ದ ಫೆಡರಲ್‌ ಕರ್ನಾಟಕ ಇಂಪ್ಯಾಕ್ಟ್! ಸಚಿವ ತಿಮ್ಮಾಪುರ ರಾಜೀನಾಮೆಗೆ ಪ್ರತಿಪಕ್ಷ ಆಗ್ರಹ
x
ʻದ ಫೆಡರಲ್‌ ಕರ್ನಾಟಕʼ ಸಂದರ್ಶನ

'ದ ಫೆಡರಲ್‌ ಕರ್ನಾಟಕ' ಇಂಪ್ಯಾಕ್ಟ್! ಸಚಿವ ತಿಮ್ಮಾಪುರ ರಾಜೀನಾಮೆಗೆ ಪ್ರತಿಪಕ್ಷ ಆಗ್ರಹ

ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ 'ದ ಫೆಡರಲ್‌ ಕರ್ನಾಟಕ'ಕ್ಕೆ ಮದ್ಯ ಮಾರಾಟಗಾರರ ಸಂಘದ ರಾಜ್ಯಾಧ್ಯಕ್ಷ ಎಸ್. ಗುರುಸ್ವಾಮಿ ನೀಡಿರುವ ಸಂದರ್ಶನ ಈಗ ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.


ರಾಜ್ಯ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿದೆ ಎನ್ನಲಾದ ಕಮಿಷನ್ ದಂಧೆ ಮತ್ತು ಭ್ರಷ್ಟಾಚಾರದ ಕುರಿತು ಮದ್ಯ ಮಾರಾಟಗಾರರ ಸಂಘದ ರಾಜ್ಯಾಧ್ಯಕ್ಷ ಎಸ್. ಗುರುಸ್ವಾಮಿ ಅವರು ನೀಡಿರುವ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ಸಂದರ್ಶನ ಈಗ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜತೆಗೆ, ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರೂ ಕಾಂಗ್ರೆಸ್‌ ಸರ್ಕಾರದ ಮೇಲೆ ಟೀಕಾಪ್ರಹಾರ ನಡೆಸಿದ್ದಾರೆ.

ಅಶೋಕ್‌ ಟ್ವೀಟ್‌ನಲ್ಲೇನಿದೆ?

ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಎಸ್. ಗುರುಸ್ವಾಮಿ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ಸಂದರ್ಶನದಲ್ಲಿ ಅಬಕಾರಿ ಇಲಾಖೆಯ ಲಂಚಗುಳಿತನ ಮತ್ತು ಕಮಿಷನ್ ದಂಧೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದ್ದಾರೆ.

“ಕಾಂಗ್ರೆಸ್ ಪಕ್ಷಕ್ಕೆ ಕಿಂಚಿತ್ತಾದರೂ ನಾಚಿಕೆ, ಮಾನ, ಮರ್ಯಾದೆ ಇದ್ದರೆ, ಈ ಕೂಡಲೇ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆಯನ್ನು ಪಡೆಯಬೇಕು" ಎಂದು ಅಶೋಕ್ ಒತ್ತಾಯಿಸಿದ್ದಾರೆ.

ಸರ್ಕಾರಕ್ಕೆ ಮುಜುಗರ

ಇಲಾಖೆಯ ಒಳಗಿನ ಭ್ರಷ್ಟಾಚಾರವನ್ನು ಸಂಘದ ಅಧ್ಯಕ್ಷರೇ ಬಹಿರಂಗಪಡಿಸಿರುವುದು ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಮುಜುಗರ ಉಂಟುಮಾಡಿದೆ.

ಸಂದರ್ಶನದ ವಿಡಿಯೊ ಇಲ್ಲಿದೆ

ಛಲವಾದಿ ನಾರಾಯಣಸ್ವಾಮಿ ಏನಂತಾರೆ?

‘The Federal ಕರ್ನಾಟಕ’ ಬಯಲಿಗೆಳೆದಿರುವ ಅಬಕಾರಿ ಇಲಾಖೆಯ ಭ್ರಷ್ಟಾಚಾರದ ಜಾಲವು ಕೇವಲ ಆತಂಕಕಾರಿ ಮಾತ್ರವಲ್ಲ; ಅದು ಪ್ರಜಾಪ್ರಭುತ್ವಕ್ಕೆ ಅಂಟಿಕೊಂಡಿರುವ ಶಾಪವಾಗಿದೆ. ಜನರ ತೆರಿಗೆ ಹಣದಲ್ಲಿ ಕಾರ್ಯನಿರ್ವಹಿಸಬೇಕಾದ ಇಲಾಖೆಯನ್ನು ಕಾಂಗ್ರೆಸ್ ಸರ್ಕಾರ ಇಂದು ‘ಲಂಚದ ಉದ್ಯಮ’ವನ್ನಾಗಿ ಪರಿವರ್ತಿಸಿರುವುದು ಅತ್ಯಂತ ಹೇಯ ಸಂಗತಿ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.

"ವರ್ಗಾವಣೆ, ಪರವಾನಗಿ ಹಾಗೂ ಮಾಸಿಕ ಹಫ್ತಾಗಳ ಹೆಸರಿನಲ್ಲಿ ನಡೆಯುತ್ತಿರುವ ಈ ಲೂಟಿ ವ್ಯವಸ್ಥಿತವಾಗಿದ್ದು, ಇಡೀ ಕಾಂಗ್ರೆಸ್ ಸರ್ಕಾರದ ರಕ್ತನಾಳಗಳಲ್ಲಿ ಭ್ರಷ್ಟಾಚಾರ ಹರಿಯುತ್ತಿದೆ ಎಂಬುದಕ್ಕೆ ಈ ವರದಿ ಬಲವಾದ ಸಾಕ್ಷಿಯಾಗಿದೆ," ಎಂದವರು ಹೇಳಿದ್ದಾರೆ.

"ಹಗಲು ದರೋಡೆಯನ್ನೇ ವೃತ್ತಿಯನ್ನಾಗಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ ಸಮಾಜಕ್ಕೆ ಮಾರಕವಾಗಿದೆ. ‘ಗ್ಯಾರಂಟಿ’ಗಳ ಹೆಸರಿನಲ್ಲಿ ಜನರ ಗಮನವನ್ನು ಬೇರೆಡೆ ಸೆಳೆದು, ತೆರೆಮರೆಯೊಳಗೆ ಇಡೀ ರಾಜ್ಯವನ್ನೇ ಲೂಟಿ ಮಾಡುತ್ತಿರುವುದು ಈ ವರದಿಯಿಂದ ಸ್ಪಷ್ಟವಾಗಿ ಹೊರಬಂದಿದೆ. ಇದು ಕೇವಲ ಕೆಲ ಅಧಿಕಾರಿಗಳ ಭ್ರಷ್ಟಾಚಾರವಲ್ಲ; ಸರ್ಕಾರದ ನೇರ ಪ್ರಾಯೋಜಿತ ಲೂಟಿ," ಎಂದು ನಾರಾಯಣಸ್ವಾಮಿ ದೂರಿದ್ದಾರೆ.

Read More
Next Story