Bus Fare Hike | ಬಸ್ ಪ್ರಯಾಣ ದರ: ಯಾರ ಅವಧಿಯಲ್ಲಿ ಎಷ್ಟು ಏರಿಕೆ; ಅಂಕಿ-ಅಂಶ ಸಹಿತ ತಿರುಗೇಟು
ರಾಜ್ಯದಲ್ಲಿ 2006 ರಿಂದ 2025 ರವರೆಗೆ ಯಾವ ಸರ್ಕಾರದ ಅವಧಿಯಲ್ಲಿ ಎಷ್ಟು ಪ್ರಯಾಣದ ದರ ಏರಿಕೆಯಾಗಿದೆ ಎನ್ನುವ ಅಂಕಿ- ಅಂಶಗಳ ಪಟ್ಟಿಯನ್ನು ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಏರಿಕೆ ವಿಚಾರ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ. ಗ್ಯಾರಂಟಿ ಯೋಜನೆಗಳ ನಷ್ಟದಿಂದ ಸರ್ಕಾರ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ರಾಜ್ಯ ಸರ್ಕಾರ ಅಂಕಿ- ಅಂಶಗಳ ಸಮೇತ ತಿರುಗೇಟು ನೀಡಿದೆ.
ರಾಜ್ಯದಲ್ಲಿ 2006 ರಿಂದ 2025 ರವರೆಗೆ ಯಾವ ಸರ್ಕಾರದ ಅವಧಿಯಲ್ಲಿ, ಎಷ್ಟು ಪ್ರಯಾಣದ ದರ ಏರಿಕೆಯಾಗಿದೆ ಎನ್ನುವ ಅಂಕಿ- ಅಂಶದ ಪಟ್ಟಿಯನ್ನು ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
2006ರಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕೆಎಸ್‌ಆರ್‌ಟಿಸಿಯ ನಾಲ್ಕೂ ನಿಗಮಗಳಲ್ಲಿ ಶೇ 8.02 ರಷ್ಟು ಪ್ರಯಾಣ ದರ ಏರಿಕೆ ಮಾಡಲಾಗಿದೆ. 2008 ರಿಂದ 2012 ರವರೆಗೆ ಬಿಜೆಪಿ ಅಧಿಕಾರ ನಡೆಸಿದ ನಾಲ್ಕೂ ವರ್ಷಗಳಲ್ಲಿ ಪ್ರಯಾಣ ದರ ಏರಿಕೆ ಮಾಡಿದೆ.
ಅಂದಿನ ಬಿಜೆಪಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಆರ್.ಅಶೋಕ್ ಅವರು 2008 ರಲ್ಲಿ ಶೇ 12.01, 2009ರಲ್ಲಿ ಶೇ 3.56, 2010 ಮಾರ್ಚ್ ತಿಂಗಳಲ್ಲಿ ಶೇ 4.76, ಜೂನ್ ತಿಂಗಳಲ್ಲಿ ಶೇ 3.50, 2011 ಜೂನ್ ತಿಂಗಳಲ್ಲಿ ಶೇ 6.95, ಡಿಸೆಂಬರ್ ತಿಂಗಳಲ್ಲಿ ಶೇ 5.01 ರಷ್ಟು ಬಸ್ ಪ್ರಯಾಣ ದರ ಏರಿಕೆ ಮಾಡಿದ್ದಾರೆ. ಬಿಜೆಪಿಯ ಈ ಅವಧಿಯಲ್ಲಿ ಬಿ.ಎಸ್.ಯಡಿಯೂರಪ್ಪ, ಡಿ.ವಿ. ಸದಾನಂದಗೌಡ ಹಾಗೂ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಗಳಾಗಿದ್ದರು.
2013 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ವರ್ಷದಲ್ಲಿ ಶೇ 10.50, 2014 ರಲ್ಲಿ ಶೇ 7.96 ರಷ್ಟು ಪ್ರಯಾಣ ದರ ಏರಿಕೆ ಮಾಡಿದೆ. 2015 ರಲ್ಲಿ ಶೇ 2 ರಷ್ಟು ಪ್ರಯಾಣ ದರವನ್ನು ಇಳಿಕೆ ಮಾಡಿದೆ.
2020 ರಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಬಳಿಕ ಬಿಎಂಟಿಸಿ ಹೊರತುಪಡಿಸಿ ಉಳಿದ ಸಾರಿಗೆ ನಿಗಮಗಳಲ್ಲಿ ಶೇ 12 ರಷ್ಟು ಬಸ್ ಪ್ರಯಾಣ ದರ ಏರಿಸಲಾಗಿದೆ. ಈಗ 2025 ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಶೇ 15 ರಷ್ಟು ಪ್ರಯಾಣ ದರ ಏರಿಸಲಾಗಿದೆ ಎಂಬುದನ್ನು ವಿವರಿಸಲಾಗಿದೆ.
2008 ರಿಂದ 2012 ರವರೆಗೆ ಆರ್.ಅಶೋಕ್ ಸಾರಿಗೆ ಸಚಿವರಾಗಿದ್ದಾಗ ಒಟ್ಟು ಏಳು ಬಾರಿ ಶೇ 47.8 ರಷ್ಟು ಬಸ್ ಪ್ರಯಾಣ ದರ ಏರಿಕೆ ಮಾಡಿದರೆ, 2013ರಿಂದ 2015 ರವರೆಗಿನ ಕಾಂಗ್ರೆಸ್ ಅವಧಿಯಲ್ಲಿ ಶೇ 18.46 ರಷ್ಟು ಪ್ರಯಾಣ ದರ ಏರಿಕೆಯಾಗಿದೆ. ಯಾರ ಆಡಳಿತದಲ್ಲಿ ದರ ಏರಿಸಲಾಗಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ವಾಗ್ದಾಳಿ ನಡೆಸಿದೆ.