ಅರಣ್ಯ ಇಲಾಖೆಯೇ ಎಚ್​ಎಂಟಿ ಕಂಪನಿಯ ಜಮೀನು ಒತ್ತುವರಿ ಮಾಡಿದೆ: ಹೆಚ್‌ಡಿ ಕುಮಾರಸ್ವಾಮಿ ಆರೋಪ
x

ಅರಣ್ಯ ಇಲಾಖೆಯೇ ಎಚ್​ಎಂಟಿ ಕಂಪನಿಯ ಜಮೀನು ಒತ್ತುವರಿ ಮಾಡಿದೆ: ಹೆಚ್‌ಡಿ ಕುಮಾರಸ್ವಾಮಿ ಆರೋಪ


ʻʻಎಚ್​ಎಂಟಿಯ 295 ಎಕರೆ ಜಾಗ ವಶಪಡಿಸಿಕೊಳ್ಳುವುದಕ್ಕೆ ಹೇಳಿದ್ದಾರೆ. ಖಾಲಿ ಜಾಗವನ್ನು ಯಾರಿಗೆ ಕೊಡೋಕೆ ನಿನ್ನೆ ತರಾತುರಿ ಮಾಡಿದ್ದೀರಿ ಈಶ್ವರ್ ಖಂಡ್ರೆ? ತಕ್ಷಣ ವಶಪಡಿಸಿಕೊಳ್ಳಿ ಎಂದು ನಿಮ್ಮ ಅಧಿಕಾರಿಗಳಿಗೆ ಹೇಳಿದ್ದೀರಲ್ಲ ಏನಾಗಿದೆ ನಿಮಗೆ?ʼʼ ಎಂದು ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಎಚ್​ಎಂಟಿ ಕಚೇರಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻʻಬೆಂಗಳೂರಿನ ವಿವಿಧೆಡೆ ಎಚ್‌ಎಂಟಿ ಕಂಪನಿ ವಶದಲ್ಲಿರುವ 699 ಎಕರೆ ಜಮೀನು ದಶಕಗಳ ಹಿಂದೆಯೇ ಹಣ ಪಾವತಿಸಿ ಪಡೆದಿದೆ. ಅರಣ್ಯ ಒತ್ತುವರಿ ಮಾಡಿಕೊಂಡಿಲ್ಲ. ಅರಣ್ಯ ಇಲಾಖೆಯೇ ಕಂಪನಿಯ ಜಮೀನು ಒತ್ತುವರಿ ಮಾಡಿದೆʼʼ ಎಂದು ಆರೋಪಿಸಿದರು.

ʻʻಭೂಮಿ ಅವರದ್ದು ಅನ್ನೋದಕ್ಕೆ ಅರಣ್ಯ ಇಲಾಖೆಯಲ್ಲಿ ಯಾವುದೇ ದಾಖಲೆಗಳಿಲ್ಲ. ಪ್ರೆಸ್ಟಿಜ್‌ನವರು 27 ಎಕರೆ ತೆಗೆದುಕೊಂಡು ಕಟ್ಟಡ ಕಟ್ಟಿರಬೇಕು. ಅದೆಲ್ಲಾ ಯಾವ ಕಾಲದಲ್ಲಿ ಆಯ್ತು. ಅಧಿಕಾರಿಗಳು ಬೇಡ ಎಂದು ಹೇಳಿದ್ದರೂ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಆಡಳಿತದಲ್ಲೇ ಕೊಟ್ಟಿದ್ದಾರೆ. ಇಸ್ರೋಗೆ ಲ್ಯಾಂಡ್ ಕೊಟ್ಟಿದ್ದಕ್ಕೆ ಎನ್​ಒಸಿ ಕೊಡೋಕೆ ರೆಡಿಯಿಲ್ಲ. ಪ್ರತಿಷ್ಠೆಗೆ ಎನ್​ಒಸಿ ಕೊಟ್ಟಿದ್ದಾರೆʼʼ ಎಂದರು.

ʻʻಅರಣ್ಯ ಭೂಮಿ ಹಾಗೂ ಎಚ್‌ಎಂಟಿ ಕಂಪನಿ ಜಮೀನುಗಳ ಕುರಿತು ಮಾಹಿತಿ ಇಲ್ಲದೆ ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಮೇಲಿನ ಹಗೆತನಕ್ಕೆ ರಾಜ್ಯ ಹಾಳು ಮಾಡುತ್ತಿದ್ದಾರೆ. ಪ್ರಧಾನಿ, ಹಣಕಾಸು ಸಚಿವರು ಕೆಲವು ನಿರ್ಧಾರ ಮಾಡುತ್ತಿದ್ದಾರೆ. ವಿಎಸ್​ಎಲ್ ಸೇರಿದಂತೆ ಹಲವು ಕಾರ್ಖಾನೆಗಳು ಪುನರಾರಂಭಕ್ಕೆ ಕಾಯುತ್ತಿವೆʼʼ ಎಂದರು.

ʻʻಏನಾಗಿದೆ ಇವರಿಗೆಲ್ಲಾ? ಪ್ರಧಾನಿ ಮೋದಿಯವರು ಬೆಂಬಲ ಕೊಡುತ್ತಾರೆ ಎಂಬ ನಂಬಿಕೆ ಇದೆ. ನನಗೆ ಕೋಆಪರೇಷನ್ ಕೊಡಲಿ ಸರ್ಕಾರ. ಯಾರು ಒಬ್ಬ ಮಂತ್ರಿ ಮಾತಾಡೋಕೆ ಬರೋಲ್ಲ. ಮಂತ್ರಿ ಆದ ಬಳಿಕ ಮೂರು ನಾಲ್ಕು ಮೀಟಿಂಗ್ ಆದ್ಮೇಲೇ ಇದೆಲ್ಲಾ ಗೊತ್ತಾಗಿದ್ದು. ಹೆಚ್​ಎಂಟಿ ಫಾರೆಸ್ಟ್ ಲ್ಯಾಂಡ್‌ನ ಒತ್ತುವರೆ ಮಾಡಿಕೊಂಡಿಲ್ಲ. ಹೆಚ್​ಎಂಟಿಗೆ ಸೇರಿದ ಕೆಲವು ಜಾಗದಲ್ಲಿ ಅರಣ್ಯ ಇಲಾಖೆಯವರೇ ಫೆನ್ಸಿಂಗ್ ಹಾಕೊಂಡಿದ್ದಾರೆʼʼ ಎಂದು ದೂರಿದರು.

Read More
Next Story