Manmohan Singh Death | ಸಿಂಗ್‌ಜಿ ಅವರಿಗೆ ಹುಬ್ಬಳ್ಳಿಯೊಂದಿಗಿತ್ತು ಕರುಳುಬಳ್ಳಿಯ ನಂಟು
x

Manmohan Singh Death | ಸಿಂಗ್‌ಜಿ ಅವರಿಗೆ ಹುಬ್ಬಳ್ಳಿಯೊಂದಿಗಿತ್ತು ಕರುಳುಬಳ್ಳಿಯ ನಂಟು

ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಮನಮೋಹನ್ ಸಿಂಗ್ ಅವರ ಪತ್ನಿಯ ಸಹೋದರಿ ಹರ್ಪ್ರೀತ್ ಕೌರ್ ಕುಟುಂಬ ವಾಸವಿದೆ. ಹುಬ್ಬಳ್ಳಿಯ ಹರ್ನಾಮ್ ಸಿಂಗ್ ಕೊಹ್ಲಿ ಎಂಬುವರ ಜೊತೆ ಹರ್ಪ್ರೀತ್ ಕೌರ್ ವಿವಾಹವಾಗಿದ್ದರು.


ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಹುಬ್ಬಳ್ಳಿಯೊಂದಿಗೆ ವಿಶೇಷ ನಂಟು ಹೊಂದಿದ್ದರು. ಅವರ ಪತ್ನಿಯ ಸಹೋದರಿಯ ಮನೆ ಹುಬ್ಬಳ್ಳಿಯಲ್ಲಿದೆ. ಈ ಹಿಂದೆ ಮನಮೋಹನ ಸಿಂಗ್‌ ಅವರ ಪತ್ನಿ ಗುರುಶರಣ್‌ ಕೌರ್‌ ಅವರು ಹುಬ್ಬಳ್ಳಿಯ ಸೋದರಿಯ ಮನೆಗೂ ಭೇಟಿ ನೀಡಿದ್ದರು. ಹಾಗಾಗಿ ಹುಬ್ಬಳ್ಳಿಯೊಂದಿಗೆ ಮನಮೋಹನ ಸಿಂಗ್‌ ಅವಿನಾಭಾವ ಸಂಬಂಧ ಹೊಂದಿದ್ದರು. ʼದ ಫೆಡರಲ್‌ ಕರ್ನಾಟಕʼ ಹುಬ್ಬಳ್ಳಿಯಲ್ಲಿರುವ ಡಾ. ಮನಮೋಹನಸಿಂಗ್‌ ಸಂಬಂಧಿಕರ ಮನೆಗೆ ಭೇಟಿ ಮಾತನಾಡಿಸಿತು. ಈ ವೇಳೆ ಮನಮೋಹನಸಿಂಗ್‌ ಸಂಬಂಧಿಕರು ತಮ್ಮ ಒಡನಾಟದ ಕುರಿತು ನೆನಪು ಬಿಚ್ಚಿಟ್ಟರು.

ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ಮನಮೋಹನ್ ಸಿಂಗ್ ಅವರ ಪತ್ನಿ ಗುರುಶರಣ್‌ ಕೌರ್‌ ಸಹೋದರಿ ಹರ್ಪ್ರೀತ್ ಕೌರ್ ಕುಟುಂಬ ವಾಸವಿದೆ. ಹುಬ್ಬಳ್ಳಿಯ ಹರ್ನಾಮ್ ಸಿಂಗ್ ಕೊಹ್ಲಿ ಎಂಬುವರ ಜೊತೆ ಹರ್ಪ್ರೀತ್ ಕೌರ್ ವಿವಾಹವಾಗಿದ್ದರು.

ಹರ್ನಾಮ್ ಸಿಂಗ್ ಕೊಹ್ಲಿ ಆಟೋಮೊಬೈಲ್ ಶಾಪ್ ನಡೆಸುತ್ತಿದ್ದಾರೆ. ಜೊತೆಗೆ ಹರ್ಪ್ರೀತ್ ಕೌರ್‌ ಕುಟುಂಬಸ್ಥರಿಗೆ ಸಂಬಂಧಿಸಿದ ಡಾಬಾ ಹುಬ್ಬಳ್ಳಿ ಕುಂದಗೋಳ ಕ್ರಾಸ್‌ನಲ್ಲಿದೆ. ಮನಮೋಹನ ಸಿಂಗ್ ಪತ್ನಿಯ ಸಹೋದರಿ ಹರ್ಪ್ರೀತ್ ಕೌರ್ 14 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಈಗ ಹುಬ್ಬಳ್ಳಿಯಲ್ಲಿ ಹರ್ಪ್ರೀತ್ ಕೌರ್‌ ಪತಿ ಹರ್ನಾಮ್ ಸಿಂಗ್ ಕೊಹ್ಲಿ ಇದ್ದು, ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮನಮೋಹನ್‌ ಸಿಂಗ್‌ ಅವರು ತಮ್ಮ ಷಡ್ಡಕ ಹುಬ್ಬಳ್ಳಿಯ ಹರ್ನಾಮ್ ಸಿಂಗ್ ಕೊಹ್ಲಿ ಜತೆ

ದೊಡ್ಡಪ್ಪನ ನಿಧನಕ್ಕೆ ಮನಮಿತ್ ಕೊಯ್ಲಿ ಕಣ್ಣೀರು

ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ನಿಧನಕ್ಕೆ ಹುಬ್ಬಳ್ಳಿಯಲ್ಲಿರುವ ಸಂಬಂಧಿಕರು ಕಂಬನಿ ಮಿಡಿದಿದ್ದಾರೆ. ಹರ್ಪ್ರೀತ್ ಕೌರ್‌ ಪುತ್ರ ಮನಮಿತ್ ಕೊಯ್ಲಿಅವರು ತಮ್ಮ ದೊಡ್ಡಪ್ಪ ಮನಮೋಹನ ಸಿಂಗ್ ಜೊತೆಗಿನ ಒಡನಾಟವನ್ನು ನೆನೆದು ಭಾವುಕರಾದರು.

2022ರಲ್ಲಿ ಕುಟುಂಬ ಸಮೇತ ದೆಹಲಿಗೆ ತೆರಳಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿದ್ದೆವು. ನಮ್ಮೊಡನೆ ಲವಲವಿಕೆಯಿಂದಲೇ ಮಾತನಾಡಿದ್ದರು. ಒಬ್ಬರನ್ನೂ ಬಿಡದೇ ಹೆಸರು ಸಮೇತ ಆರೋಗ್ಯದ ಬಗ್ಗೆ ವಿಚಾರಿಸಿದ್ದರು ಎಂದು ಗದ್ಗದಿತರಾದರು.

ಮನಮೋಹನ ಸಿಂಗ್ ಅವರು ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಆಗಿದ್ದಾಗಿನಿಂದಲೂ ನಮ್ಮ ಕುಟುಂಬದ ಒಡನಾಟ ಚೆನ್ನಾಗಿತ್ತು. ಮುಂಬೈನಲ್ಲಿದ್ದಾಗ ಕುಟುಂಬದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ದೆಹಲಿಗೆ ಸ್ಥಳಾಂತರವಾದ ನಂತರ ಒಡನಾಟ ಕಡಿಮೆಯಾಗಿತ್ತು. ಮನಮೋಹನ ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ಹಾಗೂ ನಮ್ಮ ತಾಯಿ ಸ್ವಂತ ಅಕ್ಕ ತಂಗಿಯರು. ಬಾಲ್ಯದಿಂದಲೂ ನಾವು ಅವರ ಮನೆಗೆ ಹೋಗಿ ಬರುತ್ತಿದ್ದೆವು. ಹೀಗಾಗಿ ದೊಡ್ಡಪ್ಪನ ಜೊತೆಗೆ ಉತ್ತಮ ಬಾಂಧವ್ಯ ಇತ್ತು. ಕನಿಷ್ಟ 3-4 ತಿಂಗಳಿಗೆ ಒಮ್ಮೆ ದೂರವಾಣಿ ಮುಖಾಂತರ ಕ್ಷೇಮ ಸಮಾಚಾರ ವಿಚಾರಿಸುತ್ತಿದ್ದರು ಎಂದು ತಿಳಿಸಿದರು.

2010ರ ಜ. 7 ರಂದು ಹುಬ್ಬಳ್ಳಿಯ ದೇಶಪಾಂಡೆ ನಗರದ ನಮ್ಮ ಮನೆಗೆ ದೊಡ್ಡಮ್ಮ ಗುರುಶರಣ್ ಕೌರ್ ಹಾಗೂ ಅವರ ಮಗಳು ಧಮನ್ ಸಿಂಗ್ ಆಗಮಿಸಿದ್ದರು. ಒಂದು ದಿನ ನಮ್ಮ ಮನೆಯಲ್ಲೇ ತಂಗಿ ಮಾರನೇ ದಿನ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ರಜೆ ದಿನಗಳಲ್ಲಿ ಅವರ ದೆಹಲಿ ನಿವಾಸಕ್ಕೆ ನಾವೆಲ್ಲ ತೆರಳಿದಾಗ ಬಹಳ ಪ್ರೀತಿಯಿಂದ ಕಾಣುತ್ತಿದ್ದರು. ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಈಗ ಅವರ ನಿಧನವು ಆಘಾತ ಉಂಟುಮಾಡಿದೆ. ಅಂತಿಮ ದರ್ಶನಕ್ಕಾಗಿ ದೆಹಲಿಗೆ ತೆರಳುತ್ತಿದ್ದೇವೆ ಎಂದು ಹೇಳಿದರು.

ಈ ಮಧ್ಯೆ, ಗದಗಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಹುಬ್ಬಳ್ಳಿಯಲ್ಲಿ ಮನಮೋಹನ ಸಿಂಗ್‌ ಅವರ ಪತ್ನಿಯ ಸೋದರಿ ವಾಸವಿದ್ದರು. ನಾವು ದೆಹಲಿಯಲ್ಲಿ ಆಗಾಗ ಭೇಟಿಯಾದಾಗ ಹುಬ್ಬಳಿಯ ಬಗ್ಗೆ ಕೇಳುತ್ತಿದ್ದರು. ಬಹಳ ಕಾಳಜಿ ವಹಿಸುತ್ತಿದ್ದರು ಎಂದು ಸ್ಮರಿಸಿದ್ದಾರೆ.

ಬೆಂಗಳೂರಿನ ಅಭಿವೃದ್ಧಿಯ ಬಗ್ಗೆಯೂ ಮನಮೋಹನ್ ಸಿಂಗ್ ಅವರಿಗೆ ವಿಶೇಷ ಕಾಳಜಿ ಇತ್ತು. ಬೆಂಗಳೂರು ಮೆಟ್ರೋ ಯೋಜನೆಗೆ ಸುಮಾರು 5 ಸಾವಿರ ಕೋಟಿ ರೂ. ನೀಡಿದ್ದರು. ಸಮಗ್ರ ದೇಶದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಬಹಳ ಇದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

90 ರ ದಶಕದಲ್ಲಿ ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಿದ ಖ್ಯಾತಿ ಮನಮೋಹನ ಸಿಂಗ್‌ ಅವರಿಗೆ ಸಲ್ಲುತ್ತದೆ. ಆರ್ ಬಿಐ ಗವರ್ನರ್‌ ಆಗಿ, ವಿಶ್ವಬ್ಯಾಂಕ್‌ನಲ್ಲಿ ಭಾರತದ ಪ್ರತಿನಿಧಿಯಾಗಿ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಂಪೂರ್ಣ ಜೀವನವನ್ನೇ ಮೀಸಲಿಟ್ಟಿದ್ದರು. ಅದರ ಪರಿಣಾಮವಾಗಿಯೇ ಭಾರತ ಸದೃಢ ಆರ್ಥಿಕ ಸ್ಥಿತಿಯಲ್ಲಿದೆ. ಜಾಗತೀಕರಣ, ಉದಾರೀಕರಣದ ಫಲವಾಗಿ ಭಾರತಕ್ಕೆ ವಿದೇಶಿ ನೇರ ಬಂಡವಾಳ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದಿತು ಎಂದು ಹೇಳಿದ್ದಾರೆ.

Read More
Next Story