ʻಮುದ್ದೆಯ ಜೊತೆಗೆ ಬೋಟಿ ಇರಲಿʼ ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಹೋರಾಟಕ್ಕೆ ಇಳಿದಿದ್ದಾರೆ. ಸೋಮವಾರ ಈ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಮೊಟ್ಟೆ ತಿಂದು ಪ್ರತಿಭಟನೆ ಕೂಡ ನಡೆಸಿದ್ದಾರೆ.
ಆಹಾರ ಸಂಸ್ಕೃತಿಯ ಹಕ್ಕು
ತೋರಿಕೆಗಾಗಿ ತಯಾರಿಸುವ ಕೆಲವು ಸಸ್ಯಾಹಾರದ ತಿನಿಸುಗಳನ್ನು ಕೈಬಿಟ್ಟು ಕೋಳಿ ಮಾಂಸದ ತುಂಡು ಮತ್ತು ಮೊಟ್ಟೆಯನ್ನು ಕಡ್ಡಾಯವಾಗಿ ಕೊಡಬೇಕು. ಇಲ್ಲದಿದ್ದರೆ, ಸಾರ್ವಜನಿಕರಿಂದ ಕೋಳಿ ಮತ್ತು ಮೊಟ್ಟೆಯನ್ನು ಸಂಗ್ರಹಿಸಿ, ಸಮ್ಮೇಳನಕ್ಕೆ ಬರುವ ಪ್ರತಿನಿಧಿಗಳಿಗೆ ಮಾಂಸಾಹಾರದ ರುಚಿ ತೋರಿಸುವುದಲ್ಲದೆ, ಈ ಮೂಲಕ ನಾಗರಿಕರ ಆಹಾರ ಮತ್ತು ಆಯ್ಕೆಯ ಹಕ್ಕನ್ನು ಉಳಿಸಲು ಪ್ರಯತ್ನಿಸುವುದಾಗಿ ಪ್ರತಿಭಟನಾ ನಿರತ ಪ್ರಗತಿಪರರು ಕನ್ನಡ ಸಾಹಿತ್ಯ ಪರಿಷತ್ತಿಗೆ ಎಚ್ಚರಿಕೆ ನೀಡಿದ್ದಾರೆ. “ಬಾಡೂಟದ ಹೋರಾಟವು ಬಹುಜನ ಕನ್ನಡ ಬದುಕು ಬವಣೆ ಮತ್ತು ಸಂಸ್ಕೃತಿಗಳ ಪರ್ಯಾಯ ವೇದಿಕೆಯಾಗಿ ವಿಸ್ತಾರಗೊಳ್ಳಬೇಕಿದೆ” ಎನ್ನುತ್ತಾರೆ ಚಿಂತಕ ಮತ್ತು ಬರಹಗಾರ ಶಿವಸುಂದರ್. “ಈ ಹೋರಾಟ ಸಮ್ಮೆಳನದ ರೂಢಿಗತ ನಡವಳಿಕೆಗಳಿಗೆ ಯಾವುದೇ ರೀತಿಯ ಅಡ್ಡಿಯ ಮಾಡುತ್ತಿಲ್ಲ. ಬದಲಿಗೆ ಜಡವಾಗುತ್ತಿರುವ ಕನ್ನಡ ಜನರ ಜಾತ್ರೆಗೆ ಹೊಸ ಜನಪರ ಸವಾಲೊಡ್ಡಿ ಅರ್ಥಪೂರ್ಣವಾಗುವ ಅವಕಾಶ ನೀಡಿದೆ” ಎಂದು ಅವರು ಹೇಳುತ್ತಾರೆ.
ಮಾಂಸಾಹಾರ- ಮಂಡ್ಯ ಸಂಸ್ಕೃತಿಯ ಒಂದು ಭಾಗ
“ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜನರ ಆಹಾರದ ಹಕ್ಕನ್ನು ಉಲ್ಲಂಘಿಸಲಾಗುತ್ತಿದೆ. ಜನರ ಭಾವನೆಗಳ ಜೊತೆ, ಅವರ ಸ್ಥಳೀಯ ಆಹಾರ ಸಂಸ್ಕೃತಿಯ ಜೊತೆಗೆ ಪರಿಷತ್ತು ಅಟವಾಡುತ್ತಿದೆ” ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ ಕುಮಾರಿ ಹೇಳುತ್ತಾರೆ. “ಮಂಡ್ಯ ಜಿಲ್ಲೆಯ ಹಬ್ಬ ಸಂಭ್ರಮ, ಸಮ್ಮೇಳನಗಳು ಮಾಂಸಾಹಾರಿ ಊಟೋಪಚಾರಕ್ಕೆ ಹೆಸರಾಗಿದೆ. ಅಲ್ಲದೆ, ಸಮ್ಮೇಳನದಲ್ಲಿ ಭಾಗವಹಿಸುವ ಬಹುಮಂದಿ ಮಾಂಸಾಹಾರಿಗಳೇ ಆಗಿರುವುದರಿಂದ ಅದನ್ನು ಏಕೆ ನಿರಾಕರಿಸಲಾಗುತ್ತಿದೆ ಎಂಬುದಕ್ಕೆ ಪರಿಷತ್ ಸಮಜಾಯಿಷಿ ನೀಡಬೇಕು ಎಂದು ಮಂಡ್ಯ ಜಿಲ್ಲೆಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಕಾರ್ಯದರ್ಶಿ ಟಿ. ಎಲ್. ಕೃಷ್ಣೇಗೌಡ ಒತ್ತಾಯಿಸಿದ್ದಾರೆ.
ಮನೆಮನೆಯಿಂದ ಕೋಳಿ ಮತ್ತು ಮೊಟ್ಟೆ ಸಂಗ್ರಹ
ಪ್ರಗತಿಪರ ಸಂಘಟನೆಗಳ ನಾಯಕರು ಹೇಳುತ್ತಿರುವಂತೆ; ಸರ್ಕಾರ ಮತ್ತು ಪರಿಷತ್ ತಮ್ಮ ಈ ಬೇಡಿಕಗೆಳಿಗೆ ಸ್ಪಂದಿಸದಿದ್ದಲ್ಲಿ, ಮನೆಮನೆಗಳಿಂದ ಕೋಳಿ ಮತ್ತು ಮೊಟ್ಟೆಗಳನ್ನು ಸಂಗ್ರಹಿಸಿ ವಿತರಿಸುತ್ತೇ.ವೆ ಸಮ್ಮೇಳನದ ಮೊದಲ ದಿನ ಮೊಟ್ಟೆ ಹಾಗೂ ಎರಡನೇ ದಿನ ಮುದ್ದೆ ಮತ್ತು ನಾಟಿ ಕೋಳಿ ಸಾರು ಹಾಗೂ ಮೂರನೇ ದಿನ ಚಿಕನ್ ಬಿರಿಯಾನಿಯನ್ನು ಸಮ್ಮೇಳನದ ಪ್ರತಿನಿಧಿಗಳಿಗೆ ವಿತರಿಸಲಾಗುವುದು. “ಸಮ್ಮೇಳನದ ಸಂಯೋಜಕರು ಹೊರಡಿಸಿರುವ ನಿಬಂಧನೆಗಳಲ್ಲಿ ಬಾಡೂಟ ನಿಷೇಧಿಸಿದ್ದಾರೆ. ಇದು ಮಾಂಸಾಹಾರ ಸೇವನೆ ಅಪರಾಧ ಎಂಬಂತೆ ಬಿಂಬಿಸಲಾಗುತ್ತಿದೆ. ಈ ಮೂಲಕ ಬಹುಜನರ ಆಹಾರ ಸಂಸ್ಕೃತಿಯ ಅಪಮಾನ ಮಾಡಿದಂತಾಗಿದೆ.” ಎಂದು ಕೃಷ್ಣೇಗೌಡ ʻದ ಫೆಡರಲ್-ಕರ್ನಾಟಕʼ ದೊಂದಿಗೆ ಮಾತನಾಡುತ್ತಾ ಹೇಳಿದರು.
ಪರಿಷತ್ತಿನಿಂದ ಮಾಂಸಾಹಾರ ನಿಷೇಧʼ ಪದದ ವಾಪಸ್
ಈ ಹೋರಾಟದ ಫಲಿತಾಂಶವೆಂದರೆ; ಮಳಿಗೆಗಳನ್ನು ಆನ್ ಲೈನ್ ಮೂಲಕ ನೊಂದಾಯಿಸಿಕೊಂಡವರಿಗೆ ವಿಧಿಸಿದ್ದ ನಿಬಂಧನೆಗಳಲ್ಲಿ ʼಮಾಂಸಾಹಾರ ನಿಷೇಧʼ ಎಂಬ ಪದವನ್ನು ಪರಿಷತ್ ಕೈಬಿಟ್ಟಿದೆ. “ ಇದು ನಮ್ಮ ಹೋರಾಟಕ್ಕೆ ಸಿಕ್ಕ ಮೊದಲ ಜಯ” ಎಂದು ಪ್ರಗತಿಪರ ಸಂಘಟನೆಗಳು ಕಾರ್ಯಕರ್ತರು ಹೇಳುತ್ತಾರೆ. ಆದರೆ, ಆಹಾರ ವ್ಯವಸ್ಥೆಗೂ ಕನ್ನಡ ಸಾಹಿತ್ಯ ಪರಿಷತ್ತಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಘಟಕದ ಅಧ್ಯಕ್ಷರಾದ ಮಹೇಶ್ ಜೋಶಿ ಸಮರ್ಥಿಸಿಕೊಂಡಿದ್ದಾರೆ.
ಸಮ್ಮೇಳನದಲ್ಲಿ ಬಾಡೂಟ ನಿಷೇಧ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ನೂರಾರು ಮಂದಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ, ಪರಷತ್ತಿನ ನಿಲುವನ್ನು ಖಂಡಿಸಿದ್ದಾರೆ. “ಈ ಬೆಳವಣಿಗೆ, ಪರಿಷತ್ತಿಗೆ ಬಹು ಸಂಸ್ಕೃತಿಯ ಬಗ್ಗೆ ಇರುವ ಪೂರ್ವಗ್ರಹವನ್ನು ಸ್ಪಷ್ಟಪಡಿಸುತ್ತದೆ” ಎನ್ನುತ್ತಾರೆ, ಲೇಖಕ, ಪ್ರಕಾಶಕ ಗುರುಪ್ರಸಾದ್.
ಈ ಬಾರಿಯ ಸಮ್ಮೇಳನ ವಿವಾದಕ್ಕೊಳಗಾಗುತ್ತಿರುವುದು, ಇದೇ ಮೊದಲಲ್ಲ. ಕೆಲವು ದಿನಗಳ ಹಿಂದೆ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನಕ್ಕೆ ʼಸಾಹಿತ್ಯೇತರ ವ್ಯಕ್ತಿʼಯನ್ನು ಅಯ್ಕೆ ಮಾಡುವ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಅವರು ಹೇಳಿಕೆ ವಿವಾದಕ್ಕೆ ಸಿಲುಕಿತ್ತು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ (ಈ ಲೇಖನ ಬರೆಯುತ್ತಿರ ವೇಳಗೆ ಎಸ್. ಎಂ. ಕೃಷ್ಣ ಅಗಲಿದ್ದಾರೆ), ಮಾಜಿ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್ ಸೇರಿದಂತೆ ಸಾಹಿತ್ಯೇತರ ವ್ಯಕ್ತಿಗಳ ಹೆಸರುಗಳನ್ನು ಪರಿಗಣಿಸಲು ಪರಿಷತ್ ಚಿಂತನೆ ನಡೆಸಿತ್ತು. ಕೊನೆಗೆ ಸರ್ವಾಧ್ಯಕ್ಷ ಪದವಿಗೆ ಆಯ್ಕೆಯಾದವರು ಹೆಸರಾಂತ ಬರಹಗಾರ, ಜಾನಪದ ವಿದ್ವಾಂಸ ಗೋ. ರೂ. ಚನ್ನಬಸಪ್ಪ.
ಮಂಡ್ಯದಲ್ಲಿ ಕನ್ನಡದ ಜಾತ್ರೆ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ನೆಲ, ಭಾಷೆ ಮತ್ತು ಸಂಸ್ಕೃತಿಯನ್ನು ಸಂಭ್ರಮಿಸುವ ಮತ್ತು ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಸಂಗೀತದ ಆಸಕ್ತಿಯನ್ನು ಸಂರಕ್ಷಿಸಲು ಸ್ಥಾಪಿತವಾದಂಥ ಸಂಸ್ಥೆ. ಪ್ರಪಂಚದಾದ್ಯಂತ ಇರುವ ಕನ್ನಡಿಗರು, ಈ ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ. ಈ ಬಾರಿ ವಿದೇಶದಲ್ಲಿರುವ ಕನ್ನಡಿಗರು ಭಾಗವಹಿಸುತ್ತಿದ್ದಾರೆ ಎಂದು ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಹೇಳುತ್ತಾರೆ.
ಟಿಪ್ಪು ವಿಚಾರ ಸಂಕಿರಣಕ್ಕೆ ವಿರೋಧ
ಈ ಎರಡು ವಿವಾದಗಳೊಂದಿಗೆ ಹೊಸದೊಂದು ವಿವಾದ ಕೂಡ ಸೃಷ್ಟಿಯಾಗದೆ. ಟಿಪ್ಪು ವಿವಾದ ಸಮ್ಮೇಳನದ ಮೇಲೆ ಕರಿ ಛಾಯೆ ಬೀರಿದೆ. ಸಮ್ಮೇಳನದಲ್ಲಿ ಟಿಪ್ಪು ಕುರಿತ ವಿಚಾರಗೋಷ್ಠಿ ಆಯೋಜಿಸದಂತೆ ಬಿಜೆಪಿ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ. ಟಿಪ್ಪು ಸುಲ್ತಾನ್ ಕನ್ನಡ ಭಾಷೆ ವಿರೋಧಿಯಾಗಿದ್ದ. ತನ್ನ ಆಡಳಿತ ಕಾಲದಲ್ಲಿ ಪರ್ಷಿಯನ್ ಭಾಷೆ ಹೇರಿದ್ದ. ಹೀಗಾಗಿ ಆಯೋಜನೆ ಮಾಡಿದರೆ, ಸಮ್ಮೇಳನದಲ್ಲಿ ಸಿಎಂ ಗೆ ಕಪ್ಪು ಬಾವುಟವನ್ನು ಪ್ರದರ್ಶಿಸುವ ಎಚ್ಚರಿಕೆಯನ್ನು ಸಂಘ ಪರಿವಾರ ನೀಡಿದೆ.
ಪಕ್ಷಪಾತದ ವಿಧಾನ
ಇದೇ ರೀತಿ ಕಳೆದ ವರ್ಷ ಹಾವೇರಿಯಲ್ಲಿ ನಡೆದ 86ನೇ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತಿಗಳು ಮತ್ತು ಸಾಹಿತಿಗಳನ್ನು ಕಡೆಗಣಿಸಿರುವ ಆರೋಪದ ಮೇಲೆ ವಿವಾದ ಎದ್ದಿದ್ದನ್ನು ಇಲ್ಲಿ ಸ್ಮರಿಸಬಹುದು. ಮಂಡ್ಯದಲ್ಲಿ ನಡೆಯಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಹೊಸ ದಾಖಲೆ ನಿರ್ಮಿಸಲಿದೆ ಎಂಬ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಹೇಳಿಕೆಯನ್ನು ಉಲ್ಲೇಖಿಸಿದ ಖ್ಯಾತ ಸಾಹಿತಿಯೊಬ್ಬರು, “ಜೋಶಿಯವರು ಕನ್ನಡಿಗರಿಗೆ ನಿರಾಸೆ ಮಾಡಿಲ್ಲ, ವಿವಾದದ ನಂತರ ವಿವಾದವನ್ನು ಹುಟ್ಟು ಹಾಕುವ ಮೂಲಕ ಕೊಟ್ಟ ಮಾತಿನಂತೆ ದಾಖಲೆ ನಿರ್ಮಿಸುತ್ತಿದ್ದಾರೆ” ಹೇಳಿರುವುದು ಗಮನಾರ್ಹ.
ಕಳೆದ ಬಾರಿಯಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವಿವಾದದ ಗೂಡಾಗುತ್ತಿರುವುದಕ್ಕೆ, ಅದರ ಅಧ್ಯಕ್ಷರಾದ ಮಹೇಶ್ ಜೋಶಿ ಅವರ ಸಂಘ ಪರಿವಾರದ ಪರ ಒಲವು ಎಂದು ಹೇಳಲಾಗುತ್ತಿದೆ. “ಜೋಶಿ ಅವರು ಶತಮಾನದಷ್ಟು ಹಳೆಯದಾದ, ಜಾತ್ಯಾತೀತ ಮೌಲ್ಯಗಳನ್ನು ಎತ್ತಿ ಹಿಡಿದಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಕೇಸರೀಕರಣಗೊಳಿಸುತ್ತಿದ್ದಾರೆ” ಎಂದು ಪ್ರಗತಿಪರರು ಆರೋಪಿಸುತ್ತಿದ್ದಾರೆ.
ಪರಿಷತ್ತು ತನ್ನ ಸದಸ್ಯತ್ವದ ದೃಷ್ಟಿಯಿಂದ ದಕ್ಷಿಣ ಏಷ್ಯಾದ ಅತಿದೊಡ್ಡ ಸಾಹಿತ್ಯ ಸಂಸ್ಥೆ ಎಂದು ಕರೆಸಿಕೊಂಡಿದೆ. ಇದರ ಸದಸ್ಯತ್ವವು 2004 ರಲ್ಲಿ ಕೇವಲ 40,000 ದಷ್ಟಿದ್ದದ್ದು ಕೇವಲ ಇಪ್ಪತ್ತು ವರ್ಷದಲ್ಲಿ 4 ಲಕ್ಷಕ್ಕೆ ಏರಿದೆ ”ಎಂದು ಪರಿಷತ್ತಿನೊಂದಿಗೆ ದೀರ್ಘ ಸಂಬಂಧ ಹೊಂದಿರುವ ಬರಹಗಾರ ಮತ್ತು ಸಾಂಸ್ಕೃತಿಕ ವಿಮರ್ಶಕ ಶ್ರೀಧರಮೂರ್ತಿ ಹೇಳುತ್ತಾರೆ. ಆದರೆ ಪರಿಷತ್ತಿನೊಂದಿಗೆ ದೀರ್ಘಕಾಲ ಸಂಬಂಧ ಹೊಂದಿರುವ ಇನ್ನು ಕೆಲವರು; “ಇತ್ತೀಚಿನ ವರ್ಷಗಳಲ್ಲಿ ಪರಿಷತ್ ಜಾತಿ ಮತ್ತು ಧರ್ಮ ಆಧಾರಿತ ರಾಜಕೀಯದಲ್ಲಿ ಸಿಲುಕಿಕೊಂಡಿದೆ. ಪರಿಷತ್ತಿನ ಜಾತಿ ಮತ್ತು ಧರ್ಮ ರಾಜಕಾರಣ ಭಾಷೆಯನ್ನು ರಾಜಕೀಕರಣಗೊಳಿಸಿದೆ. ಸ್ಥಾಪನೆಯಾಗಿ ನೂರು ವರ್ಷಗಳ ನಂತರ ಪರಿಷತ್ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ತನ್ನ ಪ್ರಮುಖ ಕಾರ್ಯಸೂಚಿಯಿಂದ ದೂರ ಸರಿದಿದೆ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಇದಕ್ಕೆ ನಿದರ್ಶನವೆಂದರೆ, ಜೋಶಿ ಅವರು 2021ರಲ್ಲಿ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ಬೆಂಬಲ ಪಡೆದುಕೊಂಡು, ಭಾರಿ ಬಹುಮತದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದದ್ದು ಎಂದು ಮತ್ತೆ ಕೆಲವರು ಹೇಳುತ್ತಾರೆ. ಬಿಜೆಪಿ ಕಾರ್ಯಕರ್ತರು ಮೂರು ವರ್ಷಗಳ ಹಿಂದೆ ಮತದಾರರ ಪಟ್ಟಿ ತಯಾರಿಸಿ ಮತದಾರರನ್ನು ಮತಗಟ್ಟೆಗೆ ಕರೆತರುವ ಮೂಲಕ ಸಾರ್ವತ್ರಿಕ ಚುನಾವಣೆಯಂತೆಯೇ ಕೆಲಸ ಮಾಡಿದರು. ಆ ಚುನಾವಣೆಯಲ್ಲಿ ಕೇಸರಿ ಪಕ್ಷದ "ಹಸ್ತಕ್ಷೇಪ" ವನ್ನು ಅನೇಕ ಜನರು ಟೀಕಿಸಿದ್ದು ಇಂದು ಇತಿಹಾಸ. .ಜೋಶಿ ಅವರು ಚುನಾವಣೆಯಲ್ಲಿ ಹಿರಿಯ ಆರ್‌ಎಸ್‌ಎಸ್ ನಾಯಕರನ್ನು ಸಂಪರ್ಕಿಸಿ ಅವರ ನೆರವು ಕೋರಿದ್ದು ಇಂದು ರಹಸ್ಯವಾಗಿ ಉಳಿದಿಲ್ಲ. ಜೋಶಿ ಅವರ ಬೆಂಬಲಕ್ಕೆ ಪಕ್ಷ ನಿಲ್ಲುವಂತೆ ಆರೆಸ್ಸೆಸ್ ಮುಖಂಡರು ಬಿಜೆಪಿ ನಾಯಕರ ಮೇಲೆ ಒತ್ತಡ ಹೇರಿದ್ದರು ಎನ್ನಲಾಗಿದೆ.