Anganawadi Workers | ಲಕ್ಷಾಂತರ ಮಕ್ಕಳ ಕಾಯುವ ಕೈಗಳು ಇವು; ಆದರೂ ಇಲ್ಲ ಸರ್ಕಾರದ ಬಲ!
ಸಮಗ್ರ ಶಿಶು ಅಭಿವೃದ್ಧಿ ಸೇವೆಯ ಜಾರಿಯ ಜೊತೆಗೆ ಸರ್ಕಾರದ ಕಾರ್ಯಕ್ರಮ ಅನುಷ್ಠಾನ, ವಿವಿಧ ಸಮೀಕ್ಷೆಗಳಲ್ಲಿ ತೊಡಗಿಸಿಕೊಂಡರೂ ಅಂಗನವಾಡಿ ನೌಕರರ ಬೇಡಿಕೆಗೆ ಸರ್ಕಾರಗಳು ಸ್ಪಂದಿಸುತ್ತಿಲ್ಲ.
ಆರು ತಿಂಗಳಿಂದ ಮೂರು ವರ್ಷದವರೆಗಿನ ಕಂದಮ್ಮಗಳ ಪೋಷಣೆ, ಬಾಣಂತಿ ಹಾಗೂ ಗರ್ಭಿಣಿಯರ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಅಂಗನವಾಡಿ ಕಾರ್ಯಕರ್ತೆಯರ ಯೋಗಕ್ಷೇಮವನ್ನೇ ಸರ್ಕಾರ ಮರೆತಿದೆ.
ಸಮಗ್ರ ಶಿಶು ಅಭಿವೃದ್ಧಿ ಸೇವೆಯ (ICDS) ಪರಿಣಾಮಕಾರಿ ಜಾರಿಯ ಜೊತೆಗೆ ಸರ್ಕಾರದ ಕಾರ್ಯಕ್ರಮ ಅನುಷ್ಠಾನ, ವಿವಿಧ ಸಮೀಕ್ಷೆಗಳಲ್ಲಿ ತೊಡಗಿಸಿಕೊಂಡರೂ ಅಂಗನವಾಡಿ ನೌಕರರ ಬೇಡಿಕೆಗೆ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಅಧಿಕ ಕಾರ್ಯದೊತ್ತಡದಿಂದ ಅನಾರೋಗ್ಯಕ್ಕೆ ತುತ್ತಾದರೂ ಅಂಗನವಾಡಿ ಕಾಯಕರ್ತೆಯರ ಯೋಗಕ್ಷೇಮ ಕೇಳುತ್ತಿಲ್ಲ. ಮಕ್ಕಳು ಹಾಗೂ ಗರ್ಭಿಣಿ-ಬಾಣಂತಿಯರ ಪೋಷಣೆಯ ಜವಾಬ್ದಾರಿ ಹೊತ್ತಿರುವ ಕಾರ್ಯಕರ್ತೆಯರು ಸರ್ಕಾರ ನೀಡುವ ನೆರವು ಸಾಕಾಗದೇ ತಮ್ಮ ಒಡವೆಗಳನ್ನೇ ಅಡವಿಟ್ಟು ಆರೈಕೆಯ ವೆಚ್ಚ ಭರಿಸಬೇಕಾದ ಪರಿಸ್ಥಿತಿ ರಾಜ್ಯದಲ್ಲಿದೆ.
ಪ್ರತಿ ಬಾರಿ ಬೇಡಿಕೆಗಳೊಂದಿಗೆ ಪ್ರತಿಭಟನೆ, ಧರಣಿ ನಡೆಸಿದರೂ ಇಲಾಖೆ ಅಧಿಕಾರಿಗಳು, ಸರ್ಕಾರ ಆಶ್ವಾಸನೆಗಳ ಮೂಲಕ ಕಣ್ಣೊರೆಸಿ ಕಳುಹಿಸುತ್ತಿದೆ. ಕಳೆದ ಫೆಬ್ರುವರಿ- ಮಾರ್ಚ್ ತಿಂಗಳಲ್ಲಿ ನಡೆದ ಹೋರಾಟ, ಬೆಳಗಾವಿ ಅಧಿವೇಶನದ ಅವಧಿಯಲ್ಲಿ ನಡೆದ ಪ್ರತಿಭಟನೆ ವೇಳೆ ಕೂಡ ಭರವಸೆ ಸಿಕ್ಕಿತೇ ವಿನಃ ಬೇಡಿಕೆ ಈಡೇರಿಸಿಲ್ಲ.
ಗೌರವ ಧನ ಹೆಚ್ಚಳ, ಸೇವೆ ಖಾಯಮಾತಿ, ನಿವೃತ್ತರ ಗ್ರ್ಯಾಚುಯಿಟಿ ಹಣ ಪಾವತಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈಗ ಮತ್ತೊಂದು ಸುತ್ತಿನ ಹೋರಾಟಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಅಣಿಯಾಗುತ್ತಿದ್ದಾರೆ.
ಫೆ.17 ಹಾಗೂ 18 ರಂದು ಪ್ರತಿಭಟನೆ ನಡೆಸಲು ಯೋಜಿಸಲಾಗಿದೆ. ಈ ಮಧ್ಯೆ, ಅಂಗನವಾಡಿ ನೌಕರರ ಮನವೊಲಿಕೆ ಕಸರತ್ತು ಆರಂಭಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಾತುಕತೆ ನಡೆಸಿದ್ದು, ಮತ್ತದೇ ಭರವಸೆ ನೀಡಿ ಪ್ರತಿಭಟನೆ ತಡೆಯುವ ಪ್ರಯತ್ನ ಆರಂಭಿಸಿದೆ. ಆ ಹಿನ್ನೆಲೆಯಲ್ಲಿ ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ, ಬೇಡಿಕೆಗಳ ಕುರಿತ ʼದ ಫೆಡರಲ್ ಕರ್ನಾಟಕʼದ ಕಾಳಜಿಯ ವರದಿ ಇಲ್ಲಿದೆ.
ಬದಲಾದ ಆಹಾರ ಮೆನು
ಅಂಗನವಾಡಿ ಕೇಂದ್ರಗಳಲ್ಲಿ ಬಾಣಂತಿ, ಗರ್ಭಿಣಿಯರಿಗೆ ಪೌಷ್ಠಿಕ ಆಹಾರವಾಗಿ ಚಿಕ್ಕಿ, ತೊಗರಿ ಬೇಳೆ, ಹೆಸರುಕಾಳು, ಪೌಷ್ಟಿಕ ಆಹಾರದ ಪುಡಿ ಹಾಗೂ ಮೊಟ್ಟೆ ನೀಡಲಾಗುತ್ತಿತ್ತು. ಆದರೆ, ಈಗ ಊಟದ ಮೆನು ಸಂಪೂರ್ಣ ಬದಲಾಗಿದೆ. ಗೋಧಿ ನುಚ್ಚು, ಅಕ್ಕಿ, ಹೆಸರುಕಾಳು ಹಾಗೂ ಮೊಟ್ಟೆ ಮಾತ್ರ ನೀಡಲಾಗುತ್ತಿದೆ. ಆದರೆ, ಆಹಾರ ಪಡೆಯುವ ಕ್ರಮ ಹಾಗೂ ಪಡಿತರ ವಿತರಣೆಯ ಪ್ರಮಾಣಕ್ಕೆ ಗರ್ಭಿಣಿ, ಬಾಣಂತಿಯರೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಬಾಣಂತಿಯರ ಸರಣಿ ಸಾವು ಹೆಚ್ಚು ಚರ್ಚೆಗೆ ಒಳಗಾಗಿದೆ. ಬಹುತೇಕ ಗರ್ಭಿಣಿಯರು ಹೆರಿಗೆ ನಂತರ ರಕ್ತಹೀನತೆ, ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಸಾವಿನ ಮನೆಯ ಕದ ತಟ್ಟುತ್ತಿದ್ದಾರೆ. ಹೀಗಿರುವಾಗ ಗರ್ಭಾವಸ್ಥೆಯಿಂದಲೇ ಪೂರಕ ಆಹಾರದ ಬದಲು ಪೂರ್ಣ ಆಹಾರ ನೀಡಿದರೆ ಆರೋಗ್ಯ ರಕ್ಷಣೆ ಮಾಡಬಹುದು. ಗರ್ಭಿಣಿ-ಬಾಣಂತಿಯರಿಗೆ ನೀಡುತ್ತಿರುವ ಪಡಿತರವನ್ನೂ ಹೆಚ್ಚಿಸಬೇಕು ಎಂಬುದು ಅಂಗನವಾಡಿ ಕಾರ್ಯಕರ್ತೆಯರ ಒತ್ತಾಯವಾಗಿದೆ.
ಮೊಟ್ಟೆಗೂ ಸ್ವಂತ ಹಣ ವ್ಯಯ
ರಾಜ್ಯ ಸರ್ಕಾರ ಗರ್ಭಿಣಿ ಹಾಗೂ ಬಾಣಂತಿಯರಿಗೆ ಪ್ರತಿದಿನ ಮೊಟ್ಟೆ ವಿತರಿಸುತ್ತಿದೆ. ಪ್ರತಿ ಮೊಟ್ಟೆ ಖರೀದಿಗೆ ಸರ್ಕಾರ 6 ರೂ. ನೀಡುತ್ತಿದೆ. ಆದರೆ, ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆ 7.15 ರಿಂದ 8 ರೂ. ಇದೆ. ಸರ್ಕಾರ ನೀಡುವ ಈ ಹಣ ಸಾಕಾಗುತ್ತಿಲ್ಲ. ಮೊಟ್ಟೆ ಖರೀದಿಗೆ ತಗುಲುವ ಹೆಚ್ಚುವರಿ ಹಣವನ್ನು ಅಂಗನವಾಡಿ ಕಾರ್ಯಕರ್ತೆಯರೇ ಭರಿಸಬೇಕಾಗಿದೆ.
ಇನ್ನು ಆರು ತಿಂಗಳಿಂದ ಮೂರು ವರ್ಷದೊಳಗಿನ ಮಕ್ಕಳಿಗೆ ವಾರದಲ್ಲಿ ಎರಡು ದಿನವಷ್ಟೇ ಮೊಟ್ಟೆ ನೀಡಲಾಗುತ್ತಿದೆ. ಗೋಧಿ ಹಿಟ್ಟಿನ ಮಿಲೆಟ್ ಲಡ್ಡು ಮಕ್ಕಳಿಗೆ ರುಚಿಸುತ್ತಿಲ್ಲ. ಹಾಗಾಗಿ ಮಕ್ಕಳು ಕೂಡ ಅಪೌಷ್ಟಿಕತೆಗೆ ಒಳಗಾಗುತ್ತಿದ್ದಾರೆ. ಈ ಮೊದಲು ಇದ್ದಂತೆ ವಾರದಲ್ಲಿ ಒಮ್ಮೆ ಚಿತ್ರಾನ್ನ, ಅನ್ನ, ತರಕಾರಿ ಸಾರು, ಚಿಕ್ಕಿ ನೀಡಬೇಕು ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘದ (ಸಿಐಟಿಯು) ರಾಜ್ಯ ಕಾರ್ಯದರ್ಶಿ ನಳಿನಾ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಬಾಣಂತಿಯರಿಗೆ ಪ್ರತಿ ತಿಂಗಳು 1 ಕೆ.ಜಿ. 775 ಗ್ರಾಂ ಅಕ್ಕಿ, 1 ಕೆ.ಜಿ. 837 ಗ್ರಾಂ ಗೋಧಿ, 90 ಗ್ರಾಂ ಎಣ್ಣೆ, ಅರ್ಧ ಕೆ.ಜಿ. ಹಾಲಿನ ಪೌಡರ್, ಪುಷ್ಟಿ ಪೌಷ್ಟಿಕಾಂಶದ ಪುಡಿ ಹಾಗೂ ಗ್ರಾಂಗಳ ಲೆಕ್ಕದಲ್ಲಿ ಸಾಂಬಾರ್ ಪೌಡರ್ ನೀಡಲಾಗುತ್ತಿದೆ. ಇದು ಯಾವುದಕ್ಕೂ ಸಾಕಾಗುವುದಿಲ್ಲ. ಪಡಿತರ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಹೇಳಿದರು.
ಫೇಸ್ ವ್ಯಾಲ್ಯು ಸುತ್ತೋಲೆಗೆ ಆಕ್ಷೇಪ
ಅಂಗನವಾಡಿಗಳಿಂದ ಪಡಿತರ ಹಾಗೂ ಆಹಾರ ಪಡೆಯಲು ಬಾಣಂತಿ ಹಾಗೂ ಗರ್ಭಿಣಿಯರೇ ಅಂಗನವಾಡಿ ಕೇಂದ್ರಕ್ಕೆ ಖುದ್ದು ಬರಬೇಕು. ಅವರೊಂದಿಗೆ ಭಾವಚಿತ್ರ ತೆಗೆದು ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡುವ ಸಲುವಾಗಿ ಫೇಸ್ ವ್ಯಾಲ್ಯು ತಂತ್ರಾಂಶ ಪರಿಚಯಿಸಿದೆ. ಆದರೆ, ಇದಕ್ಕೆ ಅಂಗನವಾಡಿ ನೌಕರರು ವಿರೋಧ ವ್ಯಕ್ತಪಡಿಸಿದ್ದಾರೆ.
ಬಾಣಂತಿಯರ ನೋಂದಣಿ ವೇಳೆ ಮೊಬೈಲ್ ಹಾಗೂ ಆಧಾರ್ ಲಿಂಕ್ ಆಗಿರುತ್ತದೆ. ನೋಂದಣಿ ಮಾಡಿಸಿರುವವರೇ ಬಂದು ಪಡಿತರ ಪಡೆಯಬೇಕು ಎಂದರೆ ಕಷ್ಟಸಾಧ್ಯವಾಗುತ್ತದೆ. ಮಲೆನಾಡು ಪ್ರದೇಶ ಸೇರಿದಂತೆ ಬಹಳಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಗಳು ವಾಸಸ್ಥಳದಿಂದ ದೂರದಲ್ಲಿರುತ್ತವೆ. ಹೆರಿಗೆಯಿಂದ ಚೇತರಿಸಿಕೊಳ್ಳುವ ಬಾಣಂತಿಯರು ಅಥವಾ ತುಂಬು ಗರ್ಭಿಣಿಯರು ಕಿಮೀ ಗಟ್ಟಲೆ ಪ್ರಯಾಣಿಸಿ ಪಡಿತರ ಪಡೆಯಬೇಕೆಂಬ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದೇವೆ ಎಂದು ನಳಿನಾ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಕೆಲವೆಡೆ ಕೋಳಿ ಫಾರಂ, ಇಟ್ಟಿಗೆ ಕಾರ್ಖಾನೆಯಲ್ಲಿ ದುಡಿಯಲು ರಾಜ್ಯ ಬೇರೆ ಜಿಲ್ಲೆ ಹಾಗೂ ಬೇರೆ ರಾಜ್ಯಗಳಿಂದ ಬರುವ ವಲಸೆ ಕಾರ್ಮಿಕರು ಆಧಾರ್ ಕಾರ್ಡ್ ಹೊಂದಿರುವುದಿಲ್ಲ. ಅಂತವರಿಗೆ ಆಧಾರ್ ಲಿಂಕ್ ಮಾಡಿಸುವುದು ಹೇಗೆ?, ಪಡಿತರ ಹಾಗೂ ಊಟ ನೀಡುವುದು ಹೇಗೆ, ನೋಂದಣಿ ಮಾಡಿಸದೇ ಇದ್ದರೆ ಪಡಿತರ ಸಿಗುವುದಿಲ್ಲ. ಹೀಗಿರುವಾಗ ಏನು ಮಾಡಬೇಕು ಎಂಬುದು ತೋಚುವುದಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಗ್ಯಾಸ್ ವಿಲೇವಾರಿ ಶುಲ್ಕದ ಹೊರೆ
ಅಂಗನವಾಡಿಗಳಿಗೆ ಎಲ್‌ಪಿಜಿ ಗ್ಯಾಸ್ ತರಿಸಿಕೊಳ್ಳಬೇಕಾದರೂ ಅಂಗನವಾಡಿ ಕಾರ್ಯಕರ್ತೆಯರೇ ಹಣ ಪಾವತಿ ಮಾಡಬೇಕು. ಸರ್ಕಾರ ಯಾವುದೇ ಮುಂಗಡ ಹಣ ನೀಡುವುದಿಲ್ಲ. ಗ್ಯಾಸ್ ಏಜೆನ್ಸಿಯವರಿಗೆ 50-60 ರೂ. ಡೆಲಿವರಿ ಚಾರ್ಜ್ ಕೊಡಬೇಕು. ಆದರೆ, ಅದನ್ನು ಇಲಾಖೆ ಕೊಡುವುದಿಲ್ಲ. ಡೆಲಿವರಿ ಚಾರ್ಜ್ ನೀಡಬೇಡಿ ಎನ್ನುತ್ತಾರೆ. ನಾವು ಕೊಡದೇ ಹೋದರೆ ಸಕಾಲಕ್ಕೆ ಗ್ಯಾಸ್ ತಂದುಕೊಡುವುದಿಲ್ಲ ಎಂಬುದು ಅಂಗನವಾಡಿ ಕಾಯಕರ್ತೆಯರ ಅಳಲು.
ಶಿಶು ಅಭಿವೃದ್ಧಿ ಯೋಜನೆ ಇಲಾಖೆಯಿಂದ ಆನ್‌ಲೈನ್ ಸೇವೆಗಳಿಗೆ ಹೊಸ ಮೊಬೈಲ್ ನೀಡಲಾಗಿದೆ. ಆದರೆ ಮೊಬೈಲ್‌ನಲ್ಲಿ ಇರುವ ಏರ್‌ಟೆಲ್ ಸಿಮ್ ಕೆಲ ಪ್ರದೇಶಗಳಲ್ಲಿ ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರಿಂದ ಕೆಲಸಗಳು ವಿಳಂಬವಾಗುತ್ತಿವೆ ಎಂದು ದೂರುತ್ತಾರೆ.
ಕಾರ್ಯಕರ್ತೆಯರಿಗೆ ಸಿಗದ ಮೇಲ್ವಿಚಾರಕರ ಹುದ್ದೆ
ರಾಜ್ಯ ಸರ್ಕಾರ ಮೂರು ವರ್ಷದ ಹಿಂದೆ ಕೆಪಿಎಸ್‌ಸಿ ಮೂಲಕ ಮೇಲ್ವಿಚಾರಕರ ಹುದ್ದೆಗೆ ಭರ್ತಿ ಮಾಡಿದೆ. ಆದರೆ, ಸಾಕಷ್ಟು ವರ್ಷಗಳ ಕಾಲ ಅಂಗನವಾಡಿಗಳಲ್ಲಿ ಸೇವೆ ಸಲ್ಲಿಸಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಅವಕಾಶ ಕೊಟ್ಟಿಲ್ಲ. ಅಂಗನವಾಡಿ ಸಿಬ್ಬಂದಿಯನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಲು ಒತ್ತಾಯಿಸಿದರೂ ಇದುವರೆಗೆ ಬೇಡಿಕೆ ಈಡೇರಿಲ್ಲ. ಪ್ರಸ್ತುತ 20 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ 11,500 ರೂ. ವೇತನ ಸಿಗುತ್ತಿದೆ. 20 ವರ್ಷಕ್ಕಿಂತ ಕಡಿಮೆ ಸೇವಾವಧಿ ಹಾಗೂ ಹೊಸಬರಿಗೆ 10,500 ರೂ. ನೀಡಲಾಗುತ್ತಿದೆ.
2023 ರಿಂದ ಗ್ರಾಚ್ಯುಯಿಟಿ ಇಲ್ಲ
ರಾಜ್ಯದಲ್ಲಿ ನಿವೃತ್ತಿ ಹೊಂದಿರುವ ನೌಕರರಿಗೆ 2023 ರಿಂದ ಗ್ರಾಚ್ಯುಯಿಟಿ ನೀಡಿಲ್ಲ. ಸೇವಾವಧಿಯಲ್ಲಿ ಕಡಿಮೆ ವೇತನ ಪಡೆಯುತ್ತಿದ್ದ ನೌಕರರಿಗೆ ಗ್ರಾಚ್ಯುಯಿಟಿಯೇ ಜೀವನಾಧಾರವಾಗಿದೆ. ಹಾಗಾಗಿ ಸರ್ಕಾರ ಕೂಡಲೇ ಗ್ರಾಚ್ಯುಯಿಟಿ ನೀಡಬೇಕು ಎಂದು ಅಂಗನವಾಡಿ ಕಾಯಕರ್ತೆಯರು ಒತ್ತಾಯಿಸಿದ್ದಾರೆ.
ಆರೋಗ್ಯ ಪರಿಹಾರ ಸಿಗುತ್ತಿಲ್ಲ
ಅಧಿಕ ಕಾರ್ಯದೊತ್ತಡದಿಂದ ಬಹಳಷ್ಟು ಅಂಗನವಾಡಿ ಕಾರ್ಯಕರ್ತರು ಆರೋಗ್ಯ ಸಮಸ್ಯೆಗಳಿಗೆ ಒಳಗಾಗಿದ್ದಾರೆ. ಕ್ಯಾನ್ಸರ್, ಕರುಳಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಅನಾರೋಗ್ಯದಿಂದ ರಜೆ ಹಾಕಿದರೆ ವೇತನ ಕಡಿತವಾಗುತ್ತದೆ. ಆಸ್ಪತೆಯಲ್ಲಿ ಚಿಕಿತ್ಸೆ ಪಡೆದರೂ ಇಲಾಖೆಯಿಂದ ಕನಿಷ್ಠ ಪರಿಹಾರ ನೀಡುತ್ತಿಲ್ಲ. ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯಲ್ಲೇ ಚಿಕಿತ್ಸೆ ಪಡೆಯಬೇಕಾಗಿದೆ. ಹಾಗಾಗಿ ನಗದು ರಹಿತ ಚಿಕಿತ್ಸೆ ಸೌಲಭ್ಯ ಒದಗಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರ ಒತ್ತಾಯವಾಗಿದೆ.
ರಾಜ್ಯದಲ್ಲಿ 68ಸಾವಿರ ಅಂಗನವಾಡಿಗಳಿದ್ದು, ಬಹಳಷ್ಟು ಕಡೆಯ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ ಖಾಲಿ ಇದೆ. ಕೆಲವೆಡೆ ಅಂಗನವಾಡಿ ಕಾರ್ಯಕರ್ತರೊಬ್ಬರೇ ಸಹಾಯಕಿಯರ ಕೆಲಸವನ್ನೂ ನೋಡಿಕೊಳ್ಳುತ್ತಿದ್ದಾರೆ. ಇದರಿಂದ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಎರಡು ಹುದ್ದೆಗಳ ಜವಾಬ್ದಾರಿ ನಿಭಾಯಿಸುವ ಕಡೆಗಳಲ್ಲಿ ದುಪ್ಪಟ್ಟು ವೇತನ ನೀಡುವಂತೆ ಒತ್ತಾಯಿಸಿದ್ದೇವೆ. ಮೂರು ತಿಂಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಒತ್ತಾಯಿಸಿದರೂ ಈವರೆಗೆ ನೇಮಕಾತಿ ನಡೆಸಿಲ್ಲ. ಮುಂಬಡ್ತಿ ಸಿಗುತ್ತಿಲ್ಲ ಎಂದು ನಳಿನಾ ತಿಳಿಸಿದರು.
ಅಂಗನವಾಡಿ ನೌಕರರ ಬೇಡಿಕೆಗಳೇನು?
ಅಂಗನವಾಡಿ ಕಾರ್ಯಕರ್ತೆಯರಿಗೆ 26,000 ಮತ್ತು ಸಹಾಯಕರಿಯರಿಗೆ ರೂ. 15,000 ವೇತನ ನೀಡಬೇಕು.
ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ಪಿಂಚಣಿ ರೂ.10,000 ರೂ. ನೀಡಬೇಕು.
ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ಎಲ್ ಕೆಜಿ ಮತ್ತು ಯುಕೆಜಿ ಆಗಿ ಮೇಲ್ದರ್ಜೆಗೇರಿಸಬೇಕು.
ಅಂಗನವಾಡಿ ಕಾರ್ಯಕರ್ತೆಯರನ್ನು ಗ್ರೇಡ್ 3 ಮತ್ತು ಗ್ರೇಡ್ 4 ನೌಕರರು ಎಂದು ಪರಿಗಣಿಸಬೇಕು.
ಗ್ರಾಚ್ಯುಯಿಟಿ ಪಾವತಿ ಕಾಯ್ದೆ 1972 ರ ಅಡಿಯಲ್ಲಿ ನೌಕರರಿಗೆ ಗ್ರಾಚ್ಯುಯಿಟಿ ಒದಗಿಸಬೇಕು.
ಹೆಚ್ಚುವರಿ ಕೆಲಸದ ಒತ್ತಡ
ಅಂಗನವಾಡಿ ಕಾರ್ಯಕರ್ತರಿಗೆ ಚುನಾವಣಾ ಆಯೋಗದ ಬಿಎಲ್ಒ, ಮಾತೃವಂದನಾ, ಭಾಗ್ಯಲಕ್ಷ್ಮಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಸಮೀಕ್ಷೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಒತ್ತಡ ಅಧಿಕವಾಗಿದೆ.
ಅಂಗನವಾಡಿ, ಮಕ್ಕಳ ಸ್ಥಿತಿಗತಿ
ರಾಜ್ಯದಲ್ಲಿ 66,361 ಅಂಗನವಾಡಿ ಕೇಂದ್ರಗಳಿದ್ದು, 46,669 ಕಟ್ಟಡಗಳು ಸ್ವಂತ ಕಟ್ಟಡದಲ್ಲಿ, 10,954 ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ರಾಜ್ಯದಲ್ಲಿ 6 ತಿಂಗಳಿಂದ 3 ವರ್ಷದೊಳಗಿನ 21.54ಲಕ್ಷ ಮಕ್ಕಳಿದ್ದಾರೆ. 3-6 ವರ್ಷದೊಳಗಿನ 16.98 ಲಕ್ಷ ಮಕ್ಕಳಿದ್ದಾರೆ. ಗರ್ಭಿಣಿಯರು ಹಾಗೂ ಬಾಣಂತಿಯರು ತಲಾ 4 ಲಕ್ಷ ಮೇಲ್ಪಟ್ಟಿರುವುದು 2023-24 ರ ಅಂಕಿ ಅಂಶಗಳಿಂದ ತಿಳಿದುಬಂದಿದೆ.