The Federal Explainer | Mysore MUDA Scam: ಸಿಎಂ ಸಿದ್ದರಾಮಯ್ಯ ಕೊರಳಿಗೆ ಸುತ್ತಿಕೊಂಡ ಹಗರಣ ಏನು? ಎತ್ತ?
x

The Federal Explainer | Mysore MUDA Scam: ಸಿಎಂ ಸಿದ್ದರಾಮಯ್ಯ ಕೊರಳಿಗೆ ಸುತ್ತಿಕೊಂಡ ಹಗರಣ ಏನು? ಎತ್ತ?

ಸಿಎಂ ಸಿದ್ದರಾಮಯ್ಯ ಅವರ ಪಾಲಿಗೆ ನುಂಗಲಾರದ ತುತ್ತಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಹಗರಣದ ಕುರಿತು ನಿಮಗೆ ಗೊತ್ತಿರಬೇಕಾದ ವಿವರಗಳು ಇಲ್ಲಿವೆ...


Mysore MUDA Scam | ರಾಜ್ಯ ಕಾಂಗ್ರೆಸ್ ಸರ್ಕಾರದ ಅಕ್ರಮಗಳ ವಿರುದ್ಧ ಕಳೆದ ಒಂದು ವಾರದಿಂದ ನಿರಂತರ ಬೀದಿ ಹೋರಾಟ ನಡೆಸುತ್ತಿರುವ ಬಿಜೆಪಿಯ ಪಾಲಿಗೆ ಮೈಸೂರು ಮುಡಾ ನಿವೇಶನ ಹಗರಣ ರೊಟ್ಟಿಯೇ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ.

ವಾಲ್ಮೀಕಿ ನಿಗಮ ಹಗರಣದ ವಿಷಯದಲ್ಲಿ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಸರಣಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ, ಇದೀಗ ಮುಖ್ಯಮಂತ್ರಿಯ ಕುಟುಂಬ ಸದಸ್ಯರ ವಿರುದ್ಧವೇ ಕೇಳಿಬಂದಿರುವ ಮುಡಾ ಪ್ರಕರಣದಲ್ಲಿ ರಾಜೀನಾಮೆಯ ಪಟ್ಟನ್ನು ಇನ್ನಷ್ಟು ಬಿಗಿಗೊಳಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ, ಪುತ್ರ ಮತ್ತು ಇತರೆ ಕೆಲವು ಆಪ್ತರ ಹೆಸರು ಪ್ರಕರಣದಲ್ಲಿ ಕೇಳಿಬಂದಿದ್ದು, ಇಡೀ ಹಗರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಈ ಸಾವಿರಾರು ಕೋಟಿ ರೂಪಾಯಿ ಬೃಹತ್ ಹಗರಣದ ಕುರಿತ ಮಾಹಿತಿ ಇಲ್ಲಿದೆ.

ಏನಿದು ಹಗರಣ? ಏನು ಆರೋಪ?

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(Mysore Urban Development Authority-MUDA)ದ ನಿವೇಶನಗಳ ಹಂಚಿಕೆಯಲ್ಲಿ ಸುಮಾರು ಐದು ಸಾವಿರ ಕೋಟಿ ರೂ.ಗಳಷ್ಟು ಭಾರೀ ಮೊತ್ತದ ಅಕ್ರಮ ನಡೆದಿದೆ ಎಂಬುದು ಮೂಲ ಆರೋಪ. ಪ್ರಾಧಿಕಾರದಿಂದ ಲೇಔಟ್ ನಿರ್ಮಾಣದ ವೇಳೆ ಈ ಅಕ್ರಮ ನಡೆದಿದ್ದು, ಲೇಔಟ್ಗಾಗಿ ಪಡೆದ ಭೂಮಿಯ ಬದಲಿಗೆ ಭೂ ಮಾಲೀಕರಿಗೆ ನೀಡಬೇಕಾದ 50-50 ನಿವೇಶನಗಳ ಹಂಚಿಕೆಯಲ್ಲಿ ಈ ಅಕ್ರಮ ನಡೆದಿದೆ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರೂ ಫಲಾನುಭವಿ ಎಂಬುದು ಬಿಜೆಪಿ ಆರೋಪ.

ಪ್ರಕರಣ ಹೇಗೆ ಬೆಳಕಿಗೆ ಬಂದಿದ್ದು?

ವಾಸ್ತವವಾಗಿ ಮುಡಾ ಆಯುಕ್ತರು ಮತ್ತು ಮೈಸೂರು ಜಿಲ್ಲಾಧಿಕಾರಿಗಳ ನಡುವೆ ಈ ಪ್ರಕರಣದ ವಿಷಯದಲ್ಲಿ ಕಳೆದ ಒಂದು ವರ್ಷದಿಂದಲೇ ಪತ್ರ ವ್ಯವಹಾರ ನಡೆಯುತ್ತಿತ್ತು. ಆದರೆ, ಭಾರೀ ಅಕ್ರಮದ ಸುಳಿವು ಅರಿತ ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ಅವರು ಹದಿನೈದಕ್ಕೂ ಹೆಚ್ಚು ಪತ್ರ ಬರೆದು ಈ 50-50ರ ಅನುಪಾತದ ನಿವೇ಼ಶನ ಹಂಚಿಕೆಯ ಬಗ್ಗೆ ಮಾಹಿತಿ ಕೋರಿದ್ದರು.

ಅಲ್ಲದೆ ಆ ಬಗ್ಗೆ ತನಿಖೆ ನಡೆಸಬೇಕಿದೆ ಎಂದಿದ್ದ ಅವರು, ಆವರೆಗೆ ನಿವೇಶನ ಹಂಚಿಕೆಯನ್ನು ರದ್ದುಪಡಿಸಿ ಎಂದೂ ಸೂಚಿಸಿದ್ದರು. ಆದರೆ, ಮುಡಾ ಆಯುಕ್ತರು ಆ ಪತ್ರಗಳಿಗೆ, ಸೂಚನೆಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸರ್ಕಾರಕ್ಕೆ ಪತ್ರ ಬರೆದು ಅಕ್ರಮದ ಕುರಿತು ತನಿಖೆಗೆ ಸಮಿತಿ ರಚಿಸುವಂತೆ ಒತ್ತಾಯಿಸಿದ್ದರು. ಆ ಪತ್ರದ ಹಿನ್ನೆಲೆಯಲ್ಲಿ ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಎಚ್‌ ವಿಶ್ವನಾಥ್‌ ಅವರು ಮಾಧ್ಯಮ ಗೋಷ್ಠಿಯ ಮೂಲಕ ಪ್ರಕರಣವನ್ನು ಬೆಳಕಿಗೆ ತಂದಿದ್ದರು.

50-50ರ ಅನುಪಾತದ ನಿವೇ಼ಶನ ಹಂಚಿಕೆ ಎಂದರೇನು? ಏನು ಅಕ್ರಮ?

ಬಡಾವಣೆಗಳ ನಿರ್ಮಾಣದ ವೇಳೆ ನಗರಾಭಿವೃದ್ಧಿ ಪ್ರಾಧಿಕಾರಗಳು ಭೂ ಮಾಲೀಕರಿಂದ ಭೂ ಸ್ವಾಧೀನ ಮಾಡಿಕೊಳ್ಳುವುದು ಸಹಜ. ಆದರೆ, ಆ ವೇಳೆ ಭೂ ಮಾಲೀಕರಿಗೆ ಪರಿಹಾರ ರೂಪದಲ್ಲಿ ಭೂಮಿಯ ಅಧಿಕೃತ ಮೌಲ್ಯದ ಹಣ ಅಥವಾ ಲೇಔಟ್ ಆದ ಮೇಲೆ ಶೇ.50ರಷ್ಟು ನಿವೇಶನ ನೀಡುವುದು ವಾಡಿಕೆ. ಈ ಎರಡೂ ಆಯ್ಕೆ ಹೊರತುಪಡಿಸಿ ಭೂ ಮಾಲೀಕರಿಂದ ವಶಪಡಿಸಿಕೊಂಡಷ್ಟೇ ಭೂಮಿಯನ್ನು ಬೇರೊಂದು ಕಡೆ ನೀಡುವ ವ್ಯವಸ್ಥೆ ಕೂಡ ಇದೆ.

ಮುಡಾ ಲೇಔಟ್ ವಿಷಯದಲ್ಲಿ ಭೂ ಮಾಲೀಕರೊಂದಿಗೆ ಈ ಯಾವ ಒಪ್ಪಂದವನ್ನೂ ಮಾಡಿಕೊಳ್ಳದೆ ಭೂ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಯಾವ ಮಾನದಂಡವನ್ನೂ ಪಾಲಿಸದೆ, ಭೂ ಮಾಲೀಕರಿಗೆ ನ್ಯಾಯಯುತ ಪರಿಹಾರ ನೀಡದೆ, ಬದಲಿ ನಿವೇಶನವಾಗಲೀ ಭೂಮಿಯನ್ನಾಗಲೀ ನೀಡದೆ ಲೇಔಟ್ ನಿರ್ಮಿಸಿ ಅರ್ಜಿದಾರರಿಗೆ ನಿವೇಶನ ಹಂಚಲಾಗಿತ್ತು. ಅಲ್ಲದೆ, ನಿವೇಶನ ಹಂಚುವಾಗ ಅರ್ಜಿಗಳ ಸೀನಿಯಾರಿಟಿ ಪರಿಗಣಿಸದೆ ಬೇಕಾದವರಿಗೆ ಹಂಚಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಅಕ್ರಮದಲ್ಲಿ ಮುಖ್ಯಮಂತ್ರಿಗಳ ಕುಟುಂಬದ ವಿರುದ್ಧದ ಆರೋಪವೇನು?

ಪ್ರಕರಣದಲ್ಲಿ ನಿರ್ದಿಷ್ಟವಾಗಿ ಮುಖ್ಯಮಂತ್ರಿಗಳ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಡಾ ಯತೀಂದ್ರ ಸಿದ್ದರಾಮಯ್ಯ ಹಾಗೂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ವಿರುದ್ಧ ಬಿಜೆಪಿ ನಾಯಕ ಎಚ್ ವಿಶ್ವನಾಥ್ ಅವರು ಗಂಭೀರ ಆರೋಪ ಮಾಡಿದ್ದಾರೆ.

ಸುಮಾರು ಐದು ಸಾವಿರ ಕೋಟಿ ರೂ, ಗೂ ಹೆಚ್ಚು ಮೊತ್ತದ ಭಾರೀ ಅಕ್ರಮ ನಡೆದಿದೆ ಎಂದು ಹೇಳಿರುವ ಮಾಜಿ ಸಚಿವ ವಿಶ್ವನಾಥ್ ಅವರು, ಈ ಅಕ್ರಮದಲ್ಲಿ ಡಾ ಯತೀಂದ್ರ ಸಿದ್ದರಾಮಯ್ಯ ಅವರ ಪಾತ್ರ ಪ್ರಮುಖವಾಗಿದೆ. ಹಾಗೇ ಮುಖ್ಯಮಂತ್ರಿಗಳ ಪತ್ನಿಯ ಹೆಸರಿನಲ್ಲಿಯೂ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದೂ ಅವರು ಹೇಳಿದ್ದಾರೆ. ಅಲ್ಲದೆ ಸಿಎಂ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮೈಸೂರಿನ ವಿಧಾನ ಪರಿಷತ್ ಸದಸ್ಯ ಸಿ ಎನ್ ಮಂಜೇಗೌಡ, ಶಾಸಕ ಹರೀಶ್ ಗೌಡ ಅವರ ಹೆಸರನ್ನೂ ವಿಶ್ವನಾಥ್ ಪ್ರಸ್ತಾಪಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ತಮ್ಮ ವಿರುದ್ಧದ ಬಿಜೆಪಿ ನಾಯಕರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನನ್ನ ಪತ್ನಿಗೆ ತವರು ಮನೆಯಿಂದ ಬಳುವಳಿಯಾಗಿ ಬಂದಿದ್ದ ಮೂರು ಎಕರೆ ಹದಿನಾರು ಗುಂಟೆ ಜಮೀನನ್ನು ಮುಡಾ ಲೇಔಟ್ಗಾಗಿ ವಶಪಡಿಸಿಕೊಳ್ಳಲಾಗಿತ್ತು. ಅದಕ್ಕೆ ಪರ್ಯಾಯವಾಗಿ ಮುಡಾ ಜಮೀನು ನೀಡಿದೆ. ಅದೂ ಕೂಡ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಈ ಜಮೀನು ನೀಡಲಾಗಿದೆ ಎಂದಿದ್ದಾರೆ.

ನಾನು ಅಧಿಕಾರದಲ್ಲಿದ್ದಾಗ ಜಮೀನು ತೆಗೆದುಕೊಂಡಿಲ್ಲ. ಹಿಂದಿನ ಬಿಜೆಪಿ ಸರ್ಕಾರವೇ 50-50 ರ ಅನುಪಾತದ ನಿಯಮದಂತೆ ನಿವೇಶನ ನೀಡಿದೆ. ಅಲ್ಲದೆ, ಈ ಲೇಔಟ್ ವಿಷಯದಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಕೇಳಿಬಂದ ಬೆನ್ನಲ್ಲೇ ತನಿಖೆಗಾಗಿ ಸಮಿತಿ ರಚಿಸಿದ್ದೇವೆ. ಆಯುಕ್ತರು ಸೇರಿದಂತೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದೇವೆ.. ಇದರಲ್ಲಿ ನಮ್ಮ ಕಡೆಯಿಂದ ಯಾವುದೇ ವಿಳಂಬವಾಗಲಿ, ತಪ್ಪಾಗಲೀ ನಡದೇ ಇಲ್ಲ ಎಂದು ಹೇಳಿದ್ದಾರೆ.

ಆರೋಪದ ಕುರಿತು ಸರ್ಕಾರದ ಕ್ರಮವೇನು?

ಗಂಭೀರ ಆರೋಪಗಳು ಕೇಳಿಬರುತ್ತಲೇ ಎಚ್ಚೆತ್ತುಕೊಂಡಿರುವ ಸರ್ಕಾರ, 50-50 ರ ಅನುಪಾತದ ನಿವೇಶನ ಹಂಚಿಕೆಯನ್ನು ರದ್ದುಪಡಿಸಿದೆ. ಅಲ್ಲದೆ ಮುಡಾ ಜಾಗ ಹಂಚಿಕೆಯ ಮುನ್ನ ಕ್ಯಾಬಿನೆಟ್ ಅನುಮತಿಯನ್ನೂ ಪಡೆದಿರಲಿಲ್ಲ ಎಂಬ ಸಂಗತಿಯನ್ನು ಉಲ್ಲೇಖಿಸಿರುವ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಅವರು ಆ ಹಿನ್ನೆಲೆಯಲ್ಲೇ ಜಾಗ ಹಂಚಿಕೆಯನ್ನು ರದ್ದು ಮಾಡಲಾಗಿದೆ ಎಂದಿದ್ದಾರೆ.

ಜೊತೆಗೆ ಪ್ರಕರಣದ ಕುರಿತು ತನಿಖೆ ನಡೆಸಲು ನಗರ ಯೋಜನಾ ಆಯುಕ್ತಾಲಯದ ಆಯುಕ್ತ ವೆಂಕಟಾಚಲಪತಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಇಲಾಖೆಯ ಹೆಚ್ಚುವರಿ ನಿರ್ದೇಶಕ ಎಂ ಸಿ ದಿನೇಶ್, ಜಂಟಿ ನಿರ್ದೇಶಕಿ ಶಾಂತಲಾ ಹಾಗೂ ಉಪ ನಿರ್ದೇಶಕ ಪ್ರಕಾಶ್ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ. ಈ ನಡುವೆ, ತನಿಖೆಗೆ ಅನುಕೂಲವಾಗುವಂತೆ ಮುಡಾ ಆಯುಕ್ತರು ಸೇರಿದಂತೆ ಹಲವು ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

ಬಿಜೆಪಿಯ ಪಟ್ಟು ಏನು?

ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ. ಹಾಗಾಗಿ ಅವರು ಕೂಡಲೇ ರಾಜೀನಾಮೆ ನೀಡಬೇಕು ಮತ್ತು ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂಬುದು ಬಿಜೆಪಿ ಪಟ್ಟು.

ಅಲ್ಲದೆ, ಬದಲಿ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿಗಳ ಪತ್ನಿ, ಪುತ್ರ ಹಾಗೂ ಆಪ್ತರು ಭಾಗಿಯಾಗಿದ್ದಾರೆ. ಬದಲಿ ನಿವೇಶನ ನೀಡುವಾಗ ಅದೇ ಬಡಾವಣೆಯಲ್ಲಿ ನಿವೇಶನ ನೀಡುವ ಬದಲಿ, ಅಧಿಕ ಮೌಲ್ಯದ ಪ್ರತಿಷ್ಠಿತ ಬಡಾವಣೆಯಲ್ಲಿ ನಿವೇಶನ ನೀಡಲಾಗಿದೆ. ಇದು ಐದು ಸಾವಿರ ಕೋಟಿ ರೂಪಾಯಿ ಅಕ್ರಮವಾಗಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೇ ವಹಿಸಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದೆ.

Read More
Next Story