The Federal Explainer | ಝೀಕಾ ವೈರಸ್‌ ಸೋಂಕು; ಲಕ್ಷಣ, ಕಾರಣ, ಮುನ್ನೆಚ್ಚರಿಕೆ ಮತ್ತು ಚಿಕಿತ್ಸೆ
x
ಝಿಕಾ ವೈರಸ್‌ ಈಡಿಸ್‌ ಈಜಿಪ್ಟಿ ಸೊಳ್ಳೆಗಳಿಂದ ಹರಡುತ್ತದೆ.

The Federal Explainer | ಝೀಕಾ ವೈರಸ್‌ ಸೋಂಕು; ಲಕ್ಷಣ, ಕಾರಣ, ಮುನ್ನೆಚ್ಚರಿಕೆ ಮತ್ತು ಚಿಕಿತ್ಸೆ

ಡೆಂಗ್ಯೂ, ಚಿಕೂನ್‌ಗುನ್ಯಾ ಸೋಂಕನ್ನು ಹರಡುವ ಈಡಿಸ್ ಈಜಿಪ್ಟಿ ಸೊಳ್ಳೆಯಿಂದಲೇ ಝೀಕಾ ವೈರಸ್‌ ಕೂಡ ಹರಡುತ್ತದೆ. ಸೋಂಕು ಹೇಗೆ ಹರಡುತ್ತದೆ, ರೋಗಲಕ್ಷಣಗಳೇನು, ಮುನ್ನೆಚ್ಚರಿಕೆ, ಚಿಕಿತ್ಸೆ ಸೇರಿದಂತೆ ನಿಮಗೆ ಗೊತ್ತಿರಬೇಕಾದ ಸಂಗತಿಗಳ ವಿವರ ಇಲ್ಲಿದೆ...


Click the Play button to hear this message in audio format

ಕೊರೋನಾ ಸೋಂಕಿನ ಕಾಲದಲ್ಲಿ ಕೇರಳ ಸೇರಿದಂತೆ ದೇಶದ ಕೆಲವು ಕಡೆ ಆತಂಕ ಮೂಡಿಸಿದ್ದ ಝೀಕಾ ವೈರಸ್ ಸೋಂಕು ಈಗ ಮತ್ತೊಮ್ಮೆ ಕಾಣಿಸಿಕೊಂಡಿದೆ. ಮಹಾರಾಷ್ಟ್ರದ ಕೆಲವು ಕಡೆ ಸೋಂಕು ಕಾಣಿಸಿಕೊಂಡ ವರದಿಗಳ ಬೆನ್ನಲ್ಲೇ ರಾಜ್ಯದಲ್ಲಿ ಸೋಂಕಿಗೆ ಮೊದಲ ಜೀವ ಬಲಿಯಾಗಿದೆ.

ಶಿವಮೊಗ್ಗದ ವಯೋವೃದ್ಧರೊಬ್ಬರು ಸೋಂಕಿಗೆ ಶುಕ್ರವಾರ ಬಲಿಯಾಗಿದ್ದಾರೆ. ಅದರ ಜೊತೆಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ 24 ವರ್ಷದ ಯುವಕನೊಬ್ಬನಿಗೆ ಝೀಕಾ ಸೋಂಕು ಇರುವುದು ದೃಢಪಟ್ಟಿದೆ. ಶಿವಮೊಗ್ಗವೂ ಸೇರಿದಂತೆ ರಾಜ್ಯಾದ್ಯಂತ ಡೆಂಗ್ಯೂ ಸೋಂಕಿನ ಸಾವಿನ ಸರಣಿ ಮುಂದುವರಿದಿರುವಾಗಲೇ ಮತ್ತೊಂದು ಕಡೆ ಝೀಕಾ ವೈರಸ್‌ ದಾಳಿ ಇಟ್ಟಿದೆ.

ಶಿವಮೊಗ್ಗದ ಸಾವು ಪ್ರಕರಣ ರಾಜ್ಯದಲ್ಲಿ ಮೊಟ್ಟಮೊದಲ ಝೀಕಾ ಸೋಂಕಿನ ಸಾವು ಎನ್ನಲಾಗುತ್ತಿದೆ. ಡೆಂಗ್ಯೂ, ಚಿಕೂನ್‌ಗುನ್ಯಾ ಸೋಂಕನ್ನು ಹರಡುವ ಈಡಿಸ್ ಈಜಿಪ್ಟಿ ಸೊಳ್ಳೆಯಿಂದಲೇ ಝಿಕಾ ವೈರಸ್‌ ಕೂಡ ಹರಡುತ್ತದೆ. ವಯಸ್ಕರಿಗೆ ಝೀಕಾ ವೈರಸ್‌ ಅಷ್ಟೇನು ಅಪಾಯಕಾರಿ ಅಲ್ಲದಿದ್ದರೂ, ಗರ್ಭಿಣಿ ಸ್ತ್ರೀಯರು ಈ ಸೋಂಕಿಗೆ ಒಳಗಾಗುವುದರಿಂದ ಹುಟ್ಟುವ ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಮೇಲೆ ಅಪಾಯಕಾರಿ ದುಷ್ಪರಿಣಾಮ ಬೀರಲಿದೆ. ಆ ಹಿನ್ನೆಲೆಯಲ್ಲಿ ಇದು ಅಪಾಯಕಾರಿ ಸೋಂಕು.

ಸೋಂಕು ಹೇಗೆ ಹರಡುತ್ತದೆ? ಮುಂಜಾಗೃತ ಕ್ರಮ ಏನು? ಸೋಂಕು ಲಕ್ಷಣಗಳೇನು? ಚಿಕಿತ್ಸೆ ಹೇಗೆ? ಎಂಬುದೂ ಸೇರಿದಂತೆ ಝೀಕಾ ಸೋಂಕಿನ ಕುರಿತು ನಿಮಗೆ ಗೊತ್ತಿರಬೇಕಾದ ಸಂಗತಿಗಳ ವಿವರ ಇಲ್ಲಿದೆ...

ಝೀಕಾ ವೈರಸ್‌ ಸೋಂಕು ಹೇಗೆ ಹರಡುತ್ತದೆ?

ಸೋಂಕು ಹರಡುವ ಝೀಕಾ ವೈರಸ್‌ ಈಡಿಸ್‌ ಈಜಿಪ್ಟಿ ಎಂಬ ಸೊಳ್ಳೆಗಳಿಂದ ಹರಡುತ್ತದೆ. ಈ ಸೊಳ್ಳೆ ಹಗಲಿನಲ್ಲಿ ಮಾತ್ರ ಕಚ್ಚುತ್ತದೆ. ಅದರಲ್ಲೂ ಮುಖ್ಯವಾಗಿ ಬೆಳಗಿನ ಹೊತ್ತು ಮತ್ತು ಸಂಜೆ ಹೊತ್ತು ಹೆಚ್ಚು ಕಚ್ಚುತ್ತವೆ. ಮೊಳಕಾಲಿನಿಂದ ಕೆಳಗೆ ಮತ್ತು ಮುಂಗೈಗೆ ಕಚ್ಚುವುದು ಸಾಮಾನ್ಯ.

ಝಿಕಾ ಸೋಂಕು ಕೇವಲ ಸೊಳ್ಳೆಗಳಿಂದ ಮಾತ್ರವಲ್ಲದೆ ಬೇರೆ ವಿಧಾನಗಳ ಮೂಲಕವೂ ಹರಡಬಹುದು. ಅದರಲ್ಲಿ ಮುಖ್ಯವಾಗಿ, ಗರ್ಭಿಣಿಯರಿಗೆ ಝೀಕಾ ಸೋಂಕು ತಗುಲಿದರೆ ಹೊಟ್ಟೆಯಲ್ಲಿರುವ ಮಗುವಿಗೂ ಈ ಸೋಂಕು ತಗುಲುತ್ತದೆ. ಮಗುವಿನ ಮಿದುಳಿನ ಬೆಳವಣಿಗೆಯ ಮೇಲೆ ವೈರಸ್ ದುಷ್ಪರಿಣಾಮ ಬೀರುತ್ತದೆ. ತಾಯಿಯ ಹೊಟ್ಟೆಯಲ್ಲಿ ಇದ್ದಾಗಲೇ ಝೀಕಾ ಸೋಂಕು ತಗುಲಿದ ಮಗು ಮೈಕ್ರೋಸೆಫಾಲಿ ಎಂಬ ಕಾಯಿಲೆಯೊಂದಿಗೇ ಹುಟ್ಟುವ ಸಾಧ್ಯತೆ ಇರುತ್ತದೆ.

ಹಾಗೇ, ಸೋಂಕಿತ ವ್ಯಕ್ತಿಯೊಂದಿಗಿನ ಲೈಂಗಿಕ ಸಂಪರ್ಕದ ಮೂಲಕವೂ ಸೋಂಕು ಹರಡುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ. ಜೊತೆಗೆ ರಕ್ತದ ಮೂಲಕವೂ ಈ ಸೋಂಕು ಹರಡುತ್ತದೆ. ಸೋಂಕಿತ ವ್ಯಕ್ತಿಯ ರಕ್ತ ಪಡೆದರೆ, ಅಥವಾ ಸೋಂಕಿತರ ರಕ್ತದೊಂದಿಗೆ ಸಂಪರ್ಕಕ್ಕೆ ಬಂದಲ್ಲಿ ಸೋಂಕು ಹರಡುವ ಸಾಧ್ಯತೆ ಇದೆ ಎಂಬುದು ತಜ್ಞರ ಎಚ್ಚರಿಕೆ.

ಮೈಕ್ರೋಸೆಫಾಲಿ ಎಂದರೇನು?

ಮೈಕ್ರೋಸೆಫಾಲಿ ಒಂದು ಅಪರೂಪದ ಮೆದುಳು ನರದ ಖಾಯಿಲೆಯಾಗಿದ್ದು, ಇದರಲ್ಲಿ ಶಿಶುವಿನ ತಲೆಯು ಅದೇ ವಯಸ್ಸಿನ ಮತ್ತು ಲಿಂಗದ ಇತರ ಮಕ್ಕಳ ತಲೆಗಿಂತ ಚಿಕ್ಕದಾಗಿರುತ್ತದೆ. ಗರ್ಭಾಶಯದಲ್ಲಿ ಮೆದುಳಿನ ಬೆಳವಣಿಗೆಯಲ್ಲಿ ಸಮಸ್ಯೆ ಉಂಟಾದಾಗ ಅಥವಾ ಜನನದ ನಂತರ ಮೆದುಳು ಬೆಳವಣಿಗೆಯನ್ನು ನಿಲ್ಲಿಸಿದಾಗ ಮೈಕ್ರೊಸೆಫಾಲಿ ಹೆಚ್ಚಾಗಿ ಸಂಭವಿಸುತ್ತದೆ. ಮೈಕ್ರೊಸೆಫಾಲಿ ಹೊಂದಿರುವ ಮಕ್ಕಳು ಸಾಮಾನ್ಯವಾಗಿ ಬೆಳವಣಿಗೆಯ ಸಮಸ್ಯೆಗಳನ್ನು ಹೊಂದಿರುತ್ತಾರೆ.


ಮೊದಲು ಪತ್ತೆಯಾಗಿದ್ದು ಎಲ್ಲಿ?

ಝೀಕಾ ವೈರಸ್‌ ಸೋಂಕು 1947 ರಲ್ಲಿ ಉಗಾಂಡಾದಲ್ಲಿ ಮಂಗಗಳಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು. 1950 ರ ದಶಕದಲ್ಲಿ ಇತರ ಆಫ್ರಿಕನ್ ದೇಶಗಳಲ್ಲಿ ಮಾನವರಲ್ಲಿ ಸೋಂಕು ಮತ್ತು ರೋಗದ ಲಕ್ಷಣಗಳು ಕಂಡುಬಂದವು. ಬಳಿಕ ಆಫ್ರಿಕಾ, ಆಗ್ನೇಯ ಏಷ್ಯಾ, ಪೆಸಿಫಿಕ್ ದ್ವೀಪಗಳು ಮತ್ತು ಅಮೆರಿಕಗಳಲ್ಲಿ ಏಕಾಏಕಿ ಹರಡಿತು. ಭಾರತದಲ್ಲಿ 2016 ರಲ್ಲಿ ಗುಜರಾತ್‌ನಲ್ಲಿ ಮೊದಲ ಬಾರಿಗೆ ಝೀಕಾ ವೈರಸ್‌ ಸೋಂಕಿನ ಮೊದಲ ಪ್ರಕರಣ ವರದಿಯಾಯಿತು. ಬಳಿಕ ದೇಶದ ಹಲವಾರು ರಾಜ್ಯಗಳಲ್ಲಿ ಈ ಸೋಂಕು ವ್ಯಾಪಿಸತೊಡಗಿತು. ಪುಣೆಯಲ್ಲಿ ಇತ್ತೀಚೆಗೆ ಝೀಕಾ ಪ್ರಕರಣ ವರದಿಯಾಗಿದ್ದು, ಜೂನ್ 21 ರಂದು ಪುಣೆ ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ವರದಿಗಳಿಂದ ದೃಢೀಕರಿಸಲ್ಪಟ್ಟಿದೆ. ರೋಗಿಯು 46 ವರ್ಷದ ವೈದ್ಯರಾಗಿದ್ದು, ಆಕೆಯ ಮಗಳಿಗೂ ಪಾಸಿಟಿವ್ ವರದಿಯಾಗಿದೆ.

ಝೀಕಾ ಸೋಂಕು ಲಕ್ಷಣಗಳೇನು?

ಝೀಕಾ ವೈರಸ್ ಸೋಂಕಿಗೆ ಒಳಗಾದ ಹೆಚ್ಚಿನ ಜನರು ಲಕ್ಷಣರಹಿತವಾಗಿರಬಹುದು (ಯಾವುದೇ ಲಕ್ಷಣಗಳಿರುವುದಿಲ್ಲ) ಅಥವಾ ಸೌಮ್ಯ ಲಕ್ಷಣಗಳನ್ನು ಹೊಂದಿರಬಹುದು. ಸೋಂಕಿನ ಸಾಮಾನ್ಯ ಲಕ್ಷಣಗಳೆಂದರೆ; ದದ್ದು, ತಲೆನೋವು, ಕೀಲು ನೋವು, ಕಣ್ಣು ಕೆಂಪಾಗುವುದು ಅಥವಾ ಮದ್ರಾಸ್‌ ಐ, ಸ್ನಾಯು ಸೆಳೆತ ಅಥವಾ ಮೈಕೈ ನೋವು, ಆಯಾಸ ಉಂಟಾಗುತ್ತದೆ.

ಸಾಮಾನ್ಯವಾಗಿ ಈ ರೋಗಲಕ್ಷಣಗಳು ಸೌಮ್ಯವಾಗಿರುತ್ತದೆ. 2 ರಿಂದ 7 ದಿನಗಳವರೆಗೆ ಇದರ ರೋಗಲಕ್ಷಣಗಳು ಇರುತ್ತವೆ. ಸೊಳ್ಳೆ ಕಡಿತದಿಂದ ಉಂಟಾಗುವ ಇತರ ವೈರಲ್ ಸೋಂಕುಗಳಾದ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ರೋಗಲಕ್ಷಣಗಳನ್ನೇ ಝೀಕಾ ವೈರಸ್‌ ಕೂಡ ಹೊಂದಿದೆ.

ಝೀಕಾ ಸೋಂಕಿಗೆ ಚಿಕಿತ್ಸೆ ಏನು?

ಝೀಕಾ ವೈರಸ್ ರೋಗಕ್ಕೆ ಯಾವುದೇ ನಿರ್ದಿಷ್ಟ ಔಷಧಿ ಅಥವಾ ವ್ಯಾಕ್ಸಿನೇಷನ್ ಇಲ್ಲ. ನೋವು ನಿವಾರಣೆಗಾಗಿ ಮತ್ತು ಜ್ವರಕ್ಕೆ ಪ್ಯಾರಸಿಟಾಮಲ್ ಔಷಧಿಗಳನ್ನು ವೈದ್ಯರು ನೀಡುತ್ತಾರೆ. ಹೆಚ್ಚಿನ ಜನರು ಸಾಮಾನ್ಯವಾಗಿ ಸಾಕಷ್ಟು ವಿಶ್ರಾಂತಿ ಮತ್ತು ನಿರ್ದಿಷ್ಟ ಚಿಕಿತ್ಸೆಯ ಸಹಾಯದಿಂದ ತಾವಾಗಿಯೇ ಚೇತರಿಸಿಕೊಳ್ಳುತ್ತಾರೆ.

ದೇಹದಲ್ಲಿ ನಿರ್ಜಲೀಕರಣ ಉಂಟಾಗದಂತೆ ಸಾಕಷ್ಟು ದ್ರಾವಾಹಾರ ಸೇವಿಸಬೇಕು. ಆಗಾಗ ನೀರು, ಒಆರ್‌ಎಸ್‌, ಜ್ಯೂಸ್‌ನಂತಹ ದ್ರಾವಾಹಾರ ಸೇವಿಸುತ್ತಿರಬೇಕು. ಎಳನೀರು ಕುಡಿಯುವುದರಿಂದ ದೇಹದಲ್ಲಿ ಎಲೆಕ್ಟ್ರೋಲೈಟ್‌ ಅಂಶ ವೃದ್ಧಿಯಾಗುತ್ತದೆ. ದೇಹವನ್ನು ಸದೃಢವಾಗಿ ಹಾಗೂ ಆರೋಗ್ಯವಂತವಾಗಿ ಇರಿಸಿಕೊಳ್ಳುವುದು ಮುಖ್ಯ. ಸಾಕಷ್ಟು ವಿಶ್ರಾಂತಿ ಪಡೆಯುವುದು ಬಹಳ ಮುಖ್ಯವಾಗುತ್ತದೆ. ಜ್ವರದ ಸಂದರ್ಭದಲ್ಲಿ ವೈದ್ಯರ ನಿರ್ದೇಶನದಂತೆ, ಪ್ಯಾರಸಿಟಾಮಲ್ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಮುನ್ನೆಚ್ಚರಿಕೆ ಮತ್ತು ತಡೆಗಟ್ಟುವಿಕೆ ಏನು?

ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಇಪಿಎ-ನೋಂದಾಯಿತ ಕೀಟ ನಿವಾರಕವನ್ನು ಬಳಸಿ, ಉದ್ದನೆಯ ತೋಳಿನ ಬಟ್ಟೆಗಳನ್ನು ಧರಿಸಿ ಮತ್ತು ಕಿಟಕಿಗಳಿಗೆ ಸೊಳ್ಳೆ ಪರದೆಗಳನ್ನು ಬಳಸಿಕೊಂಡು ಸೊಳ್ಳೆಗಳಿಂದ ರಕ್ಷಿಸಿಕೊಳ್ಳಿ. ಮಳೆಗಾಲದಲ್ಲಿ ಸೊಳ್ಳೆಗಳು ಜಾಸ್ತಿ. ಮನೆಯ ಸುತ್ತ ಗಲೀಜು ನಿಲ್ಲದಂತೆ ನೋಡಿಕೊಳ್ಳಿ. ಝೀಕಾ ವೈರಸ್ ಪೀಡಿತ ಪ್ರದೇಶಗಳಿಗೆ ಹೋಗುವಾಗ ಎಲ್ಲ ಮುನ್ನೆಚ್ಚರಿಕೆ ವಹಿಸಿ. ಅದರಲ್ಲೂ ಗರ್ಭಿಣಿಯಾಗಿದ್ದರೆ ಹೋಗಲೇಬೇಡಿ. ಮಕ್ಕಳನ್ನು ಪಡೆಯಲು ಬಯಸುತ್ತಿರುವವರು ಈ ಬಗ್ಗೆ ತುಂಬ ಎಚ್ಚರಿಕೆಯಿಂದ ಇರಬೇಕು. ನೀವೇನಾದರೂ ಝೀಕಾ ವೈರಸ್ ಇರುವ ಸ್ಥಳಕ್ಕೆ ಹೋಗಿ ಬಂದಿದ್ದರೆ, ಕನಿಷ್ಟ ಮೂರು ತಿಂಗಳವರೆಗೆ ಮಕ್ಕಳನ್ನು ಪಡೆಯುವ ಪ್ರಯತ್ನ ಬೇಡ. ಲಕ್ಷಣಗಳು ಗೊತ್ತಾಗದೆ ಇದ್ದರೂ ದೇಹದಲ್ಲಿ ವೈರಸ್‌ ಇರುವುದರಿಂದ ಭ್ರೂಣ ಬೆಳೆಯುವಾಗಲೇ ಸೋಂಕಿಗೆ ಒಳಗಾಗುವ ಅಪಾಯ ಇರುತ್ತದೆ.

ಮನೆ ಹಾಗೂ ನಿಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇರಿಸಿಕೊಳ್ಳುವುದು ಮುಖ್ಯವಾಗುತ್ತದೆ. ಸೊಳ್ಳೆಗಳ ಉತ್ಪತ್ತಿಗೆ ನೆರವಾಗುವ ನೀರು ನಿಲ್ಲದಂತೆ ನೋಡಿಕೊಳ್ಳಬೇಕಾಗುತ್ತದೆ.

Read More
Next Story