Mysore MUDA Case | ಸಿಬಿಐ ತನಿಖೆ ಅರ್ಜಿ ವಿಚಾರಣೆ ಮುಂದೂಡಿಕೆ; ಹೈಕೋರ್ಟ್‌ನಿಂದ ಸಿಎಂಗೆ ತಾತ್ಕಾಲಿಕ ರಿಲೀಫ್‌
x
ಹೈಕೋರ್ಟ್‌

Mysore MUDA Case | ಸಿಬಿಐ ತನಿಖೆ ಅರ್ಜಿ ವಿಚಾರಣೆ ಮುಂದೂಡಿಕೆ; ಹೈಕೋರ್ಟ್‌ನಿಂದ ಸಿಎಂಗೆ ತಾತ್ಕಾಲಿಕ ರಿಲೀಫ್‌

ಮುಡಾ ಪ್ರಕರಣದ ಕುರಿತು ಲೋಕಾಯುಕ್ತ ತನಿಖೆ ಮಾಡಬಹುದು. ಆದರೆ, ಜನಪ್ರತಿನಿಧಿಗಳ ನ್ಯಾಯಲಯಕ್ಕೆ ವರದಿ ಸಲ್ಲಿಸುವಂತಿಲ್ಲ. ಜನವರಿ 26ರಂದು ಹೈಕೋರ್ಟ್‌ಗೆ ತನಿಖಾ ವರದಿ ಸಲ್ಲಿಕೆ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.


ಮುಡಾ ನಿವೇಶನ ಹಂಚಿಕೆ ಅಕ್ರಮದ ತನಿಖೆಯನ್ನು ಸಿಬಿಐ ವಹಿಸುವಂತೆ ಕೋರಿ ಸಲ್ಲಿಸಿದ್ದಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜ.27ಕ್ಕೆ ಮುಂದೂಡಿದೆ. ಪ್ರಕರಣ ಸಂಬಂಧ ಲೋಕಾಯುಕ್ತ ತನಿಖೆ ಮುಂದುವರಿಸಲು ಸೂಚಿಸಿದ್ದು, ತನಿಖೆಯ ಮೇಲುಸ್ತುವಾರಿ ನೋಡಿಕೊಳ್ಳುವಂತೆ ಲೋಕಾಯುಕ್ತ ಐಜಿಪಿಗೆ ನಿರ್ದೇಶನ ನೀಡಿದೆ.

ಮುಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ನೇತೃತ್ವದ ಪೀಠ, ಈವರೆಗೆ ಲೋಕಾಯುಕ್ತ ನಡೆಸಿದ ತನಿಖೆಯ ವಿವರಗಳನ್ನು ಜ.16 ರೊಳಗೆ ಸಲ್ಲಿಸಬೇಕು. ಪೂರ್ಣ ತನಿಖೆಯ ಮಾಹಿತಿಯನ್ನು ಜ.26ರಂದು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಾಲಯ ಲೋಕಾಯುಕ್ತ ಪರ ವಕೀಲರಿಗೆ ಸೂಚನೆ ನೀಡಿದೆ.

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಸೋದರ ಮಾವ ಸೇರಿದಂತೆ ಹಲವರ ವಿರುದ್ಧ ಕೈಗೊಂಡಿರುವ ತನಿಖಾ ಮಾಹಿತಿಯನ್ನು ಡಿಸೆಂಬರ್‌ ಒಳಗೆ ಸಲ್ಲಿಸಬೇಕೆಂದು ಹೈಕೋರ್ಟ್‌ ಈ ಹಿಂದೆ ಆದೇಶಿಸಿತ್ತು.ಆದರೆ, ಲೋಕಾಯುಕ್ತ ವಕೀಲರು ಕಾಲಾವಕಾಶ ಕೇಳಿದ್ದರು. ಈಗ ತನಿಖಾ ವರದಿ ಸಲ್ಲಿಸಲು ಜ.26ಕ್ಕೆ ಡೆಡ್‌ಲೈನ್‌ ನೀಡಿದೆ.

ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಮಣಿಂದರ್ ಸಿಂಗ್ ವಾದ ಮಂಡಿಸಿ, ಲೋಕಾಯುಕ್ತ ತನಿಖೆಯ ಮೇಲೆ ಭರವಸೆ ಇಲ್ಲ. ಹಾಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಮುಡಾ ಹಗರಣವನ್ನು ಪಾರದರ್ಶಕವಾಗಿ ತನಿಖೆ ನಡೆಸುವಂತೆ ನಿರ್ದೇಶಿಸಬೇಕು ಎಂದು ಕೋರಿದರು.

ಮುಡಾ ಕಚೇರಿಯಿಂದ ಐಎಎಸ್ ಅಧಿಕಾರಿ ನೇತೃತ್ವದ ತಂಡ ಎಲ್ಲಾ ಕಡತಗಳನ್ನು ತೆಗೆದುಕೊಂಡು ಹೋಗಿದೆ. ಸರ್ಕಾರ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ನೇತೃತ್ವದ ಏಕವ್ಯಕ್ತಿ ಆಯೋಗ ಕೂಡ ತನಿಖೆ ನಡೆಸುತ್ತಿದೆ. ಕಳೆದ ಜೂನ್‌ನಿಂದ ಈವರೆಗೆ 140 ಕ್ಕೂ ಹೆಚ್ಚು ಕಡತಗಳು ಕಾಣೆಯಾಗಿವೆ. ನಾಪತ್ತೆಯಾಗಿರುವ ಕಡತಗಳೇ ಮುಡಾ ಪ್ರಕರಣದ ಪ್ರಮುಖ ಸಾಕ್ಷ್ಯಗಳು. ಇಂತಹ ಸಮಯದಲ್ಲಿ ಲೋಕಾಯುಕ್ತ ತನಿಖೆಯನ್ನು ನಂಬುವುದು ಹೇಗೆ ಎಂದು ನ್ಯಾಯಪೀಠದ ಗಮನ ಸೆಳೆದರು. ಸಿಎಂ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಪ್ರೊ. ರವಿವರ್ಮಕುಮಾರ್ ವಾದ ಮಂಡಿಸಿ, ಲೋಕಾಯುಕ್ತ ತನಿಖೆ, ಪಿ.ಎನ್‌.ದೇಸಾಯಿ ತನಿಖೆ ನಡೆಯುತ್ತಿದೆ. ಸಿಬಿಐ ತನಿಖೆಯ ಅಗತ್ಯವಿಲ್ಲ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜ. 28ರೊಳಗೆ ವರದಿ ಸಲ್ಲಿಸಲು ಗಡುವು ನೀಡಿದೆ ಎಂದು ಪ್ರೊ.ರವಿವರ್ಮಕುಮಾರ್‌ ನ್ಯಾಯಾಲಯದ ಗಮನ ಸೆಳೆದರು.

ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣದ ಕುರಿತು ಲೋಕಾಯುಕ್ತ ತನಿಖೆ ಮುಂದುವರಿಸಬಹುದು. ಆದರೆ, ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಾಗಿಲ್ಲ. ಜನವರಿ 26ರಂದು ಹೈಕೋರ್ಟ್‌ಗೆ ತನಿಖಾ ವರದಿ ಸಲ್ಲಿಕೆ ಮಾಡಬೇಕು. ಲೋಕಾಯುಕ್ತ ಎಡಿಜಿಪಿ ತನಿಖೆಯ ಉಸ್ತುವಾರಿ ನೋಡಿಕೊಳ್ಳಬೇಕು ಎಂದು ನ್ಯಾಯಪೀಠ ಆದೇಶಿಸಿತು.ಜೊತೆಗೆ ವಿಚಾರಣೆ ಅವಧಿಯಲ್ಲಿ ಸಲ್ಲಿಕೆಯಾಗಿರುವ ಆಕ್ಷೇಪಣೆಗಳನ್ನು ಎಲ್ಲಾ ಪ್ರತಿವಾದಿಗಳಿಗೂ ನೀಡುವಂತೆ ಹೈಕೋರ್ಟ್‌ ಸೂಚಿಸಿತು.

Read More
Next Story